ಐಸಿಸಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕೋಚ್, ದಿ ಗ್ರೇಟ್ ವಾಲ್ ಆಫ್ ಇಂಡಿಯಾ ಖ್ಯಾತಿಯ ರಾಹುಲ್ ದ್ರಾವಿಡ್, ರಾಜಸ್ಥಾನ್ ರಾಯಲ್ಸ್ ತಂಡದ ನೂತನ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಜೂನ್ ತಿಂಗಳಲ್ಲಿ ವೆಸ್ಟ್ ಇಂಡೀಸ್’ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರುತ್ತಿದ್ದಂತೆ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಹುದ್ದೆ ತೊರೆದಿದ್ದರು. 17 ವರ್ಷಗಳ ನಂತರ ಟೀಮ್ ಇಂಡಿಯಾ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ಭಾರತ ತಂಡದ ಜವಾಬ್ದಾರಿಯಿಂದ ಮುಕ್ತಗೊಂಡಿರುವ ದ್ರಾವಿಡ್ ಮತ್ತೆ ಐಪಿಎಲ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಧಾನ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ದ್ರಾವಿಡ್ ಅವರೊಂದಿಗೆ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ವಿಕ್ರಮ್ ರಾಥೋಡ್, ರಾಜಸ್ಥಾನ್ ರಾಯಲ್ಸ್ ತಂಡದ ನೂತನ ಅಸಿಸ್ಟೆಂಟ್ ಕೋಚ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಇದುವರೆಗೆ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಆಗಿದ್ದ ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ ರಾಯಲ್ಸ್ ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
2008ರಿಂದ 2010ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ದ್ರಾವಿಡ್ ಅವರನ್ನು 2010ರಲ್ಲಿ ಬೆಂಗಳೂರು ಫ್ರಾಂಚೈಸಿ ತಂಡದಿಂದ ಕೈ ಬಿಟ್ಟಿತ್ತು. ಆ ಸಂದರ್ಭದಲ್ಲಿ ದ್ರಾವಿಡ್ ಅವರನ್ನು ಕೈ ಬೀಸಿ ಕರೆದದ್ದು ರಾಜಸ್ಥಾನ್ ರಾಯಲ್ಸ್ ತಂಡ. ದ್ರಾವಿಡ್ ಅವರನ್ನು ತಂಡಕ್ಕೆ ಸೇರಿಸಿಕೊಂಡದ್ದಷ್ಟೇ ಅಲ್ಲ, ತಂಡದ ನಾಯಕತ್ವವನ್ನೂ ನೀಡಿತ್ತು. ದ್ರಾವಿಡ್ ಅವರ ನಾಯಕತ್ವದಲ್ಲಿ 2013ರ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಹಂತಕ್ಕೇರಿದ್ದ ರಾಜಸ್ಥಾನ್ ರಾಯಲ್ಸ್, ಅದೇ ವರ್ಷದ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಫೈನಲ್”ಗೆ ಲಗ್ಗೆಯಿಟ್ಟಿತ್ತು.
2014ರಿಂದ 2015ರವರೆಗೆ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ಮಾರ್ಗದರ್ಶಕರಾಗಿ ಕಾರ್ಯ ನಿರ್ವವಹಿಸಿದ್ದರು. ನಂತರ ಭಾರತ ಅಂಡರ್-19 ತಂಡದ ಕೋಚ್ ಆಗಿದ್ದ ದ್ರಾವಿಡ್, 2021ರಲ್ಲಿ ಟೀಮ್ ಇಂಡಿಯಾ ಕೋಚ್ ಆಗಿ ನೇಮಕಗೊಂಡಿದ್ದರು. ಇದೀಗ ಭಾರತ ತಂಡದ ಜವಾಬ್ದಾರಿ ಮುಗಿಸಿರುವ ದ್ರಾವಿಡ್ ತಮ್ಮ ನೆಚ್ಚಿನ ತಂಡದ ಪರ ಮತ್ತೆ ಐಪಿಎಲ್ ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದ್ರಾವಿಡ್ ಈ ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದಾಗ ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್, ಕರುಣ್ ನಾಯರ್’ರಂಥಾ ಆಟಗಾರರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಿದ್ದರು.