ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್, ಐಸಿಸಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ರವೀಂದ್ರ ಜಡೇಜ ಇನ್ನೂ ಕ್ರಿಕೆಟ್ ಆಡುತ್ತಿರುವಾಗಲೇ ರಾಜಕೀಯ ಇನ್ನಿಂಗ್ಸ್ ಕೂಡ ಶುರು ಮಾಡಿದ್ದಾರೆ.
ಸೌರಾಷ್ಟ್ರದ 35 ವರ್ಷದ ಆಲ್ರೌಂಡರ್ ಜಡೇಜ ಭಾರತೀಯ ಜನತಾ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ. ಜಡೇಜ ಬಿಜೆಪಿ ಸದಸ್ಯತ್ವ ಪಡೆದಿರುವ ಫೋಟೋವನ್ನು ಪತ್ನಿ ರಿವಾಬ ಜಡೇಜ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರವೀಂದ್ರ ಜಡೇಜ ಅವರ ಪತ್ನಿ ರಿವಾಬ ಜಡೇಜ ಗುಜರಾತ್’ನ ಜಾಮ್’ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರವೀಂದ್ರ ಜಡೇಜ ಬಾಂಗ್ಲಾದೇಶ ಪ್ರವಾಸಕ್ಕೆ ಚಕ್ಕರ್ ಹಾಕಿ ಪತ್ನಿ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದರು.
ಜಗತ್ತಿನ ಶ್ರೇಷ್ಠ ಆಲ್ರೌಂಡರ್’ಗಳಲ್ಲಿ ಒಬ್ಬರಾಗಿರುವ ರವೀಂದ್ರ ಜಡೇಜ, ಭಾರತ ಪರ 72 ಟೆಸ್ಟ್ ಪಂದ್ಯಗಳನ್ನಾಡಿದ್ದು, 4 ಶತಕಗಳ ಸಹಿತ 3036 ರನ್ ಹಾಗೂ 294 ವಿಕೆಟ್’ಗಳನ್ನು ಪಡೆದಿದ್ದಾರೆ. 197 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಿಂದ 13 ಅರ್ಧಶತಕಗಳೊಂದಿಗೆ 2756 ರನ್ ಗಳಿಸಿರುವ ಜಡೇಜ, 220 ವಿಕೆಟ್’ಗಳನ್ನು ಕಬಳಿಸಿದ್ದಾರೆ. ಭಾರತ ಪರ 74 ಟಿ20 ಪಂದ್ಯಗಳನ್ನಾಡಿರುವ ಈ ಸ್ಟಾರ್ ಆಲ್ರೌಂಡರ್ 515 ರನ್ ಮತ್ತು 54 ವಿಕೆಟ್ ಪಡೆದಿದ್ದಾರೆ.
ಸಾಮಾನ್ಯವಾಗಿ ಕ್ರಿಕೆಟಿಗರು ನಿವೃತ್ತಿಯ ನಂತರ ರಾಜಕೀಯ ಪಕ್ಷಗಳಿಗೆ ಸೇರ್ಪಡೆಯಾಗುವುದು ಸಾಮಾನ್ಯ. ಆದರೆ ರವೀಂದ್ರ ಜಡೇಜ ಇನ್ನೂ ಭಾರತ ಪರ ಆಡುತ್ತಿರುವಾಗಲೇ ರಾಜಕೀಯ ಪಕ್ಷ ಸೇರಿರುವುದು ಅಚ್ಚರಿಗೆ ಕಾರಣವಾಗಿದೆ.