ಕಳೆದ ತಿಂಗಳು..
ಜೂನ್ 30ರಂದು ಕರ್ನಾಟಕದ The most celebrated cricketer, ರಾಜ್ಯ ಕ್ರಿಕೆಟ್’ನ ಸಾರ್ವಕಾಲಿಕ ಶ್ರೇಷ್ಠ ಮ್ಯಾಚ್ ವಿನ್ನರ್’ಗಳಲ್ಲಿ ಒಬ್ಬರಾಗಿರುವ ದೊಡ್ಡ ಗಣೇಶ್ ಅವರ ಹುಟ್ಟುಹಬ್ಬ.
ಇದು ದೊಡ್ಡ ಗಣೇಶ್ ಅವರ ಬಗ್ಗೆ ಅವತ್ತೇ ಬರೆದಿದ್ದ ಬರಹ.. ಆದರೆ ಭಾರತ ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಇದು ಮರೆಯಾಗಿತ್ತು. ಇವತ್ತು ನೆನಪಾಯಿತು, ಹಾಗೇ ಪ್ರಕಟಿಸಿದ್ದೇನೆ.
ಕರ್ನಾಟಕ ತಂಡದ 10 ವರ್ಷಗಳ ಹಿಂದಿನ ರಣಜಿ ಗತವೈಭವಕ್ಕೆ ಸಾಕ್ಷಿಯಾಗಿದ್ದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದು. ವೃತ್ತಿ ಸಂಬಂಧ ಕಾರಣಗಳಿಗೆ ಆ ಪ್ರತಿಯೊಂದು ಕ್ಷಣವನ್ನೂ ಕಣ್ತುಂಬಿಕೊಳ್ಳುವ ಅವಕಾಶ ನನಗೆ ಸಿಕ್ಕಿತ್ತು. ಆದರೆ 90ರ ದಶಕದ ಗತವೈಭವವನ್ನು ನಾನು ನೋಡಿಲ್ಲ. ಆದರೆ ಆ ಕಥೆಯನ್ನು ಅಂದಿನ ಆಟಗಾರರ ಬಾಯಿಂದಲೇ ಸಾಕಷ್ಟು ಬಾರಿ ಕೇಳಿದ್ದೇನೆ. ಆ ಕಥೆಗಳಲ್ಲಿ ಬರುವ ಒಂದು ಪ್ರಮುಖ ಪಾತ್ರದ ಹೆಸರು ದೊಡ್ಡ ನರಸಯ್ಯ ಗಣೇಶ್.
ಹರಿದ ಸ್ಲಿಪ್ಪರ್, ಹರಕಲು ಸೈಕಲ್ ಏರಿ ಪೀಣ್ಯದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುತ್ತಿದ್ದ ಹುಡುಗ. ಪೀಣ್ಯದಲ್ಲಿ ಟೆನಿಸ್ ಬಾಲ್ ಕ್ರಿಕೆಟ್’ನಿಂದ ಶುರುವಾಗಿದ್ದ ಪ್ರಯಾಣ.. 90ರ ದಶಕದಲ್ಲಿ ರಣಜಿ ತಂಡಕ್ಕೆ ಕಾಲಿಟ್ಟಾಗ ದೊಡ್ಡ ಗಣೇಶ್ ಅವರ ಬಳಿ ಒಂದು ಜೊತೆ ಶೂ ಕೂಡ ಇರಲಿಲ್ಲ.
ದೊಡ್ಡ ಗಣೇಶ್ ಅವರ ಬಗ್ಗೆ ಸಾಕಷ್ಟು ದಂತಕಥೆಗಳಿವೆ. ಆ ಕಥೆಗಳನ್ನು ಅವರ ಜೊತೆ ಹತ್ತಾರು ವರ್ಷ ಆಡಿದವರ ಬಾಯಿಂದ ಕೇಳಿದಾಗ ಮೈ ರೋಮಾಂಚನಗೊಂಡಿದ್ದಿದೆ, ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಿದೆ. ಅಂತಹ ಕಥೆಗಳಲ್ಲಿ ಒಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅದೊಂದು ಘಟನೆ.
ಚಿನ್ನಸ್ವಾಮಿ ಮೈದಾನದಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳ ಮಧ್ಯೆ ರಣಜಿ ಪಂದ್ಯ ನಡೆಯುತ್ತಿತ್ತು. ಕರ್ನಾಟಕ Vs ತಮಿಳುನಾಡು ರಣಜಿ ಮ್ಯಾಚ್ ಎಂದರೆ ಆಗಿನ ಕಾಲಕ್ಕೆ ಇಂಡಿಯಾ Vs ಪಾಕಿಸ್ತಾನ ಪಂದ್ಯದಷ್ಟು ಜಿದ್ದಾಜಿದ್ದಿ. ತಮಿಳುನಾಡು ವಿರುದ್ಧ ನಮ್ಮವರು ಜಿದ್ದಿಗೆ ಬಿದ್ದಂತೆ ಆಡುತ್ತಿದ್ದ ಕಾಲ. ಆ ಕಡೆಯಿಂದಲೂ ಅಷ್ಟೇ ಜಿದ್ದು.
ಕರ್ನಾಟಕ ತಂಡ ಫೀಲ್ಡಿಂಗ್ ಮಾಡುತ್ತಿತ್ತು. ಈಗಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕಟ್ಟದ ಮೇಲ್ಭಾಗದ ಸ್ಟ್ಯಾಂಡ್’ನಲ್ಲಿ ಕೂತಿದ್ದ ಒಂದಷ್ಟು ಮಂದಿ ತಮಿಳುನಾಡು ತಂಡದ ಅಭಿಮಾನಿಗಳು ಬೌಂಡರಿ ಗೆರೆಯ ಬಳಿ ಕ್ಷೇತ್ರರಕ್ಷಣೆ ನಡೆಸುತ್ತಿದ್ದ ಕರ್ನಾಟಕದ ಆಟಗಾರರನ್ನು ಸುಖಾ ಸುಮ್ಮನೆ ಕೆಣಕುತ್ತಾರೆ, ಹೀಯಾಳಿಸುತ್ತಾರೆ. ಪ್ರಶ್ನಿಸಲು ಹೋದ ಕರ್ನಾಟಕ ತಂಡದ ಅಭಿಮಾನಿಗಳ ಮೇಲೇರಿ ಹೋಗುತ್ತಾರೆ. ಇಡೀ ದಿನ ಈ ಆಟಾಟೋಪವನ್ನು ನೋಡಿದ್ದ ನಮ್ಮ ಆಟಗಾರರು ರೋಸಿ ಹೋಗಿದ್ದರೆ, ದೊಡ್ಡ ಗಣೇಶ್ ಮಾತ್ರ ಕೆರಳಿ ಬಿಟ್ಟಿರುತ್ತಾರೆ.
ಮೊದಲೇ ಪಕ್ಕಾ ಲೋಕಲ್. ಪೀಣ್ಯದಲ್ಲಿ ಇಂತಹ ಅದೆಷ್ಟು ಪುಂಡರನ್ನು ನೋಡಿಲ್ಲ ಅವರು. ಇವರಿಗೊಂದು ಪಾಠ ಕಲಿಸಬೇಕು ಎಂದುಕೊಂಡ ದೊಡ್ಡ ಗಣೇಶ್ ಏನು ಮಾಡಿದರು ಗೊತ್ತೇ..?
ಪಂದ್ಯದ 3ನೇ ದಿನವಿರಬೇಕು.. ಯಥಾ ಪ್ರಕಾರ ತಮಿಳುನಾಡು ತಂಡದ ಪರ ಘೋಷಣೆ ಕೂಗುತ್ತಿದ್ದ ಆ ಪುಂಡರು ಮತ್ತೆ ಕಿರಿಕ್ ಶುರು ಮಾಡುತ್ತಾರೆ. ಕರ್ನಾಟಕದ ಆಟಗಾರನ್ನು ನಿಂದಿಸಲು ಆರಂಭಿಸುತ್ತಾರೆ. ಅಷ್ಟೇ.. ಏನಾಗುತ್ತಿದೆ ಎನ್ನುವಷ್ಟರಲ್ಲಿ ಒಂದಷ್ಟು ಮಂದಿ ಯುವಕರು ಆ ಪುಂಡರಿಗೆ ಚೆನ್ನಾಗಿ ಬಾರಿಸುತ್ತಾರೆ, ಅಷ್ಟೂ ಮಂದಿಯನ್ನು ಎತ್ತಿಕೊಂಡು ಕ್ರೀಡಾಂಗಣದಿಂದ ಹೊರ ಹಾಕಿ ಬರುತ್ತಾರೆ. ಅಂದ ಹಾಗೆ ಆ ಯುವಕರು ಯಾರು ಗೊತ್ತಾ..? ಎಲ್ಲಿಯವರು ಗೊತ್ತಾ..? ಪೀಣ್ಯದವರು. ಕರ್ನಾಟಕದ ಆಟಗಾರನನ್ನು ನಿಂದಿಸುತ್ತಿದ್ದ ಪುಂಡ ಪೋಕರಿಗಳಿಗೆ ಪಾಠ ಕಲಿಸಲೆಂದು ಪೀಣ್ಯದಿಂದ ಹುಡುಗರನ್ನು ಕರೆ ತಂದು ಆ ಸ್ಟ್ಯಾಂಡ್’ನಲ್ಲಿ ಕೂರಿಸಿದ್ದರಂತೆ ದೊಡ್ಡ ಗಣೇಶ್.
ದೊಡ್ಡ ಗಣೇಶ್ ಕರ್ನಾಟಕ ಕ್ರಿಕೆಟ್ ಕಂಡ ದಣಿವರಿಯದ ಯೋಧ. ರಣಜಿ ಟ್ರೋಫಿ ಪಂದ್ಯಗಳಲ್ಲಿ ಒಂದು endನಿಂದ ದಿನಪೂರ್ತಿ ಬೌಲಿಂಗ್ ಮಾಡಲು ಸಿದ್ಧವಾಗಿರುತ್ತಿದ್ದ ಬೌಲರ್. ಕೆಲವೊಮ್ಮೆ ಗಣೇಶ್’ಗೆ ನಾಯಕ ಬೌಲಿಂಗ್ ನೀಡದೇ ಇದ್ದಾಗ, ಚೆಂಡನ್ನು ಬಲವಂತವಾಗಿ ಕಸಿದುಕೊಂಡು ಬೌಲಿಂಗ್ ಮಾಡುತ್ತಿದ್ದರಂತೆ. ತಂಡ ಗೆಲ್ಲಬೇಕು, ತಂಡವನ್ನು ಗೆಲ್ಲಿಸಬೇಕು.. ಅಷ್ಟೇ.. ಅದಕ್ಕಾಗಿ ರಕ್ತವನ್ನೇ ಬಸಿಯಲು ಸಿದ್ಧವಾಗಿ ನಿಲ್ಲುತ್ತಿದ್ದ ಕೆಚ್ಚೆದೆಯ ಕ್ರಿಕೆಟಿಗ.
1996-97ರ ಇರಾನಿ ಕಪ್ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ವಿವಿಎಸ್ ಲಕ್ಷ್ಮಣ್, ಸಿಕ್ಸರ್ ಸಿಧು ಸೇರಿ 11 ವಿಕೆಟ್ ಪಡೆಯುತ್ತಿದ್ದಂತೆ ದೊಡ್ಡ ಗಣೇಶ್’ಗೆ ಭಾರತ ತಂಡದ ಬಾಗಿಲು ತೆರೆಯಿತು. ಭಾರತ ಪರ 4 ಟೆಸ್ಟ್, ಒಂದು ಏಕದಿನ ಪಂದ್ಯವಾಡಿ ಮತ್ತೆ ಕರ್ನಾಟಕ ತಂಡಕ್ಕೆ ವಾಪಸ್ಸಾದ ಗಣೇಶ್, ರಾಜ್ಯ ತಂಡ ಸತತ ಎರಡು ಬಾರಿ ರಣಜಿ ಟ್ರೋಫಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು.
1998-99ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಂತೂ ಅಕ್ಷರಶಃ ಬಿರುಗಾಳಿಯಾಗಿದ್ದರು ದೊಡ್ಡ ಗಣೇಶ್. ಆ ವರ್ಷ ಒಟ್ಟು 62 ವಿಕೆಟ್ ಪಡೆದಿದ್ದ ದೊಡ್ಡ ಗಣೇಶ್, ದೇಶೀಯ ಕ್ರಿಕೆಟ್’ನಲ್ಲಿ ಅದುವರೆಗೆ ಯಾರೂ ಮಾಡಲಾಗದ ದಾಖಲೆಯೊಂದನ್ನು ಬರೆದಿದ್ದರು. ಮುಂದೆ ಆ ದಾಖಲೆ ಪತನವಾಗಲು ಬರೋಬ್ಬರಿ 21 ವರ್ಷಗಳೇ ಬೇಕಾದವು.