ಬಹುಶಃ ನನ್ನ ತಲೆಮಾರಿನ ಹುಡುಗರಿಗೆ ಟೆನ್ನಿಸ್ ಲೋಕದತ್ತ ಸೆಳೆದ ಮೊದಲ ಆಟಗಾರ ಲಿಯಾಂಡರ್ ಪೇಸ್.1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಆತ ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಟ ಥಾಮಸ್ ಎನಕ್ವಿಸ್ಟ್‌ರನ್ನು ಸೋಲಿಸಿ ಸೆಮಿಪೈನಲ್ ತಲುಪಿದಾಗ ಆತ ಪದಕ ಗೆಲ್ಲುವನೇನೋ ಎಂಬ ನಿರೀಕ್ಷೆಯಿತ್ತು.
ಆದರೆ ಎದುರಿಗಿದ್ದಿದ್ದು ಆವತ್ತಿನ ಬಲಾಡ್ಯ ಅಗಾಸ್ಸಿ.ಸೆಮಿಪೈನಲ್ ಸೋತ ನಂತರವೂ ಲಿಯಾಂಡರ್ ‘ಕಂಚು ಪದಕ ತಂದೇ ತರುವೆ’ಎಂದಾಗ ಬಹುತೇಕ ಭಾರತೀಯರಿಗೆ ಸಂತಸವಾಗಿತ್ತು.ಮಾತಿಗೆ ತಕ್ಕಂತೆ ಕಂಚಿನ ಪದಕ ತಂದ ಲಿಯಾಂಡರ್ ದೇಶದ ಸಾರ್ವಕಾಲಿಕ ಶ್ರೇಷ್ಟ ಟೆನ್ನಿಸ್ ಆಟಗಾರನಾಗಿ ಮಿಂಚಿದ್ದು ಈಗ ಇತಿಹಾಸ.
ಆದರೆ ಅವನ ಶ್ರೇಷ್ಠತೆಗೆ ಜೊತೆಯಾಗಿದ್ದು ಮಹೇಶ್ ಭೂಪತಿ.ಆವತ್ತಿಗೆ ವಿಶ್ವ ಡಬಲ್ಸ್‌ನಲ್ಲಿ ಮಹೇಶ್ ಪೇಸ್ ಜೋಡಿ ವಿಶ್ವದ ಶ್ರೇಷ್ಠ ಡಬಲ್ಸ್ ಜೋಡಿಗಳಲ್ಲೊಂದು.ಒಂದೇ ವರ್ಷದಲ್ಲಿ ವರ್ಷದ ನಾಲ್ಕೂ ಗ್ರಾಂಡಸ್ಲಾಮ್‌ಗಳ ಫೈನಲ್ ತಲುಪಿಕೊಂಡ ಏಕೈಕ ಜೋಡಿಯಿದು.1999ರಲ್ಲಿ ಈ ಸಾಧನೆ ಮಾಡಿದ ಜೋಡಿ ಆ ವರ್ಷದ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಗೆದ್ದುಕೊಂಡಿತ್ತು.ಜೋಡಿಯಾಗಿ ವಿಶ್ವದ ನಂಬರ್ ಒನ್ ಸ್ಥಾನಕ್ಕೆ ಏರಿದ್ದು ಸಹ ಈ ಜೋಡಿಯ ಮತ್ತೊಂದು ಸಾಧನೆ.
ನಿಸ್ಸಂಶಯವಾಗಿ ನಮ್ಮನ್ನು ಟೆನ್ನಿಸ್ ಲೋಕದತ್ತ ಸೆಳೆದ ಜೋಡಿಯಿದು.ಆಗ ಮಧ್ಯಮವರ್ಗಿಯ ಮನೆಗಳಲ್ಲಿ ಟಿವಿ ಇರುತ್ತಿದ್ದದ್ದೇ ದೊಡ್ಡ ವಿಷಯ.ಇನ್ನು ದುಬಾರಿ ಕ್ರೀಡಾ ವಾಹಿನಿಗಳಂತೂ ಕನಸಿನ ಮಾತು.ಪ್ರತಿನಿತ್ಯ ಬೆಳಗೆದ್ದು ಏಳರ ದೂರದರ್ಶನ ವಾರ್ತೆ ನಮಗಿದ್ದ ಏಕೈಕ ಆಧಾರ.ಅಪ್ಪ ಟಿವಿ ಹಾಕುತ್ತಿದ್ದರು.ಹದಿನೈದು ನಿಮಿಷಗಳ ವಾರ್ತೆಗಳ ಮುಖ್ಯಾಂಶಗಳ ಪೈಕಿ ಕೊನೆಯಲ್ಲಿ ವಾರ್ತಾವಾಚಕಿ ‘ಲಿಯಾಂಡರ್ ಮಹೇಶ್ ಕೀ ಜೀತ್’ ಎಂದರೆ ವಾರ್ತೆಯನ್ನು ಪೂರ್ತಿ ಕೇಳಿಸಿಕೊಳ್ಳುವುದು,’ಹಾರ್’ ಎಂದರೆ ಮರುಕ್ಷಣವೇ ಟಿವಿ ಆಫ್. ನನ್ನ ಸ್ವರ್ಣ ಬಾಲ್ಯದ ನೆನಪುಗಳಿಗೆ ಈ ಜೋಡಿಯ ಕೊಡುಗೆಯೂ ಕಡಿಮೆಯೇನಿಲ್ಲ ಬಿಡಿ.
ಆನಂತರ ತಮ್ಮದೇ ವೈಯಕ್ತಿಕ ಅಹಮಿಕೆಯಿಂದ ದೂರ ಸರಿದ ಈ ಆಟಗಾರರು ಹಲವು ಪ್ರಶಸ್ತಿಗಳನ್ನು ಗೆದ್ದರಾದರೂ ಅವರಿಬ್ಬರು ಜೊತೆಯಾಗಿ ಕಂಡ ಗೆಲುವಿನಷ್ಟು ಸಂತಸ ಭಾರತೀಯರಿಗೆ ಅಭಿಮಾನಿಗಳಿಗೆ ಅವರ ವೈಯಕ್ತಿಕ ಗೆಲುವು ಕೊಡಲಿಲ್ಲ ಎನ್ನುವುದು ಸತ್ಯ.
ಜೂನ್ ಏಳರಂದು ಮಹೇಶ್ ಭೂಪತಿಯವರಿಗೆ ನಲ್ವತ್ತೇಳರ ಹರೆಯ.ಜಪಾನಿನ ರಿಕಾ ಹಿರಾಕಿಯೊಂದಿಗೆ ಸೇರಿ ಮಿಶ್ರ ಡಬಲ್ಸ್‌ನ ಮೊದಲ ಪ್ರೆಂಚ್ ಓಪನ್ ಗೆದ್ದದ್ದು ಭಾರತೀಯ ಟೆನ್ನಿಸ್ ಲೋಕದ ಮೊದಲ ಗ್ರಾಂಡ್‌ಸ್ಪಾಮ್ ಸಾಧನೆ.ಅದಲ್ಲದೇ ಆತ 1999ರ ಹೊತ್ತಿಗೆ ವಿಶ್ವ ಡಬಲ್ಸ್ ಆಟಗಾರರ ಪೈಕಿ ನಂಬರ್ 1 ಆಟಗಾರನಾಗಿದ್ದನೆನ್ನುವುದು ಸಹ ಗಮನಾರ್ಹ.ಆ ಸಾಧನೆಯನ್ನು ಎರಡು ಬಾರಿ ಮಾಡಿದ ಏಕೈಕ ಭಾರತೀಯ ಆಟಗಾರನೀತ.
ಅಲ್ಲಿಷ್ಟು ಇಲ್ಲಿಷ್ಟು ಸಾಂಪ್ರಾಸ್ ಅಗಾಸ್ಸಿ ಎಂದು ತೊದಲುವ ಹೊತ್ತಿಗೆ ನಮಗೆ ವಿಶ್ವ ಟೆನ್ನಿಸ್ ಲೋಕದ ಹುಚ್ಚು ಹತ್ತಿಸಿ ಎಳೆದೊಯ್ದ ವಿಶ್ವಶ್ರೇಷ್ಠನಿಗೆ ಹುಟ್ಟುಹಬ್ಬದ ಶುಭಾಶಯಗಳು.