4.9 C
London
Friday, December 13, 2024
Homeಟೆನಿಸ್ಸುಲಭಕ್ಕೆ ಸೋಲೊಪ್ಪಿಕೊಳ್ಳದ ಉಡದ ಹಿಡಿತದ ಹಿಂದೆಯೂ ಇದೆ ಬೆವರಗಾಥೆ.

ಸುಲಭಕ್ಕೆ ಸೋಲೊಪ್ಪಿಕೊಳ್ಳದ ಉಡದ ಹಿಡಿತದ ಹಿಂದೆಯೂ ಇದೆ ಬೆವರಗಾಥೆ.

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
“ಮೊನಿಕಾ ಸೆಲೆಸ್ ನಂತರ ನಾನು ಕಂಡ ಅತ್ಯಧ್ಬುತ ಟೆನ್ನಿಸ್ ಪ್ರತಿಭೆಯಿದು”
ಎಂದುದ್ಗರಿಸಿದ್ದರು ಯುಗೊಸ್ಲೋವಾಕಿಯಾದ ಟೆನ್ನಿಸ್ ತರಬೇತಿಯ ದಂತಕತೆ ಯೆಲೆನಾ ಗೆನ್ಸಿಕ್ .ಮೊನಿಕಾ ಸೆಲೆಸ್,ಗೊರಾನ್ ಇವಾನೆಸವಿಚ್ ,ಇವಾ ಮಜೋಲಿಯಂಥಹ ಘಟಾನುಘಟಿಗಳನ್ನು ಅಣಿಗೊಳಿಸಿದ್ದ  ಯೆಲೆನಾ ತನ್ನೆದುರಿಗೆ ಆಟವಾಡುತ್ತಿದ್ದ ಹುಡುಗನ ಭವಿಷ್ಯವನ್ನು ತಾವೇ ಬರೆಯಲು ಸಿದ್ದರಾಗಿದ್ದರು.ವಜ್ರದ ಅಸಲಿ ಬೆಲೆ ವಜ್ರದ ವ್ಯಾಪಾರಿಗೆ ಮಾತ್ರ ಅರ್ಥವಾಗುತ್ತದೆ ಎನ್ನುವಂತೆ ಹುಡುಗನ ಪ್ರತಿಭೆಯ ತಾಕತ್ತು ಅವರಿಗೆ ಅರ್ಥವಾಗಿತ್ತು.ಆರನೇ ವಯಸ್ಸಿಗೆ ಅವರ ಕೈಗೆ ಸಿಕ್ಕು ಮುಂದೆ ಭರ್ತಿ ಆರು ವರ್ಷಗಳ ಕಾಲ ಅವರಿಂದ ಕಠಿಣ ತರಬೇತಿ ಪಡೆದು ಟೆನ್ನಿಸ್ ಅಂಕಣಕ್ಕಿಳಿಯುವ ನೋವಾಕ್ ಜೋಕೊವಿಚ್ ಎನ್ನುವ ಹುಡುಗ ಮುಂದೆ ಟೆನ್ನಿಸ್ ಲೋಕದ ಸಾರ್ವಕಾಲಿಕ ಶ್ರೇಷ್ಠ ದಂತಕತೆಗಳ ಪೈಕಿ ಒಬ್ಬನಾಗುತ್ತಾನೆನ್ನುವುದು ಸ್ವತ:  ಯೆಲೆನಾ ಗೆನ್ಸಿಕ್ ರಿಗೂ ತಿಳಿದಿರಲಿಕ್ಕಿಲ್ಲವೇನೋ…
ಇಂದು ಟೆನ್ನಿಸ್ ಪಂದ್ಯಗಳಲ್ಲಿ ಸುಲಭಕ್ಕೆ ಸೋಲೊಪ್ಪಿಕೊಳ್ಳದ ಉಡದ ಹಿಡಿತದ ನೋವಾಕ್ ಜೋಕೊವಿಚ್‌ನ ಟೆನ್ನಿಸ್ ಲೋಕದ ಪಯಣದಾರಂಭವೂ ತುಂಬ ಆಸಕ್ತಿಕರ.ಆತ ಟೆನ್ನಿಸ್ ಎನ್ನುವ ಆಟದ ಬಗ್ಗೆ ಮೊದಲ ಬಾರಿಗೆ ಕೇಳಿದ್ದು ತನ್ನ ನಾಲ್ಕನೇ ವಯಸ್ಸಿನಲ್ಲಿ.ಅದರ ಬಗ್ಗೆ ಹೇಳುವ ಜೋಕೊವಿಚ್ ,’ಅದೊಮ್ಮೆ ಅಪ್ಪನ ರೆಸ್ಟೊರೆಂಟ್‌ನ ಹೊರಗೆ ಆಡುತ್ತಿದ್ದ ನಾನು ಪಕ್ಕದಲ್ಲಿಯೇ ನಡೆಯುತ್ತಿದ್ದ ಕಾಮಗಾರಿಯನ್ನು ಸುಮ್ಮನೇ  ಗಮನಿಸಿದೆ.ಒಂದಷ್ಟು ಕೆಲಸಗಾರರು ನೆಲವನ್ನು ಸಮತಟ್ಟುಗೊಳಿಸುತ್ತ ಮಣ್ಣು ಹಾಕುತ್ತಿದ್ದರೆ,ಒಂದಷ್ಟು ಜನ ಮೂಲೆಯಲ್ಲಿ ಕೂತು ಬಲೆಯೊಂದನ್ನು ಸರಿಪಡಿಸುತ್ತಿದ್ದರು.ನನಗೇನೋ ಕುತೂಹಲ.ಅವರೆಡೆಗೆ ತೆರಳಿ ,ಏನು ಮಾಡಿತ್ತಿದ್ದೀರಿ ಇಲ್ಲಿ ಎಂದು ಕೇಳಿದ್ದೆ.ಇಲ್ಲೊಂದು ಟೆನ್ನಿಸ್ ಕ್ರೀಡಾಂಗಣ ನಿರ್ಮಿಸಲಿದ್ದೇವೆ ಎಂಬ ಉತ್ತರ ಅವರದ್ದು.ಟೆನ್ನಿಸ್ ಎನ್ನುವ ಪದ ಹಾಗೆ ಮೊದಲ ಬಾರಿ ಕೇಳಿದ್ದು ನಾನು.ಫುಟ್ಬಾಲ್ ಗೊತ್ತಿತ್ತು,ಆದರೆ ಇದೇನಿದು ಟೆನ್ನಿಸ್..? ಎನ್ನಿಸಿತು.ಅಪ್ಪನ ಬಳಿ ಮಾಹಿತಿ ಪಡೆದುಕೊಂಡೆ.ಆದೇಕೋ ಅದರ ಮೂಲಭೂತ ವಿವರಗಳನ್ನು ಕೇಳಿಕೊಂಡ ನನಗೆ ಟೆನ್ನಿಸ್ ಎನ್ನುವ ನಾನು ಕಂಡುಕೇಳರಿಯದ ಆಟದ ಬಗ್ಗೆ ಪ್ರೇಮ ಹುಟ್ಟಿಕೊಂಡುಬಿಟ್ಟಿತು.ಅಲ್ಲಿಂದ ಶುರುವಾಯಿತು ನನ್ನ ಟೆನ್ನಿಸ್ ಲೋಕದ ಜರ್ನಿ’ಎಂದು ನುಡಿದು ನಸುನಗುತ್ತಾರೆ.
ಹಾಗೆಂದ ಮಾತ್ರಕ್ಕೆ ಜೋಕೊವಿಚ್‌ರ ಟೆನ್ನಿಸ್ ಲೋಕದ ವಿಜಯಯಾತ್ರೆ ತೀರ ಸುಲಭವೇನೂ ಆಗಿರಲಿಲ್ಲ.ಬೆಲ್ಗ್ರೆಡ್‌ನ ತಮ್ಮ ಮನೆಯ ಸುತ್ತಮುತ್ತ ಹೆಚ್ಚಿನ ಫುಟ್ಬಾಲ್ ಕ್ರೀಡೆಯ ಅಭಿಮಾನಿಗಳನ್ನು ಹೊಂದಿದ್ದ ಜೊಕೊವಿಚ್‌ಗೆ ಟೆನ್ನಿಸ್ ಎನ್ನುವ ಆಟಕ್ಕೊಬ್ಬ ಜೊತೆಗಾರ ಬೇಕಿತ್ತು.ತನ್ನ ಮಗನಿಗೆ   ಅಪ್ಪ ಬೆನ್ನುಬಿದ್ದು ಟೆನ್ನಿಸ್ ರ‍್ಯಾಕೆಟ್ ಮತ್ತು ಬಾಲ್ ಕೊಡಿಸಿದ್ದರಾದರೂ ಜೊತೆಗಾರನ ಕೊರತೆಯನ್ನು ಮಾತ್ರ ಅಪ್ಪನಿಂದ ನೀಗಿಸಲಾಗಿರಲಿಲ್ಲ.ಆದರೆ ತೀರ ಆ ಚಿಕ್ಕ ವಯಸ್ಸಿನಲ್ಲಿಯೇ ತಾನೊಬ್ಬ ಟೆನ್ನಿಸ್ ಆಟಗಾರನಾಗಬೇಕು ಎಂದು ನಿರ್ಧರಿಸಿಬಿಟ್ಟಿದ್ದ ಜೋಕೊಗೆ ಅದ್ಯಾವ ಲೆಕ್ಕ..? ಆತ ಪುಟ್ಟ ಕೈಗಳಿಂದ ಚೆಂಡನ್ನು ತನ್ನ ಮನೆಯ ಗೋಡೆಗೆಸೆದು ರ‍್ಯಾಕೆಟ್ಟಿನಿಂದ ಹೊಡೆಯುತ್ತ ಏಕಾಂಗಿಯಾಗಿ ಟೆನ್ನಿಸ್ ಕಲಿಯತೊಡಗಿದ.ಆಟದೆಡೆಗೆ ಆತನ ಶೃದ್ಧೆ ಎಂಥದ್ದಿತ್ತೆಂದರೆ ಒಂಟಿಯಾಗಿ ಗಂಟೆಗಟ್ಟಲೇ ಗೋಡೆಯೊಂದಿಗೆ ಟೆನ್ನಿಸ್ ಆಡುತ್ತಿದ್ದ ಜೋಕೊವಿಚ್‌ಗೆ ಸಂಜೆಯಾಗಿ ಕತ್ತಲಾದರೂ ಆಟ ಮುಗಿಸುವ ಪರಿವೆ ಇರುತ್ತಿರಲಿಲ್ಲವಂತೆ.ಅಂಥದ್ದೇ ಒಂದು ದಿನಗಳಲ್ಲಿ ಆತ ಯೆಲೆನಾರ ಕಣ್ಣಿಗೆ ಬಿದ್ದದ್ದು.
ಇಷ್ಟರ ನಂತರವೂ ಜೋಕೊವಿಚ್‌ನ ಬದುಕು ಸುಲಭದ್ದೇನೂ ಆಗಿರಲಿಲ್ಲ.ಟೆನ್ನಿಸ್ ತರಬೇತಿ ಆರಂಭವಾದ ಕೆಲವೇ ವರ್ಷಗಳಲ್ಲಿ ನ್ಯಾಟೊ ಯುದ್ದದ ದಾಳಿಗಳು ನಡೆಯಲಾಂರಭಿಸಿದವು.ಬೆಲ್ಗ್ರೆಡ್‌ನ ಮೇಲೆ ಸತತ ಬಾಂಬಿನ ದಾಳಿಗಳಾಗಲಾರಂಭಿಸಿದ್ದವು.ಊರ ತುಂಬ ಆತಂಕದ ವಾತಾವರಣ.ಆಗಸದಲ್ಲಿ ಯುದ್ಧವಿಮಾನಗಳು ಕಾಣುತ್ತಿದ್ದಂತೆ ಸೈರನ್ ಬಾರಿಸಲಾಗುತ್ತಿತ್ತು.ತಕ್ಷಣವೇ ಜನ ಮಾಡುತ್ತಿದ್ದ ಕೆಲಸಗಳನ್ನೆಲ್ಲ ಬಿಟ್ಟು ಓಡುತ್ತ  ಮನೆಯ ನೆಲಮಾಳಿಗೆಯನ್ನು ಸೇರಿಕೊಂಡುಬಿಡುತ್ತಿದ್ದರು.ಹಾಗೆ ನೆಲಮಾಳಿಗೆ ಸೇರಿಕೊಂಡ ಕೆಲವೇ ಕ್ಷಣಗಳಲ್ಲಿ ಊರ ತುಂಬ ಬಾಂಬು ಸ್ಪೋಟದ ಸದ್ದು.ಅಡಗಿ ಕೂತ ಪ್ರತಿಯೊಬ್ಬರ ಎದೆಯಲ್ಲಿಯೂ ನಡುಕ.ನೆಲಮಾಳಿಗೆ ಸೇರಿಕೊಳ್ಳುವುದು ನಿಜವೇ ಆಗಿದ್ದರೂ ಬಾಂಬು ಎಲ್ಲಿ ಬೇಕಿದ್ದರೂ ಬೀಳಬಹುದೆನ್ನುವ ಭಯವೇ ಜನರ ಮಾನಸಿಕ ಸ್ಥೈರ್ಯವನ್ನು ಅಡಗಿಸಿಬಿಡುತ್ತಿತ್ತು.ಟೆನ್ನಿಸ್ ಹಾಗಿರಲಿ ,ಬದುಕು ಕಟ್ಟಿಕೊಳ್ಳುವುದೇ ಕಷ್ಟವೆನ್ನಿಸಿದ್ದ ಸಮಯವದು.ಬದುಕು  ಜೋ ಕೊವಿಚ್‌ನೆಡೆಗೆ ಅಪಹಾಸ್ಯಗೈದಿದ್ದ ಕಾಲ..ಏಳನೇಯ ವಯಸ್ಸಿಗಾಗಲೇ ಆತ ಪೀಟ್ ಸಾಂಪ್ರಾಸ್‌ ವಿಂಬಲ್ಡನ್ ಗೆದ್ದಿದ್ದನ್ನು ಟಿವಿಯಲ್ಲಿ ಕಂಡಿದ್ದ.ಚಿನ್ನದ ವರ್ಣದ ಮಿರಿಮಿರಿ ಮಿಂಚುವ ವಿಂಬಲ್ಡನ್ ಟ್ರೋಫಿಯನ್ನು ಪೀಟ್‌ನ ಕೈಯಲ್ಲಿ ಕಂಡಾಗ ಆತ ಮತ್ತೊಮ್ಮೆ ತೀರ್ಮಾನಿಸಿದ್ದ.ನಾನೂ ಸಹ ಆ ಪ್ರಶಸ್ತಿಯನ್ನು ಗೆಲ್ಲಬೇಕು,ತಾನೂ ಸಹ ಜಗತ್ತಿನ ನಂಬರ್ ಒನ್ ಆಟಗಾರನಾಗಬೇಕು .ಹಾಗಂದುಕೊಂಡವನು ತನ್ನ ಬಳಿ ಲಭ್ಯವಿದ್ದ ಸಾಮಗ್ರಿಗಳಿಂದ, ಚಿನ್ನದ ವರ್ಣದ ಬಣ್ಣದಿಂದ ನಕಲಿ ವಿಂಬಲ್ಡನ್ ಟ್ರೋಫಿಯೊಂದನ್ನು ತಯಾರಿಸಿದ್ದ.ತನ್ನ ಗೆಳೆಯರಿಗೆ ಅದನ್ನು ತೋರಿಸಿ ’ಒಂದಲ್ಲ ಒಂದು ದಿನ ತಾನೂ ಸಹ ಜಗತ್ತಿನ ನಂಬರ್ ಒನ್ ಆಟಗಾರನಾಗಲಿದ್ದೇನೆ.ಕನಿಷ್ಟ ಒಂದಾದರೂ ವಿಂಬಲ್ಡನ್ ಗೆಲ್ಲಲಿದ್ದೇನೆ’ಎಂದಿದ್ದ.ಆವತ್ತೂ ಸಹ ಆತನಿಗೆ ಗೆಳೆಯರಿಂದ ಎದುರಾಗಿದ್ದು ಮತ್ತದೇ ಅಪಹಾಸ್ಯ.
ಆದರೆ ಜೋಕೊವಿಚ್ ಎನ್ನುವ ಗಟ್ಟಿಮನಸಿನ ಹುಡುಗನಿಗೆ ಸ್ಪಷ್ಟವಾಗಿ ಗೊತ್ತಿತ್ತು.  ತನ್ನ ಬದುಕಿನ ಗುರಿ ಪರ್ವತದಷ್ಟು ದೊಡ್ಡದು.ಅದನ್ನು ಸಾಧಿಸುವ ದಾರಿಯಲ್ಲಿ ಸಾಕಷ್ಟು ವ್ಯಂಗ್ಯ ,ಹಿಯ್ಯಾಳಿಕೆಗಳು ತನಗೆ ಎದುರಾಗಲಿವೆ. ಗೆಲ್ಲಬೇಕು ಎಂದಾದರೆ ತನ್ನೆಡೆಗಿನ ಅಪಹಾಸ್ಯದೆಡೆಗೆ ತಾನೊಂದು ದಿವ್ಯ ನಿರ್ಲಕ್ಷ್ಯ ಬೆಳೆಸಿಕೊಳ್ಳಬೇಕು. ಅಪಹಾಸ್ಯಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ.ಇಲ್ಲಿ ಗೆಲ್ಲುವುದೇನಿದ್ದರೂ ಅಪಹಾಸ್ಯಗಳೆಡೆಗಿನ ನಿರ್ಲಕ್ಷ್ಯ ಮತ್ತು ಮನೋಬಲವೇ ಎಂದುಕೊಂಡವನು ಬೆಲ್ಗ್ರೆಡ್‍ನ ಯುದ್ಧದ ವಾತಾವರಣ ತಿಳಿಯಾಗುತ್ತಲೇ ಮತ್ತೆ ಅಖಾಡಾಕ್ಕಿಳಿದಿದ್ದ.ಅಪ್ಪನ ಬಡತನ,ಪಂದ್ಯಾವಳಿಗಳಿಗೆ ಕಟ್ಟಬೇಕಿರುವ ಫೀಸ್‌ಗಾಗಿ ಪರದಾಟದಂಥಹ ಪರಿಸ್ಥಿತಿಯಲ್ಲಿಯೂ ಆತ ಕಷ್ಟಪಟ್ಟು ತನ್ನ ಹದಿನಾಲ್ಕನೇಯ ವಯಸ್ಸಿಗೆ ತನ್ನ ಅಂತರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ.
ಆಡಿದ ಮೊದಲ ಯುರೋಪಿಯನ್ ಪಂದ್ಯಾವಳಿಯಲ್ಲಿಯೇ ಭರ್ಜರಿ ಯಶಸ್ಸು ಆತನದ್ದು. 2001ರ ಯುರೋಪಿಯನ್ ಚಾಂಪಿಯನ್‌ನ ಸಿಂಗಲ್ಸ್ ,ಡಬಲ್ಸ್ ಮತ್ತು ತಂಡದ ಸ್ಪರ್ಧೆಗಳಲ್ಲಿ ಗೆಲ್ಲುವ ಮೂಲಕ ಆತ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದ.ಮುಂದೆ 2004ರಲ್ಲಿ ವಿಂಬಲ್ಡನ್‌ಗೆ ಅರ್ಹತೆ ಪಡೆದರೂ ಅನುಭವದ ಕೊರತೆ ಮೂರನೇ ಸುತ್ತಿನಲ್ಲಿ ಆತನನ್ನು ಟೂರ್ನಿಯಿಂದ ಹೊರಗೆ ಬೀಳುವಂತೆ ಮಾಡಿತು.ಆದರೆ ಅಷ್ಟರಮಟ್ಟಿಗಿನ ಆತನ ಸಾಧನೆ ಆತನನ್ನು ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ನೂರರ ಸ್ಥಾನದೊಳಕ್ಕೆ ಸೇರಿಸಿತ್ತು.ಮುಂದೆ 2007ರಲ್ಲಿ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್‌ನ ಸೆಮಿಫೈನಲ್ ಆಡಿದ್ದ ಜೊಕೊವಿಚ್‌ನ ಪ್ರತಿಭೆ ನಿಧಾನಕ್ಕೆ ವಿಶ್ವ  ಟೆನ್ನಿಸ್ ಪ್ರಿಯರ ಗಮನಕ್ಕೆ ಬರಲಾರಂಭಿಸಿತ್ತು.ಅದೇ ವರ್ಷ ಮಾಂಟ್ರಿಯಲ್‍ನ ಪಂದ್ಯಾವಳಿಯಲ್ಲಿ ನಡಾಲ್,ಫೆಡರರ್ ಮತ್ತು ಆಂಡಿ ರಾಡಿಕ್‌ರಂತಹ ಘಟಾನುಘಟಿಗಳನ್ನ್ನು ಸೋಲಿಸುವ ಮೂಲಕ ಪಂದ್ಯಾವಳಿಯನ್ನು ಜಯಿಸಿ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಜೊಕೊವಿಚ್ ಟೆನ್ನಿಸ್ ಜಗತ್ತಿಗೆ ತನ್ನ ಆಗಮನ ಸುದ್ದಿಯನ್ನು ಗಟ್ಟಿಯಾಗಿ ಹೇಳಿದ್ದ.
ನಿಮಗೆ ಗೊತ್ತಿರಲಿ.ಆತ ತನ್ನ ಮೊದಲ ಗ್ರಾಂಡ್‌ಸ್ಲಾಮ್ ಟೂರ್ನಿಯನ್ನು ಗೆದ್ದಿದ್ದು 2008ರಲ್ಲಿ.ಅದು ಫೆಡಾಲ್ ಜೋಡಿಯ ಪರ್ವಕಾಲ.ಜಂಟಿಯಾಗಿ ಅವರಿಬ್ಬರೇ ಅಷ್ಟರಲ್ಲಾಗಲೇ ಹದಿನೈದು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಕೊಂಡಾಗಿತ್ತು. ಪ್ರಶಸ್ತಿ ಗೆಲ್ಲುವುದು ಹಾಗಿರಲಿ,ಆವತ್ತಿಗೆ ಅವರಿಬ್ಬರಲ್ಲಿ ಒಬ್ಬರನ್ನು ದಾಟಿಕೊಂಡು ಪಂದ್ಯಾವಳಿಯೊಂದರ ಫೈನಲ್  ತಲುಪಿಕೊಳ್ಳುವುದೇ ಹರಸಾಹಸವಾಗಿತ್ತು.ಯಾವುದೇ ಪಂದ್ಯಾವಳಿಯಾದರೂ ಇವರಲ್ಲೊಬ್ಬ ಗೆಲ್ಲಬೇಕು ಎನ್ನುವುದು ಆವತ್ತಿನ ಟೆನ್ನಿಸ್ ಅಭಿಮಾನಿಗಳ,ಪಂಡಿತರ ತರ್ಕ.
ಊಹುಂ,ಹಾಗಾಗದು.ಹಾಗಾಗುವುದಕ್ಕೆ ತಾನು ಬಿಡಲಾರೆ ಎಂದು ನಿರ್ಧರಿಸಿದ್ದವನು ಜೋಕೊವಿಚ್.ಹಾಗೆ ನಿರ್ಧರಿಸಿದವನು ಅದನ್ನು ಸಾಧಿಸಿಯೂ ಬಿಟ್ಟ.’ಫೆಡಾಲ್ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಅವರನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲ ಇದು ನನ್ನ ಈ ಟೂರ್ನಿಯ ಅಂತಿಮ ಪಂದ್ಯ.ಇದನ್ನು ಗೆದ್ದುಬಿಡಬೇಕಷ್ಟೇ ಎಂದುಕೊಳ್ಳುತ್ತಿದ್ದೆ.ಅ ಭಾವವೇ ತನ್ನನ್ನು ಆಗಾಗ ಗೆಲ್ಲಿಸಿದ್ದು.ಸೋತಾಗ ಅದೇ ಅಂತಿಮ ಪಂದ್ಯವಾಗುತ್ತಿದ್ದದ್ದೂ ಸುಳ್ಳೇನಲ್ಲ ನೋಡಿ’ಎಂದು ನಗುತ್ತಾನೆ ಜೊಕೊವಿಚ್.
ತಿರುಗಿ ನೋಡಿದರೆ ಹತ್ತಾರು ದಾಖಲೆಗಳ ಸರದಾರ ಜೋಕೊವಿಚ್.ಸಾರ್ವಕಾಲೀಕ ಶ್ರೇಷ್ಟದ್ವಯರನ್ನು ಅತೀ ಹೆಚ್ಚು ಬಾರಿ ಎದುರಿಸಿದ ಮತ್ತು ಅತಿ ಹೆಚ್ಚು ಬಾರಿ ಸೋಲಿಸಿದ ದಾಖಲೆಯೂ ಅವನದ್ದೇ.ಹೆಚ್ಚುಕಡಿಮೆ ಉಳಿದೆಲ್ಲ ಆಟಗಾರರನ್ನು ತಮ್ಮ ದೈತ್ಯ ಪ್ರತಿಭೆಯಿಂದ ಬಹುತೇಕ ನುಂಗಿಯೇ ಹಾಕಿದ ರೋಜರ್ ಫೇಡರರ್ ಮತ್ತು ರಾಫೆಲ್ ನಡಾಲರ ಪಾರಮ್ಯದ ನಡುವೆಯೇ ಅವರ ಸಾಧನೆಯನ್ನು ಮೀರುವತ್ತ ನಡೆದಿರುವ ಜಿದ್ದಿನ ಆಟಗಾರ.ಅಂದುಕೊಂಡಂತೆ ನಡೆದರೆ ಟೆನ್ನಿಸ್ ಲೋಕ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗುವ ಎಲ್ಲ ಅರ್ಹತೆಯುಳ್ಳ ಆಟಗಾರ ಜೋಕೊವಿಚ್.
” Whenever nothing hurts, put a little stone in your shoe, and start walking.” ಎನ್ನುತ್ತಾನೆ ಜೊಕೊವಿಚ್. ಗೆಲುವು ಬದುಕಿನ ದೊಡ್ಡ ಸಂತಸ.ಆದರೆ ಬದುಕಿನ ನೋವುಗಳನ್ನು ನಾವು ಮರೆಯಬಾರದು,ನೋವೇ ಇಲ್ಲವೆನ್ನುವ ಪರಿಸ್ಥಿತಿಗಳಲ್ಲಿ ಧರಿಸಿರುವ ಬೂಟಿನೊಳಕ್ಕೊಂದು ಸಣ್ಣನೇಯ ಕಲ್ಲು ಹಾಕಿಕೊಂಡು ನಡೆಯಿರಿ.ನೋವು ಚೆನ್ನಾಗಿ ನೆನಪಿರುತ್ತದೆ ಎನ್ನುವ ಅವನ ಬದುಕಿನ ಕತೆ ನಿಜಕ್ಕೂ ಪ್ರೇರಣಾದಾಯಕ.ಪ್ರತಿ ಸಾಧಕನ ಬದುಕಲ್ಲಿಯೂ ಹೀಗೆ ಕಷ್ಟಗಳು ಎದುರಾಗುವುದೇಕೆ..?ಎದುರಾದ ಕಷ್ಟಗಳನ್ನು ಮೆಟ್ಟಿ ನಿಂತ ಅವರವರ ಸ್ಥೈರ್ಯವೇ ಅವರನ್ನು ಸಾಧಕರಾಗಿ ಮಾಡುವುದಾ..?.ನೆತ್ತಿಯ ಮೇಲೆ ಬಾಂಬು ಬಿದ್ದು ಜೀವ ಹೋಗುವ ಪರಿಸ್ಥಿತಿಯಲ್ಲಿಯೂ ಸಾಧನೆಯ ಬಗ್ಗೆ ಯೋಚಿಸುವುದು ಹೇಗೆ ಸಾಧ್ಯ..? ತಾನು ಮುಂದೊಮ್ಮೆ ಜಗದ ಅಗ್ರ ಶ್ರೇಯಾಂಕಿತ ಆಟಗಾರನಾಗುತ್ತೇನೆ ಎಂದು ಅದು ಹೇಗೆ ಆತ ಅಷ್ಟು ಖಚಿತವಾಗಿ ನುಡಿದ..? ಸಾಧಕರಲ್ಲಿ ಹೇಗೆ ಬೆಳೆಯುತ್ತದೆ ಈ ಮನಸ್ಥಿತಿ..? ತೀರ ಸಾಮಾನ್ಯ ಮನುಷ್ಯನೊಬ್ಬ ಹೀಗೆ ಸಾಧಕನಾಗುವ ಈ  ವಿಸ್ಮಯವೇನು..? ಎನ್ನುವ ಹತ್ತು ಹಲವು ಮೆಚ್ಚುಗೆಯ ಪ್ರಶ್ನೆಗಳು ನನಗೆ.ವೈಯಕ್ತಿಕವಾಗಿ ನನಗೆ ಜೋಕೊವಿಚ್ ನೆಚ್ಚಿನ ಆಟಗಾರನೇನಲ್ಲ.ರೋಜರ್ ಫೆಡರರ್‌ನಷ್ಟು ನಾನು ಆತನನ್ನು ಮೆಚ್ಚಲಿಲ್ಲ.ರಾಫಾ ನಡಾಲ್ ಎನ್ನುವ ಸ್ಪೇನ್‌ನ ಟೆನ್ನಿಸ್ ದಂತಕತೆ ಗೆದ್ದಾಗ ಕುಣಿದಷ್ಟು,ಸೋತಾಗ ಕಣ್ಣಂಚಲ್ಲಿ ಹನಿಯೊಂದು ಮೂಡಿದಷ್ಟು ಭಾವದ ಎಳ್ಳಷ್ಟನ್ನೂ ಸಹ ಜೋಕೊವಿಚ್ ನನ್ನಲ್ಲಿ ಮೂಡಿಸಿಲ್ಲ.ಅಷ್ಟಾಗಿ  ಒಬ್ಬ ಸಾಧಕನಾಗಿ ಜೋಕೊವಿಚ್‌ನ ಸಾಧನೆಯೆಡೆಗೆ ನನ್ನದು ಯಾವತ್ತಿಗೂ ಅಭಿಮಾನದ ಮೆಚ್ಚುಗೆಯ ಮುಗಿಯದ ಅಚ್ಚರಿ.ಯಾವತ್ತಾದರೂ ಇದನ್ನು ಬರೆಯೋಣವೆಂದುಕೊಂಡಿದ್ದೆ.  ಅದೇಕೋ ಏನೋ ’ಧೋನಿ ಸಾಧಕನಲ್ಲ ,ಕೋಹ್ಲಿಯಂತೂ ಬರೀ ಲಕ್ಕಿ,ಸಚಿನ್ ಮಹಾನ್ ಸ್ವಾರ್ಥಿ ಆಟಗಾರ’ಎನ್ನುವ ಫೇಸ್ಬುಕ್ ಪಂಡಿತರ ದುರಿತ ಕಾಲಕ್ಕೆ ಈ ಬರಹವನ್ನು ಬರೆದುಬಿಡೋಣ ಎನ್ನಿಸಿತು ನೋಡಿ.

Latest stories

LEAVE A REPLY

Please enter your comment!
Please enter your name here

5 × five =