8.5 C
London
Friday, March 29, 2024
Homeಟೆನಿಸ್ಹೆಣ್ಣೊಬ್ಬಳ ಆತ್ಮವಿಶ್ವಾಸ ಪುರುಷಹಂಕಾರವನ್ನು ಹೆಡೆಮುರಿಗೆ ಕಟ್ಟಿತ್ತು

ಹೆಣ್ಣೊಬ್ಬಳ ಆತ್ಮವಿಶ್ವಾಸ ಪುರುಷಹಂಕಾರವನ್ನು ಹೆಡೆಮುರಿಗೆ ಕಟ್ಟಿತ್ತು

Date:

Related stories

ಕರ್ನಾಟಕದ ಮೊದಲ ರಣಜಿ ಟ್ರೋಫಿ ಗೆಲುವಿಗೆ 50 ವರ್ಷ..

50 ವರ್ಷಗಳ ಹಿಂದೆ ಚರಿತ್ರೆ ಸೃಷ್ಠಿಸಿದ್ದ ಎರಾಪಳ್ಳಿ ಪ್ರಸನ್ನ & ಟೀಮ್..! 1958ರಿಂದ...

ಫ್ರೆಂಡ್ಸ್ ಕಪ್-ಸೋತ ತಂಡಗಳಿಗೂ ಇಲ್ಲಿದೆ ಆಶಾದಾಯಕ ಅಂಶ-ಆರಂಭದಲ್ಲಿ ಪಂದ್ಯ ಸೋತರೂ ಪ್ರಶಸ್ತಿ ಗೆಲ್ಲುವ ಅವಕಾಶ…!!!

ಬೆಂಗಳೂರು-ಫ್ರೆಂಡ್ಸ್ ಕಪ್ 2ನೇ ಆವೃತ್ತಿಯ ಕ್ರಿಕೆಟ್​ ​ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಪೀಣ್ಯ...

ರಾಜ್ಯದ ಅತ್ಯಂತ ಜನಪ್ರಿಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಫ್ರೆಂಡ್ಸ್ ಕಪ್ 2024 ಗೆ ಫಿಧಾ ಆಗಲಿದೆ ಕ್ರಿಕೆಟ್ ಲೋಕ

ಟೆನಿಸ್ ಬಾಲ್ ಕ್ರಿಕೆಟ್ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ, ಮತ್ತು ...
spot_imgspot_img
ವಿಶ್ವ ಟೆನ್ನಿಸ್ ಲೋಕದಲ್ಲಿ ಬಾಬಿ ರಿಗ್ಗ್ ಎನ್ನುವ ಪ್ರತಿಭಾನ್ವಿತ ಆಟಗಾರನೊಬ್ಬನಿದ್ದ.ಮೂರು ಗ್ರಾಂಡ್‌ಸ್ಲಾಮ್ ಗೆದ್ದು ತನ್ನ ವೃತ್ತಿಕಾಲದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರರಲ್ಲಿ ಒಬ್ಬನಾಗಿ ಮೆರೆದವನು ರಿಗ್ಸ್.ಅದೇನಾಯಿತೋ ಗೊತ್ತಿಲ್ಲ,
ತಾನು ನಿವೃತ್ತನಾದ ಕಾಲಕ್ಕೆ ಒಂದು ವಿಲಕ್ಷಣ ಅಹಮಿಕೆ ಅವನ ನೆತ್ತಿಗೇರಿತ್ತು.ಏಕಾಏಕಿ ಆತ ಮಹಿಳಾ ಟೆನ್ನಿಸ್ ಲೋಕವನ್ನ ಟೀಕಿಸಲಾರಂಭಿಸಿದ್ದ.ಮಹಿಳೆಯರ ಟೆನ್ನಿಸ್ ಎನ್ನುವುದೇ ಒಂದು ಅರ್ಥಹೀನ ಕ್ರೀಡೆ,ಮಹಿಳೆಯರು ಟೆನ್ನಿಸ್ ಆಡುವುದಕ್ಕೆ ಅಯೋಗ್ಯರು ಎಂಬರ್ಥದಲ್ಲಿ ಮಾತುಗಳನ್ನಾಡುತ್ತಿದ್ದ ಅವನ ಮಾತುಗಳಿಗೆ ಆರಂಭಿಕ ನಿರ್ಲಕ್ಷ್ಯಗಳು ಎದುರಾಗಿದ್ದವು.ಆದರೆ ಅವನು ಸುಮ್ಮನಾಗಲಿಲ್ಲ.ತನ್ನೆಡೆಗಿನ ಉಪೇಕ್ಷೆಯಿಂದ ಇನ್ನಷ್ಟು ಕೆರಳಿದವನು ಮತ್ತೆ ಮತ್ತೆ ನಾಲಿಗೆಯನ್ನು ಹರಿಬಿಟ್ಟಿದ್ದ.’ತನಗೀಗ 55 ವರ್ಷ ವಯಸ್ಸು.ಆದರೆ ಅದನ್ನ ಪರಿಗಣನೆಗೆ ತೆಗೆದುಕೊಳ್ಳಬೇಡಿ.ತಾನು ಈ ವಯಸ್ಸಿನಲ್ಲಿಯೂ ಮಹಿಳಾ ಟೆನ್ನಿಸ್‌ನ ಅಗ್ರಶ್ರೇಯಾಂಕಿತರನ್ನ ಸುಲಭಕ್ಕೆ ಸೋತು ಸುಣ್ಣವಾಗಿಸುತ್ತೇನೆ,ಅವರು ನನಗಿಂತ ಚಿಕ್ಕವರಾಗಿರಲಿ ದೊಡ್ಡವರಿರಲಿ ನನಗೆ ಲೆಕ್ಕವಿಲ್ಲ’ಎಂದು ಅಬ್ಬರಿಸಿದ್ದ.ಆತ ಹಾಗೆ ಅಬ್ಬರಿಸಿ ಆಹ್ವಾನವಿತ್ತಿದ್ದು ಅಂದಿನ ಯುವ ಆಟಗಾರ್ತಿ ಬಿಲ್ ಜೀನ್ ಕಿಂಗ್‌ಳಿಗೆ.ಆದರೆ ಆಕೆಗೆ ಅವನೆಡೆಗೆ ದಿವ್ಯ ನಿರ್ಲಕ್ಷ್ಯ. ಹಾಗಾಗಿ ಆವತ್ತಿಗೆ ರಿಗ್ಸ್‌ನ ಎದುರಾಳಿಯಾಗಿದ್ದವಳು ಮಹಿಳಾ ಟೆನ್ನಿಸ್ ಲೋಕದ ದಂತ ಕತೆ ಮಾರ್ಗರೇಟ್ ಕೋರ್ಟ್.ಆಕೆ ಆವತ್ತಿಗೆ ಟೆನ್ನಿಸ್ ಲೋಕದ ಅಗ್ರಶ್ರೇಯಾಂಕಿತ ಆಟಗಾರ್ತಿ. ಸಾಲುಸಾಲು ಪ್ರಶಸ್ತಿಗಳು ಆಕೆಯ ಬೆನ್ನಿಗಿದ್ದವು.ಆದರೆ ಆಕೆಯ ಪ್ರತಿಭೆ ಆವತ್ತಿಗೇಕೊ  ಆಕೆಯ ಕೈ ಹಿಡಿಯಲಿಲ್ಲ.ಅವಳೆದರು ಅಕ್ಷರಶಃ ಆರ್ಭಟ ರಿಗ್ಸ್‌ನದ್ದು.  ತನ್ನ ಅಹಮಿಕೆಯ ತೃಪ್ತಿಗೆಂಬಂತೆ ಆಟವಾಡಿದ ರಿಗ್ಸ್ ಆಕೆಯನ್ನು ಚಿಕ್ಕ ಮಕ್ಕಳಂತೆ ಸೋಲಿಸಿದ್ದ.ಮೂರು ಸೆಟ್‌ಗಳ ಪಂದ್ಯವನ್ನು ಆತ 6-2,6-1 ರ ನೇರ ಅಂತರದಲ್ಲಿ ಜಯಿಸಿದ್ದ.
ಒಂದರ್ಥದಲ್ಲಿ ರಿಗ್ಸ್‌ನ ಗೆಲುವು ಆವತ್ತಿನ ಸಮಾಜದ ಪುರುಷಂಹಕಾರವನ್ನು ಮತ್ತೊಮ್ಮೆ ಕೆರಳಿಸಿತ್ತು. ಸಮಾನತೆಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಪಾಶ್ಚಿಮಾತ್ಯ ಸಮಾಜದ ಪತ್ರಿಕೆಗಳು ರಿಗ್ಸ್‌ನ ಚಿತ್ರವನ್ನು ಮುಖಪುಟದಲ್ಲಿ ಹಾಕಿ ಮೆರೆಸಿದ್ದವು.’ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ‘ ಮತ್ತು ‘ಟೈಮ್ ‘ನಂಥಹ ಪ್ರತಿಷ್ಠಿತ ಪತ್ರಿಕೆಗಳ ಮುಖಪುಟದಲ್ಲಿಯೂ ಬಾಬಿ ರಿಗ್ಸ್ ರಾರಾಜಿಸುತ್ತಿದ್ದ.
ಗೆಲುವಿನ ನಶೆ ನೆತ್ತಿಗೇರಿತ್ತು.ಮತ್ತೆ ಹುಚ್ಚುಚ್ಚಾಗಿ ಮಾತನಾಡಲಾರಂಭಿಸಿದ್ದ ಬಾಬಿ .ಈ ಬಾರಿ ಟೆನ್ನಿಸ್ ಟೀಕಾಕಾರ ಮತ್ತು ನಿರೂಪಕ ಜಾಕ್ ಕ್ರಾಮರ್ ಸಹ ರಿಗ್ಸ್‌ನ ಹುಚ್ಚಾಟಕ್ಕೆ ದನಿಗೂಡಿಸಿದ್ದ.ಇವರಿಬ್ಬರ ಹುಚ್ಚಾಟಕ್ಕೆ ಅನಗತ್ಯದ ಪುರುಷಹಂಕಾರದ ಮೆರೆದಾಟಕ್ಕೆ ಒಂದು ಉತ್ತರ ಬೇಕಿತ್ತು.ಒಂದು ಸವಾಲು ಬೇಕಿತ್ತು.ಆಗ ಸವಾಲಾಗಿ ನಿಂತವಳು ಬಿಲ್ಲಿ ಜೀನ್ ಕಿಂಗ್ .ಪಂದ್ಯಕ್ಕೆ ತಾನು ತಯಾರು ಎಂದಿದ್ದಳು.ತಕ್ಷಣವೇ ಆಯೋಜಕರು ಪಂದ್ಯಕ್ಕೊಂದು ವೇದಿಕೆ ಸಿದ್ದಪಡಿಸಿದ್ದರು.1973 ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಈ ಪಂದ್ಯಕ್ಕೆ ಆವತ್ತಿಗೆ ಆಯೋಜಕರಿಟ್ಟ ಹೆಸರು
‘Battle of sexes’
ಪಂದ್ಯ ನಿಗದಿತ ದಿನಕ್ಕೆ, ನಿಗದಿತ ಸಮಯಕ್ಕೆ ಶುರುವಾಗಿತ್ತು.ಆಗಷ್ಟೇ ನಂಬರ್ ಒನ್ ಸ್ಥಾನಕ್ಕೆ ಹೋಗಿ ಕುಳಿತಿದ್ದ ಬಿಲ್ ಜೀನ್ ಕಿಂಗ್ ಅಮೇರಿಕಾದ ಆಟಗಾರ್ತಿ. ಆಟಕ್ಕೂ ಮುನ್ನ ತೀರ ಗಂಭೀರವದನಳಾಗಿದ್ದ ಆಕೆಯೆಡೆಗೆ ರಿಗ್ಸ್‌ನದ್ದು ಯಾವತ್ತಿನ ಉಡಾಫೆ.ಮೊದಲ ಸೆಟ್ ಆರಂಭವಾದಾಗ 3 – 2 ರಿಂದ ಹಿಂದಿದ್ದ ಬಿಲ್ಲಿ ಜೀನ್‌ಳ ಸರ್ವ್ ಬ್ರೇಕ್ ಮಾಡಿದ್ದ ರಿಗ್ಸ್.ನೋಡುಗರಿಗೆ ಆ ಕ್ಷಣಕ್ಕೆ ಇದು ಸಹ ಮೊದಲ ಪಂದ್ಯದ ಕತೆಯೇ ಬಿಡಿ ಎಂದೆನ್ನಿಸಿರಲಿಕ್ಕೂ ಸಾಕು.ಆದರೆ ಬಿಲ್ಲಿ ಜೀನ್‌ಳಿಗೆ ಹಾಗನ್ನಿಸಿರಲಿಲ್ಲ.ಅವಳಿಗೆ ತನ್ನ ಶಕ್ತಿಯ ಮೇಲೆ ನಂಬಿಕೆಯಿತ್ತು.ಗಟ್ಟಿಯಾದ ಆತ್ಮವಿಶ್ವಾಸವಿತ್ತು.ರಿಗ್ಸ್‌ನ ಅಹಮಿಕೆ ಮುರಿಯಬೇಕೆನ್ನುವ ಹಠವಿತ್ತು.ಬಹುಶಃ ಆ ಹಠದಿಂದಲೇ ಎನ್ನುವಂತೆ ಆಕೆ ಪಂದ್ಯದ ಮೊದಲ ಸೆಟ್ 6 – 4 ರಿಂದ ಜಯಿಸಿದ್ದಳು.ಹಾಗೆ ಪಂದ್ಯದ ಮೊದಲ ಸೆಟ್ ಗೆದ್ದವಳಿಗೆ ಆತ್ಮವಿಶ್ವಾಸ ಮತ್ತಷ್ಟು ಗಟ್ಟಿಯಾಗಿತ್ತೇನೋ.ತನ್ನ ಆಟದ ಲಯಕ್ಕೆ ಮರಳಿದ್ದಳು ಬಿಲ್ಲಿ ಜೀನ್.ಮುಂದಿನದ್ದು ಇತಿಹಾಸ.ಪಂದ್ಯವನ್ನು ಆಕೆ ನೇರ ಸೆಟ್‌ಗಳಲ್ಲಿ 6–4, 6–3, 6–3ರಿಂದ ಪಂದ್ಯವನ್ನು ಜಯಿಸಿದ್ದಳು.ಮೊದಲ ಬಾರಿಗೆ ಟೆನ್ನಿಸ್ ಪಂದ್ಯವೊಂದರಲ್ಲಿ ಪುರುಷ ಸ್ಪರ್ಧಿಯನ್ನು ಸೋಲಿಸಿದ ಮೊದಲ ಮಹಿಳೆ ಎನ್ನುವ ಖ್ಯಾತಿ ಆಕೆಯ ಮುಡಿಗೇರಿತ್ತು.
ಆಕೆಯ ವಿಜಯವನ್ನು ವಿಶ್ವದಾದ್ಯಂತ ಸರಿಸಮಾರು ಒಂಬತ್ತು ಕೊಟಿ ಜನ ಕಣ್ತುಂಬಿಕೊಂಡಿದ್ದರು. ಮೈದಾನದಲ್ಲಿಯೇ ಸುಮಾರು ಮೂವತ್ತು ಸಾವಿರ ಜನ ಪಂದ್ಯ ವೀಕ್ಷಿಸಿದ್ದರು.
ವಿಚಿತ್ರವೆಂದರೆ ಈ ಪಂದ್ಯದ ಆಕೆಯ ವಿಜಯ ರಿಗ್ಸ್‌ಗಿಂತ ಹೆಚ್ಚಾಗಿ ನಿರೂಪಕ ಕ್ರಾಮರ್‌ನ ಅಹಮಿಕೆಗೆ ಪೆಟ್ಟುಕೊಟ್ಟಿತ್ತು.ವಯಸ್ಸಿನ ಅಂತರವೆನ್ನುವುದು ಲೆಕ್ಕಕ್ಕಿಲ್ಲ ಎಂಬಂತೆ ಮಾತನಾಡಿದ್ದ ರಿಗ್ಸ್ ಸೋತಾಕ್ಷಣ ಅವನ ವಕೀಲನಂತೆ ಮಾತನಾಡಿದ ಕ್ರಾಮರ್,’ಇದು ಬಿಲ್ಲಿ ಜೀನ್‌ಳ ಸಂಪೂರ್ಣ ಜಯವೆಂದು ನನಗನ್ನಿಸದು.ಆಕೆಗೂ ಅವನಿಗೂ ಸಾಕಷ್ಟು ವಯಸ್ಸಿನ ಅಂತರವಿದೆ.ಇದನ್ನು battle of sexes ಎನ್ನುವುದಕ್ಕಿಂತ battle of ages ಎನ್ನಬಹುದಷ್ಟೇ’ ಎಂದು ಉಡಾಫೆಯ ಮಾತಾಡಿದ್ದ.ಅವನ ಬಗ್ಗೆ ಮಾತನಾಡಿದ್ದ ಬಿಲ್ಲಿ ಜೀನ್,’ಅವನಿಗೆ ಈ ಪಂದ್ಯವೇ ಅರ್ಥಹೀನವೆನ್ನಿಸಿತ್ತು.ಹಾಗಾಗಿ ಅವನ ಅಭಿಪ್ರಾಯವೇ ಅರ್ಥಹೀನ’ ಎಂದು ತಿರುಗೇಟು ಕೊಟ್ಟಿದ್ದಳು.
‘ನಾನು ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿತ್ತು.ನನಗೆ ಮಾತ್ರವಲ್ಲದೇ ಮಹಿಳಾ ಟೆನ್ನಿಸ್‌ಗೂ ಈ ಪಂದ್ಯದ ಗೆಲುವಿನ ಅಗತ್ಯವಿತ್ತು.ನಾನು ಸೋತಿದ್ದರೆ ಮಹಿಳಾ ಟೆನ್ನಿಸ್‌ನೆಡೆಗೆ ನೋಡುಗರ ಭಾವವೇ ಬದಲಾಗುತ್ತಿತ್ತು.ಬಹುಶಃ ಮಹಿಳಾ ಟೆನ್ನಿಸ್ ಎನ್ನುವುದು ಐವತ್ತು ವರ್ಷ ಹಿಂದಕ್ಕೆ ಹೋಗಿರುತ್ತಿತ್ತು’ ಎಂದಿದ್ದ ಬಿಲ್ಲಿ ಜೀನ್‌ಳ ಮಾತುಗಳಲ್ಲಿ ಸತ್ಯವಿತ್ತು.ಆಕೆಯ ಗೆಲುವು ಅದೆಷ್ಟೋ ಹೆಣ್ಣುಮಕ್ಕಳಿಗೆ ಟೆನ್ನಿಸನತ್ತ ಆಸಕ್ತಿ ಮೂಡಿಸಿತ್ತು.ಒಂದರ್ಥದಲ್ಲಿ ಮಹಿಳಾ ಟೆನ್ನಿಸ್ ಕುರಿತು   ಟೆನ್ನಿಸ್ ಲೋಕದ ಆಲೊಚನಾ ಲಹರಿಯೂ ಇತ್ಯಾತ್ಮಕವಾಗಿ ಬದಲಾಗಿತ್ತು ಎಂದರೆ ತಪ್ಪಾಗಲಾರದು.ಮುಂದೆ ಬಹುಕಾಲ ಟೆನ್ನಿಸ್ ಲೋಕವನ್ನು ಆಳಿದ್ದಳು ಬಿಲ್ಲಿ ಜೀನ್ ಕಿಂಗ್.ನಿವೃತ್ತಿಯ ಹೊತ್ತಿಗೆ ಹನ್ನೆರಡು ಸಿಂಗಲ್ಸ್ ,ಹದಿನಾರು ಡಬಲ್ಸ್ ಮತ್ತು ಹನ್ನೊಂದು ಮಿಕ್ಸಡ್ ಡಬಲ್ಸ್ ಗೆದ್ದಿದ್ದ ಆಕೆ ಇಂದಿಗೂ ಟೆನ್ನಿಸ್ ಲೋಕದ ದಂತ ಕತೆಗಳ ಪೈಕಿ ಒಬ್ಬಾಕೆ.
ಇತ್ತೀಚೆಗೆ ಬಿಡುಗಡೆಯಾದ ‘ಯುವರತ್ನ ‘ಸಿನಿಮಾದಲ್ಲಿ  ಪುರುಷ ಕ್ರಿಕೆಟ್ ತಂಡದೆದುರು ಮಹಿಳಾ ಕ್ರಿಕೆಟ್ ತಂಡವನ್ನು ತಂದು ನಿಲ್ಲಿಸುವ ದೃಶ್ಯವೊಂದನ್ನು ನೋಡಿದಾಗ ನನಗೆ ಈ ಕತೆ ನೆನಪಾಯಿತು.

Subscribe

- Never miss a story with notifications

- Gain full access to our premium content

- Browse free from up to 5 devices at once

Latest stories

LEAVE A REPLY

Please enter your comment!
Please enter your name here

two + 15 =