20.6 C
London
Tuesday, June 18, 2024
Homeಟೆನಿಸ್ಗೆಲುವು ಎಂದರೆ ಇನ್ನೇನಿಲ್ಲ..ಹಿಡಿತವೇ!

ಗೆಲುವು ಎಂದರೆ ಇನ್ನೇನಿಲ್ಲ..ಹಿಡಿತವೇ!

Date:

Related stories

ಕನ್ನಡಿಗ ‘ಜ್ಯಾಕ್’ ಕಟ್ಟಿದ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನವನ್ನೇ ಹೊಡೆದು ಹಾಕಿತು..!

ಮೊನ್ನೆ ಮೊನ್ನೆಯೊಷ್ಟೇ ಅಮೆರಿಕ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ...

ಟೆನ್ನಿಸ್ ಲೋಕಕ್ಕೆ ಮತ್ತೆ ಕಳೆ ತರಬಲ್ಲನಾ ಕಾರ್ಲಿಟೋ….???

ಭಾರತ ತಂಡ ತನ್ನ ಅತ್ಯಂತ ಕಡಿಮೆ ಟಿ 20 ಮೊತ್ತವನ್ನು ಕಾಪಿಟ್ಟುಕೊಂಡು...

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...
spot_imgspot_img
ನನಗಿನ್ನೂ ನೆನಪಿದೆ ಅವನೊಟ್ಟಿಗಿನ ಮೊಟ್ಟ ಮೊದಲ ಅಭ್ಯಾಸದ ಘಟನೆ.ಆವತ್ತಿಗೆ ಆತ ದೇಶದ ಅತ್ಯಂತ ಪ್ರತಿಭಾನ್ವಿತ ಆಟಗಾರರ ಪೈಕಿ ಒಬ್ಬನೆಂದು ಖ್ಯಾತನಾಗಿದ್ದ.
ಅವನ ಹೆಸರು ಕೇಳಿದ್ದೆನಾದರೂ ನೋಡಿದ್ದು ಅದೇ ಮೊದಲ ಸಲ.ಸಾಮಾನ್ಯವಾಗಿ  ಹಿರಿಯ ಆಟಗಾರರೊಟ್ಟಿಗೆ ಅಭ್ಯಾಸದ ಆಟವಾಡುವಾಗ ಸಹ ಹೊಸ ಆಟಗಾರರಲ್ಲಿ ಸಣ್ಣದ್ದೊಂದು ಉದ್ವೇಗವಿರುತ್ತದೆ.ಹಿರಿಯರನ್ನು ಮೆಚ್ಚಿಸಬೇಕೆನ್ನುವ ಹಂಬಲ,ಹಿರಿಯರನ್ನು ಮೀರಿಸುವ ಚಿಕ್ಕ ಉತ್ಸಾಹ.ಹಾಗಾಗಿ ಸಹಜವಾಗಿಯೇ ಕಿರಿಯ ಆಟಗಾರರು ಒತ್ತಡಕ್ಕೊಳಗಾಗುತ್ತಾರೆ.ಆತ ನನ್ನೊಟ್ಟಿಗೆ ಅಭ್ಯಾಸಕ್ಕಿಳಿಯುವ ಮುನ್ನ ಆತನ ಬಗೆಗೂ ನಾನು ಹಾಗೆಂದುಕೊಂಡಿದ್ದೆ.ಆದರೆ ಅಲ್ಲಿ ನಡೆದದ್ದೇ ಬೇರೆ.ಆತ ಬಂದ. ನನ್ನತ್ತ ಸಣ್ಣಗೆ ನಸುನಕ್ಕವನು ರ‍್ಯಾಕೆಟ್ಟು ಹಿಡಿದವನೇ ನೇರ ಆಟಕ್ಕಿಳಿದ.ಹಾಗೆಂದ ಮಾತ್ರಕ್ಕೆ ಆತ ಭಯಂಕರ ಧೈರ್ಯವಂತನೆಂದು ನೀವು ಎಣಿಸಿದ್ದರೆ ನಿಮ್ಮ ಎಣಿಕೆ ತಪ್ಪು.ಆತನಿಗೆ ಆ ವಯಸ್ಸಿಗಾಗಲೇ ಏನೋ ಸಣ್ಣ ನಿರಾಸಕ್ತಿ.ಸೋತರೂ ಗೆದ್ದರೂ ತನಗೇನೂ ನಷ್ಟವಿಲ್ಲವೆಂಬ ಅನಾಸಕ್ತ ಭಾವ.ಆ ಚಿಕ್ಕ ವಯಸ್ಸಿಗೆ ಆತನ ಆ ಭಾವ ನನ್ನಲ್ಲಿ ನಿಜಕ್ಕೂ ಅಚ್ಚರಿಯುಂಟು ಮಾಡಿತ್ತು.ಆ ವಯಸ್ಸಿಗೆ ಅಷ್ಟು ಆಲಸ್ಯದ ಭಾವ ಸರಿಯಲ್ಲ ಅಂತಲೇ ಅನ್ನಿಸಿತ್ತು.ಅಷ್ಟಾಗಿಯೂ ಆತ ಅದೇ ವರ್ಷದ ಮಾರ್ಸೈ ಪಂದ್ಯಾವಳಿಯ ಅಂತಿಮ ಪಂದ್ಯದ ನನ್ನ ಎದುರಾಳಿಯಾಗಿದ್ದ.ಕೊನೆಯ ಸೆಟ್ ಆತ 7-6ರ ಅಂತರದಲ್ಲಿ ಸೋತಾಗ ಆತ ತೀವ್ರ ಭಾವುಕನಾಗಿ ಹೋಗಿದ್ದ.ಪ್ರಶಸ್ತಿ ಪ್ರಧಾನ ಸಮಾರಂಭದ ಹೊತ್ತಿಗೆ ಆತ ಗಳಗಳನೇ ಅತ್ತು ಬಿಟ್ಟಿದ್ದ.ಅದು ಆತನ ವೃತ್ತಿಜೀವನ ಮೊದಲ ಫೈನಲ್ ಪಂದ್ಯಗಳಲ್ಲೊಂದಾಗಿತ್ತು.ಆದರೂ ಆತ ಅತ್ತಾಗ ’ಅಯ್ಯೋ ಅಳಬೇಡ ಬಿಡು,ಹುಡುಗಾ..’ ಎಂದು ನುಡಿಯಬೇಕೆನ್ನಿಸಿತ್ತು”ಎಂದು ನುಡಿದವರು ಮಾರ್ಕ್ ರೊಸೆಟ್.1992ರ ಒಲಂಪಿಕ್ಸ್‌ನಲ್ಲಿ  ಪೀಟ್ ಸಾಂಪ್ರಾಸ್,ಗೋರಾನ್ ಇವಾನೆಸವಿಚ್,ಮೈಕಲ್ ಚಾಂಗ್‌ರಂತಹ ದೈತ್ಯರ ಉಪಸ್ಥಿತಿಯಲ್ಲಿಯೂ  ಸ್ವಿಜರ್ಲೆಂಡ್ ದೇಶಕ್ಕಾಗಿ ಅಚ್ಚರಿಯ ಸ್ವರ್ಣ ಗೆದ್ದ ಟೆನ್ನಿಸ್ ಕ್ರೀಡಾಳು. ಹಾಗೆ ಆತನಿಗೆ  ಅಚ್ಚರಿ ಮೂಡಿಸಿದ್ದ ಯುವ ಕ್ರೀಡಾಪಟುವಿನ  ಹೆಸರು ರೋಜರ್ ಫೆಡರರ್..!!!
ಹೌದು.ಆರಂಭದ ದಿನಗಳಲ್ಲಿ ರೋಜರ್ ಫೆಡರರ್ ಎನ್ನುವ ಟೆನ್ನಿಸ್ ಜಗದ ದಂತಕತೆ ಇದ್ದದ್ದೇ ಹಾಗೆ.ಬಿಡುಬೀಸಾಗಿ,ಅಸ್ತವ್ಯಸ್ತ ಶಿಸ್ತು ಸಂಯಮಗಳಿಲ್ಲದ ಒರಟನಂತೆ.ಮೇಲೆ ರೊಸೆಟ್ ಹೇಳಿದ ಪಂದ್ಯಾವಳಿ  ಮಾತ್ರವಲ್ಲ,ಆರಂಭಿಕ ದಿನಗಳಲ್ಲಿ ಆತ ಆಡಿದ ಬಹುತೇಕ ಪಂದ್ಯಾವಳಿಗಳಲ್ಲಿ ಆತನದ್ದು ಒರಟು ವರ್ತನೆಯೇ.ಇದನ್ನು ಸ್ವತ: ಒಪ್ಪಿಕೊಳ್ಳುತ್ತಾನೆ ರೋಜರ್ ಫೆಡರರ್.ಫ್ರೆಂಚ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ.’ವೃತ್ತಿಜೀವನದ ಆರಂಭದಲ್ಲಿ ನಾನು ಮಹಾಮುಂಗೋಪಿಯಾಗಿದ್ದೆ.ಸಣ್ಣಪುಟ್ಟ ತಪ್ಪುಗಳಿಗೂ ನಾನು ಕಿರುಚಾಡುತ್ತಿದ್ದೆ.ಒಂದು ಗೇಮ್ ಸೋತರೂ ಕೈಯಲ್ಲಿದ್ದ ರ‍್ಯಾಕೆಟ್ ರಪ್ಪನೇ ನೆಲಕ್ಕೆ ಬಾರಿಸುತ್ತಿದ್ದೆ.ಪಂದ್ಯ ಸೋತರಂತೂ ಮುಗಿದೇ ಹೋಯಿತು,ಕೈಯಲ್ಲಿದ್ದ ರ‍್ಯಾಕೆಟ್‍ನ್ನು ನೆಲಕ್ಕೆ ಬಡಿದು ಪುಡಿಪುಡಿಯಾಗಿಸುತ್ತಿದ್ದೆ.ಹಾಗೆ ಪುಡಿಯಾಗಿಸಿದ ರ‍್ಯಾಕೆಟ್ಟುಗಳಿಗೆ ಲೆಕ್ಕವೇ ಇಲ್ಲ.ಅದರಲ್ಲೂ 2001ರ ಹ್ಯಾಂಬರ್ಗ್ ಪಂದ್ಯಾವಳಿಯಲ್ಲಿ ನಾನು ಸೋತಾಗ ನಾನು ಅದೆಷ್ಟು ವ್ಯಗ್ರನಾಗಿದ್ದೆನೆಂದರೆ ಕೈಯಲ್ಲಿದ್ದ ನನ್ನ ರ‍್ಯಾಕೆಟ್ ಮತ್ತೊಮ್ಮೆ ಪುಡಿಪುಡಿಯಾಗಿತ್ತು.ನನಗೆ  ಪಂದ್ಯದ ನಿರ್ಣಾಯಕರಿಂದ ಎಚ್ಚರಿಕೆಗಳು ಸಿಕ್ಕಿದ್ದವು.ಸ್ಥಳೀಯ ಪತ್ರಿಕೆಗಳಲ್ಲಿ ನನ್ನ ವರ್ತನೆಯ ಬಗ್ಗೆ ಕಟು ಟೀಕೆಗಳ ವರದಿಗಳು ಪ್ರಕಟವಾಗಿದ್ದವು.ಅದು ಬಹುಶ: ನನ್ನ ಬದುಕಿನ ಮೊಟ್ಟ ಮೊದಲ ತಿರುವು ಬಿಂದುವಾಗಿತ್ತು.ಪಂದ್ಯ ಮುಗಿದ ಕಾಲಕ್ಕೆ ನನಗೆ ಜ್ಞಾನೋದಯವಾಗಿತ್ತು.ನಾನು ಗೆಲುವಿನ ತುಂಬ ಸಮೀಪದಲ್ಲಿ ಎಡವಿದ್ದೆ ಎನ್ನುವುದೇನೋ ನಿಜ,ಆದರೆ ತೀರ ಅಷ್ಟು ಅನಾಗರೀಕ ವರ್ತನೆ ನನಗೆ ಬೇಕಿತ್ತಾ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಂಡಿದ್ದೆ. ಅದಾಗಲೇ ನಾನು ಟೆನ್ನಿಸ್ ಎನ್ನುವ ಆಟವೇ ನನ್ನ ಬದುಕು ಎಂದು ತೀರ್ಮಾನಿಸಿಯಾಗಿತ್ತು.ನಿಜಕ್ಕೂ ಟೆನ್ನಿಸ್ ಎನ್ನುವುದೇ ನನ್ನ ವೃತ್ತಿ ಬದುಕು ಎಂದಾದರೆ ತೀರ ಈ ಮಟ್ಟದ ವರ್ತನೆ ನನ್ನ ವೃತ್ತಿಪರತೆಗೆ ಮಾರಕವೆನ್ನುವುದು ಅರಿವಾದ ಹೊತ್ತು ಅದು.ಎಂಥದ್ದೇ ಸಂದರ್ಭ ಬಂದರೂ ಇನ್ನು ಮುಂದೆ ನನ್ನ ಭಾವೋದ್ವೇಗದ ಮೇಲೆ ನಿಯಂತ್ರಣ ಕಳೆದು ಕೊಳ್ಳಬಾರದು ಎಂದು ನಿರ್ಧರಿಸಿದ್ದೆ.ಹಾಗೆ ನಿರ್ಧರಿಸಿದ  ಕೆಲವೇ ದಿನಗಳಲ್ಲಿ ನನ್ನಲ್ಲಾದ ಬದಲಾವಣೆಗಳನ್ನು ನಾನು ಗಮನಿಸಲಾರಂಭಿಸಿದ್ದೆ.ನನಗೆ ಆಟದ ಅಂಗಳದಲ್ಲಿ ನನ್ನ ತಪ್ಪುಗಳು ಅರ್ಥವಾಗಲಾರಂಭಿಸಿದ್ದವು.ನನ್ನ ಆಟದ ದೌರ್ಬಲ್ಯಗಳು ಗೋಚರಿಸಲಾರಂಭಿಸಿದ್ದವು.ನನ್ನ ವರ್ತನೆಯಲ್ಲಿ ಸುಧಾರಣೆ ಕಾಣಿಸಲಾರಂಭಿಸಿದ ನಂತರ ನನ್ನ ಆಟವೂ ಸುಧಾರಿಸಲಾರಂಭಿಸಿತ್ತು.ಎಲ್ಲಕ್ಕಿಂತ ಹೆಚ್ಚಾಗಿ ನಾನು ಉದ್ವೇಗರಹಿತನಾಗಿ ಆಡುವುದನ್ನು ಕಲಿತದ್ದರಿಂದ ಇನ್ನೂ ಒಂದು ಲಾಭ ನನಗಾಗಿತ್ತು.ಅದೇನು ವಿಚಿತ್ರ  ತರ್ಕವೋ ಗೊತ್ತಿಲ್ಲ,ಕಿರುಚಾಟ ಗಲಾಟೆಗಳಿಲ್ಲದ ನನ್ನನ್ನು ನನ್ನ ಎದುರಾಳಿಗಳು ತೀರ ಸಾಮಾನ್ಯ ಆಟಗಾರನಂತೆ ನೋಡಲಾರಂಭಿಸಿದ್ದರು.ಒಂದು ಅತಿಯಾದ ಆತ್ಮವಿಶ್ವಾಸ ನನ್ನೆದುರಿಗೆ ಅವರಿಗಿರುತ್ತಿತ್ತು. ಆ ಕಾರಣಕ್ಕೂ ಅನಗತ್ಯದ ತಪ್ಪುಗಳನ್ನು ಮಾಡುವ ಎದುರಾಳಿಗಳು ಸಹ ನನ್ನೆದುರು ಸೋತದ್ದಿದ್ದೆ.ನಿಧಾನಕ್ಕೆ ನನಗೆ ಆಟದ ಹಿಡಿತ ಅರ್ಥವಾಗತೊಡಗಿತ್ತು.ಉದ್ವಿಗ್ನತೆಯ ಮೇಲಿನ ನಿಯಂತ್ರಣ ನನ್ನನ್ನು ಗೆಲ್ಲಿಸಲಾರಂಭಿಸಿತ್ತು’ಎಂದು ನುಡಿದು ನಕ್ಕಿದ್ದ ರೋಜರ್ ಫೆಡರರ್ ಎನ್ನುವ ಸ್ವಿಸ್ ಮಾಂತ್ರಿಕ.
ಹೀಗೆ ನುಡಿಯುವ ರೋಜರ್ ಬದುಕಿನಲ್ಲಿ ಅದೇ ಹೊತ್ತಿಗೆ ಅವಘಡವೊಂದು ನಡೆದಿತ್ತು.2002 ರ ಹೊತ್ತಿಗೆ ಆತನ ತುಂಬ ಪ್ರೀತಿಯ ತರಬೇತಿದಾರ ಪೀಟರ್ ಕಾರ್ಟರ್ ಕಾರು ಅಪಘಾತವೊಂದರಲ್ಲಿ ಮೃತನಾಗಿದ್ದ.ರೋಜರ್ ಕೆನೆಡಿಯನ್ ಓಪನ್ ಆಡುತ್ತಿದ್ದ ಹೊತ್ತು ಅದು.ತರಬೇತುದಾರನ ಸಾವಿನ ಸುದ್ದಿ ಕೇಳುತ್ತಲೇ ಬಿಕ್ಕಿಬಿಕ್ಕಿ ಅಳುತ್ತ ಹೊಟೆಲ್ಲಿನ ಕೋಣೆಯಿಂದ ಆಚೆಗೆ ಓಡಿ ಹುಚ್ಚನಂತೆ ಕಿರುಚಾಡಿದ್ದನಂತೆ ಫೆಡರರ್.ಆದರೆ  ಆ ಉದ್ವೇಗದ್ದು ಅಲ್ಪಾವಧಿಯ ಆಯಸ್ಸು.ನೆಚ್ಚಿನ ಜೊತೆಗಾರನ ಸಾವಿನ ನಂತರ ಆತ ಮತ್ತಷ್ಟು ಗಟ್ಟಿಯಾಗಿದ್ದ. ಕಠಿಣ ಪರಿಶ್ರಮದಿಂದ ತನ್ನ ಆಟವನ್ನು ಪರಿಪೂರ್ಣತೆಯ ಹೊಸ್ತಿಲಿಗೆ ತಂದು ನಿಲ್ಲಿಸಿದ್ದ.ಮುಂದಿನದ್ದು ಇತಿಹಾಸ.2003ರಲ್ಲಿ ಮಾರ್ಕಸ್ ಫಿಲಿಫೌಸಿಸ್‌ನನ್ನು ಸೋಲಿಸುವ ಮೂಲಕ ಚೊಚ್ಚಲ ವಿಂಬಲ್ದನ್ ಗೆದ್ದ ಫೆಡರರ್ ಟೆನ್ನಿಸ್ ಕ್ಷೇತ್ರಕ್ಕೆ ತನ್ನ ಯೋಗ್ಯತೆಯನ್ನು ಸಾರಿದ್ದ.2004ರಲ್ಲಿ ಆತನದ್ದು ಅಂಗಳದಲ್ಲಿ ಅಕ್ಷರಶ: ರುದ್ರತಾಂಡವ.ವರ್ಷದ ನಾಲ್ಕು ಗ್ರಾಂಡ್‌ಸ್ಲಾಮ್‌ಗಳ ಪೈಕಿ ಮೂರನ್ನು ಗೆಲ್ಲುವುದರ ಮೂಲಕ ಹದಿನೈದು ವರ್ಷಗಳ ಹಿಂದಿನ ಮ್ಯಾಟ್ ವಿಲಾಂಡರ್‌ನ ದಾಖಲೆಯನ್ನು ಸರಿಗಟ್ಟಿದ ಫೆಡರರ್.ಮುಂದೆ ಆತನನ್ನು ಹಿಡಿಯುವವರೇ ಇರಲಿಲ್ಲ.ರಾಫಾ ನಡಾಲ್,ನೋವಾಕ್ ಜೋಕೊವಿಚ್‌ರಂಥಹ ಬಲಾಡ್ಯ ಎದುರಾಳಿಗಳ ನಡುವೆಯೂ ತನ್ನದೇ ಆಟದಿಂದ ವಿಜೃಂಭಿಸಿದವನಾತ.ಇವತ್ತಿಗೆ ಇಪ್ಪತ್ತು ಗ್ರಾಂಡ್‌ಸ್ಲಾಮ್‌ಗಳ ಒಡೆಯ ಫೆಡರರ್.ನಂತರದ ದಿನಗಳಲ್ಲಿ  ರಾಫಾ ನಡಾಲ್ ,ಅತಿಹೆಚ್ಚು ಗ್ರಾಂಡ್‍ಸ್ಲಾಮ್ ಗೆದ್ದ ಫೆಡರರ್‌ನ ದಾಖಲೆಯನ್ನು ಸರಿಗಟ್ಟಿದ.ಮತ್ತೊಬ್ಬ ಅದ್ಭುತ ಆಟಗಾರ ಜೊಕೊವಿಚ್ ಸಹ ಅದೇ ಹಾದಿಯಲ್ಲಿದ್ದಾನೆ.ಹಾಗಾಗಿ ಟೆನ್ನಿಸ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರನ್ಯಾರು ಎನ್ನುವ ಪ್ರಶ್ನೆ ಸಧ್ಯಕ್ಕಂತೂ ಚರ್ಚಾರ್ಹ.ಆದರೆ ಎಲ್ಲ ಚರ್ಚೆಗಳಿಗಾಚೆಗೆ ವರ್ಷಗಟ್ಟಲೆಯಿಂದ ಆತನ ಆಟವನ್ನು ಗಮನಿಸಿದಾಗ,ತನ್ನದೇ ಆದ SABR ,ಟ್ವೀನರ್ ನಂತಹ ಹೊಡೆತಗಳನ್ನು ಆತ ಬಳಸುವ ರೀತಿಯನ್ನು ಕಂಡಾಗ ಟೆನ್ನಿಸ್ ಜಗತ್ತು ಕಂಡ ಅತ್ಯಂತ ಕಲಾತ್ಮಕ ಆಟಗಾರ ಯಾರು ಎಂಬ ಪ್ರಶ್ನೆಗೆ ಮಾತ್ರ ರೋಜರ್ ಫೆಡರರ್ ಎನ್ನುವುದೊಂದೇ ಉತ್ತರ.
ಯೋಚಿಸಿ ನೋಡಿ,ಟೆನ್ನಿಸ್ ಎನ್ನುವುದು ಸರಿಸುಮಾರು ಇನ್ನೂರು ಚದರಮೀಟರಗಳಷ್ಟಿರುವ ಅಂಗಳದಲ್ಲಿ ಆಡುವ ಆಟ.  ಸಿಂಗಲ್ಸ್ ಆಟದ ನಿಯಮಾವಳಿಗಳಡಿಯಲ್ಲಿ ಆಡಲು ಯೋಗ್ಯ ಸ್ಥಳ ಸರಿಸುಮಾರು ನೂರಾಮೂವತ್ತು ಚದರ ಮೀಟರುಗಳು.ಒಬ್ಬ ಆಟಗಾರನಿಗೆ ಲಭ್ಯವಿರುವ ಸ್ಥಳಾವಕಾಶ ನೂರಾ ನಾಲ್ಕು ಚದರ ಮೀಟರುಗಳಷ್ಟು ಮಾತ್ರ.ಅಷ್ಟೇ ಸ್ಥಳಾವಕಾಶದಲ್ಲಿ ಎದುರಾಳಿಯ ಕಣ್ಣು ತಪ್ಪಿಸಿ ಎದುರಾಳಿಯನ್ನು ಮಣ್ಣು ಮುಕ್ಕಿಸುವ ಆಟ ಟೆನ್ನಿಸ್.ಟೆನ್ನಿಸ್ ಆಟದ  ಮೂಲ ನಿಯಮವಿರುವುದೇ ಇಷ್ಟು. ಎದುರಾಳಿಯ ಅಂಗಳದಲ್ಲಿ ಎದುರಾಳಿಯ ರ‍್ಯಾಕೆಟ್ಟಿಗೆ ಚೆಂಡು ಸಿಗದಂತೆ ತಪ್ಪಿಸುವ ಆಟ.ಮೇಲ್ನೋಟಕ್ಕೆ ತೀರ ಸುಲಭವೆನ್ನಿಸುವ ಆಟವೇ. ಹಾಗೆಂದು ಅಂಗಳಕ್ಕೆ      ರ‍್ಯಾಕೆಟ್ಟು ಹಿಡಿದು ಇಳಿದ ಪ್ರತಿ ಆಟಗಾರನೂ ಇಲ್ಲಿ  ಯಶಸ್ಸು ಕಾಣಲಿಲ್ಲ.ಕಾರಣವೇನು ಎಂಬ ಪ್ರಶ್ನೆಗೆ   ಭಯಂಕರ ದೈಹಿಕ ಸಾಮರ್ಥ್ಯಬೇಕು ಎನ್ನುತ್ತಿರೇನೋ. ಆದರೆ  ರೋಜರ್ ಫೆಡರರ್‌ನ ಸಮಕಾಲೀನರಲ್ಲಿ ಅವನಷ್ಟೇ ದೈಹಿಕ ಸಾಮರ್ಥ್ಯವಿದ್ದ ನೂರಾರು ಆಟಗಾರರಿದ್ದರು.ಅವನಿಗಿಂತ ಎತ್ತರದ ಆಟಗಾರರಿದ್ದರು.ಅವನಿಗಿಂತ ಬಲಿಷ್ಟ ಮೈಕಟ್ಟಿನ ಕ್ರೀಡಾಳುಗಳಿದ್ದರು.ಆದರೂ ಒಬ್ಬ ಟೆನ್ನಿಸ್ ಪಟುವಿಗೆ ಸಹ ರೋಜರ್ ಫೆಡರರ್‌ನ ಸಾಧನೆಯ ಸಮೀಪಕ್ಕೂ ಬಂದು ನಿಲ್ಲಲಾಗಲಿಲ್ಲ.ಕಾರಣ ಹುಡುಕುತ್ತ ಹೊರಟರೆ ಸಿಗುವ ಉತ್ತರವೊಂದೆ.ಉಳಿದೆಲ್ಲ ಆಟಗಾರರನ್ನು ಮೀರಿಸಿದ್ದ ಅಂಶವೊಂದು ರೋಜರ್‌ ಬಳಿಯಿತ್ತು.ಅದು ಆಟದ ಮೇಲಿದ್ದ ಆತನ ಅದ್ಭುತ ಹಿಡಿತ.ಅದೊಂದೇ ಆತನನ್ನು ವಿಶ್ವಶ್ರೇಷ್ಠನನ್ನಾಗಿಸಿದ್ದು.
ಫೆಡರರ್‌ನ ಕ್ರೀಡಾ ಬದುಕಿನ ಈ ಬದಲಾವಣೆಯ ಕುರಿತು ಓದಿದಾಗಲೆಲ್ಲ ನನ್ನ ಮನಸು ಪದೇ ಪದೇ ತತ್ವಶಾಸ್ತ್ರಕ್ಕೆ ಶರಣಾಗುತ್ತದೆ.ಗೆಲುವು ಎಂದರೆ ಇನ್ನೇನಿಲ್ಲ ಅದು ಹಿಡಿತವೇ.  ಆಟ ಪಕ್ಕಕ್ಕಿಡಿ, ಸರಿಯಾಗಿ  ಯೋಚಿಸಿದರೆ ನಮ್ಮ ಬದುಕು ಸಹ ಹೀಗೆ ಅಲ್ಲವಾ..? ಬದುಕಿನ ಗೆಲುವಿಗೆ ಪರಿಶ್ರಮ ,ಗಟ್ಟಿ ನಿರ್ಧಾರಗಳ ಜೊತೆಗೆ ನಮಗೆ ಬೇಕಿರುವುದು ಸಹನೆ.ಸಹನೆ ಎಂದರೆ ಮತ್ತದೇ ಹಿಡಿತ. ನಮ್ಮ ಮೇಲಿನ ನಮ್ಮ ಹಿಡಿತ. ಕೋಪದ ಮೇಲಿನ ಹಿಡಿತ,ಹತಾಶೆಯ ಮೇಲಿನ ಹಿಡಿತ,ಅಸಹನೆ ರೋಷಗಳ ಮೇಲಿನ ಹಿಡಿತ.ಒಟ್ಟಾರೆಯಾಗಿ ಭಾವಗಳ ಮೇಲಿನ ಹಿಡಿತ.ನಮ್ಮ ಮೇಲೊಂದು ಸ್ವಯಂ ನಿಯಂತ್ರಣ.ಆ ನಿಯಂತ್ರಣವೊಂದಿದ್ದು ಬಿಟ್ಟರೇ ನಮ್ಮ ಬದುಕೆನ್ನುವ  ಟೆನ್ನಿಸ್ ಅಂಗಳಕ್ಕೆ ನಾವೇ ವಿಜಯಿ ಫೆಡರರ್.

Latest stories

LEAVE A REPLY

Please enter your comment!
Please enter your name here

15 − three =