ಹಾಗೆಂದವಳು ಸ್ಟೆಫಿ ಗ್ರಾಫ್.ಜರ್ಮನಿಯ ಟೆನ್ನಿಸ್ ಸುಂದರಿ.ಗೆದ್ದ ಟೂರ್ನಿಗಳಲ್ಲಿ ಕೊಂಚ ಹೆಚ್ಚು ಕಡಿಮೆ ಇರಬಹುದಾದರೂ ನಿಸ್ಸಂಶಯವಾಗಿ ಮಹಿಳಾ ಟೆನ್ನಿಸ್ ಲೋಕ ಕಂಡ ಸಾರ್ವಕಾಲಿಕ ಶ್ರೇಷ್ಠ ಟೆನ್ನಿಸ್ ಕ್ರೀಡಾಳು.
ಬದುಕಿನ ತುಂಬ ಚಿಕ್ಕವಯಸ್ಸಲ್ಲಿ ಟೆನ್ನಿಸ್ ತರಬೇತಿ ಆರಂಭಿಸಿದವಳು ಸ್ಟೆಫಿ.ಉಳಿದ ಅನೇಕ ಟೆನ್ನಿಸ್ ಕ್ರೀಡಾಪಟುಗಳಿಗೆ ಹೋಲಿಸಿದರೆ ಈಕೆಯ ಕತೆ ಕೊಂಚ ಭಿನ್ನ.ಇವತ್ತಿನ ಟೆನ್ನಿಸ್ ಲೋಕದ ದಂತೆಕತೆಗಳಾಗಿರುವ ನಡಾಲ್ ಜೋಕೊವಿಚ್‌ರಂಥವರಿಗೆ ಟೆನ್ನಿಸ್ ಎನ್ನುವ ಚೆಂಡಾಟ ಬಾಲ್ಯದ ಮೊದಲ ಆಕರ್ಷಣೆ.ಸಹಜವಾಗಿ ಟೆನ್ನಿಸ್ ಕೋರ್ಟ್‌ನ ಸೆಳೆತವುಳ್ಳವರು ಅವರೆಲ್ಲ.ಆದರೆ ಗ್ರಾಫ್ ಹಾಗಲ್ಲ.ಆಕೆಯ ಬಾಲ್ಯಕ್ಕೆ ಟೆನ್ನಿಸ್ ಮೊದಲ ಆಯ್ಕೆಯೇನೂ ಆಗಿರಲಿಲ್ಲ.ಆದರೆ ಅಪ್ಪ ಪೀಟರ್‌ನಿಗೆ ಮಗಳು ಟೆನ್ನಿಸ್ ತಾರೆಯಾಗಬೇಕೆನ್ನುವ ಕನಸು.ಹಾಗಾಗಿ ಮೂರನೇ ವಯಸ್ಸಿಗಾಗಲೇ ಆಕೆಯ ಕೈಗೆ ಟೆನ್ನಿಸ್ ರಾಕೆಟ್ ಕೊಟ್ಟುಬಿಟ್ಟಿದ್ದ ಅಪ್ಪ.ಮನೆಯ ಹಜಾರದಲ್ಲಿಯೇ ಆಟವಾಡುವ ಮಗಳಿಗೆ ಅಪ್ಪ ಹೇಳುತ್ತಿದ್ದದ್ದು ಒಂದೇ ಮಾತು .ಗೋಡೆಗೆ ಬಡಿದು ಮರುಪುಟಿಯುವ ಚೆಂಡನ್ನು ಕನಿಷ್ಟ ಇಪ್ಪತ್ತೈದು ಬಾರಿ ನೀನು ಗೋಡೆಗೆ ಹೊಡೆಯುವಂತಾದರೆ ನಿನಗೆ ಸಂಜೆಗೊಂದು ಐಸ್‌ಕ್ರೀಮ್ ಗ್ಯಾರಂಟಿ..!!
ಐಸ್ ಕ್ರೀಮ್ ಆಸೆಗೆ ಆಟ ಶುರುವಿಟ್ಟುಕೊಂಡ ಸ್ಟೇಫಿಗೆ ನಿಧಾನಕ್ಕೆ ಆಟದ ಮೇಲೆ ಆಸಕ್ತಿ ಮೂಡಲಾರಂಭಿಸಿತ್ತು.ಚಿಕ್ಕವಯಸ್ಸಿನಿಂ ದಲೇ ಭಯಂಕರ ಅಂಕೆಯಲ್ಲಿಟ್ಟು ಬೆಳೆಸಿದವನು ಅಪ್ಪ.ಆಕೆಯ ಟೆನ್ನಿಸ್ ವೃತ್ತಿ ಜೀವನ ಶುರುವಾಗುತ್ತಲೇ ಆಕೆಯ ಪ್ರತಿಯೊಂದರ ಮೇಲೂ ಅಪ್ಪನ ನಿಗಾ ಇತ್ತು.ಆಕೆಯ ಗೆಳೆಯರು,ಆಕೆಯ ಹಣಕಾಸಿನ ವಿಷಯ,ದಿನದ ಶೆಡೂಲ್ಯ ಎನ್ನವೂ ಅಪ್ಪನದ್ದೇ ಲೆಕ್ಕಾಚಾರ.ಕೊನೆಗೆ ಪಾರ್ಟಿಗೆಂದು ಹೊರಗೆ ಹೋಗುವುದಾದರೆ ರಾತ್ರಿ ಒಂಭತ್ತಕ್ಕೆ ಮನೆಯಲ್ಲಿರಬೇಕು ಎನ್ನುವುದು ಸಹ ಅಪ್ಪನ ನಿಯಮ..!!
ತನ್ನ ಹದಿಮೂರನೇ ವಯಸ್ಸಿಗಾಗಲೇ ವೃತ್ತಿ ಜೀವನ ಆರಂಭಿಸಿದವಳಿಗೆ ಆಟದೆಡೆಗೆ ಭಯಂಕರ ಸಮರ್ಪಣಾ ಭಾವ.ವೃತ್ತಿ ಜೀವನವಾರಂಭಿಸಿದ ಒಂದೆರಡು ವರ್ಷಗಳ ಕಾಲದಲ್ಲಿಯೇ ಆಕೆಯ ಆಟದ ಶೈಲಿಯನ್ನು ಗಮನಿಸಲಾರಂಭಿಸಿದ್ದರು ಟೆನ್ನಿಸ್ ಪಂಡಿತರು.1985 – 86ರ ಹೊತ್ತಿಗಾಗಲೇ ಗ್ರಾಂಡ್‌ಸ್ಲಾಮ್ ಟೂರ್ನಿಗಳ ಸೆಮಿಫೈನಲ್ ಹಂತಕ್ಕೆ ತಲುಪಿಕೊಳ್ಳುತ್ತಿದ್ದ ಗ್ರಾಫ್‌ನ ಸಾಮರ್ಥ್ಯ ನಿಧಾನಕ್ಕೆ ಅಭಿಮಾನಿಗಳಿಗೂ ಅರಿವಾಗಲಾರಂಭಿಸಿತ್ತು.
ಆದರೆ ಅದು ನವ್ರಾಟಿಲೋವಾ ಮತ್ತು ಕ್ರಿಸ್ ಎವರ್ಟ್‌ರಂಥಹ ಘಟಾನುಘಟಿಗಳಿದ್ದ ಕಾಲ.ಅವರನ್ನು ಎದುರಿಸುವಲ್ಲಿ ಆಕೆಗೆ ಆರಂಭಿಕ ಅನುಭವದ ಕೊರತೆ.ಹಾಗಾಗಿಯೇ ಏನೋ,85-86ರ ಕಾಲಕ್ಕೆ ಒಂಬತ್ತು ಪಂದ್ಯಗಳನ್ನು ಈ ಟೆನ್ನಿಸ್‌ದ್ವಯರೆದುರು ಸೋತುಬಿಟ್ಟಳು ಸ್ಟೆಫಿ.ಅಷ್ಟಾಗಿಯೂ ಆಕೆ ನಿರಾಶಳಾಗಿರಲಿಲ್ಲ.ಪ್ರತಿಬಾರಿಯ ಸೋಲು ಹೊಸದೇನೊ ಕಲಿಸುತ್ತದೆ ಎನ್ನು ಮನೋಭಾವ ಆಕೆಗೆ.ಸಣ್ಣದ್ದೊಂದು ತಿರುವಿಗಾಗಿ ಕಾಯುತ್ತಿದ್ದಳಾಕೆ.ಹಾಗೆ ಆಕೆ ಕಾಯುತ್ತಿದ್ದ ತಿರುವು ಆಕೆಗೆ 1987ರ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಸಿಕ್ಕುಬಿಟ್ಟಿತ್ತು.ತೀವ್ರ ಸೆಣಸಾಟದ ಫೈನಲ್ ಪಂದ್ಯದಲ್ಲಿ ಆವತ್ತಿನ ಅಗ್ರಶ್ರೇಯಾಂಕಿತ ಆಟಗಾರ್ತಿ ನವ್ರಾಟಿಲೋವಾಳನ್ನು ಬಗ್ಗು ಬಡಿದಿದ್ದಳು ಗ್ರಾಫ್.ಆವತ್ತಿಗೆ ಮೊದಲ ಬಾರಿ ತಾನು ಅಗ್ರಶ್ರೇಯಾಂಕಿತ ಆಟಗಾರ್ತಿಯರನ್ನು ಸೋಲಿಸಬಲ್ಲೆನೆನ್ನುವ ವಿಶ್ವಾಸ ಆಕೆಯಲ್ಲಿ ಮೂಡಿತ್ತು.ಮಾನಸಿಕ ಅಡ್ಡಿಯೊಂದು ತೊಲಗಿತ್ತು.ಮುಂದಿನದು ಈಗ ಇತಿಹಾಸ.
80ರ ದಶಕದ ನಡುವಿನ ಕಾಲದಿಂದ ಹಿಡಿದು 90ರ ಉತ್ತರಾರ್ಧದ ಟೆನ್ನಿಸ್ ಜಗವನ್ನು ಅಕ್ಷರಶಃ ಸಾಮ್ರಾಜ್ಞಿಯಂತೆ ಆಳಿಬಿಟ್ಟಳು ಸ್ಟೇಫಿ.ಒಂದಾದ ನಂತರ ಒಂದರಂತೆ ಗ್ರಾಂಡ್‌ಸ್ಲಾಮ್ ಗೆಲ್ಲುತ್ತ ಹೊರಟ ಗ್ರಾಫ್‌ಳನ್ನು ಟೆನ್ನಿಸ್ ಲೋಕದಲ್ಲಿ ತಡೆಯುವವರೇ ಇಲ್ಲದಂತಾಗಿತ್ತು.1988ರ ವರ್ಷವನ್ನಂತೂ ಆಕೆ ಆಪೋಶನ ತೆಗೆದುಕೊಂಡುಬಿಟ್ಟಳೆಂದರೆ ತಪ್ಪಾಗಲಾರದು.ವರ್ಷದ ನಾಲ್ಕೂ ಗ್ರಾಂಡ್ ಸ್ಲಾಮ್ ಗೆಲ್ಲುವ ಮೂಲಕ ಆ ಸಾಧನೆಗೈದ ಮೂರನೇ ಮಹಿಳಾ ಟೆನ್ನಿಸ್ ಪಟುವಾಗಿ ಹೊರಹೊಮ್ಮಿದಳು.ಆದರೆ ಅದು ಅಷ್ಟಕ್ಕೆ ನಿಲ್ಲಲಿಲ್ಲ.ಆ ವರ್ಷದ ಓಲಿಂಪಿಕ್ಸ್ ಚಿನ್ನದ ಪದಕವನ್ನೂ ಸಹ ಗೆಲ್ಲುವ ಮೂಲಕ ಆಕೆ ‘ಗೊಲ್ಡನ್ ಗ್ರಾಂಡ್‌ಸ್ಲಾಮ್’ಗೆದ್ದ ಏಕೈಕ ಟೆನ್ನಿಸ್ ಪಟು ಎಂದು ಇತಿಹಾಸ ಬರೆದಳು.ಆ ವರ್ಷದ ಆಕೆಯ ಪ್ರಾಬಲ್ಯ ಹೇಗಿತ್ತೆಂದರೆ ಫ್ರೆಂಚ್ ಓಪನ್ ಫೈನಲ್ ಗೆಲ್ಲಲು ಆಕೆ ತೆಗೆದುಕೊಂಡಿದ್ದ ಸಮಯ ಕೇವಲ 32 ನಿಮಿಷಗಳು.ಎದುರಾಳಿಯಾಗಿದ್ದ ನತಾಶಾ ಜ್ವರೆವಾಳನ್ನು ಆಕೆ 6 -0 6 -0 ದ ನೇರ ಸೆಟ್‌ಗಳಲ್ಲಿ ಅಕ್ಷರಶಃ ಧೂಳಿಪಟ ಮಾಡಿದ್ದಳು ಸ್ಟೆಫಿ.
ವೃತ್ತಿ ಜೀವನದಲ್ಲಿ ಒಟ್ಟೂ ಇಪ್ಪತ್ತೆರಡು ಗ್ರಾಂಡ್‌ಸ್ಲಾಮ್‌ಗಳನ್ನು ಗೆದ್ದಿದ್ದ ಗ್ರಾಫ್ ಹಲವಾರು ದಾಖಲೆಗಳ ಒಡತಿ.ಪ್ರತಿ ಪಂದ್ಯಾವಳಿಯನ್ನೂ ನಾಲ್ಕು ಬಾರ ಗೆದ್ದಿರುವ ಏಕೈಕ ಆಟಗಾರ್ತಿ. 377ವಾರಗಳ ಕಾಲ ರ್ಯಾಂಕಿಗ್ ಪಟ್ಟಿಯಲ್ಲಿ ಅಗ್ರಶ್ರೇಯಾಂಕಿತಳಾಗಿ ಮೆರೆದ ಗ್ರಾಫ್‌ಳದ್ದು ಅತಿ ಹೆಚ್ಚು ಕಾಲ ಅಗ್ರಶ್ರೆಯಾಂಕರ ಪಟ್ಟಿಯಲ್ಲಿದ್ದ ಆಟಗಾರರ (ಪುರುಷ ಮತ್ತು ಮಹಿಳಾ ಪಟುಗಳು ಸೇರಿದಂತೆ)ಪಟ್ಟಿಯಲ್ಲಿಯೂ ಅಗ್ರಸ್ಥಾನ.
ಇಷ್ಟಾಗಿ ಎಲ್ಲವೂ ಸರಾಗಿವಾಗಿಯೇನೂ ಇರಲಿಲ್ಲ ಆಕೆಗೆ.ವೃತ್ತಿ ಬದುಕಿನಲ್ಲಿ ಐವತ್ತಕ್ಕೂ ಹೆಚ್ಚುಬಾರಿ ಗಾಯ್ ಸಮಸ್ಯೆಯನ್ನು ಕಂಡಳಾಕೆ.ತನ್ನ ವಿಶಿಷ್ಟ ಆಟದಿಂದ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಆಕೆಗೆ ಒಂದು ಹಂತಕ್ಕೆ ಅಭಿಮಾನಿಗಳೇ ಮುಳುವಾಗಲಾರಂಭಿಸಿದ್ದರು.ಒಮ್ಮೆ ಆಕೆ ನೆಟ್ ಪ್ರಾಕ್ಟಿಸ್ ಮಾಡುತ್ತಿದ್ದ ಸಮಯಕ್ಕೆ ಹುಚ್ಚು ಅಭಿಮಾನಿಯೊಬ್ಬ ತನ್ನನ್ನು ಮದುವೆಯಾಗದಿದ್ದರೆ ಸತ್ತೇ ಹೋಗುತ್ತೇನೆಂದು ಕೈ ಕತ್ತರಿಸಿಕೊಂಡಾಗ ತೀರ ವಿಚಲಿತಳಾಗಿದ್ದಳಾಕೆ.ಹೋದಲ್ಲಿ ಬಂದಲ್ಲಿ ಅಭಿಮಾನಿಗಳ ಕಾಟ ತೀವ್ರವಾಗಿತ್ತು ಆಕೆಗೆ.1993ರಲ್ಲಿ ಆಕೆಯ ಹುಚ್ಚು ಅಭಿಮಾನಿಯೊಬ್ಬ ಆಕೆಯ ಮೇಲಿನ ಅಭಿಮಾನಕ್ಕೆ ಮೊನಿಕಾ ಸೆಲೆಸ್‌ಳನ್ನು ಚೂರಿಯಿಂದ ಇರಿದಾಗ ಬಿಕ್ಕಿಬಿಕ್ಕಿ ಅತ್ತಿದ್ದಳಂತೆ ಸ್ಟೇಫಿ.ಅಭಿಮಾನಿಯ ವರ್ತನೆ ಆಕೆಗೆ ನೋವು ತಂದಿದ್ದರೂ ಟೆನ್ನಿಸ್ ಪ್ರಿಯರ ಸಿಟ್ಟು ವಿನಾಕಾರಣ ಸ್ಟೆಫಿಯ ಮೇಲೆ ತಿರುಗಿತ್ತು.1993ರ ವಿಂಬಲ್ಡನ್ ಪಂದ್ಯಾವಳಿಗಳಲ್ಲಿ ,’ಇದೆಲ್ಲ ನಿನ್ನಿಂದಾಗಿಯೇ ಆಗಿದ್ದು ಸ್ಟೆಫಿ’ ಎನ್ನುವ ಬೋರ್ಡುಗಳು ಆಕೆಯ ಮನೋಸ್ಥೈರ್ಯವನ್ನು ಕುಗ್ಗಿಸಿದ್ದಂತೂ ಸುಳ್ಳಲ್ಲ.ಅಷ್ಟಾಗಿ ಆಕೆ ಗಟ್ಟಿಗಿತ್ತಿ.ಜನರ ಅರ್ಥಹೀನ ವಿರೋಧದ ನಡುವೆಯೂ ವರ್ಷದ ವಿಂಬಲ್ಡನ್ ಗೆಲ್ಲುವ ಮೂಲಕ ಜನರ ಮನಸನ್ನು ಮತ್ತೆ ಗೆಲ್ಲುವಲ್ಲಿ ಸಫಲಳಾಗಿದ್ದಳು.
ಆಕೆಯ ಆಟವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ.ನೋಡಿ ಗೊತ್ತಿದ್ದವರಿಗೆ ಅದರ ಭಾವವೇ ಬೇರೆ ತೆರನಾದದ್ದು.ರೋಜರ್ ಫೆಡರರ್ ಆಟವೆನ್ನುವುದು ಕ್ರೀಡಾ ಕಾವ್ಯದಂತೆನ್ನಿಸಿದರೆ ,ಸ್ಟೆಫಿಯ ಆಟವೆನ್ನುವುದು ಬ್ಯಾಲೆಯಂಥದ್ದು.ಅದೇ ಕಾರಣಕ್ಕೋ ಏನೋ
ಸಾವಿರ ಟೆನ್ನಿಸ್ ಆಟಗಾರರು ಬರಬಹುದು,ಟೆನ್ನಿಸ್ ಜಗತ್ತಿಗೆ ಮತ್ತೊಬ್ಬ ಸ್ಟೆಫಿ ಗ್ರಾಫ್ ಬರುವುದು ಸಾಧ್ಯವಿಲ್ಲ ಎನ್ನುವುದು ಅಭಿಮಾನಿಗಳ ಮಾತು.ಒಪ್ಪಬಹುದೇನೋ ಅಲ್ಲವಾ..??