Categories
ಟೆನಿಸ್

ಕಡೆಯವರೆಗೂ ಆತ್ಮವಿಶ್ವಾಸವಿರಬೇಕು ಅವನ ಮೇಲೆ ಅವನಿಗಿದ್ದಂತೆ…..

ಈ ವರ್ಷದ ಫ್ರೆಂಚ್ ಓಪನ್ ಪಂದ್ಯಾವಳಿ ಆರಂಭವಾಗುವ ಮುನ್ನ, ನಡಾಲ್‌ನ  ಓಟವನ್ನು ಜೋಕೊವಿಚ್ ನಿಲ್ಲಿಸಲಿದ್ದಾನೆ ಎನ್ನುವುದು ಟೆನ್ನಿಸ್ ಪಂಡಿತರ ಲೆಕ್ಕಾಚಾರವಾಗಿತ್ತು.
ವರ್ಷದುದ್ದಕ್ಕೂ ಅದ್ಭುತ ಫಾರ್ಮ್‌ನಲ್ಲಿದ್ದ ಜೋಕೊವಿಚ್‌ ಮತ್ತು  ರೋಮ್ ಪಂದ್ಯಾವಳಿಯಲ್ಲಿ ಆರಂಭಿಕ ಪಂದ್ಯಗಳಲ್ಲಿಯೇ ಹೊರಬಿದ್ದಿದ್ದ ನಡಾಲ್‌ ನಡುವಣದ ಜಿದ್ದಾಜಿದ್ದಿಯಲ್ಲಿ ಈ ಬಾರಿ ಜೋಕೊವಿಚ್‌ನದ್ದೇ ಮೇಲುಗೈ ಎಂದು ಎಲ್ಲರೂ ಭಾವಿಸಿದ್ದರು.ಆಡಿದ್ದ  ಇಪ್ಪತ್ತೊಂಬತ್ತು ಪಂದ್ಯಗಳ ಪೈಕಿ ಕೇವಲ ಒಂದೇ  ಪಂದ್ಯಗಳನ್ನು ಸೋತಿದ್ದ ಜೋಕೊ.ಸೋತ ಪಂದ್ಯವೂ ಸಹ ಸೋಲಿನಂತಿರದೇ ಟೆನ್ನಿಸ್ ನಿಯಮಾವಳಿಗಳಿ ಉಲ್ಲಂಘನೆಗೆ ಶಿಕ್ಷೆಯೆನ್ನುವಂತಿದ್ದಿದ್ದರಿಂದ ಅದು ಕೇವಲ ಲೆಕ್ಕಾಚಾರದ ಸೋಲಾಗಿತ್ತಷ್ಟೇ
.ಹಾಗಾಗಿ ಆತ ಅಲ್ಲಿಯವರೆಗೆ ಅಜೇಯನೇ ಎನ್ನಬಹುದು.ಸಹಜವಾಗಿಯೇ ಆಗ ಆಡಿದ ಹತ್ತೊಂಬತ್ತು ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳನ್ನು ಸೋತಿದ್ದ ನಡಾಲ್‌ಗಿಂತ ಸಾಕಷ್ಟು ಬಲಶಾಲಿಯಾಗಿ ಗೋಚರಿಸುತ್ತಿದ್ದ.ಅದೇ ಕಾರಣಕ್ಕೆ ಟೆನ್ನಿಸ್ ಲೋಕದ ಪಂಡಿತರ ಕಣ್ಣುಗಳು ಫ್ರೆಂಚ್ ಓಪನ್ ಫೈನಲ್ಲಿನ ಮೇಲೆ ನೆಟ್ಟಿದ್ದವು.ಹನ್ನೆರಡು ಬಾರಿ ಪಂದ್ಯಾವಳಿಯನ್ನು ಗೆದ್ದು ದಾಖಲೆ ನಿರ್ಮಿಸಿದ ನಡಾಲ್‌‌ನ ಮೇಲೆ ಸ್ಥಿರತೆಯ ನಿರೀಕ್ಷೆಯ ಒತ್ತಡವಿತ್ತು.ಫ್ರೆಂಚ್ ಓಪನ್ ಅಂಕಣ ಅವನದ್ದೇ ಎನ್ನುವಷ್ಟು ಆಪ್ತವಾಗಿದ್ದರೂ ಅವನ ತಂಡಕ್ಕೆ ದುಗುಡ.ಜೋಕೊವಿಚ್‌ನೆದುರು ಅದೇಕೋ ಪ್ರತಿಬಾರಿಯೂ ತಿಣುಕಾಡುವ ನಡಾಲ್‌ ಬಗ್ಗೆ ಅವರಿಗೇನೋ ಸಣ್ಣ ಆತಂಕದ ಲೆಕ್ಕಾಚಾರವಿದ್ದಿರಲಿಕ್ಕೂ ಸಾಕು.ಹಾಗಿರುವಾಗಲೇ ಫೈನಲ್ಲಿನಲ್ಲಿ ಮತ್ತೆ ಜೋಕೊವಿಚ್‌ನನ್ನು ಎದುರಿಸಬೇಕಾದ ಅನಿವಾರ್ಯತೆ ನಡಾಲ್‌ನದ್ದು,ತನ್ನ ಪಾಡಿಗೆ ತಾನೆಂಬಂತೆ ಆತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ ಫೈನಲ್ ಪಂದ್ಯದ ಅಂತಿಮ ಹದಿನೈದು ನಿಮಿಷಗಳಿರುವಾಗ ಆಯೋಜಕರು ಕೊಟ್ಟ ಸುದ್ದಿಗೆ ಅಳುಕಿಬಿಟ್ಟಿದ್ದರು ನಡಾಲ್‌ನ ತಂಡದವರು.
’ವಾತಾವರಣ ಸಮಸ್ಯೆ ಇರುವುದರಿಂದ ಈ ಬಾರಿಯ ಅಂತಿಮ ಪಂದ್ಯದ ಮೇಲ್ಚಾವಣಿಯನ್ನು ಮುಚ್ಚಲಾಗುತ್ತದೆ.ಇದು ಮೊದಲ ಒಳಾಂಗಣ ಫೈನಲ್ ಪಂದ್ಯವಾಗಲಿದೆ..’
ಅದಾಗಲೇ ಕೊಂಚ ಅಳುಕಿನಲ್ಲಿದ್ದ ನಡಾಲ್‌ ತಂಡಕ್ಕೆ ಇನ್ನಷ್ಟು ಆತಂಕ ಶುರುವಾಗಿತ್ತು.ಒಳಾಂಗಣ ಪಂದ್ಯಗಳ ಜಟಾಪಟಿಯಲ್ಲಿ ಜೊಕೊವಿಚ್‌ನದ್ದು ನಡಾಲ್‍ನ ಮೇಲೆ ಅಂಕಿಅಂಶಗಳ ಮೇಲುಗೈ.ಒಟ್ಟಾರೆಯಾಗಿ ಆ ಹೊತ್ತಿಗೆ ಮಾನಸಿಕವಾಗಿ ನಡಾಲ್‌ಗಿಂತ ಜೋಕೊವಿಚ್ ಗೆಲುವಿನ ಸಾಧ್ಯತೆಗಳು ಹೆಚ್ಚು ಎನ್ನುವ ಭಾವ ನಡಾಲ್ ನಿರ್ವಹಣಾ ತಂಡದ ಮನಸಿನಾಳದಲ್ಲೆಲ್ಲೋ ಮೂಡಿರಲಿಕ್ಕೂ ಸಾಕು.ಇದನ್ನು   ನಡಾಲ್‌ಗೆ  ತಿಳಿಸುವುದು  ಹೇಗೆ ಎಂದು ಕೋಚ್ ಕಾರ್ಲೋಸ್ ಮೋಯಾ ಚಿಂತಾಕ್ರಾಂತರಾಗಿದ್ದರಂತೆ.ಆದರೆ ಹೆಚ್ಚು ಸಮಯವಿರಲಿಲ್ಲ.ತೀರ ಪಂದ್ಯದ ಅಂಕಣಕ್ಕೆ ಪ್ರವೇಶಿಸುವ ಹೊತ್ತಿಗೆ ತಿಳಿಸುವುದು ತಪ್ಪಾದೀತು ಎಂದುಕೊಂಡ ಮೋಯಾ,ತಕ್ಷಣವೇ ನಡಾಲ್‌ನಿಗೆ ವಿಷಯ ಅರುಹಿದರಂತೆ.ವಿಷಯ ಕಿವಿಗೆ ಬಿದ್ದ ಕ್ಷಣಕ್ಕೆ ನಡಾಲ್ ಒಮ್ಮೆ ಹುಬ್ಬು ಮೇಲೇರಿಸಿದನಂತೆ.ನಡಾಲ್ ಅಂತಿಮ ಹಂತದ ಒತ್ತಡಕ್ಕೆ ಎನ್ನುವುದು ಮೋಯಾರ ಆ ಹೊತ್ತಿಗೆ ಅರ್ಥೈಸುವಿಕೆ.ಆದರೆ ನಡಾಲ್  ಹೇಳಿದ್ದು ಒಂದೇ ಮಾತು..
’I dont care,It doesnt change anything,I AM GOING TO WIN THIS MATCH…’
ಮುಂದಿನದ್ದು ಇತಿಹಾಸ.ಪಂದ್ಯವನ್ನು 6 – 0,6-2,7-5 ರ ನೇರ ಸೆಟ್‌ಗಳಲ್ಲಿ ಗೆದ್ದಿದ್ದ ಆವೇಮಣ್ಣಿನಂಕಣದ ರಾಜ.  ಬಹುಶ: ಜೊಕೊವಿಚ್ ನಂತಹ ಮಹಾನ್ ಆಟಗಾರ ತನ್ನ ವೃತ್ತಿ ಬದುಕಿನಲ್ಲಿ ಕಂಡ ಅತ್ಯಂತ ಕಳಪೆ ಸೋಲುಗಳಲ್ಲಿ ಒಂದು 2020ರ ಫ್ರೆಂಚ್ ಓಪನ್ನಿನ ಅಂತಿಮ ಪಂದ್ಯ.ಅವನಿಗೆ ಆ ವರ್ಷದ ಮೊದಲ ಅಧಿಕೃತ ಸೋಲು ಸಹ ಅದೇ .’ಪಂದ್ಯಾವಳಿಯ ಆರಂಭಕ್ಕೂ ಮುನ್ನ,ಈ ಬಾರಿಯ ಫ್ರೆಂಚ್ ಓಪನ್ ಪಂದ್ಯಾವಳಿಯ ಪರಿಸ್ಥಿತಿಗಳು ನನಗೆ ವರವಾಗಲಿದೆ ಎಂದುಕೊಂಡಿದ್ದೆ.ಸೇಮಿಫೈನಲ್ಲಿನವರೆಗೂ ಚಂದವೇ ಆಡಿದ್ದೆ.
ಆದರೆ ಅಂತಿಮ ಪಂದ್ಯವೇ ಬೇರೆ.ಆತ ಇಂದಿನ ಪಂದ್ಯದ ಎಲ್ಲ ವಿಭಾಗಗಳಲ್ಲಿಯೂ ನನ್ನ ಮೇಲೆ ಸ್ಪಷ್ಟ ಮೇಲುಗೈ ಸಾಧಿಸಿಬಿಟ್ಟ.ಹದಿಮೂರು ಬಾರಿ ಫ್ರೆಂಚ್ ಓಪನ್ ಗೆಲ್ಲುವುದು ಅತಿಮಾನುಷ ಸಾಧನೆ.ಸಾಧನೆಯ ಪರಾಕಾಷ್ಠೆ ಎನ್ನಬಹುದೇನೊ.ಹತ್ತಾರು ಗಾಯದ ಸಮಸ್ಯೆಗಳ ನಂತರವೂ ಆತ ಮತ್ತೆ ಮತ್ತೆ ಎದ್ದು ಬರುತ್ತಾನೆ.ಬಹುಶ: ನನ್ನ ಕೆಟ್ಟ ಸೋಲಿನಿಂದ ನಾನು ಕಲಿಯಬೇಕಾಗಿದ್ದು ಇದೇ’ಎಂದು ನುಡಿದ ಜೋಕೊವಿಚ್ ನಡಾಲ್‌ನನ್ನು ಪ್ರಶಂಸಿಸಿದ್ದ.
ಈ ಘಟನೆಯ ಕುರಿತು ಕೇಳಿದಾಗಲೆಲ್ಲ ಅನ್ನಿಸುವುದೊಂದೇ.ಬದುಕಲ್ಲಿ ರಾಶಿ ರಾಶಿ ಸಮಸ್ಯೆಗಳಿವೆ ನಿಜ.ಆದರೆ ಎಲ್ಲ ದುಗುಡ ದುಮ್ಮಾನಗಳ ನಡುವೆ ನಮ್ಮ ಸಹಾಯಕ್ಕೆ ನಿಲ್ಲುವುದು ನಮ್ಮ ಮನಸ್ಥಿತಿಯೇ.ಸೋಲಿನ ಭೀತಿ ಎದುರಾದಾಗ  ಅನಗತ್ಯದ  ಆತಂಕಗಳನ್ನು ಪಕ್ಕಕ್ಕಿಟ್ಟು ನಡಾಲ್‌ನಂತೆ ’I AM GOING TO WIN TODAY’ ಎನ್ನುತ ಆತ್ಮವಿಶ್ವಾಸದಿಂದ ಎದ್ದು  ಹೊರಟರೆ ಬದುಕು ಇನ್ನಷ್ಟು ಸಲೀಸಾದೀತೇನೋ ಅಲ್ಲವಾ..??

Leave a Reply

Your email address will not be published.

10 + eight =