
ನಿನ್ನೆ ಅಚಾನಕ್ ಆಗಿ Arjun CM Gowda ಸಿಕ್ಕಿದರು. ಇವರು ಕರ್ನಾಟಕದ ಜ್ಯೂನಿಯರ್ ಹುಡುಗರ ಜೊತೆ ಇರುವವರು. ಯಾವ ಹುಡುಗ ಏನು ಎಂಬುದನ್ನು ಅತ್ಯಂತ ಹತ್ತಿರದಿಂದ ನೋಡುವವರು. KSCA zonal ಟೂರ್ನಿಗಳಲ್ಲಿ ಶಿವಮೊಗ್ಗ ಝೋನ್ ತಂಡದ ಜೊತೆ ಇರುತ್ತಾರೆ. ಒಳ್ಳೆಯ ಥ್ರೋಡೌನ್ ಸ್ಪೆಷಲಿಸ್ಟ್ ಕೂಡ.
‘’ಸರ್, ದ್ರಾವಿಡ್ ಅವರ ದೊಡ್ಡ ಮಗನ ಬಗ್ಗೆ ಬರೆದಿದ್ದನ್ನು ಓದಿದೆ. ನೀವು ಸಣ್ಣವನ ಆಟ ನೋಡ್ಬೇಕು ಸರ್. ತಮ್ಮನ ಮುಂದೆ ಅಣ್ಣ ಏನೇನೂ ಅಲ್ಲ. ಹಾಗಿದೆ ಆಟ’’ ಎಂದು ಬಿಟ್ಟರು.
ನನಗೆ ಕುತೂಹಲ. ಅಣ್ಣನ ಆಟವನ್ನು ನೋಡಿದ್ದೇನೆ. ತಮ್ಮನ ಆಟದ ಬಗ್ಗೆ ಕೇಳಿದ್ದೇನೆ, ನೋಡಿಲ್ಲ. ಸ್ಕೋರ್ ಕಳುಹಿಸಿ ಕೊಟ್ಟರು. ನೋಡಿದಾಗ ಅನ್ನಿಸಿದ್ದು ಒಂದೇ. ಹುಲಿ ಹುಟ್ಟೆಯಲ್ಲಿ ಹುಲಿ ಮರಿಯೇ ಹುಟ್ಟಿದೆ.
KSCA ಅಂಡರ್-16 inter zonal ಟೂರ್ನಮೆಂಟ್’ನಲ್ಲಿ ರಾಹುಲ್ ದ್ರಾವಿಡ್ ಅವರ 2ನೇ ಮಗ ಅನ್ವಯ್ ದ್ರಾವಿಡ್ ಬೆಂಗಳೂರು ಝೋನ್ ತಂಡದ ನಾಯಕ. ಆಟದಲ್ಲಿ ತಂದೆಯ ಪಡಿಯಚ್ಚು ಎಂದು ಆಟ ನೋಡಿದವರು ಹೇಳುತ್ತಾರೆ. ತಂದೆಯಂತೆ ವಿಕೆಟ್ ಕೀಪರ್ ಬ್ಯಾಟರ್.
ಹುಡುಗನ ವಯಸ್ಸು 15.. ಈ ವರ್ಷದ inter zonal ಟೂರ್ನಮೆಂಟ್’ನಲ್ಲಿ 4 ಮ್ಯಾಚ್, 5 ಇನ್ನಿಂಗ್ಸ್, 566 ರನ್.. 3 ಶತಕ, ಅದರಲ್ಲೊಂದು ಇನ್ನೂರು. 3 ದಿನಗಳ ಹಿಂದಷ್ಟೇ RSI ಮೈದಾನದಲ್ಲಿ ಅನ್ವಯ್ ದ್ರಾವಿಡ್ ಭರ್ಜರಿ ದ್ವಿಶತಕ ಬಾರಿಸಿದ್ದಾನೆ. ಆ ದ್ವಿಶತಕದ ಇನ್ನಿಂಗ್ಸ್’ನಲ್ಲಿ ದ್ರಾವಿಡ್ ಮಗನದ್ದು ಏಕಾಂಗಿ ಹೋರಾಟ. (scorecard ಗಮನಿಸಬಹುದು). ಭಾರತ ತಂಡದ ಬ್ಯಾಟಿಂಗ್ ಲೈನಪ್ ಕುಸಿದು ಬಿದ್ದಾಗ ರಾಹುಲ್ ದ್ರಾವಿಡ್ ಇದೇ ರೀತಿ ಆಡುತ್ತಿದ್ದರು.
ರಾಹುಲ್ ದ್ರಾವಿಡ್ ಅವರು ಕ್ರಿಕೆಟ್’ಗೆ ನಿವೃತ್ತಿ ಘೋಷಿಸಲು 2012ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳ ಜೊತೆ ಬಂದಿದ್ದರು. ಇಬ್ಬರನ್ನೂ ನಾನು ಮೊದಲ ಬಾರಿ ನೋಡಿದ್ದು ಅಲ್ಲೇ.
ದ್ರಾವಿಡ್ ಅವರ ಹಿರಿಮಗ ಸಮಿತ್ ದ್ರಾವಿಡ್ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾನೆ. ಸಣ್ಣವನು ಜ್ಯೂನಿಯರ್ ಕ್ರಿಕೆಟ್’ನಲ್ಲಿ ರನ್ ಹೊಳೆಯನ್ನೇ ಹರಿಸುತ್ತಿದ್ದಾನೆ. ಕರ್ನಾಟಕ U-14 ತಂಡದ ನಾಯಕನಾಗಿದ್ದ ಅನ್ವಯ್ ದ್ರಾವಿಡ್, ಈ ಬಾರಿ U-16 ತಂಡದ ನಾಯಕನಾಗಲಿದ್ದಾನೆ.