ಉಡುಪಿ ಜಿಲ್ಲೆಯ ಕೋಟಾದ ಮೂಡು ಗಿಳಿಯಾರಿನ ಯುವ ಪ್ರತಿಭಾವಂತ ಎಡಗೈ ವೇಗದ ಬೌಲರ್ ಅಭಿಲಾಷ್ ಶೆಟ್ಟಿ ಇದೇ ಮೊದಲ ಬಾರಿ ಕರ್ನಾಟಕ ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಎಡಗೈ ಸ್ವಿಂಗ್ ಬೌಲರ್ ಆಗಿರುವ ಅಭಿಲಾಷ್ ಶೆಟ್ಟಿ ಹೊಸ ಚೆಂಡಿನಲ್ಲಿ ಅತ್ಯಂತ ಪರಿಣಾಮಕಾರಿ ಬೌಲರ್ ಎಂದೇ ಹೆಸರು ಮಾಡಿದ್ದಾರೆ. ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯವುಳ್ಳ ಅಭಿಲಾಷ್ ಶೆಟ್ಟಿ, ಈಗಾಗ್ಲೇ ಕೆ.ಎಸ್.ಸಿ.ಎ ಲೀಗ್ ಪಂದ್ಯಗಳು, ಡಾ.ತಿಮ್ಮಪ್ಪಯ್ಯ ಟ್ರೋಫಿ ಟೂರ್ನಿ, ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು.
25 ವರ್ಷದ ಅಭಿಲಾಷ್ ಶೆಟ್ಟಿ 2023ರ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ 11 ಪಂದ್ಯಗಳಿಂದ 22 ವಿಕೆಟ್ ಪಡೆದು ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಈ ವರ್ಷದ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮಂಗಳೂರು ಡ್ರಾಗನ್ಸ್ ಪರ 10 ಪಂದ್ಯಗಳಿಂದ 11 ವಿಕೆಟ್ ಪಡೆದು ಮಿಂಚಿದ್ದರು.
ಅಭಿಲಾಷ್ ಶೆಟ್ಟಿಗೆ ಕರ್ನಾಟಕ ಮಾಜಿ ವೇಗದ ಬೌಲರ್, ಪೀಣ್ಯ ಎಕ್ಸ್’ಪ್ರೆಸ್ ಖ್ಯಾತಿಯ ಅಭಿಮನ್ಯು ಮಿಥುನ್ ಬೌಲಿಂಗ್ ಗುರು. ಬೆಂಗಳೂರಿಗೆ ಬಂದ ನಂತರ ಮಿಥುನ್ ಅವರ ಗರಡಿಯಲ್ಲಿ ಅಭಿಲಾಷ್ ಶೆಟ್ಟಿ ಪಳಗುತ್ತಿದ್ದಾರೆ.
ಈ ವರ್ಷದ ರಣಜಿ ಟ್ರೋಫಿ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಮಯಾಂಕ್ ಅಗರ್ವಾಲ್ ನಾಯಕತ್ವದ 16 ಮಂದಿ ಸದಸ್ಯರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಅಭಿಲಾಷ್ ಶೆಟ್ಟಿ ಜೊತೆ ಸ್ಮರಣ್ ಆರ್. ಮತ್ತು ಆಫ್ ಸ್ಪಿನ್ನರ್ ಮೊಹ್ಸಿನ್ ಖಾನ್ ಇದೇ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ. ಅನುಭವಿ ಆಟಗಾರ ಮನೀಶ್ ಪಾಂಡೆ ಅವರಿಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.
ಮಧ್ಯಪ್ರದೇಶ ವಿರುದ್ಧದ ರಣಜಿ ಪಂದ್ಯ ಅಕ್ಟೋಬರ್ 11ರಿಂದ 14ರವರೆಗೆ ಇಂದೋರ್’ನಲ್ಲಿ ನಡೆಯಲಿದೆ. ಕೇರಳ ವಿರುದ್ಧದ ಪಂದ್ಯ ಅಕ್ಟೋಬರ್ 18ರಿಂದ 21ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಮಧ್ಯಪ್ರದೇಶ ಮತ್ತು ಕೇರಳ ತಂಡಗಳ ವಿರುದ್ಧದ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡ ಹೀಗಿದೆ:
1. ಮಯಾಂಕ್ ಅಗರ್ವಾಲ್ (ನಾಯಕ)
2. ನಿಕಿನ್ ಜೋಸ್
3. ದೇವದತ್ತ್ ಪಡಿಕ್ಕಲ್
4. ಸ್ಮರಣ್ ಆರ್.
5. ಮನೀಶ್ ಪಾಂಡೆ (ಉಪನಾಯಕ)
6. ಶ್ರೇಯಸ್ ಗೋಪಾಲ್
7. ಹಾರ್ದಿಕ್ ರಾಜ್
8. ವೈಶಾಖ್ ವಿಜಯ್ ಕುಮಾರ್
9. ಸೂರಜ್ ಸತೇರಿ (ವಿಕೆಟ್ ಕೀಪರ್)
10. ಪ್ರಸಿದ್ಧ್ ಕೃಷ್ಣ
11. ವಿ.ಕೌಶಿಕ್
12. ಲವ್ನೀನ್ ಸಿಸೋಡಿಯಾ (ವಿಕೆಟ್ ಕೀಪರ್)
13. ಮೊಹ್ಸಿನ್ ಖಾನ್
14. ವಿದ್ಯಾಧರ್ ಪಾಟೀಲ್
15. ಕಿಶನ್ ಎಸ್. ಬೆದರೆ
16. ಅಭಿಲಾಷ್ ಶೆಟ್ಟಿ