ಎಸ್.ಅರವಿಂದ್ ಅವರೇ ಕೊನೆ.. ಅವರ ನಿವೃತ್ತಿಯ ನಂತರ ಕರ್ನಾಟಕ ರಣಜಿ ತಂಡಕ್ಕೊಬ್ಬ ಸಮರ್ಥ ಎಡಗೈ ವೇಗದ ಬೌಲರ್ ಸಿಕ್ಕಿಲ್ಲ. ಬಲಗೈ ವೇಗಿಗಳಾಗಿ ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯ್ ಕುಮಾರ್, ವಾಸುಕಿ ಕೌಶಿಕ್ ಗಮನ ಸೆಳೆಯುತ್ತಿದ್ದಾರೆ. ಅವಕಾಶ ಸಿಕ್ಕರೆ ವಿದ್ಯಾಧರ್ ಪಾಟೀಲ್ ರೆಡಿ ಇದ್ದಾರೆ. ಯುವ ಪ್ರತಿಭೆ ಸಮರ್ಥ್ ನಾಗರಾಜ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇವರೆಲ್ಲಾ ಬಲಗೈ ಮಧ್ಯಮ ವೇಗದ ಬೌಲರ್’ಗಳು.
ಸಾಲು ಸಾಲು ಬಲಗೈ ವೇಗದ ಬೌಲರ್’ಗಳ ಮಧ್ಯೆ ಕರ್ನಾಟಕದ ಭರವಸೆಯ ಎಡವೈ ವೇಗಿಯಾಗಿ ಕಾಣುತ್ತಿರುವುದು ಒಬ್ಬನೇ.. ಅದು ಉಡುಪಿ ಜಿಲ್ಲೆಯ ಕೋಟಾದ ಮೂಡು ಗಿಳಿಯಾರಿನ ಅಭಿಲಾಷ್ ಶೆಟ್ಟಿ.
ಅಭಿಲಾಷ್ ಶೆಟ್ಟಿ.. ಎಡಗೈ ಸ್ವಿಂಗ್ ಬೌಲರ್. ಹೊಸ ಚೆಂಡಿನಲ್ಲಿ ಅತ್ಯಂತ ಪರಿಣಾಮಕಾರಿ ಬೌಲರ್. ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯವುಳ್ಳ ಪ್ರತಿಭಾವಂತ.. ಈ ಬಾರಿ ರಣಜಿ ಟ್ರೋಫಿ ಟೂರ್ನಿಗೆ ಪ್ರಕಟಿಸಲಾಗಿರುವ ಕರ್ನಾಟಕದ 36 ಮಂದಿ ಸಂಭಾವ್ಯರ ತಂಡದಲ್ಲಿ 25 ವರ್ಷದ ಅಭಿಲಾಷ್ ಶೆಟ್ಟಿ ಸ್ಥಾನ ಪಡೆದಿದ್ದಾರೆ.
ಈಗಾಗಲೇ ರಾಜ್ಯ ಕ್ರಿಕೆಟ್ ಸಂಸ್ಥೆಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ತೋರಿರುವ ಅಭಿಲಾಷ್ ಶೆಟ್ಟಿ, ರಣಜಿ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. KSCA ಆಶ್ರಯದಲ್ಲಿ ನಡೆಯುತ್ತಿರುವ ಡಾ.ತಿಮ್ಮಪ್ಪಯ್ಯ ಟ್ರೋಫಿ ಪಂದ್ಯದಲ್ಲಿ ಅಭಿಲಾಷ್ ಶೆಟ್ಟಿ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಮಿಂಚಿದ್ದಾರೆ. ನಾಲ್ಕು ದಿನಗಳ ಪಂದ್ಯದಲ್ಲಿ, ಕೆಂಪು ಚೆಂಡಿನಲ್ಲಿ ಅದ್ಭುತ ದಾಳಿ ನಡೆಸುವ ಮೂಲಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ.
2023ರ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ 11 ಇನ್ನಿಂಗ್ಸ್’ಗಳಲ್ಲಿ 22 ವಿಕೆಟ್ ಪಡೆದು ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮೂಡಿ ಬಂದಿದ್ದ ಅಭಿಲಾಷ್ ಶೆಟ್ಟಿ, ಈ ಬಾರಿಯ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮಂಗಳೂರು ಡ್ರಾಗನ್ಸ್ ಪರ 10 ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದರು.
ಅಷ್ಟೇ ಅಲ್ಲ, ಟಿ20 ಕ್ರಿಕೆಟ್’ನ ಪವರ್’ಪ್ಲೇನಲ್ಲಿ ಎರಡು ಮೇಡನ್ ಓವರ್’ಗಳನ್ನು ಎಸೆದು ಗಮನ ಸೆಳೆದಿದ್ದರು.
ಕರ್ನಾಟಕ ದಿಗ್ಗಜ ವೇಗದ ಬೌಲರ್, ಪೀಣ್ಯ ಎಕ್ಸ್’ಪ್ರೆಸ್ ಖ್ಯಾತಿಯ ಅಭಿಮನ್ಯು ಮಿಥನ್ ಬೆಂಗಳೂರಿನಲ್ಲಿ ಅಭಿಲಾಷ್ ಶೆಟ್ಟಿಗೆ ಬೌಲಿಂಗ್ ಪಾಠಗಳನ್ನು ಹೇಳಿ ಕೊಡುತ್ತಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ತಮ್ಮದೇ ರನ್ ಅಪ್ ಕ್ರಿಕೆಟ್ ಅಕಾಡೆಮಿಯಲ್ಲಿ ಮತ್ತು ಪ್ಯಾಲೇಸ್ ಗ್ರೌಂಡ್’ನಲ್ಲಿರುವ ಬ್ರಿಜೇಶ್ ಪಟೇಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಮಿಥುನ್ ಗರಡಿಯಲ್ಲಿ ಪಳಗುತ್ತಿರುವ ಯುವ ವೇಗಿಗಳು ಒಬ್ಬರಲ್ಲ ಇಬ್ಬರಲ್ಲ.. ಅವರಲ್ಲಿ ಒಬ್ಬ ಈ ಅಭಿಲಾಷ್ ಶೆಟ್ಟಿ.
ರಣಜಿ ಸಂಭಾವ್ಯರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಅಭಿಲಾಷ್ ಶೆಟ್ಟಿ ಕರ್ನಾಟಕ ರಣಜಿ ತಂಡದಲ್ಲೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.