
ಅಭಿಲಾಷ್ ಶೆಟ್ಟಿ ಮುಂದೆ ನಡೆಯಲಿಲ್ಲ ಶುಭಮನ್ ಗಿಲ್ ಆಟ; ಕೌಶಿಕ್ ದಾಳಿಗೆ ಪತರಗುಟ್ಟಿದ ಪಂಜಾಬ್ 55ಕ್ಕೆ ಆಲೌಟ್
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ರಣಜಿ ಪಂದ್ಯದಲ್ಲೂ ಕರ್ನಾಟಕದ ಮಧ್ಯಮ ವೇಗಿಗಳಾದ ವಾಸುಕಿ ಕೌಶಿಕ್ ಹಾಗೂ ಅಭಿಲಾಷ್ ಶೆಟ್ಟಿ ದಾಳಿಗೆ ಪಂಜಾಬ್ ತಂಡ ಧೂಳೀಪಟಗೊಂಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶುಭಮನ್ ಗಿಲ್ ನಾಯಕತ್ವದ ಪಂಜಾಬ್ ತಂಡ ಕೌಶಿಕ್ ಹಾಗೂ ಅಭಿಲಾಷ್ ಶೆಟ್ಟಿ ದಾಳಿಗೆ ತತ್ತರಿಸಿ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 55 ರನ್’ಗಳಿಗೆ ಆಲೌಟಾಯಿತು. ಮಾರಕ ದಾಳಿ ಸಂಘಟಿಸಿದ ವಾಸುಕಿ ಕೌಶಿಕ್ 11 ಓವರ್’ಗಳಲ್ಲಿ ಕೇವಲ 16 ರನ್ನಿತ್ತು 4 ವಿಕೆಟ್ ಪಡೆದರೆ, ಅಮೋಘ ದಾಳಿ ಸಂಘಟಿಸಿದ ಎಡಗೈ ಮಧ್ಯಮ ವೇಗಿ ಅಭಿಲಾಷ್ ಶೆಟ್ಟಿ, ಟೀಮ್ ಇಂಡಿಯಾ ಸ್ಟಾರ್ ಶುಭಮನ್ ಗಿಲ್ ಸಹಿತ 19 ರನ್ನಿಗೆ 3 ವಿಕೆಟ್ ಕಬಳಿಸಿದರು. ವೇಗಿ ಪ್ರಸಿದ್ಧ್ ಕೃಷ್ಣ 11 ರನ್ನಿಗೆ ಎರಡು ವಿಕೆಟ್ ಪಡೆದರೆ ಆಲ್ರೌಂಡರ್ ಯಶೋವರ್ಧನ್ ಪರಂತಪ್ ಒಂದು ವಿಕೆಟ್ ಪಡೆದರು. ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದ್ದು 144 ರನ್’ಗಳ ಮುನ್ನಡೆ ಸಾಧಿಸಿದೆೆ. ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದ ಎಡಗೈ ಬ್ಯಾಟರ್ ಸ್ಮರಣ್ ರವಿಚಂದ್ರನ್ ಅಜೇಯ 83 ರನ್ ಗಳಿಸಿದ್ದು ಮತ್ತೊಂದು ಶತಕದತ್ತ ದಾಪುಗಾಲಿಟ್ಟಿದ್ದಾರೆ.





