ರೋಹಿತ್ ರೆಡಿ, ಗಿಲ್ ರೆಡಿ.. ಅಡಿಲೇಡ್ ಟೆಸ್ಟ್ ಪಂದ್ಯನಲ್ಲಿ ರಾಹುಲ್ ಆಡುವ ಕ್ರಮಾಂಕ ಯಾವುದು?
ಟೀಮ್ ಇಂಡಿಯಾದಲ್ಲಿ ನಿಸ್ವಾರ್ಥ ಆಟಗಾರ ಅಂತ ಯಾರಾದ್ರೂ ಇದ್ರೆ ಅದು ನಮ್ಮ ಕನ್ನಡಿಗ ಕೆ.ಎಲ್ ರಾಹುಲ್. ತಂಡದ ಅವಶ್ಯಕತೆಗೆ ತಕ್ಕಂತೆ ಯಾವ ಕ್ರಮಾಂಕದಲ್ಲಿ ಬೇಕಾದರೂ ಆಡಲು ರೆಡಿ ಇರುವವರು ರಾಹುಲ್. ಇದೇ ಕಾರಣದಿಂದ ರಾಹುಲ್ ಅವ್ರಿಗೆ ಸತತವಾಗಿ ಅನ್ಯಾಯವಾಗುತ್ತಾ ಬಂದಿದೆ.
ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಿದ್ದ ಕಾರಣ ಕೆ.ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದರು. ಪ್ರಥಮ ಇನ್ನಿಂಗ್ಸ್’ನಲ್ಲಿ 26 ರನ್ ಗಳಿಸಿದ್ದ ರಾಹುಲ್ ದ್ವಿತೀಯ ಇನ್ನಿಂಗ್ಸ್’ನಲ್ಲಿ ತಾಳ್ಮೆಯ 77 ರನ್ ಗಳಿಸಿದ್ದರು. ಅಷ್ಟೇ ಅಲ್ಲ, ಭಾರತದ 2ನೇ ಇನ್ನಿಂಗ್ಸ್’ನಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಮೊದಲ ವಿಕೆಟ್’ಗೆ ದ್ವಿಶತಕದ ಜೊತೆಯಾಟವಾಡಿ ಭಾರತದ ಐತಿಹಾಸಿಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
ಪರ್ತ್ ಟೆಸ್ಟ್’ನಲ್ಲಿ ಅತ್ಯುತ್ತಮ ಆಟವಾಡಿದ್ರೂ, ರಾಹುಲ್ ಅವರ ಆರಂಭಿಕನ ಸ್ಥಾನಕ್ಕೆ ಕುತ್ತು ಬಂದಿದೆ. ಕಾರಣ, ಮತ್ತದೇ ರೋಹಿತ್ ಶರ್ಮಾ. ಪ್ರಥಮ ಟೆಸ್ಟ್’ಗೆ ಅಲಭ್ಯರಾಗಿದ್ದ ರೋಹಿತ್ ಶರ್ಮಾ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ. ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ರೋಹಿತ್ ಆರಂಭಿಕನಾಗಿ ಆಡಲಿರುವ ಕಾರಣ ರಾಹುಲ್ ಬ್ಯಾಟಿಂಗ್ ಕ್ರಮಾಂಕ ಮತ್ತೆ ಬದಲಾಗಲಿದೆ.
3ನೇ ಕ್ರಮಾಂಕದಲ್ಲಿ ದೇವದತ್ತ್ ಪಡಿಕ್ಕಲ್ ವಿಫಲರಾಗಿರುವುದರಿಂದ ರಾಹುಲ್ ಆ ಕ್ರಮಾಂಕದಲ್ಲಿ ಆಡಲಿ ಎಂದು ಕ್ರಿಕೆಟ್ ವಿಶ್ಲೇಷಕರು ಹೇಳುತ್ತಿದ್ದಾರೆ. ಆದ್ರೆ 3ನೇ ಕ್ರಮಾಂಕದಲ್ಲಿ ಶುಭಮನ್ ಗಿಲ್ ವಾಪಸ್ಸಾಗಲಿರುವ ಕಾರಣ ರಾಹುಲ್ ಅವರಿಗೆ ಅಲ್ಲೂ ಜಾಗವಿಲ್ಲ. ಹೀಗಾಗಿ ಮತ್ತೆ 6ನೇ ಕ್ರಮಾಂಕವೇ ಗತಿ.
ರಾಹುಲ್ ಪರವಾಗಿ ಭಾರತ ತಂಡದ ಆಪದ್ಬಾಂಧವನೆಂದೇ ಖ್ಯಾತಿ ಪಡೆದಿದ್ದ ಚೇತೇಶ್ವರ್ ಪೂಜಾರ ಧ್ವನಿ ಎತ್ತಿದ್ದಾರೆ.
“ಬ್ಯಾಟಿಂಗ್’ಗೆ ಸವಾಲಾಗಿದ್ದ ಪರ್ತ್ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಓಪನರ್ ಆಗಿ ಯಶಸ್ವಿಯಾಗಿರುವುದರಿಂದ ಅಡಿಲೇಡ್ ಟೆಸ್ಟ್’ನಲ್ಲಿ ರಾಹುಲ್ ಆರಂಭಿಕನಾಗಿಯೇ ಆಡಬೇಕು. ತಪ್ಪಿದರೆ 3ನೇ ಕ್ರಮಾಂಕ. ಟಾಪ್-3ನಲ್ಲಿ ರಾಹುಲ್ ಆಡುವುದರಿಂದ ತಂಡಕ್ಕೆ ಲಾಭವಿದೆ. ಅಷ್ಟೇ ಅಲ್ಲ, ರಾಹುಲ್ ಆಟ ಅಗ್ರ ಕ್ರಮಾಂಕಕ್ಕೆ ಹೊಂದಾಣಿಕೆಯಾಗುತ್ತದೆ” ಅಂತ ಚೇತೇಶ್ವರ್ ಪೂಜಾರ ಹೇಳಿದ್ದಾರೆ.
ಹಾಗಾದರೆ ರಾಹುಲ್’ಗಾಗಿ ರೋಹಿತ್ ಶರ್ಮಾ ದೊಡ್ಡ ಮನಸ್ಸು ಮಾಡಲಿದ್ದಾರಾ..? ಆರಂಭಿಕನಾಗಿ ರಾಹುಲ್ ಯಶಸ್ವಿಯಾಗಿರುವ ಕಾರಣ ರೋಹಿತ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರಾ? ಗೊತ್ತಿಲ್ಲ. ಆದರೆ ತಾವು ನಿಸ್ವಾರ್ಥಿ ನಾಯಕ ಎಂಬುದನ್ನು ಸಾಬೀತು ಪಡಿಸಲು ರೋಹಿತ್ ಶರ್ಮಾ ಮುಂದೆ ಉತ್ತಮ ಅವಕಾಶ ಒದಗಿ ಬಂದಿದೆ. ರೋಹಿತ್ ಶರ್ಮಾಗೆ ತನ್ನ ವೈಯಕ್ತಿಕ ಹಿತಾಸಕ್ತಿಗಿಂತ ತಂಡದ ಹಿತಾಸಕ್ತಿಯೇ ದೊಡ್ಡದು ಎನ್ನುವುದಾದರೆ ಅವರು ರಾಹುಲ್’ಗೆ ತಮ್ಮ ಸ್ಥಾನವನ್ನು ತ್ಯಾಗ ಮಾಡಿ ಮಧ್ಯಮ ಕ್ರಮಾಂಕದಲ್ಲಿ ಆಡಲಿ ಎಂದು ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.