
ವಿಜಯ ಹಜಾರೆ ಟ್ರೋಫಿ 2025–26: ಕರ್ನಾಟಕ ತಂಡಕ್ಕೆ ಶ್ರೀಶ ಆಚಾರ್ – ಕರಾವಳಿ ಕ್ರಿಕೆಟ್‌ಗೆ ಹೆಮ್ಮೆ
ಬೆಂಗಳೂರು: ದೇಶದ ಪ್ರಮುಖ ಏಕದಿನ ಕ್ರಿಕೆಟ್ ಟೂರ್ನಿಯಾಗಿರುವ ಬಿಸಿಸಿಐ ವಿಜಯ ಹಜಾರೆ ಟ್ರೋಫಿ 2025–26 ಗೆ ಕರ್ನಾಟಕ ರಾಜ್ಯ ತಂಡವನ್ನು ಪ್ರಕಟಿಸಲಾಗಿದ್ದು, ಪ್ರತಿಭಾವಂತ ಸ್ಪಿನ್ ಬೌಲರ್ ಶ್ರೀಶ ಆಚಾರ್ ಅವರು ಆಯ್ಕೆಯಾಗಿರುವುದು ಕರಾವಳಿ ಹಾಗೂ ರಾಜ್ಯದ ಕ್ರಿಕೆಟ್ ವಲಯದಲ್ಲಿ ಸಂತಸ ಮೂಡಿಸಿದೆ.

ಕಠಿಣ ಪರಿಶ್ರಮ, ಶಿಸ್ತುಬದ್ಧ ಅಭ್ಯಾಸ ಹಾಗೂ ನಿರಂತರ ಉತ್ತಮ ಪ್ರದರ್ಶನದ ಫಲವಾಗಿ ಶ್ರೀಶ ಆಚಾರ್ ಗೆ ಈ ಮಹತ್ವದ ಅವಕಾಶ ಲಭಿಸಿದೆ. ರಾಜ್ಯ ಮಟ್ಟದ ಹಾಗೂ ವಿವಿಧ ಟೂರ್ನಿಗಳಲ್ಲಿ ತೋರಿದ ಗಮನಾರ್ಹ ಪ್ರದರ್ಶನವು ಆಯ್ಕೆ ಸಮಿತಿಯ ಗಮನ ಸೆಳೆದಿದ್ದು, ಇದೀಗ ಕರ್ನಾಟಕ ತಂಡದ ಜೆರ್ಸಿ ಧರಿಸಿ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಸಿದ್ಧರಾಗಿದ್ದಾರೆ.

ಕರ್ನಾಟಕ ತಂಡಕ್ಕೆ ಮಯಂಕ್ ಅಗರವಾಲ್ ನಾಯಕತ್ವ ವಹಿಸಿಕೊಂಡಿದ್ದು, ದೇವದತ್ತ ಪಡಿಕಲ್, ಕರೂಣ್ ನಾಯರ್, ಕೆ.ಎಲ್. ರಾಹುಲ್, ಪ್ರಸಿದ್ಧ ಕೃಷ್ಣ ಸೇರಿದಂತೆ ಅನುಭವಿ ಹಾಗೂ ಯುವ ಆಟಗಾರರ ಸಮತೋಲನದ ತಂಡ ರೂಪುಗೊಂಡಿದೆ. ಇಂತಹ ಬಲಿಷ್ಠ ತಂಡದಲ್ಲಿ ಶ್ರೀಶ ಆಚಾರ್ ರ ಸೇರ್ಪಡೆ ಬೌಲಿಂಗ್ ವಿಭಾಗಕ್ಕೆ ಇನ್ನಷ್ಟು ಬಲ ತುಂಬಲಿದೆ.

ಶ್ರೀಶ ಆಚಾರ್ ರ ಆಯ್ಕೆಗೆ ಅವರ ಕುಟುಂಬಸ್ಥರು, ಕೋಚ್‌ಗಳು, ಸ್ನೇಹಿತರು ಹಾಗೂ ಕ್ರಿಕೆಟ್ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಮುಂದಿನ ಪಂದ್ಯಗಳಲ್ಲಿ ಅವರು ಕರ್ನಾಟಕ ತಂಡಕ್ಕೆ ಮಹತ್ವದ ಕೊಡುಗೆ ನೀಡುವ ವಿಶ್ವಾಸವಿದೆ.
ರಾಜ್ಯದ ಕ್ರಿಕೆಟ್ ಕ್ಷೇತ್ರಕ್ಕೆ ಇದು ಹೆಮ್ಮೆಯ ಕ್ಷಣವಾಗಿದ್ದು, ಶ್ರೀಶ ಆಚಾರ್ ಅವರ ಅವರ ಮುಂದಿನ ಪಯಣಕ್ಕೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.




