
ಸೌತ್ ಆಫ್ರಿಕಾ ತಂಡಕ್ಕೆ ಮರೆಯಲಾಗದ ದಿನವಿದು..!
ಸೌತ್ ಆಫ್ರಿಕಾ ತಂಡಕ್ಕೆ ಮರೆಯಲಾಗದ ದಿನವಿದು. ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವಿದು.
ಇಪ್ಪತ್ತೇಳು ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ದೊರೆತ ಗೆಲುವಿದು. ಯಾವುದೇ ಗೆಲುವು ಕಾದು ಕಾದು ದೊರೆತರೆ, ಆ ಗೆಲುವಿನ ರುಚಿ ಬೇರೆಯೇ ತೆರನಾದ ಸಿಹಿಯನ್ನು ನೀಡುವಂತಹದ್ದು. ಸೌತ್ ಆಫ್ರಿಕಾ ಜನತೆ ಈ ಸಿಹಿಯನ್ನು ಸವಿಯಲೇ ಬೇಕು.
ಈ ಗೆಲುವನ್ನು ಕಾಣುವ ಮುಂಚೆ ಗೆಲುವಿನ ಹತ್ತಿರ ಬಂದು,ಅವರು ಸೋತ ಒಂದೊಂದು ಪಂದ್ಯವೂ ಅವರಿಗೆ ನೋವನ್ನೇ ಉಣಬಡಿಸಿದ್ದು.
ವರ್ಣಭೇದ ನೀತಿಯ ಕರಾಳತೆಗೆ ಸೌತ್ ಆಫ್ರಿಕಾ ಆಟಗಾರರು ತಮ್ಮ ಅಮೂಲ್ಯ 22 ವರ್ಷಗಳನ್ನು ಕಳೆದುಕೊಂಡು ನರಳಿದವರು. ಬಹಳಷ್ಟು ಮಂದಿ ದೇಶ ತೊರೆದು ವಿದೇಶಗಳಲ್ಲಿ ತಮ್ಮ ಕ್ರೀಡಾ ಭವಿಷ್ಯವನ್ನು ಕಂಡುಕೊಂಡರು. ಇಂದು ಕೂಡಾ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಸೌತ್ ಆಫ್ರಿಕಾ ಮೂಲದ ಆಟಗಾರರನ್ನು ನಾವು ಕಾಣಬಹುದು.
ಸೌತ್ ಆಫ್ರಿಕಾ 1991 ರಲ್ಲಿ ನಿಷೇಧ ಮುಕ್ತವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಮರಳಿ ಬರುವಾಗ ಆ ತಂಡವನ್ನು ಸ್ವಾಗತಿಸಿದ್ದು ಭಾರತ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪ್ರಥಮ ಪಂದ್ಯದಲ್ಲಿ ಅಜರುದ್ದೀನ್ ನಾಯಕತ್ವದ ಭಾರತ, ಕ್ಲೈವ್ ರೈಸ್ ನಾಯಕತ್ವದ ಸೌತ್ ಆಫ್ರಿಕಾ ತಂಡದ ವಿರುದ್ಧ ತಿಣುಕಾಡಿ ಮೂರು ವಿಕೆಟ್ ಗಳ ಗೆಲುವು ಪಡೆದಿತ್ತು. ಅಲೆನ್ ಡೋನಾಲ್ಡ್ ಎಂಬ ಮಿಂಚಿನ ವೇಗದ ಬೌಲರ್ 29 ರನ್ 5 ವಿಕೆಟ್ ಕಿತ್ತು ತನ್ನ ದೈತ್ಯ ಪ್ರತಿಭೆಯನ್ನು ವಿಶ್ವ ಕ್ರಿಕೆಟ್ ಗೆ ಪರಿಚಯಿಸಿದ ಪಂದ್ಯವದು. ಮೂರು ಪಂದ್ಯಗಳ ಸರಣಿಯನ್ನು ಭಾರತ ಗೆದ್ದರೂ ಕೂಡ ಡೆಲ್ಲಿಯಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಸೌತ್ ಆಫ್ರಿಕಾ ಭಾರತ ತಂಡವನ್ನು ನಿರಾಯಾಸವಾಗಿ ಮಣಿಸಿ ತನ್ನ ಆಗಮನವನ್ನು ವಿಶ್ವ ಕ್ರಿಕೆಟ್ ಗೆ ಸಾರಿ ಹೇಳಿತ್ತು.
ಅಲ್ಲಿಂದ ಮೊದಲ್ಗೊಂಡ ಸೌತ್ ಆಫ್ರಿಕಾದ ಕ್ರೀಡಾ ಜೈತ್ರಯಾತ್ರೆ ನಿಜಕ್ಕೂ ರೋಮಾಂಚನಕಾರಿ. ತನ್ನ ನೆಲದಲ್ಲಿ ಆಡಲು ಬಂದ ಎಲ್ಲಾ ತಂಡಗಳನ್ನು ಬಗ್ಗುಬಡಿಯುತ್ತಾ ಸಾಗಿದ ಸೌತ್ ಆಫ್ರಿಕಾ 1992 ರ ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಗೆ ಏರಿ ಬಂದಿತ್ತು.
ಪ್ರಾಯಶಃ ಅಲ್ಲಿಂದಲೇ ಪ್ರಾರಂಭಗೊಂಡದ್ದು ಈ ತಂಡದ ದುರಾದೃಷ್ಟ. ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ 13 ಎಸೆತಗಳಲ್ಲಿ 23 ಗಳಿಸುವ ಗುರಿ ಇರುವಾಗ ಮಳೆ ಬಂದು 1 ಎಸೆತದಲ್ಲಿ 22 ರನ್ ತೆಗೆಯುವ ಬದಲಾದ ಗುರಿಯನ್ನು ಎಲೆಕ್ಟ್ರಾನಿಕ್ ಸ್ಕೋರ್ ಬೋರ್ಡ್ ನಲ್ಲಿ ಕಂಡು ಮರುಗಿದವರು ಬರೀ ಸೌತ್ ಆಫ್ರಿಕಾ ತಂಡದ ಸಮರ್ಥಕರು ಮಾತ್ರ ಆಗಿರಲಿಲ್ಲ, ವಿಶ್ವದಾದ್ಯಂತ ಕ್ರೀಡಾಭಿಮಾನಿಗಳು ಈ ತಂಡದ ದುರಾದೃಷ್ಟಕ್ಕೆ ಕನಿಕರ ಸೂಚಿಸಿದ್ದರು.
ಅದರ ನಂತರ 1993 ಭಾರತದಲ್ಲಿ ನಡೆದ ಹೀರೋ ಕಪ್ ಸೆಮಿಫೈನಲ್. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಭಾರತದ ವಿರುದ್ಧ ನಡೆದ ಆ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡದ ವಿಜಯಕ್ಕೆ ಬೇಕಿದ್ದದ್ದು 6 ಎಸೆತಗಳಲ್ಲಿ ಆರು ರನ್. ಕ್ರೀಸ್ ನಲ್ಲಿ ಇದ್ದದ್ದು ಆ ಕಾಲದ ದೈತ್ಯ ಆಲ್ರೌಂಡರ್ ಮೆಕ್ ಮಿಲನ್ ಮತ್ತು ವಿಕೆಟ್ ಕೀಪರ್ ರಿಚರ್ಡ್ ಸನ್.
ಸಚಿನ್ ತೆಂಡೂಲ್ಕರ್ ಎಸೆದ ಆ ಕೊನೆಯ ಓವರ್ ನಲ್ಲಿ ಸೌತ್ ಆಫ್ರಿಕಾ ಗಳಿಸಿದ್ದು ಕೇವಲ ಎರಡು ರನ್ ಮಾತ್ರ. ಭಾರತ ಜಯದ ಕೇಕೆ ಹಾಕುತ್ತಾ ಫೈನಲ್ ತಲುಪಿ ಫೈನಲ್ ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಹೀನಾಯವಾಗಿ ಸೋಲಿಸಿ ಹೀರೋ ಕಪ್ ಅನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಹೀಗೆ ಸತತ ಎರಡು ವರ್ಷಗಳಲ್ಲಿ ಎರಡು ದೊಡ್ಡ ಪಂದ್ಯಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸಿದರೂ ಗೆಲುವು ಮರೀಚಿಕೆಯಾಗಿಯೇ ಉಳಿಯಿತು.
ಅದರ ನಂತರ ಮತ್ತೊಂದು ಮರೆಯಲಾಗದ ಸೋಲು 1999 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಸೋಲು. ಬಹುಶಃ ಜೂನ್ 17 1999 ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಈ ಪಂದ್ಯದ ಸೋಲು ಕೊಟ್ಟಷ್ಟು ನೋವನ್ನು ಆ ತಂಡದ ಆಟಗಾರರಿಗೆ ಉಳಿದ ಯಾವ ಪಂದ್ಯದ ಸೋಲು ಕೊಟ್ಟಿರಲಾರದು.
ಆಸ್ಟ್ರೇಲಿಯಾದ 213 ಮೊತ್ತವನ್ನು ಬೆನ್ನಟ್ಟಿದ ಆಫ್ರಿಕಾ ಕೊನೆಯ ಓವರಿನಲ್ಲಿ ಗೆಲ್ಲಲು ಒಂಬತ್ತು ರನ್ ಗಳಿಸಬೇಕಿತ್ತು. ಕೊನೆಯ ಜೋಡಿ ಅಂಕಣದಲ್ಲಿ. ಲ್ಯಾನ್ಸ್ ಕ್ಲೂಸ್ನರ್ ಎಂಬ ಆಫ್ರಿಕಾ ತಂಡ ಕಂಡ ಅದ್ಭುತ ಆಲ್ರೌಂಡರ್ ಆಸ್ಟ್ರೇಲಿಯಾ ತಂಡದ ಫ್ಲೆಮಿಂಗ್ ಎಸೆದ ಮೊದಲ ಎರಡು ಎಸೆತಗಳಲ್ಲಿ ಎರಡು ಬೌಂಡರಿ ದಾಖಲಿಸಿ ಇನ್ನೇನು ವಿಜಯದ ರನ್ ಗಳಿಸುವುದಸ್ಟೇ ಬಾಕಿ ಇತ್ತು. ನಾಲ್ಕು ಎಸೆತ ಬೇರೆ ಬಾಕಿ ಇತ್ತು. ಮುಂದಿನ ಎಸೆತ ಡಾಟ್ ಬಾಲ್.ನಂತರದ ಎಸೆತದಲ್ಲಿ ಇಲ್ಲದ ರನ್ ತೆಗೆಯುವ ತವಕದಲ್ಲಿ ಓಟಕ್ಕೆ ಮನ ಮಾಡಿದ ಕ್ಲೂಸ್ನರ್ ಮತ್ತೊಂದು ತುದಿಯಲ್ಲಿ ಅಲೆನ್ ಡೋನಾಲ್ಡ್ ರನ್ ಔಟ್ ಆಗುವುದನ್ನು ಕಾಣಬೇಕಾಯಿತು. ಪಂದ್ಯ ಟೈನಲ್ಲಿ ಅಂತ್ಯ. ಈಗಿನ ಹಾಗೆ ಸೂಪರ್ ಓವರ್ ಆಗ ಇರಲಿಲ್ಲ. ಲೀಗ್ ಹಂತದಲ್ಲಿ ಅತೀ ಹೆಚ್ಚು ಪಂದ್ಯ ಗೆದ್ದ ಸ್ಟೀವ್ ವ್ಹಾ ನಾಯಕತ್ವದ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿ ಫೈನಲ್ ನಲ್ಲಿ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿ ವಿಶ್ವ ಕಪ್ ಗೆದ್ದು ಬೀಗಿತು. ಅಂದು ಸೌತ್ ಆಫ್ರಿಕಾ ತಂಡದ ಪರವಾಗಿ ಕಣ್ಣೀರು ಹಾಕಿದವರು ಕೋಟ್ಯಂತರ ಮಂದಿ.
ಅದರ ನಂತರ 2015 ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್. ಎ ಬಿ ಡಿವಿಲಿಯರ್ಸ್ ನಾಯಕತ್ವದ ಸೌತ್ ಆಫ್ರಿಕಾ ತಂಡ ಮತ್ತೆ ಸೆಮಿಫೈನಲ್ ಗೆ ಲಗ್ಗೆ ಇಟ್ಟಿತ್ತು. ಈ ಬಾರಿಯ ಎದುರಾಳಿ ಮೆಕಲಂ ನಾಯಕತ್ವದ ನ್ಯೂಜಿಲೆಂಡ್. ಮತ್ತದೇ ರೋಚಕತೆ. ಡೇಲ್ ಸ್ಟೇನ್ ಎಸೆದ ಕೊನೆಯ ಓವರನ ಕೊನೆಯ ಎರಡು ಚೆಂಡುಗಳಲ್ಲಿ ನ್ಯೂಜಿಲೆಂಡ್ ಗೆ ಐದು ರನ್ ಬೇಕಿತ್ತು. ನ್ಯೂಜಿಲೆಂಡ್ ತಂಡದ ಗ್ರಾಂಟ್ ಎಲಿಯಟ್ ಐದನೇ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ನ್ಯೂಜಿಲೆಂಡ್ ಗೆ ರೋಚಕ ಗೆಲುವು ದೊರಕಿಸಿ ಕೊಟ್ಟರು. ಟೂರ್ನಮೆಂಟ್ ಉದ್ದಕ್ಕೂ ದಿಟ್ಟ ಪ್ರದರ್ಶನ ನೀಡುತ್ತಾ ಬಂದಿದ್ದ ಸೌತ್ ಆಫ್ರಿಕಾ ಎಂದಿನಂತೆ ಮತ್ತೆ ಸೆಮಿಫೈನಲ್ ನಲ್ಲಿ ಸೋತು ನಿರಾಸೆಯ ಕಡಲಲ್ಲಿ ಮುಳುಗಿ ಹೋಯಿತು.
ಇನ್ನೂ ಕಳೆದ ವರ್ಷ ಜೂನ್ ನಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯ. ಬಾರ್ಬಡೋಸ್ ನ ಕೆನ್ಸಿಂಗ್ ಟನ್ ಓವಲ್ ನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಇದೇ ಮಕ್ರಾಮ್ ನಾಯಕತ್ವದ ಸೌತ್ ಆಫ್ರಿಕಾ ತಂಡಕ್ಕೆ ಗೆಲುವಿಗೆ ಬೇಕಿದ್ದದ್ದು 24 ಎಸೆತಗಳಲ್ಲಿ 26 ರನ್. ಕ್ರೀಸ್ ನಲ್ಲಿ ಇದ್ದದ್ದು ಈ ಕಾಲಘಟ್ಟದ ಅಗ್ರಮಾನ್ಯ ಟಿ ಟ್ವೆಂಟಿ ಆಟಗಾರರಾದ ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್. ಬೂಮ್ರಾ ಮತ್ತು ಅರ್ಶ ದೀಪ್ ಸಿಂಗ್ ರ ದಾಳಿಗೆ ನಲುಗಿ ಸೌತ್ ಆಫ್ರಿಕಾ ಏಳು ರನ್ ಗಳಿಂದ ಭಾರತಕ್ಕೆ ಶರಣಾಯಿತು.
ಹೀಗೆ ಐಸಿಸಿ ಪಂದ್ಯಕೂಟದಲ್ಲಿ ಆರಂಭಿಕ ಹಂತದಲ್ಲಿ ಅಬ್ಬರಿಸಿ ನಿರ್ಣಾಯಕ ಹಂತದಲ್ಲಿ ಸತತವಾಗಿ ಮುಗ್ಗರಿಸುತ್ತಾ ಬಂದ ಸೌತ್ ಆಫ್ರಿಕಾ ತಂಡಕ್ಕೆ ಈ ಗೆಲುವು ಬೇಕಿತ್ತು. ಚೋಕರ್ಸ್ ಎಂಬ ಹಣೆಪಟ್ಟಿಯಿಂದ ಹೊರಬರಲು ಈ ಗೆಲುವು ಅಗತ್ಯವಾಗಿತ್ತು. ಜಾಕ್ ಕಾಲಿಸ್, ಗ್ರೇಂ ಸ್ಮಿತ್, ಹ್ಯಾನ್ಸಿ ಕ್ರೋನಿಯೆ, ಹರ್ಷಲ್ ಗಿಬ್ಸ್, ಜಾಂಟಿ ರೋಡ್ಸ್,ಅಲೆನ್ ಡೋನಾಲ್ಡ್, ಮಖಾಯ ಎಂಟಿನಿ, ಡೇಲ್ ಸ್ಟೇನ್,ಎಬಿ ಡಿವಿಲಿಯರ್ಸ್, ಅಂತಹ ಮಹಾನ್ ಕ್ರಿಕೆಟಿಗರನ್ನು ವಿಶ್ವ ಕ್ರಿಕೆಟ್ ಗೆ ಪರಿಚಯಿಸಿದ ಸೌತ್ ಆಫ್ರಿಕಾ ಎಂಬ ಕ್ರೀಡಾ ಸ್ಫೂರ್ತಿಯ ದೇಶಕ್ಕೆ ಈ ಗೆಲುವು ಬೇಕಿತ್ತು.
ಅಭಿನಂದನೆಗಳು ಟೆಂಬಾ ಬವುಮಾ ಮತ್ತವರ ತಂಡಕ್ಕೆ.
ಡಾ.ಜಗದೀಶ್ ಶೆಟ್ಟಿ ಸಿದ್ಧಾಪುರ