
ಅವನ ಎತ್ತರವನ್ನು ನೋಡಿ ನಕ್ಕರು..!
ಅವನ ರೂಪವನ್ನು ನೋಡಿ ಹೀಯಾಳಿಸಿದರು..!
ಅವನ ಬಣ್ಣವನ್ನು ನೋಡಿ ಲೇವಡಿ ಮಾಡಿದರು..!
ಅವನನ್ನು ಕೋಟಾ ಆಟಗಾರನೆಂದರು ಕರೆದರು..!
ಅವರು ನಿಂದಿಸಿದರು.. ಹಂಗಿಸಿದರು.. ಮೂದಲಿಸಿದರು.. ಅವಮಾನ ಮಾಡಿದರು..
ಅವನೇ ಇವತ್ತು ದಕ್ಷಿಣ ಆಫ್ರಿಕಾಗೆ 27 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದು ಕೊಟ್ಟ..
ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನ.. ಆಸ್ಟ್ರೇಲಿಯಾ ಎಂಬ ದೈತ್ಯ ಎದುರಾಳಿ.. ಪ್ರಥಮ ಇನ್ನಿಂಗ್ಸ್’ನಲ್ಲಿ 138 ರನ್ನಿಗೆ ಆಲೌಟಾಗಿದ್ದ ತಂಡ.. ಮೊದಲೆರಡೂ ದಿನ ಒಟ್ಟು 28 ವಿಕೆಟ್’ಗಳ ಪತನಕ್ಕೆ ಸಾಕ್ಷಿಯಾಗಿದ್ದ ಪಂದ್ಯ. ನಾಲ್ಕನೇ ಇನ್ನಿಂಗ್ಸ್’ನಲ್ಲಿ 282 ರನ್’ಗಳ ಗುರಿಯನ್ನು ಬೆನ್ನತ್ತಿ ಗೆಲ್ಲುವುದೆಂದರೆ..? ಅದೂ ಆಸ್ಟ್ರೇಲಿಯಾದ ಬೆಂಕಿ ಬೌಲರ್’ಗಳ ವಿರುದ್ಧ..
ಆತ್ಮಸ್ಥೈರ್ಯದ ಮುಂದೆ ಅಸಾಧ್ಯ ಎಂಬ ಮಾತೇ ಇಲ್ಲ.. ಒಬ್ಬ ಆರಡಿ ದೈತ್ಯ ಏಡನ್ ಮಾರ್ಕ್’ರಮ್.. ಇನ್ನೊಬ್ಬ ಕುಬ್ಜ ದೇಹಿ ತೆಂಬಾ ಬವುಮ. ಇಬ್ಬರೂ ಸೇರಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಚರಿತ್ರೆಯನ್ನೇ ಬರೆದು ಬಿಟ್ಟರು.
ಆಸ್ಟ್ರೇಲಿಯಾದ ಘಾತಕ ವೇಗಿಗಳು ಬೆಂಕಿ ಚೆಂಡುಗಳನ್ನೇ ಉಗುಳುತ್ತಿದ್ದಾಗ 147 ರನ್’ಗಳ ಅದ್ಭುತ ಜೊತೆಯಾಟ. 1999ರ ವಿಶ್ವಕಪ್’ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ವ್ಹಾ ನೀಡಿದ ಅತ್ಯಂತ ಸುಲಭದ ಕ್ಯಾಚನ್ನು ಹರ್ಷಲ್ ಗಿಬ್ಸ್ ಕೈಚೆಲ್ಲಿದ್ದ. ಆಗ ಸ್ಟೀವ್ ವ್ಹಾ ಒಂದು ಮಾತು ಹೇಳಿದ್ದ. ‘‘ನೀನೀಗ ಕೈಚೆಲ್ಲಿದ್ದು ಚೆಂಡನ್ನಲ್ಲ, ವಿಶ್ವಕಪ್ ಟ್ರೋಫಿಯನ್ನು’’ ಎಂದು. ಆ ಮಾತು ಅಕ್ಷರಶಃ ಸತ್ಯವಾಗಿತ್ತು.
ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಗೆಲ್ಲಲು 282 ರನ್’ಗಳ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ, ದೈತ್ಯ ಆಸ್ಟ್ರೇಲಿಯಾವನ್ನು ಮೆಟ್ಟಿ ನಿಂತು ಗೆಲ್ಲಲಿದೆ ಎಂಬ ನಂಬಿಕೆ ಅದೆಷ್ಟು ಮಂದಿಗಿತ್ತು..? 25 ವರ್ಷಗಳಿಂದ ನಿರಂತರವಾಗಿ ಐಸಿಸಿ ಟೂರ್ನಿಗಳ ನಾಕೌಟ್ ಹಂತಗಳಲ್ಲಿ ಸೋತು ಸೋತು ‘ಚೋಕರ್ಸ್’ ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿದ್ದ ತಂಡ.
ತೆಂಬಾ ಬವುಮ ಕ್ರೀಸ್’ಗಿಳಿಯುವ ಹೊತ್ತಿಗೆ 70 ರನ್ನಿಗೆ 2 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಸೋಲು-ಗೆಲುವಿನ ಹಾವು ಏಣಿ ಆಟದಲ್ಲಿತ್ತು. ಆಟಕ್ಕಿಳಿದ ಬವುಮ 2 ರನ್ ಗಳಿಸಿದ್ದ ಅಷ್ಟೇ… ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ನುಗ್ಗಿ ಬಂದ ಚೆಂಡು ಬವುಮಾ ಬ್ಯಾಟ್’ಗೆ ಮುತ್ತಿಕ್ಕಿ ಸ್ಲಿಪ್’ನತ್ತ ಚಿಮ್ಮಿತು. ಕೈಗೆ ಬಂದ ಕ್ಯಾಚನ್ನು ನೆಲಕ್ಕೆ ಹಾಕಿ ಬಿಟ್ಟ ಆಸ್ಟ್ರೇಲಿಯಾದ ಆಧುನಿಕ ದಿಗ್ಗಜ ಸ್ಟೀವ್ ಸ್ಮಿತ್. ಹೌದು.. ಸ್ಮಿತ್ ಕೈಚೆಲ್ಲಿದ್ದು ಚೆಂಡನ್ನಲ್ಲ, ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಟ್ರೋಫಿಯನ್ನ.
ಅಲ್ಲಿಂದ ಮುಂದೆ ನಡೆದದ್ದು ಇತಿಹಾಸ.. ಏಡನ್ ಮಾರ್ಕ್’ರಮ್ ಜೊತೆ ಸೇರಿ ಕ್ರಿಕೆಟ್ ಜಗತ್ತು ಸದಾ ನೆನಪಿನಲ್ಲಿಡುವಂತಹ ಜೊತೆಯಾಟವಾಡಿದ ಬುವುಮ. ಕಾಲಿನ ಸ್ನಾಯು ಸೆಳೆತದ ಮಧ್ಯೆಯೂ ಈ ಕುಬ್ಜ ಕ್ರಿಕೆಟಿಗ ತೋರಿದ ಹೋರಾಟ ನಿಜಕ್ಕೂ ಮೆಚ್ಚುವಂಥದ್ದು. 66 ರನ್ ಗಳಿಸಿ ಔಟಾಗುವ ಹೊತ್ತಿಗೆ ದಕ್ಷಿಣ ಆಫ್ರಿಕಾ ತಂಡ ಬಹುತೇಕ ಗೆಲುವಿನ ಹೊಸ್ತಿಲಲ್ಲಿ ಬಂದು ನಿಂತಿತ್ತು. ಮುಂದಿನದ್ದನ್ನು ನೋಡಿಕೊಳ್ಳಲು ಶತಕವೀರ ಮಾರ್ಕ್’ರಮ್ ಇದ್ದನಲ್ಲ..
ಈ ಏಡನ್ ಮಾರ್ಕ್’ರಮ್ ಬಗ್ಗೆ ಒಂದೆರಡು ಮಾತುಗಳನ್ನು ಹೇಳದಿದ್ದರೆ ಅದು ಖಂಡಿತಾ ಅಪರಾಧವಾದೀತು. ಕಾರಣ, ದಕ್ಷಿಣ ಆಫ್ರಿಕಾದ ಈ ಸ್ಮರಣೀಯ ಗೆಲುವಿನ ವಿಜಯಶಿಲ್ಪಿ ಅವನೇ ಅಲ್ಲವೇ.
ದೈತ್ಯ ದೇಹಿ ಏಡನ್ ಮಾರ್ಕ್’ರಮ್ ಆಟದಲ್ಲೂ ದೈತ್ಯ ಪ್ರತಿಭೆ.
2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡುತ್ತಿದ್ದಾಗ ಮಾರ್ಕ್’ರಮ್ ಆಟವನ್ನು ನೋಡಿದ್ದ ವಿರಾಟ್ ಕೊಹ್ಲಿ “Aiden Markram is a delight to watch’’ ಎಂದು ಬರೆದಿದ್ದ. ವಿರಾಟ್ ಕೊಹ್ಲಿಯ ಅವತ್ತು ಹಾಗೇಕೆ ಹೇಳಿದ ಎಂಬ ಪ್ರಶ್ನೆಗೆ ಈಗ ಕ್ರಿಕೆಟ್ ಕಾಶಿಯಲ್ಲೇ ಉತ್ತರ ಕೊಟ್ಟಿದ್ದಾನೆ ಈ ಹರಿಣಪಡೆಯ ಹಮ್ಮೀರ.
2014ರಲ್ಲಿ ದಕ್ಷಿಣ ಆಫ್ರಿಕಾಗೆ ಅಂಡರ್-19 ವಿಶ್ವಕಪ್ ಗೆದ್ದು ಕೊಟ್ಟಿದ್ದ ಮಾರ್ಕ್’ರಮ್, ಈಗ ತನ್ನ ಕ್ರಿಕೆಟ್ ಬದುಕಿನಲ್ಲೇ ಶ್ರೇಷ್ಠ ಶತಕವೊಂದನ್ನು ಬಾರಿಸಿ ಐಸಿಸಿ ಟ್ರೋಫಿಗಳಿಲ್ಲದೆ ಬಸವಳಿದಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್’ಗೆ ಟೆಸ್ಟ್ ವಿಶ್ವಕಪ್ ಗೆದ್ದು ಕೊಟ್ಟಿದ್ದಾನೆ.
ಮಾರ್ಕ್’ರಮ್’ಗೆ ಬವುಮ ಹೆಗಲು ಕೊಡದೇ ಇದ್ದಿದ್ದರೆ ಈ ಲಾರ್ಡ್ಸ್ ಚರಿತ್ರೆ ಸಾಧ್ಯವಾಗುತ್ತಿರಲಿಲ್ಲ.
ಮಾರ್ಕ್’ರಮ್ ಜೊತೆ ಐತಿಹಾಸಿಕ ಜೊತೆಯಾಟವಾಡಿದ ತೆಂಬಾ, ಬವುಮ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದವನು . ತೆಂಬಾ ಎಂದರೆ ಆ ಬುಡಕಟ್ಟು ಭಾಷೆಯಲ್ಲಿ ‘ಭರವಸೆ’ ಎಂದರ್ಥ.
ಸೋತು ಸೋತು ಭರವಸೆಯನ್ನೇ ಕಳೆದುಕೊಂಡಿದ್ದ ತಂಡಕ್ಕೆ ತನ್ನ ಸಮರ್ಥ ನಾಯಕತ್ವ, ಆಟದ ಮೂಲಕ ಭರವಸೆಯಾಗಿದ್ದಾನೆ ಬವುಮ. ಕ್ರಿಕೆಟ್ ವಿಶ್ವಕಪ್’ಗಳಲ್ಲಿ ಸತತವಾಗಿ ಸೆಮಿಫೈನಲ್, ಫೈನಲ್ ತಲುಪಿ ನಿರ್ಣಾಯಕ ಘಟ್ಟಗಳಲ್ಲಿ ಸೋತು ತಲೆ ತಗ್ಗಿಸು ಕಣ್ಣೀರು ಹಾಕುತ್ತಿದ್ದವರು ಇವತ್ತು ತಲೆ ಎತ್ತಿ ಸಂಭ್ರಮಿಸುತ್ತಿದ್ದಾರೆ.
ಶಾನ್ ಪೊಲಾಕ್, ಗ್ರೇಮ್ ಸ್ಮಿತ್, ಎಬಿ ಡಿವಿಲಿಯರ್ಸ್’ರಂತಹ ದಿಗ್ಗಜರಿಗೆ ಸಾಧ್ಯವಾಗದ್ದನ್ನು ಮಾಡಿ ತೋರಿಸಿದ ತೆಂಬಾ ಬವುಮ ದಕ್ಷಿಣ ಆಫ್ರಿಕಾ ಕ್ರಿಕೆಟ್’ನ ಕಣ್ಣೀರ ಚರಿತ್ರೆಗೆ ಅಂತ್ಯ ಹಾಡಿದ್ದಾನೆ.
– ಸುದರ್ಶನ್