Categories
Action Replay ಸ್ಪೋರ್ಟ್ಸ್

ಪ್ರಸಿದ್ಧ ಹಾಳುಕೋಟೆ ಮೈದಾನ ಕ್ರೀಡಾಂಗಣವಾಗಬೇಕು ಎಂಬ ಹಳೆಯ ಕನಸೊಂದು ನನಸಾಗಬೇಕು….

ಸ್ಪೋರ್ಟ್ಸ್‌ಕನ್ನಡ ಡಾಟ್ ಕಾಮ್ ಸುದ್ಧಿ

      ವಿಶೇಷ ವರದಿ : ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಾಳುಕೋಟೆ ಮೈದಾನ ಎಂಬುದು ಕ್ರೀಡಾ ಪ್ರೇಮಿಗಳಿಗಂತೂ ಚಿರಪರಿಚಿತವಾಗಿ ಬಿಟ್ಟಿದೆ. ನಮ್ಮೂರಿನ ಹಲವಾರು ಸಂಘ ಸಂಸ್ಥೆಗಳ ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮದ ಸುಂದರ ನೆನಪುಗಳು ಮಾಸಿಹೊಗದಂತೆ ಹಾಳುಕೋಟೆ ಮೈದಾನವು ತನ್ನಲ್ಲಿ ಸಾಕ್ಷೀಕರಿಸಿಕೊಂಡಿದೆ. ಅಂತಹ ನೆನಪುಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ನ ಸವಿನೆನಪುಗಳಿಗೆ ಇಲ್ಲಿ ಸಿಂಹಪಾಲಿದೆ.

        ಟೆನಿಸ್ ಬಾಲ್ ಕ್ರಿಕೆಟ್ ಗೆ ಯೋಗ್ಯವೆನಿಸಿದ ಅಂಗಣಗಳ ಸಾಲಿನಲ್ಲಿ ಹಾಳುಕೋಟೆ ಮೈದಾನವು ಒಂದಾಗಿ ಹಲವು ದಶಕಗಳ ಹಿಂದೆಯೇ ತನ್ನ ಹೆಸರನ್ನು ಆ ಸಾಲಿನಲ್ಲಿ ನೊಂದಾಯಿಸಿಕೊಂಡಿದೆ. ಆರು ಬಾರಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದ ಚೆಲುವನ್ನು, ಹಾಗೂ ಹಲವು ಜಿಲ್ಲಾ ಮಟ್ಟದ ಹಾಗೂ ಸ್ಥಳೀಯ ಕ್ರಿಕೆಟ್ ಪಂದ್ಯಾಟಗಳ ಸೊಬಗನ್ನು ತನ್ನದಾಗಿಸಿಕೊಂಡ ಹೆಗ್ಗಳಿಕೆ ಈ ಮೈದಾನಕ್ಕಿದೆ. ಕರಾವಳಿ ಭಾಗದ ಹಲವು ಪ್ರತಿಷ್ಠಿತ ಸಂಸ್ಥೆಗಳು ಯಶಸ್ವಿ ಪಂದ್ಯಾಕೂಟವನ್ನು ಇಲ್ಲಿ ನಡೆಸಿ ಪ್ರಸಿದ್ಧಿಯನ್ನು ಪಡೆದಿದೆ. ಇಂದು ರಾಷ್ಟ್ರಮಟ್ಟದ ಶ್ರೇಷ್ಠ ಕ್ರಿಕೇಟಿಗರಾಗಿ ಹೆಸರುವಾಸಿಯಾದ ಹಲವರ ಬೆಳವಣಿಗೆ ಈ ಅಂಗಣ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಅಭಿವೃದ್ಧಿಯ ನೆಪವಾಗಿ ಗಿಜಿಗುಡುವ ಬಹುಮಹಡಿ ಕಟ್ಟಡಗಳಿಂದಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡ ಕೆಲವು ಮೈದಾನಗಳ ಇವತ್ತಿನ ಪರಿಸ್ಥಿತಿಯನ್ನು ಗಮನಿಸಿದರೆ ಹಾಳುಕೋಟೆ ಮೈದಾನ ತನ್ನ ಹಿಂದಿನ ಕಳೆಯನ್ನು ಇನ್ನೂ ಹಾಗೆಯೇ ಉಳಿಸಿಕೊಂಡಿದೆ. ಇವತ್ತಿಗೂ ಈ ಮೈದಾನದಲ್ಲಿ ಹಲವು ವ್ಯವಸ್ಥಿತ ಪಂದ್ಯಾಟಗಳು ಆಯೋಜನೆಗೊಳ್ಳುತ್ತಿವೆ. ಇಂತಹ ಸುಂದರ ಕ್ಷಣವನ್ನು ಕಾಣುವ ಹಿರಿಯ ಕ್ರಿಕೇಟಿಗನೊಬ್ಬ ತಾನಾಡಿದ ಪಂದ್ಯಾಟದ ನೆನಪಿನಲ್ಲಿ ಖುಷಿಪಡುತ್ತಾನೆ, ಅದೇ ಯುವ ಕ್ರಿಕೇಟಿಗ ತಾನು ಇಲ್ಲೊಂದು ಪಂದ್ಯಾಟವನ್ನು ಆಡಬೇಕು ಎಂದು ಕನಸು ಕಾಣುತ್ತಾನೆ.

ಅದೇ ಒಬ್ಬ ಕ್ರಿಕೆಟ್ ಅಭಿಮಾನಿ ತಾನು ಪ್ರೇಕ್ಷಕನಾಗಿ ಕಂಡ ರೋಚಕ ಪಂದ್ಯಾಟದ ನೆನಪಿನಲ್ಲಿ ಮತ್ತೆ ರೋಮಾಂಚನಗೊಳ್ಳುತ್ತಾನೆ. ಈ ಮೈದಾನವೊಂದು ಸುಸಜ್ಜಿತವಾದ ಕ್ರೀಡಾಂಗಣವಾಗಬೇಕು ಎಂಬ ಮಾತು ಇಂದು ನಿನ್ನೆಯದಲ್ಲ. ಇಲ್ಲಿ ನಡೆಯುವ ಪ್ರತಿ ಪಂದ್ಯಾಕೂಟದ ಸಭೆಯಲ್ಲಿ ಈ ಕನಸೊಂದು ಬಿತ್ತರಗೊಂಡು ಮತ್ತೆ ಮೌನವಾಗಿ ಬಿಡುತ್ತಿತ್ತು.

     ಇಂತಹ ಶ್ರೇಷ್ಠ ದಂತಕಥೆಗಳ ಆಗರವಾಗಿರುವ ನಮ್ಮೂರ ಹಾಳುಕೋಟೆ ಮೈದಾನವನ್ನು ಮುಂದೆಯೂ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ “ಹಾಳುಕೋಟೆ ಮೈದಾನ ಉಳಿಸಿ ಹೋರಾಟ ಸಮಿತಿ ” ಎಂಬ ಸಮಾನ ಮನಸ್ಕ ಸಂಘಟನೆಯೊಂದು ಕಾರ್ಯಪೃವೃತ್ತರಾಗಿದೆ.

ಹಲವು ಪ್ರತಿಭೆಗಳನ್ನು ಬೆಳೆಸಿದ, ಬೆಳೆಸುತ್ತಿರುವ ಹಾಳುಕೋಟೆ ಮೈದಾನ ಸುಸಜ್ಜಿತ ಕ್ರಿಡಾಂಗಣವಾಗಿ ಮಾರ್ಪಾಡುಗೊಳ್ಳುವ ಎಲ್ಲಾ ಅವಕಾಶಗಳನ್ನು, ಅರ್ಹತೆಗಳನ್ನು ತನ್ನಲ್ಲಿ ಹಾಗೇಯೇ ಉಳಿಸಿಕೊಂಡಿದೆ ಎಂಬ ವಿಚಾರವನ್ನು ಮತ್ತೆ ನೆನಪಿಸುತ್ತ ಆ ಮೈದಾನವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕು ಎಂಬ ದೆಸೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವುದರ ಮೂಲಕ ಮೈದಾನದ ಅಭಿವೃದ್ಧಿಯ ಕನಸನ್ನು ವ್ಯಕ್ತಪಡಿಸಿದ ಇವರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದದ್ದು.

ಇಂತಹ ಅರ್ಥಪೂರ್ಣ ಅಭಿಯಾನಕ್ಕೆ ಇನ್ನಷ್ಟು ಹಲವು ಮನಗಳ ಬೆಂಬಲವು ಬಲವಾಗಿ ಮಾದರಿ ಕ್ರೀಡಾಂಗಣವೊಂದು ಜನ್ಮತಳೆಯೂವುದರೊಂದಿಗೆ ಹಲವು ವರುಷಗಳ ಭರವಸೆಯ ಕನಸ್ಸೊಂದು ನೆರವೇರಲಿ ಎಂಬ ಸದಾಶಯ ನಮ್ಮದು..

ವರದಿ : ಮಂಜುನಾಥ್ ಕಾರ್ತಟ್ಟು

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

four × 5 =