ಉಡುಪಿ-ನಿಶ್ಚಿತ್ ಪೈ ಕೇವಲ 19 ವರ್ಷ ವಯಸ್ಸಿನವರಾಗಿದ್ದಾರೆ ಮತ್ತು ಅವರು ಕರ್ನಾಟಕ ಕಿರಿಯರ ಕ್ರಿಕೆಟ್ ತಂಡದಲ್ಲಿ ಆಡುವ ಕನಸು ಹೊಂದಿದ್ದಾರೆ. ಇವತ್ತು ಅವರು ತಮ್ಮ ಕನಸುಗಳಿಂದ ದೂರವಿಲ್ಲ, ಏಕೆಂದರೆ ಅವರು U-19 ಕ್ರಿಕೆಟ್ ತಂಡಕ್ಕೆ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ನಿಶ್ಚಿತ್ ಪೈ ಅವರು 2023-24 ಸಾಲಿನ ವಿನೂ ಮಂಕಡ್ ಟ್ರೋಫಿ ಪಂದ್ಯಗಳನ್ನು ಆಡುವ ಕರ್ನಾಟಕ U-19 ತಂಡಕ್ಕೆ ಆಯ್ಕೆಯಾಗಿದ್ದಾರೆ. 19 ವರ್ಷದೊಳಗಿನವರ ಪಂದ್ಯಾವಳಿಯು ಹೈದರಾಬಾದ್‌ನಲ್ಲಿ ಅಕ್ಟೋಬರ್ 12 ರಿಂದ 20 ರವರೆಗೆ ನಡೆಯಲಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಬಿಸಿಸಿಐ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಜರಗಿದ 19 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್ ಪಂದ್ಯಾಟದ ಆಯ್ಕೆ ಪ್ರಕ್ರಿಯೆಯಲ್ಲಿ ತೋರಿದ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಉಡುಪಿಯ ಪ್ರತಿಭಾನ್ವಿತ ಕ್ರಿಕೆಟಿಗರಾದ ನಿಶ್ಚಿತ್ ಪೈ ಇವರನ್ನು ಕರ್ನಾಟಕದ ಸಂಭಾವ್ಯ ತಂಡಕ್ಕೆ ಆಯ್ಕೆ ಮಾಡಲಾಗಿದೆ.. ನಿಶ್ಚಿತ್ ಪೈ ಇವರು ಸ್ನೇಹ ಕಾಲೇಜು ಉಡುಪಿಯ ಹಳೆ ವಿದ್ಯಾರ್ಥಿಯಾಗಿದ್ದು ಉಡುಪಿಯ ನಾಗರಾಜ ಪೈ – ಉಜ್ವಲ್ ಕಿರಣ್ ದಂಪತಿಯ ಪುತ್ರ. ಪ್ರಸ್ತುತ ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಪ್ರಥಮ ಬಿಕಾಂ ವ್ಯಾಸಂಗ ಮಾಡುತ್ತಿದ್ದಾರೆ.
ಉದಯೋನ್ಮುಖ ಆಲ್ರೌಂಡ್ ಆಟಗಾರ ನಿಶ್ಚಿತ್ ಪೈ ಮುಂಬರುವ ವಿನೂ ಮಂಕಡ್ ಟ್ರೋಫಿಗಾಗಿ ಕರ್ನಾಟಕದ 15 ಸದಸ್ಯರ ತಂಡದಲ್ಲಿ ಶನಿವಾರ ಸ್ಥಾನ ಪಡೆದು ರಾಜ್ಯ ಮಟ್ಟದಲ್ಲಿ ಕ್ರಿಕೆಟ್ ಗೆ ಛಾಪು ಮೂಡಿಸಲು ಕಾಲಿಟ್ಟಿದ್ದಾರೆ.