ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಸಮಯ ಸರಿಯಾಗಿಯೇ ಕೈ ಕೊಟ್ಟಿದೆ. ಅತ್ತ ವೃತ್ತಿ ಬದುಕಲ್ಲೂ ಹಿನ್ನಡೆ, ಇತ್ತ ವೈಯಕ್ತಿಕ ಬದುಕಲ್ಲೂ ಹಿನ್ನಡೆ.
ರೋಹಿತ್ ಶರ್ಮಾ ನಂತರ ಭಾರತ ಟಿ20 ತಂಡದ ನಾಯಕರಾಗುವ ಕನಸು ಕಾಣುತ್ತಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ಬಿಸಿಸಿಐ ಸರಿಯಾಗಿಯೇ ಶಾಕ್ ಕೊಟ್ಟಿದೆ. ಬರೋಡ ಆಲ್ರೌಂಡರ್ ಪಾಂಡ್ಯ ಬದಲು ಮುಂಬೈಕರ್ ಸೂರ್ಯಕುಮಾರ್ ಯಾದವ್ ಅವರಿಗೆ ಟಿ20 ತಂಡದ ನಾಯಕನ ಪಟ್ಟ ಕಟ್ಟಲಾಗಿದೆ.
ಮತ್ತೊಂದು ಕಡೆ ವೈಯಕ್ತಿಕ ಬದುಕಲ್ಲೂ ಪಾಂಡ್ಯ ಹಿನ್ನಡೆ ಅನುಭವಿಸಿದ್ದು, ಸರ್ಬಿಯಾದ ನಟಿ, ಮಾಡೆಲ್ ನತಾಶಾ ಸ್ಟಾಂಕೋವಿಕ್ ಜೊತೆಗಿನ 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದು, ದಂಪತಿ ವಿಚ್ಛೇಧನ ಪಡೆದಿದ್ದಾರೆ.
ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಟಿ20 ತಂಡದ ಭವಿಷ್ಯದ ನಾಯಕನೆಂದೇ ಬಿಂಬಿತರಾಗಿದ್ದವರು. ಇದಕ್ಕೆ ಪುಷ್ಠಿ ನೀಡುವಂತೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಆಯ್ಕೆ ಮಾಡಿದಾಗ ಹಾರ್ದಿಕ್ ಪಾಂಡ್ಯ ಅವರನ್ನು ಉಪನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಜೊತೆ ರೋಹಿತ್ ಶರ್ಮಾ ಕೂಡ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದಾಗ ಹಾರ್ದಿಕ್ ಪಾಂಡ್ಯ ಅವರೇ ಮುಂದಿನ ಟ20 ನಾಯಕ ಎನ್ನಲಾಗಿತ್ತು.
ಆದರೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿರುವ ಟೀಮ್ ಇಂಡಿಯಾದಲ್ಲಿ ಪಾಂಡ್ಯಗೆ ನಾಯಕತ್ವ ಸಿಗುವ ಮಾತು ಒತ್ತಟ್ಟಿಗಿರಲಿ, ಉಪನಾಯಕನ ಪಟ್ಟವನ್ನೂ ಕಳೆದುಕೊಂಡಿದ್ದಾರೆ. ಹಾಗಾದರೆ ಹಾರ್ದಿಕ್ ಪಾಂಡ್ಯಗೆ ಈ ಪರಿಸ್ಥಿತಿ ಎದುರಾಗಲು ಕಾರಣವೇನು?
ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಮುನ್ನ ಭಾರತ ತಂಡದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಸಿಗದಿರಲು ಕಾರಣವೇನು ಎಂಬ ಪ್ರಶ್ನೆ ಇಬ್ಬರಿಗೂ ಎದುರಾಗಿದೆ. “ಫಿಟ್ನೆಸ್ ಸಮಸ್ಯೆ” ಎಂದು ಗೌತಮ್ ಗಂಭೀರ್ ಉತ್ತರಿಸಿದರೆ, ಅಜಿತ್ ಅಗರ್ಕರ್ ನೀಡಿದ ಉತ್ತರ ಕುತೂಹಲಕ್ಕೆ ಕಾರಣವಾಗಿದೆ.
“ಟಿ20 ತಂಡದ ನಾಯಕನನ್ನು ಆಯ್ಕೆ ಮಾಡುವ ಮುನ್ನ ನಾವು ಭಾರತ ತಂಡದ ಡ್ರೆಸ್ಸಿಂಗ್ ರೂಮ್ ಸಲಹೆಯನ್ನು ಪಡೆದಿದ್ದೆವು. ಅಲ್ಲಿ ಪಾಂಡ್ಯ ಬದಲು ಸೂರ್ಯಕುಮಾರ್ ಯಾದವ್ ಬಗ್ಗೆ ಒಲವು ವ್ಯಕ್ತವಾಗಿತ್ತು. ನಾಯಕತ್ವಕ್ಕೆ ಸೂರ್ಯ ಅರ್ಹ ಅಭ್ಯರ್ಥಿ” ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.
ಅಂದರೆ ಟೀಮ್ ಇಂಡಿಯಾ ಆಟಗಾರರಿಗೆ ಹಾರ್ದಿಕ್ ಪಾಂಡ್ಯನ ನಾಯಕತ್ವ ಬೇಡವಾಗಿತ್ತು ಎಂಬುದೇ ಇದರ ಅರ್ಥ. ಹಾಗಾದರೆ ಬಿಸಿಸಿಐ ಆಯ್ಕೆ ಸಮಿತಿ ಮತ್ತು ಕೋಚ್ ಗಂಭೀರ್ ಟಿ20 ತಂಡದ ನಾಯಕನನ್ನು ಆಯ್ಕೆ ಮಾಡುವ ಮುನ್ನ ತಂಡದ ಎಲ್ಲಾ ಆಟಗಾರರ ಸಲಹೆ ಪಡೆದಿದ್ದರೇ? ಎಲ್ಲರೂ ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಪ್ರಾಯ ಕೊಟ್ಟರೇ? ಪಾಂಡ್ಯ ಬದಲು ಸೂರ್ಯಕುಮಾರ್ ಯಾದವ್ ಪರ ಬ್ಯಾಟಿಂಗ್ ನಡೆಸಿದರೇ?
ಕಳೆದ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲಾಗಿತ್ತು. ಇದು ಮುಂಬೈಕರ್’ಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ರೋಹಿತ್ ಶರ್ಮಾ ಜೊತೆ ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಕೂಡ ಈ ಬಗ್ಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದರು. ಈಗ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದಲ್ಲಿ ನಾಯಕತ್ವ ಕಳೆದುಕೊಂಡಿದ್ದರೆ, ಮುಂಬೈಕರ್’ಗಳಾದ ರೋಹಿತ್ ಶರ್ಮಾ ಏಕದಿನ ಹಾಗೂ ಸೂರ್ಯಕುಮಾರ್ ಯಾದವ್ ಟಿ20 ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.