ಎಲ್ಲವೂ ಸರಿಯಿದ್ದಿದ್ದರೆ ಕನ್ನಡಿಗ ಕೆ.ಎಲ್ ರಾಹುಲ್ ಭಾರತ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿರಬೇಕಿತ್ತು.
ಆದರೆ ದುರದೃಷ್ಟವೋ, ಕ್ರಿಕೆಟ್ ರಾಜಕೀಯವೋ ಗೊತ್ತಿಲ್ಲ.. ನಾಯಕನಾಗಬೇಕಿದ್ದ ರಾಹುಲ್ ಈಗ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ತನಗಿಂತ ಕಿರಿಯ, ತನಗಿಂತ ಕಡಿಮೆ ಅನುಭವಿ ಶುಭಮನ್ ಗಿಲ್ ನಾಯಕತ್ವದಲ್ಲಿ ಆಡಬೇಕಿದೆ.
ಪದೇ ಪದೇ ಗಾಯಗೊಳ್ಳುತ್ತಿರುವದೇ ಕೆ.ಎಲ್ ರಾಹುಲ್ ಅವರಿಗೆ ಅಂಟಿದ ಶಾಪ. ಉತ್ತಮ ಫಾರ್ಮ್’ನಲ್ಲಿರುವಾಗಲೇ ಎದುರಾಗಿದ್ದ ಗಾಯದ ಸಮಸ್ಯೆಗಳು ರಾಹುಲ್ ವೃತ್ತಿಜೀವನಕ್ಕೆ ಕೊಡಲಿ ಪೆಟ್ಟು ಕೊಟ್ಟು ಬಿಟ್ಟಿವೆ. ಕಳೆದ 10 ವರ್ಷಗಳಲ್ಲಿ ರಾಹುಲ್ 10ಕ್ಕೂ ಹೆಚ್ಚು ಬಾರಿ ಗಾಯಗೊಂಡಿದ್ದಾರೆ.
ಒಂದೇ ವರ್ಷದ ಹಿಂದೆ ರಾಹುಲ್ ಅವರನ್ನು ಭಾರತ ಏಕದಿನ ಹಾಗೂ ಟೆಸ್ಟ್ ತಂಡದ ಭವಿಷ್ಯದ ನಾಯಕನೆಂದು ಪರಿಗಣಿಸಲಾಗಿತ್ತು. ರೋಹಿತ್ ಶರ್ಮಾ ನಿವೃತ್ತಿಯ ನಂತರ ರಾಹುಲ್ ಅವರಿಗೆ ನಾಯಕ ಪಟ್ಟ ಕಟ್ಟಲು ಬಿಸಿಸಿಐ ಕೂಡ ಉತ್ಸುಕವಾಗಿತ್ತು. ಆದರೆ ಗಾಯದ ಸಮಸ್ಯೆಯ ಜೊತೆಗೆ ಬಿಸಿಸಿಐನೊಳಗೆ ನಡೆದ ಕೆಟ್ಟ ರಾಜಕೀಯಕ್ಕೆ ರಾಹುಲ್ ಬಲಿಪಶುವಾಗಿದ್ದಾರೆ.
ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಲಿರುವ ಕೆ.ಎಲ್ ರಾಹುಲ್ ಟೀಮ್ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಪಂದ್ಯದಲ್ಲಿ ಶುಭಮನ್ ಗಿಲ್ ನಾಯಕತ್ವದ ಟೀಮ್ ‘ಎ’, ಬಂಗಾಳದ ಅಭಿಮನ್ಯು ಈಶ್ವರನ್ ಸಾರಥ್ಯದ ಟೀಮ್ ‘ಬಿ’ ತಂಡವನ್ನು ಎದುರಿಸಲಿದೆ.
ಟೀಮ್ ಎ ತಂಡದಲ್ಲಿ ಕರ್ನಾಟಕ ನಾಲ್ವರು ಆಟಗಾರರಿದ್ದಾರೆ. ಕೆ.ಎಲ್ ರಾಹುಲ್ ಜೊತೆ ಮಯಾಂಕ್ ಅಗರ್ವಾಲ್, ವೇಗಿಗಳಾದ ವಿದ್ವತ್ ಕಾವೇರಪ್ಪ ಮತ್ತು ಪ್ರಸಿದ್ಧ್ ಕೃಷ್ಣ ದುಲೀಪ್ ಟ್ರೋಫಿಯಲ್ಲಿ ಆಡಲು ಸಜ್ಜಾಗಿದ್ದಾರೆ.
ದುಲೀಪ್ ಟ್ರೋಫಿ ಟೂರ್ನಿಯಲ್ಲೇ ಕೆ.ಎಲ್ ರಾಹುಲ್ ಅವರಿಗೆ ನಾಯಕತ್ವ ಸಿಗದಿರುವುದನ್ನು ನೋಡಿದರೆ, ಭಾರತ ತಂಡದಲ್ಲಿ ನಾಯಕತ್ವ ಸಿಗುವ ಸಾಧ್ಯತೆಗಳು ಕಡಿಮೆ. ಟೀಮ್ ಇಂಡಿಯಾದ ಭವಿಷ್ಯದ ಲೀಡರ್ ಶಿಪ್ ರೋಲ್’ಗೆ ಶುಭಮನ್ ಗಿಲ್ ಅವರನ್ನು ಪರಿಗಣಿಸುವ ಲೆಕ್ಕಾಚಾರದಲ್ಲಿ ದುಲೀಪ್ ಟ್ರೋಫಿಯಲ್ಲಿ ಪಂಜಾಬ್ ಆಟಗಾರನಿಗೆ ನಾಯಕ ಪಟ್ಟ ಕಟ್ಟಲಾಗಿದೆ. ಶುಭಮನ್ ಗಿಲ್ ಭಾರತ ಟಿ20 ಹಾಗೂ ಏಕದಿನ ತಂಡದ ಉಪನಾಯಕರಾಗಿದ್ದಾರೆ.
ಕರ್ನಾಟಕದ ಮತ್ತೊಬ್ಬ ಯುವ ವೇಗದ ಬೌಲರ್ ವೈಶಾಖ್ ವಿಜಯ್ ಕುಮಾರ್, ದುಲೀಪ್ ಟ್ರೋಫಿಯಲ್ಲಿ ಆಡಲಿರುವ ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗೆ ರಾಜ್ಯದ ಒಟ್ಟು ಐವರು ಆಟಗಾರರು ಈ ಬಾರಿಯ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳಲ್ಲಿ ಆಡಲಿದ್ದಾರೆ.
ದುಲೀಪ್ ಟ್ರೋಫಿಯಲ್ಲಿ ಆಡಲಿರುವ ಟೀಮ್ ‘ಎ’ ತಂಡ ಹೀಗಿದೆ:
ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್ (ನಾಯಕ), ಧ್ರುವ ಜುರೆಲ್, ಕುಮಾರ್ ಕುಶಾಗ್ರ, ರಿಯಾನ್ ಪರಾಗ್, ಆಕಾಶ್ ದೀಪ್, ಶಿವಂ ದುಬೆ, ತನುಷ್ ಕೋಟ್ಯಾನ್, ತಿಲಕ್ ವರ್ಮಾ, ಖಲೀಲ್ ಅಹ್ಮದ್, ಆವೇಶ್ ಖಾನ್, ವಿದ್ವತ್ ಕಾವೇರಪ್ಪ, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.