
ವಿಜಯ್ ಹಜಾರೆ ಟ್ರೋಫಿ: ಅಭಿಲಾಷ್, ಪಡಿಕ್ಕಲ್, ಸ್ಮರಣ್ ಸಾಹಸ; ಐದು ವರ್ಷಗಳ ನಂತರ ಫೈನಲ್ ಪ್ರವೇಶಿಸಿದ ಕರ್ನಾಟಕ
ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ ಫೈನಲ್’ಗೆ ಲಗ್ಗೆ ಇಟ್ಟಿದೆ. ವಡೋದರದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಹರ್ಯಾಣ ತಂಡವನ್ನು 5 ವಿಕೆಟ್’ಗಳಿಂದ ಮಣಿಸಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹರ್ಯಾಣ ತಂಡ, ನಿಗದಿತ 50 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 237 ರನ್’ಗಳ ಉತ್ತಮ ಮೊತ್ತ ಕಲೆ ಹಾಕಿತು. ಕರ್ನಾಟಕ ಪರ ಅಮೋಘ ದಾಳಿ ಸಂಘಟಿಸಿದ ಎಡಗೈ ವೇಗದ ಬೌಲರ್ ಅಭಿಲಾಷ್ ಶೆಟ್ಟಿ 10 ಓವರ್’ಗಳಲ್ಲಿ ಕೇವಲ 34 ರನ್ನಿತ್ತು 4 ವಿಕೆಟ್ ಉರುಳಿಸಿದರು. ಆಲ್ರೌಂಡರ್ ಶ್ರೇಯಸ್ ಗೋಪಾಲ್ 10 ಓವರ್’ಗಳಲ್ಲಿ 36 ರನ್ನಿತ್ತು 2 ವಿಕೆಟ್ ಕಬಳಿಸಿದರು.


ನಂತರ ಗುರಿ ಬೆನ್ನಟ್ಟಿದ ಕರ್ನಾಟಕ 47.2 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 238 ರನ್ ಗಳಿಸಿ ಜಯಭೇರಿ ಬಾರಿಸಿತು.

ಕರ್ನಾಟಕ ಪರ ದೇವದತ್ತ್ ಪಡಿಕ್ಕಲ್ 86, ಸ್ಮರಣ್ ರವಿಚಂದ್ರನ್ 76 ರನ್ ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಈ ಜೋಡಿ 3ನೇ ವಿಕೆಟ್’ಗೆ 128 ರನ್’ಗಳ ಜೊತೆಯಾಟವಾಡಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್.
ಜನವರಿ 18ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ವಿದರ್ಭ ಅಥವಾ ಮಹಾರಾಷ್ಟ್ರ ತಂಡದ ಸವಾಲನ್ನು ಎದುರಿಸಲಿದೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ
2019-20
ಪಂದ್ಯ: 11, ಗೆಲುವು: 10, ಸೋಲು: 01, ಫಲಿತಾಂಶ: ಚಾಂಪಿಯನ್ಸ್
2020-21
ಪಂದ್ಯ: 07, ಗೆಲುವು: 05, ಸೋಲು: 02, ಫಲಿತಾಂಶ: ಸೆಮಿಫೈನಲ್ಸ್
2021-22
ಪಂದ್ಯ: 07, ಗೆಲುವು: 04, ಸೋಲು: 03, ಫಲಿತಾಂಶ: ಕ್ವಾರ್ಟರ್ ಫೈನಲ್ಸ್
2022-23
ಪಂದ್ಯ: 10, ಗೆಲುವು: 08, ಸೋಲು: 02, ಫಲಿತಾಂಶ: ಸೆಮಿಫೈನಲ್ಸ್
2023-24
ಪಂದ್ಯ: 09, ಗೆಲುವು: 07, ಸೋಲು: 02, ಫಲಿತಾಂಶ: ಸೆಮಿಫೈನಲ್ಸ್




