ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡದ ಯೂಟ್ಯೂಬ್ ಲೈವ್ ಚಾನೆಲ್ ಬಿಡುಗಡೆ!
ಕ್ರಿಕೆಟ್ ನ ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಸ್ಪೋರ್ಟ್ಸ್ ಕನ್ನಡ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಜನಪ್ರಿಯವಾಗಿದೆ. ಇದೀಗ ನಾಲ್ಕನೇಯ ವಾರ್ಷಿಕೋತ್ಸವದ ಸಂಭ್ರಮದ ದಿನದಂದು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ತನ್ನದೇ ಆದ ಸ್ವಂತ ಯೂಟ್ಯೂಬ್ ಚಾನೆಲ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ನೇರ ಪ್ರಸಾರಗೊಳಿಸಲು ಸ್ಪೋರ್ಟ್ಸ್ ಕನ್ನಡ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದೆ. ಜುಲೈ 07 ರಂದು ಉಡುಪಿಯ ವಂಡಾರು ಕ್ಷೇತ್ರದಲ್ಲಿ ಪ್ರಾರಂಭವಾದ ಈ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್ ರಾಜ್ಯ ಟೆನಿಸ್ ಕ್ರಿಕೆಟ್ ಗೆ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.
ಜುಲೈ 7, ಶುಕ್ರವಾರದ ಶುಭದಿನದಂದು, ಬೆಳಗ್ಗಿನ ಶುಭಮುಹೂರ್ತದಲ್ಲಿ ಇಲ್ಲಿನ ವಂಡಾರು ಸುಬ್ರಹ್ಮಣ್ಯ ನಿಲಯದಲ್ಲಿ ಪೂಜ್ಯನೀಯ ಗುರುಗಳು, ವೇದ ಬ್ರಹ್ಮಶ್ರೀ ಶ್ರೀ. ರಮೇಶ್ ಬಾಯರಿ ವಂಡಾರು ಅವರ ಉಪಸ್ಥಿತಿಯಲ್ಲಿ ಆಶೀರ್ವಚನದೊಂದಿಗೆ ಆರಂಭಿಸಿದ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ಹೆಸರಿನ ಚಾನೆಲ್ ತನ್ನ ಚಾನೆಲ್ ನ ಪ್ರೊಮೊ ಬಿಡುಗಡೆಗೊಳಿಸಿತು. 07.07.2023 ಮುಂಜಾನೆ 07:07 ಕ್ಕೆ ದೀಪ ಪ್ರಜ್ವಲನೆ ಮೂಲಕ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸ್ಪೋರ್ಟ್ಸ್ ಕನ್ನಡ ಮೀಡಿಯಾ ಬಳಗದ ಯೂಟ್ಯೂಬ್ ಚಾನೆಲ್ ನ್ನು ಪೂಜ್ಯನೀಯ ಗುರುಗಳು ಶುಕ್ರವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಅವರ ಮಾತಿನ ಸಾರ ಇಲ್ಲಿದೆ.
*”ಸ್ಪೋರ್ಟ್ ಕನ್ನಡ ಕಳೆದ ನಾಲ್ಕು ವರ್ಷಗಳಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿ ಇದೀಗ ಆ ಸಾಧನೆಯ 2ನೇ ಹಂತವನ್ನು ಇಂದು ಆರಂಭಿಸುತ್ತಾ ಇದೆ. ಆಟ ಎನ್ನುವುದು ಭಗವಂತನ ಲೀಲೆ. ಅದು ಮನಸಿಗ್ಗೆ ಹಿತವನ್ನು ನೀಡುತ್ತೆ. ಸ್ಪೋರ್ಟ್ಸ್ ಕನ್ನಡ ಕ್ರಿಕೆಟ್ ಆಟಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ನಿಟ್ಟಿನಲ್ಲಿ ಜುಲೈ 7 ರಂದು ಈ ಲೈವ್ ಚಾನೆಲನ್ನು ಉದ್ಘಾಟಿಸಿದೆ. ಸಪ್ತಮಂ ದೈವ ಚಿಂತನಮ್.7 ರಲ್ಲಿ ಶುರು ಮಾಡಿದ್ರೆ ಅದು ಸಾಧನೆಯ ತುಂಬಾ ಎತ್ತರಕ್ಕೆ ಬೆಳೆಯುತ್ತೆ. ಗತಕಾಲದಲ್ಲಿ ,ಇತಿಹಾಸದಲ್ಲಿ ಕ್ರೀಡೆಯಲ್ಲಿ ತುಂಬಾ ಎತ್ತರಕ್ಕೆ ಬೆಳೆದ ಕೆಲವು ವ್ಯಕ್ತಿಗಳನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವಂತಹ ದೊಡ್ಡ ಸಾಧನೆಗೆ ಕೋಟ ರಾಮಕೃಷ್ಣ ಆಚಾರ್ಯರು ಹೊರಟಿದ್ದಾರೆ .ಗುರಿ ಅವರಲ್ಲಿ ಇದೆ. ಖಂಡಿತವಾಗಿಯೂ ಸ್ಪೋರ್ಟ್ ಕನ್ನಡ ತನ್ನ ಗುರಿಯನ್ನು ಮುಟ್ಟುತ್ತದೆಯೆಂದು ಆಶೀರ್ವಚಿಸಿದರು. ಯಾವುದೇ ವ್ಯಕ್ತಿ ಒಂದು ಸಾಧನೆಯನ್ನು ಮಾಡಬೇಕಾದರೆ ಅವರಲ್ಲಿ ಒಂದು ಸಂಕಲ್ಪ ಇರಬೇಕು. ಒಂದು ಗುರಿ ಇರಬೇಕು. ಅದನ್ನು ಮಾಡುತ್ತೇನೆ ಎಂಬ ಛಲ ಇರಬೇಕು. ಆ ಛಲಕ್ಕೆ ಹಿನ್ನೆಯಾಗಿ ಒಂದು ಗುರು ಶಕ್ತಿ ಅನ್ನೋದು ಬೇಕು. ಸ್ಪೋರ್ಟ್ಸ್ ಕನ್ನಡದ ಪ್ರವರ್ತಕರಾದ ಕೆ. ಆರ್. ಕೆ ಯವರು ಮೂಲತ: ಎಲ್ಲಾ ಗುರುಗಳನ್ನು ಮುಂದಿಟ್ಟು ಕೆಲಸ ಮಾಡ್ತಾ ಇದ್ದಾರೆ. ಶೂನ್ಯದಿಂದ ಪ್ರಾರಂಭವಾದ ಈ ಪಯಣ ಇಷ್ಟು ಎತ್ತರಕ್ಕೂ ಬೆಳೆದರು ಕೂಡ ನಮ್ಮ ಮೂಲ ಎಲ್ಲಿಂದ ಪ್ರಾರಂಭವಾಯ್ತು, ನಾವು ಎಲ್ಲಿಂದ ಬೆಳೆದೆವು, ಹೇಗೆ ಬೆಳೆದೆವು ಎನ್ನುವ ನೆನಪಿಟ್ಟ ವಿಚಾರ ಅದು ಸೂಕ್ಷ್ಮ. ತಾನು ನಂಬಿದ ಗುರುಗಳನ್ನು ಸಮಾರಂಭದ ವೇದಿಕೆಗೆ ಕರೆದು, ತನಗೆ ವಿದ್ಯೆಯನ್ನು ಕಲಿಸಿಕೊಟ್ಟ ಗುರುಗಳಿಗೆ ಹಾಗು ವೃತ್ತಿಯನ್ನು ಕಲಿಸಿಕೊಟ್ಟ ಗುರುಗಳನ್ನುಆರಂಭದಲ್ಲಿ ಆರಿಸಿಕೊಂಡು ಈ ಲೈವ್ ಚಾನೆಲ್ ಉದ್ಘಾಟನೆಯ ಕಾರ್ಯಕ್ರಮವನ್ನು ನಡೆಸಿದ್ದಾರೆ. ಈ ಒಂದು ಪ್ರಾರಂಭ ಮಾಡಿರೋ ಸಾಧನೆ ಅದು ಕೇವಲ ರಾಜ್ಯಕಲ್ಲ, ಇಡೀ ರಾಷ್ಟ್ರಕ್ಕೆ ಪ್ರಸಾರ ಆಗುವ ಹಾಗೆ ಆಗಲಿ. ಸ್ಪೋರ್ಟ್ಸ್ ಕನ್ನಡದ ಕೀರ್ತಿ ಶಾಶ್ವತವಾಗಿ ಉಳಿಯಲಿ. ಇದನ್ನು ಬೆಳೆಸುವ ಶಕ್ತಿ ಆ ಭಗವಂತ ಅವರಿಗೆ ತುಂಬಲಿ ಎಂದು ಆಶೀರ್ವದಿಸಿದರು.
ಸ್ಪೋರ್ಟ್ಸ್ ಕನ್ನಡದ ಯೋಗ್ಯತೆಯನ್ನು ಕಂಡು ಅದಕ್ಕೆ ಸರಿಯಾಗಿ ಆಸ್ಪದ ನೀಡಿ ಸಹಕರಿಸುವ ಸ್ಟಾರ್ ವರ್ಟೆಕ್ಸ್ ನ ಕುಮಾರಿ.ಡಾ. ಗಾಯತ್ರಿ ಮುತ್ತಪ್ಪ ಅವರನ್ನು ಅಭಿನಂದಿಸಿದರು.”*
ಈ ಸಂದರ್ಭ ಯೂಟ್ಯೂಬ್ ಚಾನೆಲ್ ನ ಪ್ರಾಯೋಜಕರಾದ ಬೆಂಗಳೂರಿನ ಸ್ಟಾರ್ ವರ್ಟೆಕ್ಸ್ ಕಂಪನಿಯ ಮಾಲಕಿ ಸಮಾಜ ಸೇವಕಿ ಮತ್ತು ಕ್ರೀಡಾ ಪ್ರೋತ್ಸಾಹಕಿ ಕುಮಾರಿ. ಡಾ. ಗಾಯತ್ರಿ ಮುತ್ತಪ್ಪ ಅವರನ್ನು ಸನ್ಮಾನಿಸಲಾಯಿತು.
*”ಸ್ಪೋರ್ಟ್ಸ್ ಕನ್ನಡ ಈಗಾಗಲೇ ನಾಲ್ಕು ವರ್ಷಗಳನ್ನು ಪೂರೈಸಿ, ಐದನೆಯ ವರ್ಷದಲ್ಲಿ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸುವುದರೊಂದಿಗೆ, ಕ್ರೀಡಾಭಿಮಾನಿಗಳನ್ನು ತಲುಪಲು ಅವರು ಮತ್ತೊಂದು ಸಂವಹನ ವಿಧಾನವನ್ನು ಹೊಂದಿದ್ದಾರೆ. ಕೆ. ಆರ್. ಕೆ ಯವರು ರಾಜ್ಯದ ಮೂಲೆ ಮೂಲೆಗೂ ಹೋಗಿ, ಒಳ್ಳೆಯ ಹೆಸರನ್ನು ಪಡೆದು, ತುಂಬಾ ಕ್ರೀಡಾ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.ಸ್ಪೋರ್ಟ್ಸ್ ಕನ್ನಡ ರಾಜ್ಯಾದ್ಯಂತ ಯಶನ್ಸನ್ನು ಕಂಡಿದೆ. ಸ್ಪೋರ್ಟ್ಸ್ ಕನ್ನಡದೊಂದಿಗೆ ಸಹಯೋಗ ನಿಜಕ್ಕೂ ಖುಷಿಯ ವಿಚಾರ’‘ಎಂದು ಸ್ಟಾರ್ ವರ್ಟೆಕ್ಸ್ ಕಂಪೆನಿಯ ಮಾಲಕಿ ಹಾಗೂ ಕೋಲಾರ ಜೆ.ಡಿ.ಎಸ್ ಮಹಿಳಾ ಘಟಕಾಧ್ಯಕ್ಷೆ ಕುಮಾರಿ.ಡಾ. ಗಾಯತ್ರಿ ಮುತ್ತಪ್ಪ ಹೇಳಿದರು.*
ಸ್ಪೋರ್ಟ್ಸ್ ಕನ್ನಡ ಚಾನೆಲ್‌ನ ಧ್ಯೇಯೋದ್ದೇಶಗಳನ್ನು ಸ್ಪೋರ್ಟ್ಸ್ ಕನ್ನಡ ಡಾಟ್ ಕಾಮ್ ನ ಪ್ರಧಾನ ಸಂಪಾದಕ ಕೋಟ ರಾಮಕೃಷ್ಣ ಆಚಾರ್ಯ ವಿವರಿಸಿದರು. ”ಕರ್ನಾಟಕ ರಾಜ್ಯದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯಾಗಬೇಕು. ಉಡುಪಿಯಲ್ಲಿ ಈಗಾಗಲೇ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯಾಗಿದೆ. ಇತರ ಜಿಲ್ಲೆಯಲ್ಲೂ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯಾಗುವ ವಿಚಾರಗಳು ನಡೆಯುತ್ತಾ ಇವೆ” ಎಂದು ಭಾವುಕರಾಗಿ ಹೇಳಿದರು.
ಕೋಟ ರಾಮಕೃಷ್ಣ ಆಚಾರ್ಯ ಕುಟುಂಬಸ್ಥರು ಹಾಗೂ ಟೀಮ್ ಸ್ಪೋರ್ಟ್ಸ್ ಕನ್ನಡ ಬಳಗ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ನಿವೃತ್ತ ಶಿಕ್ಷಕರಾದ ಶ್ರೀ ವಿಶ್ವೇಶ್ವರ ಹಂದೆ, ಸ್ವರ್ಣೊದ್ಯಮಿ ಸೀತಾರಾಮ ಆಚಾರ್ ತೆಕ್ಕಟ್ಟೆ ಮುಂತಾದ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಘು ಮಟಪಾಡಿ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಸುರೇಶ್ ಭಟ್ ಮೂಲ್ಕಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.