15.7 C
London
Tuesday, September 10, 2024
Homeಕ್ರಿಕೆಟ್ಗಾಂಧಾರ ದೇಶಕ್ಕೆ ಗೌರವ ತಂದು ಕೊಡಲು ನಿಂತ ಕ್ರಿಕೆಟ್ ಯೋಧರ ಕಥೆ

ಗಾಂಧಾರ ದೇಶಕ್ಕೆ ಗೌರವ ತಂದು ಕೊಡಲು ನಿಂತ ಕ್ರಿಕೆಟ್ ಯೋಧರ ಕಥೆ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಆ ದೇಶದಲ್ಲಿ ಕ್ರಿಕೆಟ್ ಆಡುವ ಮಾತು ಪಕ್ಕಕ್ಕಿರಲಿ.. ಜೀವನವೇ ದುಸ್ತರ ಎಂಬ ಪರಿಸ್ಥಿತಿ. ಅಲ್ಲಿನ ಪ್ರಭುತ್ವದ ಮೇಲೆ ತಾಲಿಬಾನಿಗಳು ದಾಳಿ ನಡೆಸಿದಾಗ ಇಡೀ ದೇಶದಲ್ಲೇ ಅರಾಜಕತೆ ಸೃಷ್ಠಿಯಾಗಿತ್ತು.
ಜನರ ತಲೆಯ ಮೇಲೆ ಗನ್ ಪಾಯಿಂಟ್’ಗಳನ್ನಿಡಲಾಯಿತು. ಹಾದಿ ಬೀದಿಗಳಲ್ಲಿ ಹೆಣಗಳು ಉರುಳಿದವು. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆದವು. ತಾಲಿಬಾನ್ ಉಗ್ರರ ಪೈಶಾಚಿಕ ಕೃತ್ಯಕ್ಕೆ ದೇಶಕ್ಕೆ ದೇಶವೇ ನಲುಗಿ ಹೋಯಿತು. ಇನ್ನು ಈ ದೇಶಕ್ಕೆ ಭವಿಷ್ಯವಿಲ್ಲ ಎಂದು ಎಲ್ಲರೂ ಮಾತಾಡಿಕೊಂಡರು. ಅಂಥಾ ದೇಶಕ್ಕೆ ಕ್ರಿಕೆಟ್ ಮೂಲಕ ಗೌರವ ತಂದು ಕೊಡಲು ಹೊರಟವರು ಈ ಆಫ್ಘನ್ ಕ್ರಿಕೆಟಿಗರು.
ಟಿ20 ವಿಶ್ವಕಪ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ಸಾಧಿಸಿದ ಗೆಲುವು ಬರೀ ಗೆಲುವಲ್ಲ.. ಅದು ಆ ಕ್ರಿಕೆಟ್ ಯೋಧರು ತಮ್ಮ ದೇಶಕ್ಕೆ ತಂದುಕೊಟ್ಟಿರುವ ಗೌರವ. ಆಸ್ಟ್ರೇಲಿಯಾ ವಿರುದ್ಧದ  ಗೆಲುವನ್ನು ಆಫ್ಘನ್ ಪ್ರಜೆಗಳು ಬೀದಿ ಬೀದಿಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಕಾಬೂಲ್’ನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಸೇರಿದ್ದ ಜನಸ್ತೋಮವೇ ಕ್ರಿಕೆಟ್ ಅವರ ಪಾಲಿಗೆ ಎಷ್ಟು ಮುಖ್ಯ ಎಂಬುದನ್ನು ಸಾರಿ ಸಾರಿ ಹೇಳುತ್ತಿವೆೆೆ.
ಅಫ್ಘಾನಿಸ್ತಾನವನ್ನು ಹಿಂದೆ ಗಾಂಧಾರ ದೇಶವೆಂದು ಕರೆಯಲಾಗುತ್ತಿತ್ತು. ಅದು ಮಹಾಭಾರತದ ಶಕುನಿ ಮತ್ತವನ ಪೂರ್ವಜರು ಆಳಿದ್ದ ದೇಶ. ಶಕುನಿಯ ದೇಶದಲ್ಲಿ ಹುಟ್ಟಿಕೊಂಡ ಆಧುನಿಕ ಶಕುನಿಗಳು ಇಡೀ ದೇಶದ ಬುಡಕ್ಕೇ ಕೊಡಲಿಯೇಟು ಕೊಟ್ಟಿದ್ದರು.
ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಅರಾಜರತೆ ಸೃಷ್ಠಿಸಿದಾಗ ಅಲ್ಲಿನ ಪ್ರಜೆಗಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈಗ ಟಿ20 ವಿಶ್ವಕಪ್’ನಲ್ಲಿ ಆಡುತ್ತಿರುವ ಆಫ್ಘನ್ ತಂಡದ ಬಹುತೇಕ ಆಟಗಾರರ ಕುಟುಂಬಗಳು ಅವತ್ತು ಅಪಾಯದಲ್ಲಿದ್ದವು. ಕುಟುಂಬ ಸದಸ್ಯರನ್ನು ದೇಶದಿಂದ ಹೊರ ತರೋಣವೆಂದರೆ, ಇದ್ದ ದಾರಿಗಳೆಲ್ಲಾ ಬಂದ್. ಆಗ ಲಂಡನ್’ನಲ್ಲಿ ಹಂಡ್ರೆಡ್ ಟೂರ್ನಿಯಲ್ಲಿ ಆಡುತ್ತಿದ್ದ ಈಗಿನ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ತನ್ನ ದೂರದ ಹುಟ್ಟೂರಿನಲ್ಲಿದ್ದ ಕುಟುಂಬವನ್ನು ನೆನೆದು ಕಣ್ಣೀರಿಟ್ಟಿದ್ದ.
ಕುಟುಂಬ ಸದಸ್ಯರಿಗೆ ಸಣ್ಣ ಸಮಸ್ಯೆಯಾದರೂ ಕ್ರಿಕೆಟ್ ಸರಣಿಗಳನ್ನೇ ತ್ಯಜಿಸಿ ಹೋಗುವ ಕಾಲವಿದು. ಅಂಥದ್ದರಲ್ಲಿ ಹೆತ್ತ ತಂದೆ-ತಾಯಿ, ಒಡ ಹುಟ್ಟಿದ ಅಣ್ಣ-ತಮ್ಮ, ಅಕ್ಕ-ತಂಗಿಯರ ಪ್ರಾಣಕ್ಕೇ ಅಪಾಯವಿದ್ದ ಸಂದರ್ಭದಲ್ಲಿ ಈ ಕ್ರಿಕೆಟಿಗರ ಮನಸ್ಥಿತಿ ಹೇಗಿದ್ದಿರಬೇಡ..!
ಇಂತಹ ಪರಿಸ್ಥಿತಿಗಳನ್ನು ಎದುರಿಸಿ ಬಂದವರು ಗಾಂಧಾರ ದೇಶದ ಕ್ರಿಕೆಟಿಗರು. ಇನ್ನು ಅಲ್ಲಿನ ಕ್ರಿಕೆಟ್ ಬೋರ್ಡ್. ದೇಶಕ್ಕೇ ಭವಿಷ್ಯವಿಲ್ಲ ಎಂದ ಮೇಲೆ ಅವರ ಕೈಯಲ್ಲಿ ಏನು ಸಾಧ್ಯ..? ತನ್ನ ಕ್ರಿಕೆಟಿಗರಿಗೆ ಕನಿಷ್ಠ ಒಂದು ಜರ್ಸಿ ಕೊಡಿಸಲಾಗದಷ್ಟು ಬಡತನ.
ಆದರೆ ಆಫ್ಘನ್ ಕ್ರಿಕೆಟ್ ಯೋಧರು ಪರಿಸ್ಥಿತಿಯ ವಿರುದ್ಧ, ವ್ಯವಸ್ಥೆಯ ದೃಢವಾಗಿ ನಿಂತು ಬಿಟ್ಟಿದ್ದರು. ಸಮುದ್ರದ ಅಲೆಗಳ ವಿರುದ್ಧ ಈಜಲು ಹೊರಟಿದ್ದರು. ತಂಡದ ಕೆಲ ಆಟಗಾರರೇ ಪ್ರಾಯೋಕತ್ವದ ಹುಡುಕಿ ತಂದರು. ಕ್ರಿಕೆಟ್ ಯುದ್ಧ ಶುರು ಮಾಡಿದರು. ಈ ಮಧ್ಯೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ‘’ಆಫ್ಘನ್ನರ ಜೊತೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳನ್ನು ಆಡುವುದಿಲ್ಲ’’ ಎನ್ನುವ ಮೂಲಕ ಕ್ರೀಡೆಯಲ್ಲು ರಾಜಕೀಯ ಬೆರೆಸಿದವು. ನೀವು ಆಡದಿದ್ದರೇನಂತೆ, ‘’ಕತ್ತೆ ಬಾಲ, ಕುದುರೆ ಜುಟ್ಟು’’ ಎಂದರು ಆಫ್ಘನ್ನರು.
ಕಷ್ಟದ ಸಮಯದಲ್ಲಿ ಆಫ್ಘನ್ ಕ್ರಿಕೆಟಿಗರನ್ನು ತಾಯಿಯಂತೆ ಪೋಷಿಸಿದ್ದು ಭಾರತದ ಕ್ರಿಕೆಟ್ ಮಂಡಳಿ ಬಿಸಿಸಿಐ. ನೆಲೆಯೇ ಇಲ್ಲದ ಗಾಂಧಾರದ ಕ್ರಿಕೆಟ್ ಕಲಿಗಳಿಗೆ ಭಾರತದಲ್ಲಿ ಕ್ರಿಕೆಟ್ ಸರಣಿಗಳನ್ನಾಡುವ ಅವಕಾಶ ಸಿಕ್ಕಿತು. ಆಫ್ಘನ್ನರಿಗೆ ಭಾರತವೇ ಎರಡನೇ ಮನೆಯಾಯಿತು
‘’ನಿಮ್ಮ ಜೊತೆ ಕ್ರಿಕೆಟ್ ಆಡುವುದಿಲ್ಲ’’ ಎಂದಿದ್ದ ಆಸ್ಟ್ರೇಲಿಯನ್ನರನ್ನು ಟಿ20 ವಿಶ್ವಕಪ್’ನಲ್ಲಿ ಸೋಲಿಸಿದ ಆಫ್ಘನ್ನರು ಇಡೀ ಜಗತ್ತಿಗೆ ದೊಡ್ಡ ಸಂದೇಶ ರವಾನಿಸಿದ್ದಾರೆ. ಯುದ್ಧಪೀಡಿತ ನೆಲದಿಂದ ಬಂದ ಕ್ರಿಕೆಟ್ ಯೋಧರು, ಕ್ರಿಕೆಟ್ ಮೈದಾನದಲ್ಲಿ ದೊಡ್ಡ ಯುದ್ಧ ಗೆದ್ದಿದ್ದಾರೆ.
ಇದೇ ವಿಶ್ವಕಪ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದಾಗ ‘ಆಕಸ್ಮಿಕ ಗೆಲುವು’ ಎಂದು ಕುಹಕವಾಡಿದವರಿಗೆ ಜಬರ್ದಸ್ತ್ ಉತ್ತರ ಕೊಟ್ಟಿದ್ದಾರೆ.
This is not an upset. This is Afghanistan! 
ಇದು ಅದ್ಭುತಗಳನ್ನು ಸಾಧಿಸಲು ಹೊರಟಿರುವ ಅಫ್ಘಾನಿಸ್ತಾನ ಕ್ರಿಕೆಟ್’ನ ಆರಂಭ ಅಷ್ಟೇ.. ನೋಡುತ್ತಿರಿ, ಮುಂದಿನದ್ದು ಹೊಸ ಚರಿತ್ರೆ..!

Latest stories

LEAVE A REPLY

Please enter your comment!
Please enter your name here

3 + 17 =