2017ರ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ. ಬಹುಶಃ ಅದು ಸ್ಮೃತಿ ಮಂಧನಳ ಕ್ರಿಕೆಟ್ ಬದುಕಿನ ದುಸ್ವಪ್ನ. ಅವತ್ತೇನಾದರೂ ಸ್ಮೃತಿ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟದಲ್ಲಿ 50% ಆಡಿದರೂ ಸಾಕಿತ್ತು, ಭಾರತ ವಿಶ್ವಕಪ್ ಗೆಲ್ಲುತ್ತಿತ್ತು.
ಫಸ್ಟ್ ಮ್ಯಾಚ್’ನಲ್ಲಿ ಇಂಗ್ಲೆಂಡ್ ವಿರುದ್ಧ 90 ರನ್ ಗಳಿಸಿದ್ದ ಸ್ಮೃತಿ, 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ ಶತಕ ಗಳಿಸಿದ್ದಳು. ಅದೇ ಕೊನೆ.. ಮುಂದೆ ಟೂರ್ನಿಯಲ್ಲಿ ಸ್ಮತಿ ಮಂಧನ ಎದುರಿಸಿದ್ದು ಘೋರ ವೈಫಲ್ಯ. ಸೆಮಿಫೈನಲ್, ಫೈನಲ್ ಸೇರಿ ಮುಂದಿನ ಏಳು ಇನ್ನಿಂಗ್ಸ್’ಗಳಲ್ಲಿ 2, 8, 4, 3, 13, 6, 0.
ಭಾರತ ಮಹಿಳಾ ಕ್ರಿಕೆಟ್ ತಂಡದ ಈಗಿನ ಆಟಗಾರ್ತಿಯರ ಪೈಕಿ ಸ್ಮೃತಿ ಮಂಧನ ನನಗೆ ಪರಿಚಯವಿರುವಾಕೆ. ಬಹುಶಃ 2016 ಇರಬೇಕು. ಬೆಂಗಳೂರಿನ National Cricket Academyಗೆ ಬಂದಿದ್ದಾಗ ಕರ್ನಾಟಕದ ಮಹಿಳಾ ಕ್ರಿಕೆಟರ್ ಒಬ್ಬರು ಸ್ಮೃತಿ ಮಂಧನಳಿಗೆ ನನ್ನನ್ನು ಪರಿಚಯಿಸಿದ್ದರು. ಆಗಿನ್ನೂ ಸ್ಮೃತಿ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅಂಬೆಗಾಲಿಡುತ್ತಿದ್ದ ಹುಡುಗಿ. ಸೂಪರ್ ಸ್ಟಾರ್ ಪಟ್ಟ ಇನ್ನೂ ಸಿಕ್ಕಿರಲಿಲ್ಲ. ಅಂದಿನ ಪರಿಚಯ ವೃತ್ತಿ ಸಂಬಂಧ ಕಾರಣಗಳಿಗೆ ಸ್ನೇಹಕ್ಕೆ ತಿರುಗಿತ್ತು.
ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 13 ರನ್ನಿಗೆ ಔಟಾದ ನಂತರ ಸ್ಮೃತಿ ಮಂಧನಗೆ ಒಂದು ವಾಟ್ಸಾಪ್ ಮೆಸೇಜ್ ಕಳುಹಿಸಿದ್ದೆ. “ನಿನ್ನನ್ನು ಈ ರೀತಿ ನೋಡುವುದಕ್ಕೆ ಬೇಸರವಾಗುತ್ತದೆ. ನೀನು ಚೆನ್ನಾಗಿ ಆಡಿದರೆ ಭಾರತ ಖಂಡಿತಾ ವಿಶ್ವಕಪ್ ಗೆಲ್ಲುತ್ತದೆ. ಸೆಮಿಫೈನಲ್’ನಲ್ಲಿ ದೊಡ್ಡ ಇನ್ನಿಂಗ್ಸ್ ನಿನಗಾಗಿ ಕಾದಿದೆ” ಎಂದು.
“ಥ್ಯಾಂಕ್ಯೂ ಸರ್, ನಿಮ್ಮಂಥವರ ಹಾರೈಕೆಯೇ ನನಗೆ ದೊಡ್ಡ ಶಕ್ತಿ. Let’s see what happens. Hope for the best” ಎಂದು reply ಮಾಡಿದ್ದಳು.
ಆದರೆ ನಿರೀಕ್ಷೆ ಸುಳ್ಳಾಗಿತ್ತು. ಸೆಮಿಫೈನಲ್’ನಲ್ಲೂ ಆ ದೊಡ್ಡ ಇನ್ನಿಂಗ್ಸ್ ಬರಲಿಲ್ಲ. ಫೈನಲ್’ನಲ್ಲೂ ಬರಲಿಲ್ಲ. ಅಂದು ಭಾರತ ಯಾಕೆ ವಿಶ್ವಕಪ್ ಗೆಲ್ಲಲಿಲ್ಲ ಎಂಬುದಕ್ಕೆ ಸ್ಮೃತಿ ಮಂಧನಳ ವೈಫಲ್ಯವೇ ಉತ್ತರ.
ಮೈದಾನಕ್ಕಿಳಿದರೆ ಸಾರಾಸಗಟಾಗಿ ರನ್ ಗಳಿಸುತ್ತಿದ್ದ ಆಟಗಾರ್ತಿ. ಆ ವಿಶ್ವಕಪ್’ನಲ್ಲಿ ಸ್ಮೃತಿ ಮಂಧನಗೆ ಏನಾಗಿತ್ತು ಎಂಬ ಪ್ರಶ್ನೆಗೆ ಸ್ವತಃ ಆಕೆಯ ಬಳಿಯೂ ಉತ್ತರವಿರಲಿಲ್ಲ. ಏಳು ವರ್ಷಗಳ ಹಿಂದೆ ಹಾಗೆ ದಿಕ್ಕೇ ತೋಚದೆ ಕೂತಿದ್ದ ಸ್ಮೃತಿ ಮಂಧನ ಇವತ್ತು ಭಾರತದ ಶ್ರೇಷ್ಠ ಮಹಿಳಾ ಕ್ರಿಕೆಟರ್ ಆಗುವತ್ತ ಸಾಗುತ್ತಿದ್ದಾಳೆ.
ದಕ್ಷಿಣ ಆಫ್ರಿಕಾ ವಿರುದ್ಧ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಸತತ ಎರಡು ಶತಕಗಳನ್ನು ಬಾರಿಸಿ ಮಹಿಳಾ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಠಿಸಿದ್ದಾಳೆ.
ಭಾರತ ಮಹಿಳಾ ಕ್ರಿಕೆಟ್’ನ ಮೊದಲ ಸೂಪರ್ ಸ್ಟಾರಿಣಿ ಮಿಥಾಲಿ ರಾಜ್. ಈಕೆ ಮಿಥಾಲಿಯನ್ನೇ ಮೀರಿಸಬಲ್ಲ ಪ್ರತಿಭಾಸಂಪನ್ನೆ. ಭಾರತ ಪರ ಮಹಿಳಾ ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿದವರ ಪೈಕಿ ಮಿಥಾಲಿ ಹಾಗೂ ಸ್ಮೃತಿ ಈಗ ಸಮಬಲರು. ಮಿಥಾಲಿ ರಾಜ್ 211 ಏಕದಿನ ಇನ್ನಿಂಗ್ಸ್’ಗಳಲ್ಲಿ 7 ಶತಕಗಳನ್ನು ಬಾರಿಸಿದ್ದರೆ, ಸ್ಮೃತಿ ಮಂಧನ ಏಳು ಶತಕಗಳಿಗಾಗಿ ಆಡಿರುವುದು ಕೇವಲ 84 ಇನ್ನಿಂಗ್ಸ್ ಅಷ್ಟೇ.
ಸ್ಮೃತಿ ಮಂಧನ ಮಹಾರಾಷ್ಟ್ರದ ಸಾಂಗ್ಲಿಯವಳು. ಆಕೆ The Great Wall of India ರಾಹುಲ್ ದ್ರಾವಿಡ್ ಅವರ ದೊಡ್ಡ ಅಭಿಮಾನಿ. ಶ್ರವಣ್ ಮಂಧನ ಆಕೆಯ ಸಹೋದರ. ತಂಗಿಯ 16ನೇ ಹುಟ್ಟುಹಬ್ಬಕ್ಕೆ ಅಣ್ಣ ದೊಡ್ಡ ಉಡುಗೊರೆ ಕೊಟ್ಟಿದ್ದ. ಏನದು ಉಡುಗೊರೆ ಗೊತ್ತಾ..? ರಾಹುಲ್ ದ್ರಾವಿಡ್ ಅವರ ಹಸ್ತಾಕ್ಷರವುಳ್ಳ ಬ್ಯಾಟ್.
2012ರಲ್ಲಿ ಬೆಂಗಳೂರಿಗೆ ಬಂದಿದ್ದ ಸ್ಮೃತಿ ಮಂಧಳನ ಅಣ್ಣ ಶ್ರವಣ್, ದ್ರಾವಿಡ್ ಅವರನ್ನು ಭೇಟಿ ಮಾಡಿ ತಂಗಿಗಾಗಿ ಅವರಿಂದ ಬ್ಯಾಟ್ ಒಂದನ್ನು ಪಡೆದಿದ್ದ. ದಿಗ್ಗಜ ದ್ರಾವಿಡ್ ಅವರಿಂದ ಸಿಕ್ಕಿದ್ದ ಬೆಲೆ ಕಟ್ಟಲಾಗದ ಉಡುಗೊರೆಯದು. ಮನೆಯ showcaseನಲ್ಲಿ ಇಟ್ಟಿದ್ದಳು ಸ್ಮೃತಿ.
ಒಂದು ದಿನ showcaseನಲ್ಲಿದ್ದ ಬ್ಯಾಟ್ ಕೈಗೆತ್ತಿಕೊಂಡ ಸ್ಮೃತಿಗೆ, “ಏನು ಅದ್ಭುತವಾಗಿದೆ ಈ ಬ್ಯಾಟ್, amazing balance” ಅನ್ನಿಸಿಬಿಟ್ಟಿತ್ತು. ಅಷ್ಟೇ.. ಬ್ಯಾಟನ್ನು ಕಿಟ್ ಬ್ಯಾಗ್’ಗೆ ತುಂಬಿಸಿಕೊಂಡಿದ್ದಳು.
2013. ಅಕ್ಟೋಬರ್ 31. ವಡೋದರಲ್ಲಿ ಗುಜರಾತ್ ವಿರುದ್ಧ West Zone Women’s U-19 ಟೂರ್ನಿಯ ಪಂದ್ಯ. ಮಹಾರಾಷ್ಟ್ರ ಪರ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಸ್ಮೃತಿ ಮಂಧನಳ ಕೈಯಲ್ಲಿದ್ದದ್ದು ದ್ರಾವಿಡ್ ಉಡುಗೊರೆಯಾಗಿ ಕೊಟ್ಟಿದ್ದ ಅದೇ ಬ್ಯಾಟ್.
ದ್ರಾವಿಡ್ ಅವರ ಬ್ಯಾಟ್’ನಲ್ಲಿ ಆಡಿದ್ದ 17 ವರ್ಷದ ಸ್ಮೃತಿ ಮಂಧನ ಆ ದಿನ ದ್ವಿಶತಕ ಬಾರಿಸಿದ್ದಳು. ಅದು ಏಕದಿನ ಕ್ರಿಕೆಟ್’ನಲ್ಲಿ ಭಾರತೀಯ ಮಹಿಳೆಯೊಬ್ಬಳು ಬಾರಿಸಿದ್ದ ಮೊಟ್ಟ ಮೊದಲ ಡಬಲ್ ಸೆಂಚುರಿ. 150 ಎಸೆತಗಳಲ್ಲಿ 224 ರನ್. ಕ್ರಿಕೆಟ್ ಜಗತ್ತಿಗೆ ಸ್ಮೃತಿ ಮಂಧನಳನ್ನು ದೊಡ್ಡದಾಗಿ ಪರಿಚಯಿಸಿದ್ದ ಇನ್ನಿಂಗ್ಸ್ ಅದು. ಅಲ್ಲಿಂದ ಸಾಂಗ್ಲಿ ಹುಡುಗಿ ಸ್ಮೃತಿ ತಿರುಗಿ ನೋಡಿದ್ದೇ ಇಲ್ಲ.
ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗಿ, ತಂಡಕ್ಕೆ ಕಪ್ ಗೆಲ್ಲಿಸಿಕೊಟ್ಟಿದ್ದ ಸ್ಮೃತಿ, ತನ್ನ ನೆಚ್ಚಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಬೆನ್ನು ಬೆನ್ನಿಗೆ ಎರಡು ಶತಕಗಳನ್ನು ಬಾರಿಸಿದ್ದಾಳೆ.
ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ #King ಆದ್ರೆ, ಸ್ಮೃತಿ ಮಂಧನ #Queen. ಆತನ ಜರ್ಸಿ ನಂ.18. ಈಕೆಯದ್ದೂ ಅದೇ ನಂಬರ್. ಇಬ್ಬರೂ ಬೆಂಗಳೂರಿನ ದತ್ತುಮಕ್ಕಳು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಲ್ ಕ್ರಿಕೆಟರ್’ಗಳು.