ಅಭಿನವ್ ಮನೋಹರ್. ಕರ್ನಾಟಕದ ವಿಸ್ಫೋಟಕ ದಾಂಡಿಗ. ಮೈದಾನಕ್ಕಿಳಿದರೆ ಸಿಕ್ಸರ್’ಗಳ ಸುರಿಮಳೆಗೈಯುವ ಪವರ್ ಹಿಟ್ಟರ್.
ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿ ಅಭಿನವ್ ಮನೋಹರ್ ಅವರ ಆರ್ಭಟಕ್ಕೆ ಸಾಕ್ಷಿಯಾಗುತ್ತಿದೆ. ಶಿವಮೊಗ್ಗ ಲಯನ್ಸ್ ತಂಡದ ಪರ ಆರ್ಭಟಿಸುತ್ತಿರುವ 30 ವರ್ಷದ ಅಭಿನವ್ ಮನೋಹರ್ ಈ ಬಾರಿ ಆಡಿರುವ ಮೊದಲ ಪಂದ್ಯಗಳಲ್ಲಿ ಬಾರಿಸಿರುವ ಸಿಕ್ಸರ್’ಗಳ ಸಂಖ್ಯೆ ಬರೋಬ್ಬರಿ 31.
ಟೂರ್ನಿಯಲ್ಲಿ ಗಳಿಸಿರುವ 329 ರನ್’ಗಳ ಪೈಕಿ 186 ರನ್’ಗಳು ಸಿಕ್ಸರ್’ಗಳ ಮೂಲಕವೇ ಬಂದಿರುವುದು ವಿಶೇಷ. ವಿಧ್ವಂಸಕ ಬ್ಯಾಟಿಂಗ್ ಫಾರ್ಮ್’ನಲ್ಲಿರುವ ಬಲಗೈ ಬ್ಯಾಟರ್ ಅಭಿನವ್ ಮನೋಹರ್ 188ರ ಸ್ಟ್ರೈಕ್’ರೇಟ್’ನಲ್ಲಿ ಬ್ಯಾಟ್ ಬೀಸುತ್ತಿದ್ದು, 31 ಸಿಕ್ಸರ್’ಗಳ ಜೊತೆ 8 ಬೌಂಡರಿಗಳನ್ನು ಬಾರಿಸಿದ್ದಾರೆ. ಶನಿವಾರ ನಡೆದ ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದ್ದ ಅಭಿನವ್ ಮನೋಹರ್ ಕೇವಲ 27 ಎಸೆತಗಳಲ್ಲಿ 9 ಸಿಡಿಲ ಸಿಕ್ಸರ್’ಗಳ ನೆರವಿನಿಂದ ಸಿಡಿಲಬ್ಬರದ 70 ರನ್ ಸಿಡಿಸಿ, ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ತಂಡಕ್ಕೆ ಮೊದಲ ಗೆಲುವು ತಂದು ಕೊಟ್ಟಿದ್ದರು. ಮೊದಲ ಆರೂ ಪಂದ್ಯಗಳನ್ನು ಸೋತಿದ್ದ ಶಿವಮೊಗ್ಗ ತಂಡ, 7ನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಅಭಿನವ್ ಮನೋಹರ್ ಅಬ್ಬರ:
Vs ಮೈಸೂರು ವಾರಿಯರ್ಸ್: 52* ರನ್, 29 ಎಸೆತ; 2 ಸಿಕ್ಸರ್
Vs ಮಂಗಳೂರು ಡ್ರಾಗನ್ಸ್: 84* ರನ್, 34 ಎಸೆತ; 9 ಸಿಕ್ಸರ್
Vs ಬೆಂಗಳೂರು ಬ್ಲಾಸ್ಟರ್ಸ್: 5 ರನ್, 8 ಎಸೆತ
Vs ಹುಬ್ಬಳ್ಳಿ ಟೈಗರ್ಸ್: 17 ರನ್, 12 ಎಸೆತ; 2 ಸಿಕ್ಸರ್
Vs ಗುಲ್ಬರ್ಗ ಮಿಸ್ಟಿಕ್ಸ್: 55 ರನ್, 36 ಎಸೆತ; 5 ಸಿಕ್ಸರ್
Vs ಮೈಸೂರು ವಾರಿಯರ್ಸ್: 46 ರನ್, 29 ಎಸೆತ; 4 ಸಿಕ್ಸರ್
Vs ಹುಬ್ಬಳ್ಳಿ ಟೈಗರ್ಸ್: 70 ರನ್, 27 ಎಸೆತ; 9 ಸಿಕ್ಸರ್
30 ವರ್ಷದ ಅಭಿನವ್ ಮನೋಹರ್ ಐಪಿಎಲ್’ನಲ್ಲಿ ಗುಜರಾತ್ ಟೈಟನ್ಸ್ ಪರ ಆಡಿದ್ದರು. ಈ ಬಾರಿಯ ಮಹಾರಾಜ ಟ್ರೋಫಿಯಲ್ಲಿ ಅಭಿನವ್ ಅಬ್ಬರವನ್ನು ನೋಡಿದರೆ, ಐಪಿಎಲ್ ಮೆಗಾ ಹರಾಜಿನಲ್ಲಿ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಕರ್ನಾಟಕದ ಆಟಗಾರರನ್ನು ನಿರಂತರವಾಗಿ ಕಡೆಗಣಿಸುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಅಭಿನವ್ ಮನೋಹರ್ ಅವರನ್ನು ಖರೀದಿಸಿಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.