
ಬದುಕು ಕೊಡುವ ಅಚ್ಚರಿಗಳಿಗೆ ಸಾಕ್ಷಿ ಈ ಇಬ್ಬರು ಜೊತೆಗಾರರು..!
ಅದೊಂದು ಸಿಂಹದಮರಿ ಸೈನ್ಯ.. ಅದಕ್ಕೊಬ್ಬ ನಾಯಕ.. ಅವನು ಕಿಡಿ ಕಿಚ್ಚು.. ಅವನ ತಂಡ ಅವನ ಹಾಗೆಯೇ ಬೆಂಕಿ.
ಆ ಸಿಂಹದಮರಿ ಸೈನ್ಯ ಮಲೇಷ್ಯಾದಲ್ಲಿ ಯುದ್ಧ ಗೆದ್ದಿತ್ತು ಆ ದಿನ.. ಇನ್ನೇನು ಗೆಲುವಿನ ಬಾಗಿಲು ಮುಚ್ಚಿತೆನ್ನುವಷ್ಟರಲ್ಲಿ ಆ ಬಾಗಿಲನ್ನು ಒದ್ದು, ಸೋಲಿನ ಚಕ್ರವ್ಯೂಹವನ್ನು ಭೇದಿಸಿ ವಿಜೃಂಭಿಸಿತ್ತು ಆ ಯುವಸೈನ್ಯ.


ಅಂದ ಹಾಗೆ, ಇದು 2008ರ ಅಂಡರ್-19 ವಿಶ್ವಕಪ್ ವಿಜಯದ ಕಥೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಕಿರಿಯರ ವಿಶ್ವಕಪ್ ಗೆದ್ದು ಬೀಗಿದ ಕಥೆ.
ಆ ತಂಡಲ್ಲಿದ್ದವರ ಪೈಕಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ದಿಗ್ಗಜರ ಸಾಲು ಸೇರಿದರೆ, ಉಳಿದವರದ್ದು ಒಂದೊಂದು ಕಥೆ.
ಈ ಕಥೆಯ ಕಥಾನಾಯಕ ಒಬ್ಬನಲ್ಲ, ಇಬ್ಬರು. ಒಬ್ಬ ಅಜಿತೇಶ್ ಅರ್ಗಲ್, ಇನ್ನೊಬ್ಬ ತನ್ನಯ್ ಶ್ರೀವಾತ್ಸವ್.
ಇಬ್ಬರೂ ಆ ಅಂಡರ್-19 ವಿಶ್ವಕಪ್ ಫೈನಲ್ ಹೀರೋಗಳು.
ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 5 ಓವರ್’ಗಳಲ್ಲಿ ಕೇವಲ 7 ರನ್ನಿತ್ತು 2 ವಿಕೆಟ್ ಪಡೆದು ಭಾರತ ಚಾಂಪಿಯನ್ ಆಗಲು ಕಾರಣರಾದವರಲ್ಲಿ ಒಬ್ಬ ಅಜಿತೇಶ್. ಅದೇ ಪಂದ್ಯದಲ್ಲಿ ಭಾರತ ಪರ ಟಾಪ್ ಸ್ಕೋರರ್ ಆಗಿದ್ದವನು (46 ರನ್) ತನ್ಮಯ್ ಶ್ರೀವಾತ್ಸವ್.

ಅಜಿತೇಶ್ ಅರ್ಗಲ್ ಮಧ್ಯಪ್ರದೇಶದ ಬಲಗೈ ಮಧ್ಯಮ ವೇಗದ ಬೌಲರ್.. ಅಂದು ಅಂಡರ್-19 ವಿಶ್ವಕಪ್ ಗೆದ್ದ ತಂಡದ ನಾಯಕ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ದಿಗ್ಗಜನೆನಿಸಿಕೊಂಡಿದ್ದಾನೆ. ರವೀಂದ್ರ ಜಡೇಜ ವಿಶ್ವಶ್ರೇಷ್ಠ ಆಲ್ರೌಂಡರ್.. ಮನೀಶ್ ಪಾಂಡೆ ಭಾರತ ಪರ ಮಿಂಚಿ ಮರೆಯಾಗಿದ್ದಾನೆ.. ಈ ಹುಡುಗರದ್ದು ಬೇರೆಯೇ ಕಥೆ. ಭಾರತ ಪರ ಆಡುವ ಕನಸು ನನಸಾಗಲಿಲ್ಲ. ಕ್ರಿಕೆಟ್ ಬಿಟ್ಟು ಇನ್ಕಮ್ ಟ್ಯಾಕ್ಸ್ ಇನ್ಸ್’ಪೆಕ್ಟರ್ ಆಗಿದ್ದ ಅಜಿತೇಶ್, ಈಗ ಕ್ರಿಕೆಟ್ ಅಂಪೈರ್.

ಉತ್ತರ ಪ್ರದೇಶದ ಕಾನ್ಪುರದವನಾದ ತನ್ಮಯ್ ಶ್ರೀವಾತ್ಸವ್ ಕೂಡ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿ ಅಂಪೈರಿಂಗ್ ವೃತ್ತಿಗೆ ಕಾಲಿಟ್ಟಿದ್ದಾನೆ. ವಿಶೇಷವೆಂದರೆ ಅಂಡರ್-19 ವಿಶ್ವಕಪ್ ಹೀರೋಗಳಿಬ್ಬರೂ ದೇಶೀಯ ಕ್ರಿಕೆಟ್’ನ ಒಂದೇ ಪಂದ್ಯದಲ್ಲಿ ಅಂಪೈರಿಗಳಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬದುಕು ಕೊಡುವ ಅಚ್ಚರಿಗಳೇ ಹೀಗೆ.





