
ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಸಂಪನ್ನ
ಉಡುಪಿಯಲ್ಲಿ ನಡೆದ ಕ್ರೀಡಾ ಹಬ್ಬ, ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ — Big Beaters ಅಂಬಲ್ಪಾಡಿ ತಂಡ ಚಾಂಪಿಯನ್, Malsi Smashers ರನ್ನರ್-ಅಪ್

ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಅಕ್ಟೋಬರ್ 11 ರಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ (Torpedoes Badminton Premier League) ಭರ್ಜರಿಯಾಗಿ ನೆರವೇರಿತು. ತೀರ್ಥಹಳ್ಳಿ, ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ 12 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದವು.


ಫೈನಲ್ ಪಂದ್ಯದಲ್ಲಿ Big Beaters ಅಂಬಲ್ಪಾಡಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಕೈಸೇರಿಸಿತು. Malsi Smashers ತಂಡ ರನ್ನರ್-ಅಪ್ ಆಗಿ ತೃಪ್ತಿಪಟ್ಟಿತು.

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅತ್ಯಂತ ಶಿಸ್ತಿನೊಂದಿಗೆ, ಉತ್ತಮ ಕ್ರೀಡಾ ಸೌಹಾರ್ದತೆಯನ್ನು ಉತ್ತೇಜಿಸುವ ರೀತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಆಟಗಾರರು ಮತ್ತು ತಂಡದ ಪ್ರತಿನಿಧಿಗಳು ಈ ಕ್ರೀಡಾಕೂಟದ ಶಿಸ್ತು, ವ್ಯವಸ್ಥೆ ಹಾಗೂ ಆಯೋಜನೆಯ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತ ಮತ್ತು ರನ್ನರ್-ಅಪ್ ತಂಡಗಳಿಗೆ ಬಹುಮಾನ ವಿತರಣೆ ನಡೆಯಿತು. ಗಣೇಶ್ ಮಟ್ಟು, ಗುರುರಾಜ್ ಸಾಲ್ಯಾನ್, ಅಮಿತ್ , ಶಾಲಿನಿ ಶೆಟ್ಟಿ ಮತ್ತು ಗೌತಮ್ ಶೆಟ್ಟಿ ಇವರುಗಳು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕ್ರೀಡಾಪಟುಗಳ ಶ್ರಮ, ತಂಡಗಳ ಸಮ್ಮಿಲನ ಮತ್ತು ಪ್ರೇಕ್ಷಕರ ಉತ್ಸಾಹ ಕಾರ್ಯಕ್ರಮಕ್ಕೆ ವಿಶೇಷ ಕಳೆ ತುಂಬಿತು. ಭಾಗವಹಿಸಿದ ಎಲ್ಲಾ ಆಟಗಾರರು, ತಂಡದ ಪ್ರತಿನಿಧಿಗಳು ಹಾಗೂ ಕ್ರೀಡಾಭಿಮಾನಿಗಳಿಗೆ ಆಯೋಜಕರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು.

ಈ ಕ್ರೀಡಾಕೂಟದ ಯಶಸ್ಸಿನ ಹಿಂದೆ ಗೌತಮ್ ಶೆಟ್ಟಿ ಮತ್ತು ಅವರ ಸಹ ತಂಡದ ಶ್ರಮ ಅಚ್ಚಳಿಯಾಗಿದೆ. ಅವರ ನೇತೃತ್ವದಲ್ಲಿ ನಡೆದ ಈ ಪ್ರೀಮಿಯರ್ ಲೀಗ್ ಉಡುಪಿ ಜಿಲ್ಲೆಯ ಬ್ಯಾಡ್ಮಿಂಟನ್ ಕ್ರೀಡೆಗೆ ಹೊಸ ಪ್ರೇರಣೆಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಯುವ ಪ್ರತಿಭೆಗಳು ಹೊರಹೊಮ್ಮಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಸಂಪೂರ್ಣ ಕಾರ್ಯಕ್ರಮವನ್ನು Sports Kannada ವಾಹಿನಿ ನೇರ ಪ್ರಸಾರ ಮಾಡಿತ್ತು.





