
ತನ್ನತ್ತ ನುಗ್ಗಿ ಬಂದ ಕಲ್ಲುಗಳಿಂದಲೇ ಕೋಟೆ ಕಟ್ಟಿದ ಕನ್ನಡಿಗ..!
ಅವಮಾನಿಸಿದವರಿಂದಲೇ ಶಹಬ್ಬಾಸ್ ಎನ್ನಿಸಿಕೊಳ್ಳುವುದರಲ್ಲಿ ಸಿಗುವ ತೃಪ್ತಿ ಬಹುಶಃ ಬೇರೆ ಎಲ್ಲೂ ಸಿಗಲಾರದು.. ಕರ್ನಾಟಕದ ಕ್ರಿಕೆಟ್ ಹೆಮ್ಮೆ ಕೆ.ಎಲ್ ರಾಹುಲ್ ಈಗ ಅದೇ ತೃಪ್ತಿಯನ್ನು ಅನುಭವಿಸುತ್ತಿದ್ದಾನೆ..

ಇವತ್ತು ರಾಜ್’ಕೋಟ್’ನಲ್ಲಿ ರಾಹುಲ್ ಆಡಿದ ಇನ್ನಿಂಗ್ಸ್, ಬಾರಿಸಿದ ಶತಕ ಅವನ ಅಸೀಮ ಕೌಶಲ್ಯಕ್ಕೆ ಮತ್ತೊಂದು ಸಾಕ್ಷಿ ಅಷ್ಟೇ..

ಒಬ್ಬ ವ್ಯಕ್ತಿಯ ಮೇಲೆ ಪದೇ ಪದೇ ಪೆಟ್ಟು ಬೀಳುತ್ತಲೇ ಇದ್ದರೆ ಒಂದೋ ಆತ ಸೋತು ಕೈಚೆಲ್ಲುತ್ತಾನೆ, ಇಲ್ಲಾ.. ತಿರುಗಿ ಬೀಳುತ್ತಾನೆ.. ರಾಹುಲ್ ತಿರುಗಿ ಬಿದ್ದಿದ್ದಾನೆ, ಬೀಳುತ್ತಲೇ ಇದ್ದಾನೆ..

ಧೂಳಿನಿಂದ ಮತ್ತೆ ಮತ್ತೆ ಎದ್ದು ಬರುವ ವಿಚಾರದಲ್ಲಿ ರಾಹುಲ್ ಮತ್ತೊಬ್ಬ ರಾಹುಲ್ ದ್ರಾವಿಡ್.. ದ್ರಾವಿಡ್ ಅವರೂ ಕೂಡ ಅಷ್ಟೇ.. ಇಂಥದ್ದೇ ಟೀಕೆ, ಅವಮಾನಗಳನ್ನು ಎದುರಿಸಿಯೇ ದಿಗ್ಗಜನಾಗಿ ಬೆಳೆದು ನಿಂತದ್ದು. ಅವರ ಅದೃಷ್ಟ.. ದ್ರಾವಿಡ್ ಆಡುತ್ತಿದ್ದ ಕಾಲದಲ್ಲಿ ಈಗಿನಂತೆ ವಿಷ ಕಾರಲು ಸಾಮಾಜಿಕ ಜಾಲತಾಣ ಇರಲಿಲ್ಲ.. ಕ್ರಿಕೆಟ್ ಪಂಡಿತರ ರೂಪದಲ್ಲಿ ಕಾಣುವ ವಿಷಸರ್ಪಗಳೂ ಈಗಿನಷ್ಟು ವಿಷ ಕಾರುತ್ತಿರಲಿಲ್ಲ.
ಆದರೆ ರಾಹುಲ್..?
ಅದೆಷ್ಟು ಟೀಕೆಗಳು.. ಅದೆಷ್ಟು ಅವಮಾನಗಳು.. ಅದೆಷ್ಟು ಕಿಡಿನುಡಿಗಳು…
ಇವನು ಭಾರತ ಪರ ಆಡುತ್ತಿರುವುದೇ ಅಪರಾಧ ಎಂದವರು ಹಲವರು..
ಇವನ ಕ್ರಿಕೆಟ್ ಜೀವನವೇ scam ಎಂದವರು ಕೆಲವರು..
ಬಹುಶಃ ಇತ್ತೀಚಿನ ವರ್ಷಗಳಲ್ಲಿ ಕೆ.ಎಲ್ ರಾಹುಲ್’ನಷ್ಟು ವಿಷವುಂಡ ಕ್ರಿಕೆಟಿಗ ಮತ್ತೊಬ್ಬನಿಲ್ಲ.. ಎಲ್ಲಾ ವಿಷವನ್ನು ನುಂಗಿದ ರಾಹುಲ್ ಭಾರತ ಕ್ರಿಕೆಟ್ ತಂಡಕ್ಕೆ ಅಮೃತವನ್ನು ಉಣ ಬಡಿಸುತ್ತಿದ್ದಾನೆ. ಮತ್ತೆ ಮತ್ತೆ ಅಗ್ನಿಪರೀಕ್ಷೆಗಳನ್ನು ಗೆಲ್ಲುತ್ತಲೇ ಇದ್ದಾನೆ..

ಅದು ಟೆಸ್ಟ್ ಕ್ರಿಕೆಟ್ ಇರಲಿ, ಏಕದಿನ ಕ್ರಿಕೆಟ್ ಇರಲಿ.. ಇವತ್ತಿಗೆ ರಾಹುಲ್ ಭಾರತ ಕ್ರಿಕೆಟ್ ತಂಡದ ಆಪದ್ಬಾಂಧವ.. ಅದರಲ್ಲೂ ಏಕದಿನ ಕ್ರಿಕೆಟ್.. ಆರು ಕ್ರಮಾಂಕಗಳಲ್ಲಿ ಆರು ಗೇರ್’ಗಳಲ್ಲಿ ಆಡಬಲ್ಲ ಸ್ಪೆಷಲ್ ಕ್ರಿಕೆಟರ್ ರಾಹುಲ್.
ಟೆಸ್ಟ್ ಕ್ರಿಕೆಟ್’ನಲ್ಲಿ ಆರಂಭಿಕ.. ಏಕದಿನ ಕ್ರಿಕೆಟ್’ನಲ್ಲಿ 5ನೇ ಕ್ರಮಾಂಕ.. ಎರಡೂ ಕೂಡ ಬ್ಯಾಟಿಂಗ್’ಗೆ ಸುಲಭವಲ್ಲದ ಜಾಗಗಳು.
ಪ್ರತಿಕೂಲ ಸನ್ನಿವೇಶಗಳಲ್ಲಿ ಹೊಸ ಕೆಂಪು ಚೆಂಡನ್ನು ಎದುರಿಸಿ ನಿಂತು ಟೆಸ್ಟ್ ಕ್ರಿಕೆಟ್’ನಲ್ಲಿ ಶತಕ ಬಾರಿಸುವುದು, ಏಕದಿನ ಕ್ರಿಕೆಟ್’ನಲ್ಲಿ ಬೇರೆ ಬೇರೆ ಕ್ರಮಾಂಕಗಳಲ್ಲಿ ಆಡಿ ಇನ್ನಿಂಗ್ಸ್ ಕಟ್ಟುವುದು ಸುಲಭದ ಕೆಲಸ ಅಲ್ಲವೇ ಅಲ್ಲ..

ಅದರಲ್ಲೂ 50 ಓವರ್’ಗಳ ಮಾದರಿಯ ಕ್ರಿಕೆಟ್’ನಲ್ಲಿ 5ನೇ ಕ್ರಮಾಂಕದಲ್ಲಿ ಸ್ಥಿರತೆಯ ಆಟವಾಡಲು ಸಾಮಾನ್ಯ ಕೌಶಲ್ಯ ಸಾಲದು. ಕೆಲವೊಮ್ಮೆ ಅಲ್ಲಿ ಆಡಲು ಸಿಗುವುದೇ ಬೆರಳೆಣಿಕೆಯ ಎಸೆತಗಳಷ್ಟೇ.. ಫಿನಿಷರ್ ಜವಾಬ್ದಾರಿಯನ್ನು ನಿಭಾಯಿಸುವ ಹೊತ್ತಲ್ಲೇ ಅಗ್ರ ಮತ್ತು ಮಧ್ಯಮ ಕ್ರಮಾಂಕ ಮಕಾಡೆ ಮಲಗಿದರೆ ನೆಲ ಕಚ್ಚಿ ಆಡಬೇಕಾದ ಸನ್ನಿವೇಶ ಎದುರಾಗುತ್ತದೆ. ಒಂದೊಂದೂ ಪಂದ್ಯಗಳಲ್ಲಿ ಒಂದೊಂದು ಪಾತ್ರ, ಒಂದೊಂದು ಜವಾಬ್ದಾರಿ.. ಇದರ ಮಧ್ಯೆ ಪದೇ ಪದೇ ಬ್ಯಾಟಿಂಗ್ ಕ್ರಮಾಂಕಗಳಲ್ಲಿ ಬದಲಾವಣೆ.. ಎಲ್ಲದಕ್ಕೂ ಎದೆಕೊಟ್ಟು ನಿಲ್ಲಬೇಕಾದರೆ ಅವನು ‘ರಾಹುಲ್’ ಆಗಿರಲೇಬೇಕು.

‘’ನಾನು ಪ್ಲೇಯಿಂಗ್ XIನಲ್ಲಿ ಇದ್ದರೆ ಸಾಕು. ಅದಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧ’’
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸಿಕ್ಸರ್ ಬಾರಿಸಿ ಭಾರತವನ್ನು ಗೆಲ್ಲಿಸಿದ ನಂತರ ರಾಹುಲ್ ಆಡಿದ್ದ ಮಾತಿದು.

ಏಕದಿನ ಕ್ರಿಕೆಟ್’ನಲ್ಲಿ 50+ ಬ್ಯಾಟಿಂಗ್ ಸರಾಸರಿಯ ನಡುವೆಯೂ ರಾಹುಲ್ ಈ ಮಾತು ಹೇಳುತ್ತಾನೆ ಎಂದರೆ ತಂಡದಲ್ಲಿ ಅವನ ಸ್ಥಾನದ ಬಗ್ಗೆ ಅದೆಷ್ಟು ಅಭದ್ರತೆ ಇದೆ ಎಂಬುದು ಅರ್ಥವಾಗುತ್ತದೆ. ಅಂಥಾ ಅಭದ್ರತೆಯನ್ನು ಸೃಷ್ಠಿ ಮಾಡಿದವರಿಗೆ ರಾಹುಲ್ ಮತ್ತೆ ಮತ್ತೆ ಆಟದಿಂದಲೇ ಉತ್ತರಿಸುತ್ತಿದ್ದಾನೆ.
ಕಾಲಚಕ್ರ ತಿರುಗುತ್ತಲೇ ಇರುತ್ತದೆ..
-ಸುದರ್ಶನ್




