Categories
ಕ್ರಿಕೆಟ್

ಚೆಸ್, ಕ್ರಿಕೆಟ್ ಮತ್ತು ಅನಿಶ್ಚಿತತೆ!

ಕ್ರಿಕೆಟ್ ಮತ್ತು ಚೆಸ್ ಆಟದಲ್ಲಿ ಪ್ರೆಡಿಕ್ಷನ್ ನಡೆಯುವುದಿಲ್ಲ! ಬದುಕಿನಲ್ಲಿ ಕೂಡ! 
ಎಷ್ಟೋ ಬಾರಿ ನಮ್ಮ ತಪ್ಪು ನಡೆಗಳೆ ನಮ್ಮನ್ನು ಗೆಲ್ಲಿಸುತ್ತವೆ! 
———————————————————
ಚೆಸ್ ಮತ್ತು ಕ್ರಿಕೆಟ್ ಆಟಗಳು ಬಹಳಷ್ಟು ವಿಶೇಷತೆಯನ್ನು ಪಡೆದವುಗಳು. ಅದಕ್ಕೆ ಕಾರಣ ಏನೆಂದರೆ ಆ ಆಟಗಳ ಒಳಗೆ ಅಡಗಿರುವ ಅನಿಶ್ಚಿತತೆ ಮತ್ತು ವಿಕಲ್ಪಗಳು. ಅವು ನಮ್ಮ ಬದುಕಿನ ಪ್ರತಿಫಲನದ ಕನ್ನಡಿಗಳು ಕೂಡ ಆಗಿವೆ!
ಜಗತ್ತಿನ ಬಲಾಢ್ಯ ಕ್ರಿಕೆಟ್ ತಂಡವಾದ ಭಾರತವನ್ನು ಕ್ರಿಕೆಟ್ ಶಿಶುಗಳಾದ ಬಾಂಗ್ಲಾ ದೇಶವು  ಸೋಲಿಸಿದ ಉದಾಹರಣೆ ಇಲ್ಲವೇ?
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ, ಅದು ಹೀಗೆ  ಆಗಬೇಕು, ಹಾಗೆಯೇ ಆಗಬೇಕು ಎಂದು! ಆದರೆ ಅದು ಹಾಗೆ ಆಗುವುದಿಲ್ಲ! ಹೀಗೆ ಕೂಡ ಆಗಲೇ ಬೇಕು ಅಂದಿಲ್ಲ! ಯಾಕೆಂದರೆ ವಿಧಿಯ ನಿರ್ಧಾರ ಬೇರೆಯೇ ಇರುತ್ತದೆ!
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ಅವನು/ ಅವಳು ಹೀಗೇ ಇರಬೇಕು, ಹಾಗೆಯೇ ಇರಬೇಕು ಎಂದು!  ಅವನು/ ಅವಳು ನೀವು ಅಂದುಕೊಂಡ ಹಾಗೆಯೇ  ಯಾಕಿರಬೇಕು? ಅವನು ಅವನೇ! ಅವಳು ಅವಳೇ!
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ಅದೊಂದು
ಘಟನೆಯು ನನ್ನ ಜೀವನದಲ್ಲಿ ನಡೆಯದೇ ಹೋಗಿದ್ದರೆ ಚೆನ್ನಾಗಿತ್ತು ಎಂದು! ಆದ್ರೆ ಸ್ವಲ್ಪ ಕೂತು ಯೋಚನೇ ಮಾಡಿ. ಅದೇ ಘಟನೆ ನಿಮಗೆ ಲಾಂಗ್ ರೆಂಜಲ್ಲಿ ಅದ್ಭುತ ಫಲಿತಾಂಶ ಕೊಟ್ಟಿರುತ್ತದೆ!
ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ, ಅದೊಂದು ಸೋಲು ನನಗೆ  ಬಾರದೆ ಹೋಗಿದ್ದರೆ ಚೆನ್ನಾಗಿತ್ತು ಎಂದು! ಜಗತ್ತಿನ ಯಾವುದೇ ಆಟದಲ್ಲಿ ಎಲ್ಲರೂ, ಎಲ್ಲಾ ಕಾಲಕ್ಕೂ ಗೆಲ್ಲಲು ಸಾಧ್ಯವಿದೆಯೇ? ಸೋಲು ನಮಗೆ ಒಂದಲ್ಲ ಒಂದು ಗಟ್ಟಿ ಅನುಭವ ಕೊಟ್ಟಿರುತ್ತದೆ!
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ, ಅದೊಂದು ನಿರ್ಧಾರ ತಪ್ಪಾಗಿ ಹೋಯಿತಲ್ಲ ಎಂದು! ಆದ್ರೆ ನಿರ್ಧಾರ ಸರಿಯಾ ತಪ್ಪಾ ಎಂದು ಗೊತ್ತಾಗುವುದು ಫಲಿತಾಂಶ ಬಂದ ನಂತರ ಅಲ್ವಾ!
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ಅವನನ್ನು ಅಥವಾ ಅವಳನ್ನು ನಂಬಿ ಮೋಸಹೋದೆ ಎಂದು! ಆದ್ರೆ ನೀವು ಸೋಲಲು ಕಾರಣ ನೀವು ಅಲ್ಲ. ತಪ್ಪು ವ್ಯಕ್ತಿಗಳ ಮೇಲೆ ನೀವು ಇಟ್ಟ ಅತಿಯಾದ ನಂಬಿಕೆ! ಇದು ಗೊತ್ತಾದರೆ ನೀವು ಮುಂದೆ ಜಾಗ್ರತೆ ವಹಿಸುವುದಿಲ್ಲವೆ?
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು! ಆದ್ರೆ ನಮ್ಮನ್ನು ತುಂಬಾ ಪ್ರೀತಿ ಮಾಡುವವರು ಮತ್ತು ಅರ್ಥ ಮಾಡಿಕೊಳ್ಳುವವರು ನಮ್ಮ ಪಕ್ಕದಲ್ಲಿಯೇ ಇರುತ್ತಾರೆ! ನಮ್ಮನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುವ ನಾವು ಉಳಿದವರನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ?
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ನನ್ನ ಅದೃಷ್ಟ,  ಗ್ರಹಚಾರವೇ ಸರಿ ಇಲ್ಲ ಎಂದು! ಆದರೆ ನಮ್ಮ ಗೇಮ್ ಪ್ಲಾನ್ ಮತ್ತು ಪ್ರಯತ್ನದಲ್ಲಿ ತಪ್ಪುಗಳು ಇರುತ್ತವೆ. ಅದನ್ನು ಮೊದಲು ಸರಿ ಪಡಿಸಬೇಕು ತಾನೇ?
ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ ಅವನು ಅಥವ ಅವಳು ನನಗೆ ಸಪೋರ್ಟ್ ಮಾಡಲಿಲ್ಲ ಎಂದು! ಆದರೆ ಯೋಚನೆ ಮಾಡಿ, ತನ್ನ ಮೇಲೆ ಭರವಸೆ ಇಡದೆಯೆ ಬೇರೆಯವರನ್ನು ನಾವು ಹೆಚ್ಚು ಅವಲಂಬನೆ ಮಾಡಿದ್ದು ತಪ್ಪಲ್ಲವೇ?
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ವಿರಾಟ್ ಕೊಹ್ಲಿ ಹಾಗೆ ಮಾಡಿದ್ದು ತಪ್ಪು. ಹೀಗೆ ಮಾಡಬೇಕಿತ್ತು ಎಂದು!  ಆದರೆ ಗಮನಿಸಿ ಕೊಹ್ಲಿ ಆ ನಿರ್ಧಾರ  ತೆಗೆದುಕೊಂಡದ್ದು ಕ್ರಿಕೆಟ್ ಗ್ರೌಂಡಲ್ಲಿ! ಕೋಟಿ ಕೋಟಿ ಜನರ ಮುಂದೆ ಮತ್ತು ನೂರಾರು ಟಿವಿ ಕ್ಯಾಮೆರಾಗಳ ಎದುರು! ಆಗ ಅವನಿಗೆ ಗೈಡ್ ಮಾಡಲು ಅಲ್ಲಿ ಯಾರಿದ್ದರು?
ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ ಅವಳು ಅವನನ್ನು ಯಾಕೆ ಮದುವೆ ಆದಳು? ಅವನು ಅವಳನ್ನು ಯಾಕೆ ಮದುವೆ ಆದ? ಅದು ಅವರವರ ಖಾಸಗಿ ಬದುಕು. ಪ್ರತೀ ಒಬ್ಬರ ಆದ್ಯತೆಗಳು ಬೇರೆ ಬೇರೆಯೇ ಇರುತ್ತವೆ. ಎಲ್ಲರೂ ನಮ್ಮ ಹಾಗೆ ಯಾಕೆ ಯೋಚನೆ ಮಾಡಬೇಕು? ಅವರನ್ನು ಪ್ರಶ್ನೆ ಮಾಡಲು ನಾವು ಯಾರು?
ಎಷ್ಟೋ ಬಾರಿ ಒಂದು ರಿಯಾಲಿಟಿ ಶೋ ಅಥವಾ ಸ್ಪರ್ಧೆ ಮುಗಿದಾಗ ನಾವು ಹೇಳುತ್ತೇವೆ ಏನೆಂದರೆ ತೀರ್ಪುಗಾರರು ಅನ್ಯಾಯವನ್ನು  ಮಾಡಿದರು ಎಂದು! ಆದರೆ ಅವರ ಮುಂದೆ ಹಲವು ಮಾನದಂಡ ಇರುತ್ತದೆ ಮತ್ತು ಸ್ಕೋರ್ ಶೀಟ್ ಇರುತ್ತದೆ ಎಂಬುದನ್ನು ನಾವು ಮರೆತಿರುತ್ತೇವೆ. ಒಂದು ಸ್ಪರ್ಧೆ ನಾವು ವೀಕ್ಷಕರಾಗಿ ನೋಡುವುದಕ್ಕೂ, ತೀರ್ಪುಗಾರನಾಗಿ ನೋಡುವುದಕ್ಕೂ ಅಜಗಜಾಂತರ ವ್ಯತ್ಯಾಸ ಇರುತ್ತದೆ ಎಂದು ನಮಗೆ ಅರ್ಥ ಆದರೆ ಎಷ್ಟೋ ನೋವುಗಳು ಕಡಿಮೆ ಆಗುತ್ತವೆ.
ಒಟ್ಟಿನಲ್ಲಿ ನಾನು ಹೇಳಲು ಹೊರಟದ್ದು ಏನೆಂದರೆ ನಮ್ಮ ಬದುಕು ಇದೇ ರೀತಿಯ ಅನಿಶ್ಚಿತತೆಯ ಮೂಟೆ! ಇಲ್ಲಿ ಕೆಲವು ಸಂಗತಿಗಳು ನಾವು ಪ್ರೆಡಿಕ್ಟ್  ಮಾಡಿದ ಹಾಗೆ ನಡೆಯುವುದಿಲ್ಲ. ನಡೆಯಬೇಕು ಅಂತ ಕೂಡ ಇಲ್ಲ!
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ನೂರಾರು ಟಿವಿ
ಕ್ಯಾಮೆರಾಗಳ ಮುಂದೆ ಅಂಪಾಯರ್ ಒಂದೇ ಒಂದು ತಪ್ಪು ತೀರ್ಪನ್ನು ಕೊಟ್ಟಿರುತ್ತಾನೆ. ಆಗ ತಂಡಗಳ DRS ಆಯ್ಕೆ  ಮುಗಿದಿರುತ್ತದೆ.  ಆ ತೀರ್ಪು ಪಂದ್ಯದ ಫಲಿತಾಂಶವನ್ನು ಬದಲಾವಣೆ ಮಾಡುತ್ತದೆ. ಈ ಅನುದ್ದೇಶಿತ ತಪ್ಪುಗಳೇ ಕ್ರಿಕೆಟ್ ಆಟದ ಬ್ಯೂಟಿ ಆಗಿರುತ್ತವೆ!
That’s the BEAUTY of CRICKET! 
And that’s the BEAUTY of LIFE too!
ಕ್ರಿಕೆಟ್ ಮತ್ತು ಬದುಕು ಎರಡೂ ಅನಿಶ್ಚಿತತೆಗಳ ಮೂಟೆ ಎನ್ನುವುದೇ ಇಂದಿನ ಭರತವಾಕ್ಯ.
ಭಾರತ ಇಂದು ಪಾಕ್ ವಿರುದ್ಧ ಏಷಿಯಾ ಕಪ್ ಪಂದ್ಯವನ್ನು  ಆಡುತ್ತಿದೆ. ಅದು ಯುದ್ಧ ಅಲ್ಲ. ಅದೊಂದು ಸ್ಪರ್ಧೆ ಅಷ್ಟೇ. ಒತ್ತಡ ಮಾಡಿಕೊಳ್ಳದೆ ಪಂದ್ಯ ವೀಕ್ಷಣೆ ಮಾಡೋಣ.
ಭಾರತಕ್ಕೆ ಆಲ್ ದ ಬೆಸ್ಟ್. 
Categories
ಭರವಸೆಯ ಬೆಳಕು ಸ್ಪೋರ್ಟ್ಸ್

ಚೆಸ್ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟ ಪ್ರಗ್ನಾನಂದ್

ಭಾರತದ ಭರವಸೆಯ ಯುವ ಚೆಸ್ ಆಟಗಾರ ಆರ್.ಪ್ರಗ್ನಾನಂದ ಅವರು ಚೆಸ್ ವಿಶ್ವಕಪ್ ಫೈನಲ್‌ಗೆ ತಲುಪಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಾಸ್ಟರ್​ ಗೇಮ್​ ಚೆಸ್​ನಲ್ಲಿ ತಮಿಳುನಾಡಿನ 16 ರ ಹರೆಯದ ಹುಡುಗ ಜೂನಿಯರ್ ಗ್ರಾಂಡ್ ಮಾಸ್ಟರ್  ಆರ್​  ಪ್ರಗ್ನಾನಂದ್​ ವಿಶ್ವ ಚಾಂಪಿಯನ್​ ನಾರ್ವೆಯ ಮ್ಯಾಗ್ನಸ್​ ಕಾರ್ಲ್‌ಸನ್​ರನ್ನು ಮತ್ತೊಮ್ಮೆ ಸೋಲಿಸುವ ಮೂಲಕ 6 ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಶಾಕ್​ ನೀಡಿದ್ದಾರೆ.
ಆರ್ ಪ್ರಗ್ನಾನಂದ್ ರ  ಗೆಲುವನ್ನು ಚೆಸ್ ಲೋಕ ಸಂಭ್ರಮಿಸಿದೆ. ಸೆಮಿಫೈನಲ್‌ನಲ್ಲಿ ಪ್ರಗ್ನಾನಂದನ್ ಅವರು ಟೈಬ್ರೇಕರ್‌ನಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಅವರನ್ನು 3.5-2.5 ರಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಪ್ರಗ್ನಾನಂದ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ಈ ಗೆಲುವಿನೊಂದಿಗೆ ಪ್ರಗ್ನಾನಂದ ಅವರು ಫಿಡೆ ಚೆಸ್ ನಲ್ಲಿ ಫೈನಲ್ ತಲುಪಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ವಿಶ್ವನಾಥನ್ ಆನಂದ್ ಅವರು ಪ್ರಗ್ನಾನಂದ ಅವರಿಗಿಂತ ಮೊದಲು ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದರು. ಪ್ರಗ್ನಾನಂದನ್ ಈಗ ಕಾರ್ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ಸನ್‌ರನ್ನು ಎದುರಿಸಲಿದ್ದಾರೆ. ಪ್ರಗ್ನಾನಂದನ್ ಫೈನಲ್ ಪಂದ್ಯದಲ್ಲಿ FIDE ಚೆಸ್ ಪ್ರಶಸ್ತಿಯನ್ನು ಗೆಲ್ಲಲು ಪ್ರಯತ್ನಿಸುತ್ತಾರೆ.
ಈ ಗೆಲುವಿಗಾಗಿ ಮಾಜಿ ವಿಶ್ವ ಚಾಂಪಿಯನ್ ಮತ್ತು ರಷ್ಯಾದ ಚೆಸ್ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಕಾಸ್ಪರೋವ್ ಪ್ರಗ್ನಾನಂದ ಅವರನ್ನು ಅಭಿನಂದಿಸಿದ್ದಾರೆ.
ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧದ ಪ್ರಶಸ್ತಿ ಹಣಾಹಣಿಗಾಗಿ ಅವರಿಗೆ ಶುಭ ಹಾರೈಸಿದರು.
ಪ್ರಗ್ನಾನಂದ್ ಅವರನ್ನು ಈ ಹಂತಕ್ಕೆ ತಲುಪುವಲ್ಲಿ ಅವರ ತಾಯಿ ನಾಗಲಕ್ಷ್ಮಿ ಅವರ ಪಾತ್ರವಿದೆ,  ಈ ಪಂದ್ಯಾವಳಿಯ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಪ್ರಗ್ನಾನಂದ್ ಅವರು ತಮ್ಮ ತಾಯಿಯ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು. ನನ್ನ ತಾಯಿ ಯಾವಾಗಲೂ ನನ್ನನ್ನು ಬೆಂಬಲಿಸುತ್ತಾರೆ. ನನ್ನ ತಾಯಿಯೇ ನನ್ನ ದೊಡ್ಡ ಬೆಂಬಲ ಮತ್ತು ನನಗೆ  ಸರ್ವಸ್ವ! ಆಟದಲ್ಲಿ ಸೋತ ನಂತರವೂ, ಅವಳು ನನ್ನನ್ನು ನಿಭಾಯಿಸಲು ಮತ್ತು ಶಾಂತಗೊಳಿಸಲು ಪ್ರಯತ್ನಿಸುತ್ತಾಳೆ ಎಂದು ಅವರು ಹೇಳಿದರು. ಇದರೊಂದಿಗೆ ಪ್ರತಿ ಟೂರ್ನಮೆಂಟ್‌ಗೆ ಮಗನ ಜೊತೆಗಿರುವ ಪ್ರಗಣಾನಂದ್ ಅವರ ತಾಯಿಯೂ ಮೆಚ್ಚುಗೆಗೆ ಪಾತ್ರರಾದರು.
Categories
ಇತರೆ

ಉಡುಪಿ ಜಿಲ್ಲೆಯಲ್ಲೇ ಪ್ರಪ್ರಥಮ‌ ಬಾರಿ “ಚೆಸ್ ಎರಾ ಆ್ಯಪ್ ” ಮೂಲಕ ವಿನೂತನ ಶೈಲಿಯಲ್ಲಿ ಆನ್ಲೈನ್ ಚೆಸ್ ತರಬೇತಿ ಶಿಬಿರ -ಸೆಪ್ಟೆಂಬರ್ 1ರಿಂದ ಕಶ್ವಿ ಚೆಸ್ ಸ್ಕೂಲ್ ಕುಂದಾಪುರದಲ್ಲಿ

ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯಿರುವ  ಚದುರಂಗ ಮೆದುಳಿನ ಬೆಳವಣಿಗೆ ಹೆಚ್ಚಿಸುವುದರೊಂದಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯದ ಜೊತೆಗೆ ಮಾನಸಿಕ ಮತ್ತು ಬೌದ್ಧಿಕ ಅಭಿವೃದ್ಧಿ ಹೊಂದಲು *ಚೆಸ್* ಆಟ ಅತ್ಯಂತ ಪೂರಕ .
ತನ್ನಂತೆ ಕುಂದಾಪುರದಲ್ಲಿ ಹೆಚ್ಚು ಚೆಸ್ ಆಟಗಾರರನ್ನು ಅನಾವರಣಗೊಳಿಸಬೇಕು ಎಂಬ ತುಡಿತದೊಂದಿಗೆ *ಕಶ್ವಿ ಚೆಸ್ ಸ್ಕೂಲ್* ಎಂಬ ತರಬೇತಿ ಕೇಂದ್ರವನ್ನು ಸ್ಥಾಪಿಸುವುದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕೀರ್ತಿ *ನರೇಶ್ ಬಿ ಕೋಟೇಶ್ವರ* ಇವರದ್ದು.
 *ಹೊಸ ಅಧ್ಯಾಯ:*
 ಸೋಲೇ ಗೆಲುವಿನ ಮೆಟ್ಟಿಲೆಂದು ಅರಿತ ನರೇಶ್ 2012ರಲ್ಲಿ ಪದವಿ ಮುಗಿಸಿ ತನ್ನ ಕನಸನ್ನು ಮತ್ತು ಕಾಲೇಜನ್ನು ಮರೆಯದೆ ತನ್ನಿಂದಾಗದ ಕನಸು ಇತರರಿಂದಾದರೂ ನನಸಾಗಬೇಕು ಎಂಬ ಆಲೋಚನೆಯೊಂದಿಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಚೆಸ್ ತರಬೇತಿ ನೀಡುತ್ತಾ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಇವರದ್ದು . 2016ರಲ್ಲಿ 7 ಆಟಗಾರರಿಂದ ಆರಂಭಗೊಂಡ ಕಶ್ವಿ ಚೆಸ್ ಸ್ಕೂಲ್ ತನ್ನ ನಿರಂತರ ಬೋಧನೆಯಿಂದ ನಾಲ್ಕು ವರ್ಷದಲ್ಲಿ 1200ಕ್ಕೂ ಹೆಚ್ಚು ಆಟಗಾರರನ್ನು ಹೊಂದಿರುವ ಹೆಮ್ಮೆ ನುರಿತ ತರಬೇತಿದಾರರು ಹಾಗೂ ಸಂಚಾಲಕ ನರೇಶ್ ಇವರದ್ದು.
 *ದಾಖಲೆಗಳ ಪಂದ್ಯಾವಳಿ:*
ಉಡುಪಿ ಜಿಲ್ಲೆಯಲ್ಲೇ ಮೊತ್ತ ಮೊದಲ ಬಾರಿಗೆ ಜೇಸಿಐ ಕುಂದಾಪುರ ಸಹಕಾರದೊಂದಿಗೆ ಅಂತರ್ ಜಿಲ್ಲಾಮಟ್ಟದ ಹೊನಲು ಬೆಳಕಿನ ಚೆಸ್ ಪಂದ್ಯಾವಳಿ ಕೋಡಿ ಕಿನಾರೆಯಲ್ಲಿ ಸಂಘಟಿಸುವ ಮೂಲಕ ಯಶಸ್ಸು ಸಾಧಿಸಿರುತ್ತಾರೆ.
ನಂತರ ಪ್ರಥಮ ವಾರ್ಷಿಕೋತ್ಸವದ
ಅಂಗವಾಗಿ ಅಂತರಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯನ್ನು ನಡೆಸಿ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಅರ್ಜುನ ಪ್ರಶಸ್ತಿ ವಿಜೇತ ಭಾರತದ ಮೂರನೇ ಅಂತರಾಷ್ಟ್ರೀಯ ಮಟ್ಟದ ಚೆಸ್ ಗ್ರ್ಯಾಂಡ್ ಮಾಸ್ಟರ್ ಮಹಾರಾಷ್ಟ್ರದ ಪ್ರವೀಣ್ ತಿಪ್ಸೆ ಅವರನ್ನು ಕರೆಸಿರುತ್ತಾರೆ.
ಮೂರನೇ ಪ್ರಯತ್ನದಲ್ಲಿ ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ ಇದರ ಸಹಕಾರದೊಂದಿಗೆ
 ಕರ್ನಾಟಕದಲ್ಲೇ ಮೊತ್ತಮೊದಲ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಚೆಸ್  ಪಂದ್ಯಾವಳಿಗೆ ಕರ್ನಾಟಕದ ಮೊಟ್ಟ ಮೊದಲ ಅಂತರಾಷ್ಟ್ರೀಯ ಚೆಸ್ ಗ್ರಾಂಡ್ ಮಾಸ್ಟರ್ ತೇಜ್ ಕುಮಾರ್ ಎಂ.ಎಸ್ ರವರು ಮುಖ್ಯ ಅತಿಥಿಯಾಗಿ ಆಗಮಿಸಿರುತ್ತಾರೆ.
ನಾಲ್ಕನೇ ಬಾರಿಗೆ ಕೋಟೇಶ್ವರದಲ್ಲಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಹಳೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ
“ಕಶ್ವಿ ಚದುರಂಗೋತ್ಸವ” ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್ ಭಟ್ ಅವರನ್ನು ಕರೆಸಿದ ಕೀರ್ತಿ ಇವರದ್ದು‌.
5 ನೇ ಪ್ರಯತ್ನವಾಗಿ ದಕ್ಷಿಣ ಭಾರತದಲ್ಲೇ ಮೊತ್ತಮೊದಲ ಬಾರಿಗೆ
ದಾಖಲೆಯ ಪಂದ್ಯಾವಳಿಯಾಗಿ 8 ದಿನಗಳ ಕಾಲ ಕುಂದಾಪುರದಂತಹ
 ಗ್ರಾಮೀಣ ಭಾಗದಲ್ಲಿ ಮೊದಲ ಬಾರಿ ಅಂತರಾಷ್ಟ್ರೀಯ ಮಟ್ಟದ ಫಿಡೆ ರೇಟಿಂಗ್ ಚೆಸ್ ಪಂದ್ಯಾವಳಿ ನಡೆಸಿದ ಹೆಮ್ಮೆ ಇವರದ್ದು.ಈ ಪಂದ್ಯಾವಳಿಯ ಪ್ರಮೋಷನಲ್ ವೀಡಿಯೋ ಉದ್ಘಾಟನಾ ಕಾರ್ಯಕ್ರಮಕ್ಕೆ ಕರ್ನಾಟಕದ 2 ನೇ
ಅಂತರಾಷ್ಟ್ರೀಯ ಮಟ್ಟದ ಚೆಸ್ ಗ್ರ್ಯಾಂಡ್ ಮಾಸ್ಟರ್ ಸ್ಟ್ಯಾನಿ.ಜಿ‌.ಎ ಇವರು ಆಗಮಿಸಿರುತ್ತಾರೆ.
ಮುಂದೆ ರಾಷ್ಟ್ರಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಭಾರತದ ಮೊದಲ ಅಂತರಾಷ್ಟ್ರೀಯ ಚೆಸ್ ಗ್ರಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರನ್ನು ಕರೆಸಬೇಕೆಂಬುವುದು ಇವರ ಮುಂದಿನ ಗುರಿಯಲ್ಲೊಂದು.
ನರೇಶ್ ರವರ ಚೆಸ್ ಮೇಲಿರುವ ಆಸಕ್ತಿ, ಕಾರ್ಯ ಕ್ಷಮತೆ, ಅಭಿವೃದ್ಧಿ, ಅನುಭವದ ಆಧಾರದ ಮೇಲೆ  ಹಲವು ಚೆಸ್ ಪಂದ್ಯಾವಳಿಗಳಲ್ಲಿ ತೀರ್ಪುಗಾರರಾಗಿ ಹಾಗೂ ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಹಳೆ ವಿದ್ಯಾರ್ಥಿಗಳ ಕ್ರೀಡಾ ಸಂಘದ ಸಂಯೋಜಕರಾಗಿ, ಜೆ.ಸಿ.ಐ ಕುಂದಾಪುರದ ಉಪಕಾರ್ಯದರ್ಶಿಯಾಗಿ, ಶ್ರೀ ಶಾರದಾ ಕಾಲೇಜು ಬಸ್ರೂರಿನ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, 2018ರಲ್ಲಿ 19ರ ವಯೋಮಾನದ  ಕರ್ನಾಟಕ ಚೆಸ್ ತಂಡದ ಮುಖ್ಯಸ್ಥರಾಗಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಚೆಸ್ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
*ಚೆಸ್ ಎರಾ ಆ್ಯಪ್ ಮೂಲಕ ವಿನೂತನ ಶೈಲಿಯಲ್ಲಿ ಆನ್ಲೈನ್  ತರಬೇತಿ*
ಇದೀಗ ಮತ್ತೆ ಕಶ್ವಿ ಚೆಸ್ ಸ್ಕೂಲ್ ನ
ಆನ್‌ಲೈನ್ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ.
ಏಳು ವರ್ಷ ಮೇಲ್ಪಟ್ಟ ವಯೋಮಾನದವರಿಗಾಗಿ ಆನ್‌ಲೈನ್ ಚೆಸ್ ತರಬೇತಿ ಕಾರ್ಯಕ್ರಮ ಇದೇ ಸೆಪ್ಟೆಂಬರ್ ಒಂದರಿಂದ ಮೊದಲ್ಗೊಂಡು 2020 ಡಿಸೆಂಬರ್ ತಿಂಗಳ 31 ನೇ ತಾರೀಕಿನವರೆಗೆ ನಡೆಯಲಿದೆ.
ಒಂದು ಘಂಟೆ ಅವಧಿಯ ಈ ತರಬೇತಿಯು ಒಟ್ಟು 100 ಕ್ಲಾಸ್ ಹೊಂದಿದ್ದು,
ತರಬೇತಿಯ ವೇಳಾಪಟ್ಟಿ ಹೀಗಿದೆ
ಬೆಳಿಗ್ಗೆ 8 – 9
ಸಾಯಂಕಾಲ 4 – 5, 6 – 7, 7 – 8.
ಸ್ಟಾರ್ಸ್ ವಿಭಾಗ
ಸಿಲ್ವರ್ ಮತ್ತು ಗೋಲ್ಡನ್ ವಿಭಾಗ ಹಾಗೂ ಡೈಮಂಡ್ ಮತ್ತು ಪ್ಲಾಟಿನಮ್ ವಿಭಾಗ, ಹೀಗೆ 5 ಪ್ರಾಕಾರಗಳಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸ ಬಹುದಾದ ದೂರವಾಣಿ ಸಂಖ್ಯೆ :+91 7899969063
ವಿಳಾಸ :
ಕಶ್ವಿ ಚೆಸ್ ಸ್ಕೂಲ್ ಕುಂದಾಪುರ
ಹೆಡ್ ಪೋಸ್ಟ್ ಆಫೀಸ್ ಎದುರಿನ ರಸ್ತೆ ಕುಂದಾಪುರ : 576201