Categories
ಯಶೋಗಾಥೆ

ಕ್ರೀಡಾ ಕ್ಷೇತ್ರದಲ್ಲಿ ಮಿನುಗುತ್ತಿರುವ ದ.ಕ ಜಿಲ್ಲೆಯ ಹೆಮ್ಮೆಯ ಸಾಧಕ ಹರಿಪ್ರಸಾದ್ ರೈ

‘ಮರಗಿಡಗಳ ತಲೆಯ ಒರೆಸಿ, ಹಿಮಬಿದ್ದ ನೆಲವ ಒರೆಸಿ’ ಎಂಬ ಕವಿವಾಣಿಯು ಹೇಗೆ ಸೂರ್ಯನಿಗೆ ಅನ್ವಯಿಸುತ್ತದೆಯೋ ಅಂತೆಯೇ ತಮ್ಮ ಕ್ರೀಡಾ ಕ್ಷೇತ್ರದ ಸಾಧನೆಯೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಅನೇಕ ಕ್ರೀಡಾ ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿರುವ ನಮ್ಮ ಹೆಮ್ಮೆಯ ಕ್ರೀಡಾ ಸಾಧಕ ಹರಿಪ್ರಸಾದ್ ರೈ.ಜಿ.
                01-06-1978  ರಂದು ಸಂಜೀವ ರೈ ಮತ್ತು ಶ್ರೀಮತಿ ರತ್ನಾವತಿ ರೈ ದಂಪತಿಗಳ ಪುತ್ರನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗೋಳ್ತಿಲದಲ್ಲಿ ಜನಿಸಿದ ಹರಿಪ್ರಸಾದ್ ರೈ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಶಾಲೆ ತಿಂಗಳಾಡಿ ಹಾಗೂ ಕೆಯ್ಯೂರಿನಲ್ಲಿ ಪೂರ್ಣಗೊಳಿಸಿ ಪಿ.ಯು.ಸಿ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಹಾಗೂ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಪಡೆದು ಬಿ.ಪಿ.ಎಡ್ ಶಿಕ್ಷಣವನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದರು.
            ಶಾಲಾ ದಿನಗಳಿಂದಲೇ ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡು ವಿವಿಧ ಹಂತಗಳಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಖೋ – ಖೋ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ವಿಷಯ. 2005 ರಿಂದ 2008 ರವರೆಗೆ ಕೇರಳದ ಕೊಟ್ಟಯಂ ಬೆಥನಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ 2009 ರಿಂದ ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇರ್ಪಡೆಗೊಂಡು ಅನೇಕ ಕ್ರೀಡಾಪ್ರತಿಭೆಗಳನ್ನು ತಮ್ಮ ತರಬೇತಿಯಲ್ಲಿ ಪಳಗಿಸಿ ಸಾಧನೆಯ ಶಿಖರವನ್ನೇರಲು ಇವರು ಶ್ರಮಿಸುವ ರೀತಿ ಶ್ಲಾಘನೀಯ.
         ನಿರಂತರವಾಗಿ ಕ್ರೀಡಾಪ್ರತಿಭೆಗಳಿಗೆ ಸಲಹೆ ಸೂಚನೆಗಳನ್ನಿತ್ತು ಸುಳ್ಯ ತಾಲೂಕು ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಸತತ ಹನ್ನೊಂದು ಬಾರಿ ಸಮಗ್ರ ಪ್ರಶಸ್ತಿಯನ್ನು ಪಡೆದು ಶಾಲೆಯ ಗರಿಮೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದರು. ಖೋ-ಖೋ, ಕಬಡ್ಡಿ, ವಾಲಿಬಾಲ್, ತ್ರೋಬಾಲ್ ವಿಭಾಗಗಳಲ್ಲಿ ಅನೇಕ ಕ್ರೀಡಾ ಪ್ರತಿಭೆಗಳ ಕೀರ್ತಿ ಬೆಳಗುವಲ್ಲಿ ಇವರ ಪಾತ್ರ ಪ್ರಮುಖವಾದದ್ದು.
         ಕ್ರೀಡೆಯೇ ಕಿರೀಟವೆನ್ನುವ ಹರಿಪ್ರಸಾದ್ ರೈ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು 2016 ರಲ್ಲಿ ಸ್ಪೇನ್ ದೇಶದಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿರುತ್ತಾರೆ.ಇವರು ಈವರೆಗೂ ಸತತ ನಾಲ್ಕು ಬಾರಿ ರಾಷ್ಟ್ರ ಮಟ್ಟ ಹಾಗೂ ಎಂಟು ಬಾರಿ ರಾಜ್ಯಮಟ್ಟವನ್ನು ಪ್ರತಿನಿಧಿಸಿರುವುದು ಸಂತಸ ಹಾಗೂ ಹೆಮ್ಮೆಯ ವಿಷಯ.
              ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ನ ತಾಂತ್ರಿಕ ಅಧಿಕಾರಿಯಾಗಿ, ಕರ್ನಾಟಕ ರಾಜ್ಯ ಮಟ್ಟದ ವಾಲಿಬಾಲ್ ಮತ್ತು ಕಬಡ್ಡಿಯ ತೀರ್ಪುಗಾರರಾಗಿರುವ ಇವರ ಸಾಧನೆಯ ಹಾದಿಗೆ 2012-13 ರಲ್ಲಿ ಪುತ್ತೂರು ತಾಲೂಕು ಬಂಟರ ಸಂಘದಿಂದ ‘ಯುವ ಪ್ರತಿಭಾ ಪುರಸ್ಕಾರ’,ರೋಟರಿ ಸಂಸ್ಥೆಯಿಂದ ಜಿಲ್ಲಾ ಮಟ್ಟದಲ್ಲಿ ಸಾಧನಾಶ್ರೀ ಪ್ರಶಸ್ತಿ ಹಾಗೂ ಅನೇಕ ಸಂಘ – ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.
              ನಿರಂತರವಾಗಿ ಕ್ರೀಡಾಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನೇ ಸೃಷ್ಟಿಸುತ್ತಾ ಅದೆಷ್ಟೋ ಕ್ರೀಡಾ ಪ್ರತಿಭೆಗಳ ಸಾಧನೆಯ ಹಾದಿಗೆ ಕಾರಣಕರ್ತರಾಗಿರುವ ಹರಿಪ್ರಸಾದ್ ರೈಯವರ ಮಾರ್ಗದರ್ಶನ ಇನ್ನಷ್ಟು ಕ್ರೀಡಾ ಪ್ರತಿಭೆಗಳಿಗೆ ದೊರೆತು ರಾಷ್ಟ್ರ,ಅಂತರಾಷ್ಟ್ರೀಯಮಟ್ಟದಲ್ಲಿ ಮಿಂಚುವಂತಾಗಲಿ. ಕ್ರೀಡಾಕ್ಷೇತ್ರದಲ್ಲಿ  ಇನ್ನೂ ಹೆಚ್ಚಿನ ಸಾಧನೆಗೆ ಭಗವಂತನ ಅನುಗ್ರಹವಿರಲಿ. ಇವರ ಸಾಧನೆಯ ಹಾದಿ ಇತರರಿಗೂ ಪ್ರೇರಣೆಯಾಗಲೆನ್ನುವುದೇ ಆಶಯ.

Leave a Reply

Your email address will not be published.

twenty − 1 =