Categories
ಯಶೋಗಾಥೆ

ಅಂಗವೈಕಲ್ಯವೆಂಬ ಅಡೆತಡೆಯ ನಡುವೆ ಅರಳಿದ ಪ್ರತಿಭೆ ಸುಮಾ ಪಂಜಿಮಾರ್

ಅಂಗವೈಕಲ್ಯ ಭವಿಷ್ಯದ ಸಾಧನೆಗೆ ಅಡ್ಡಿಯಲ್ಲ. ವೈಕಲ್ಯತೆಗಳೆನೇ ಇರಲಿ, ನಮ್ಮ ಬದುಕಿನ ಬೀಳುಗಳಲ್ಲಿ ಮನೋಬಲವನ್ನು ಕಳೆದುಕೊಳ್ಳದೆ ಬದಲಾವಣೆಗೆ ಹರಿಕಾರರು ನಾವಾದಲ್ಲಿ ಸಾಧನೆಯನ್ನು ಶಿಖರವನ್ನೇರಬಹುದೆಂಬ ಮಾತಿಗೆ ಮಾದರಿಯಾಗಿ ವೈಕಲ್ಯತೆಯನ್ನು ಮೀರಿ ಕಲಾ ಸಾಧನೆಯ ಬೆನ್ನೇರಿ ಸಾಧನೆಯ ಹಾದಿಯಲ್ಲಿ ಬೆಳಗುತ್ತಿರುವ ವಿಶೇಷ ಪ್ರತಿಭೆ ಸುಮಾ ಪಂಜಿಮಾರ್.
        ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ರಾಮ ಮೂಲ್ಯ ಹಾಗೂ ನಾಗಮಣಿ ದಂಪತಿಗಳ ಪುತ್ರಿಯಾಗಿರುವ ಸುಮಾ ಹುಟ್ಟಿನಿಂದಲೇ ವಿಕಲಾಂಗರು.ಮೂರಡಿ ಎತ್ತರ,ಇಪ್ಪತ್ತು ಕೆ. ಜಿ ತೂಕ ಹೊಂದಿರುವ ಇವರು ಪ್ರೌಢವಸ್ಥೆಯನ್ನು ದಾಟಿ ನಿಂತವರು. ಅಂಗವಿಕಲತೆ ಬದುಕಿನ ಕನಸುಗಳಿಗೆ ವಿರುದ್ಧವಾಗಿ ಅಬ್ಬರಿಸಿದರೂ ಆತ್ಮಸ್ಥೈರ್ಯವನ್ನೆಂದಿಗೂ ಕಳೆದುಕೊಳ್ಳದೆ ಜಟಿಲ ಸಮಸ್ಯೆಗಳ ನಡುವೆಯೇ ಬೆಳೆದುನಿಂತ ಪ್ರೇರಣಗಾಥೆಯಿವರು. ತನ್ನ ಕಲಿಕಾ ಉತ್ಸುಕತೆ, ತುಡಿತಕ್ಕೆ ಅಮ್ಮನ ತೋಳು ಆಸರೆಯಾಗಿ ನಿಂತಾಗ ಕೋಡು ಶ್ರೀ ದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿಯವರಿಗೆ ವಿದ್ಯಾಭ್ಯಾಸ ಪಡೆದರು.ಆ ಸಂದರ್ಭದಲ್ಲಿ ತನ್ನೊಂದಿಗೆ ಜೀವನಾಡಿಯಂತೆ ನಿಂತ ಶಿಕ್ಷಕವರ್ಗ, ಕುಟುಂಬ ತುಂಬಿದ ಧೈರ್ಯ ಹಾಗೂ ಪ್ರೀತಿಯನ್ನು ಈ ಸಂದರ್ಭದಲ್ಲಿ ಮನಸಾರೆ ಸ್ಮರಿಸಿಕೊಳ್ಳುತ್ತಾರೆ. ಮುಂದೆ ಕಲಿಕೆಯ ಹುಮ್ಮಸ್ಸು ತನ್ನಲ್ಲಿ ದೃಢವಾಗಿದ್ದರೂ ದೇಹದ ಸ್ವಾಧೀನತೆ  ತನ್ನ ಕನಸಿಗೆ ಸಾಥ್ ನೀಡಲಿಲ್ಲ. ಸ್ವತಂತ್ರವಾಗಿ ನಡೆಯುವುದೂ ಕಷ್ಟವೆನಿಸಿ ಹಾಸಿಗೆಯಲ್ಲೇ ಜೀವನ ಸವೆಸಬೇಕಾದ ಪರಿಸ್ಥಿತಿಯನ್ನೂ ಎದುರಿಸಿದರು.
         ಬದುಕುವ ಛಲ ನಮ್ಮಲ್ಲಿ ಬಲವಾಗಿದ್ದರೆ ನ್ಯೂನತೆಗಳೆಲ್ಲವೂ ಸೋತು ಶರಣಾಗುತ್ತದೆ ಎನ್ನುವ ಮಾತು ಇವರ ಜೀವನದಲ್ಲಿ ಸತ್ಯವಾಗಿ ತೋರಿತು. ತನ್ನ ಅಣ್ಣ ಗಣೇಶ್ ಪಂಜಿಮಾರ್ ತನ್ನಂತೆಯೇ ವಿಕಲಾಂಗರಾಗಿದ್ದರೂ ಚಿತ್ರಕಲಾವಿದನಾಗಿ ರೂಪುಗೊಂಡು ಸದಾ ಕ್ರಿಯಾತ್ಮಕತೆ,ಕಾರ್ಯಕ್ಷಮತೆಯಿಂದ ತೊಡಗುವ ಪರಿ ಇವರಿಗೂ ಸ್ಫೂರ್ತಿಯಾಯಿತು. ತನ್ನೆಲ್ಲಾ ನ್ಯೂನತೆಗಳನ್ನು ಮರೆತು ಸಾಧನೆಗೆ ಟೊಂಕ ಕಟ್ಟಿ ನಿಂತರು. ಸ್ಪೂರ್ತಿ,ಉತ್ಸಾಹ ಹುರುಪಿನೊಂದಿಗೆ ಕಲಾ ಪ್ರಯತ್ನಕ್ಕೆ ಕಾಲಿಟ್ಟು ಚಿತ್ರಕಲೆ, ಕರಕುಶಲತೆಯಲ್ಲಿ ತೊಡಗಿಸಿಕೊಂಡರು.ತನ್ನ ಆಸಕ್ತಿಯಲ್ಲಿ ಹೆಚ್ಚು ಹೊತ್ತು ತೊಡಗಿಸಿಕೊಳ್ಳಲು ಮೊದಮೊದಲು ಸಾಧ್ಯವಾಗದಿದ್ದರೂ ಪ್ರಯತ್ನ ಪಟ್ಟಂತೆಯೇ ಅಸಾಧ್ಯಗಳೆಲ್ಲವೂ ಸಾಧ್ಯವಾಗಿ ನಿಂತಿತು.
          ಕಾಲು ಹಾಗೂ ಕೈಗಳು ಇದುವರೆಗೂ ಎಂಟು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರೂ ಎಂದಿಗೂ ಮರುಕ ಪಟ್ಟುಕೊಳ್ಳದೆ ಋಣಾತ್ಮಕತೆಗೆ ಸವಾಲೆಸೆದು ಬೆಳೆದು ನಿಂತ ಇವರ ಯಶೋಗಾಥೆ ಶೂನ್ಯ ಭಾವನೆಯ ಮನಗಳಲ್ಲಿ ಬದಲಾವಣೆಯ ಬೆಳಕನ್ನು ತರಬಲ್ಲದು.
     ಸುಮಾ ಪಂಜಿಮಾರ್ ಆರ್ಟ್ಸ್ ಮತ್ತು ಕ್ರಾಫ್ಟ್ಸ್ ಎಂಬ ಯೂಟ್ಯೂಬ್,ಇನ್ಸ್ಟಾಗ್ರಾಂ,ಹಾಗೂ ಫೇಸ್ಬುಕ್ ನಲ್ಲಿ ಪೇಜ್ ಪರಿಚಯಿಸಿ  ತಮ್ಮ ಕಲಾಪ್ರದರ್ಶನಕ್ಕೆ ವೇದಿಕೆಯನ್ನಾಗಿ ವಿನಿಯೋಗಿಸಿಕೊಂಡಿದ್ದಾರೆ .ಇದುವರೆಗೂ 70 ಕ್ಕೂ ಹೆಚ್ಚು ಆಕರ್ಷಕ ಕರಕುಶಲತೆಯನ್ನು ರಚಿಸಿ ಶ್ಲಾಘನೆಗೆ ಪಾತ್ರರಾಗಿರುತ್ತಾರೆ. ಇದುವರೆಗೆ ಹಲವಾರು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.
      “ಅಂಗವೈಕಲ್ಯತೆಯ ಬಗ್ಗೆ ನನಗೆಂದಿಗೂ  ಕೀಳರಿಮೆ ಕಾಡಿಲ್ಲ. ಆತ್ಮಸ್ಥೈರ್ಯವೆಂಬ ಶಕ್ತಿ ನಮ್ಮಲಿದ್ದರೆ ಜೀವನ ಎಂದಿಗೂ ಅಪೂರ್ಣವೆನಿಸುವುದಿಲ್ಲ.ನನ್ನ ಕನಸುಗಳಿಗೆ ಪೂರಕವಾದ ಬೆಂಬಲ ಕುಟುಂಬ ಹಾಗೂ ಸಮಾಜದಿಂದ ದೊರೆತಿದೆ.ಪುಟ್ಟ ಪ್ರಯತ್ನಗಳಿಗೂ  ಸಿಕ್ಕ ಪ್ರೋತ್ಸಾಹದಿಂದ ದಿಟ್ಟ ಹೆಜ್ಜೆಯನ್ನಿಡಲು ಸಾಧ್ಯವಾಗಿದೆ. ವಿಕಲತೆಯೆಂದಿಗೂ ಶಾಪವಲ್ಲ.ದೇವರು ಕೊಟ್ಟ ವರ” ಎನ್ನುತ್ತಾರೆ ಸುಮಾ.
        ಸವಾಲುಗಳು ಜೀವನವನ್ನು ಆಸಕ್ತಿದಾಯಕವಾಗಿಸುತ್ತವೆ .ಆ ಸವಾಲುಗಳನ್ನು ಮೆಟ್ಟಿ ನಿಂತಾಗ ಜೀವನ ಪರಿಪೂರ್ಣವಾಗುತ್ತದೆ.ತನ್ನೆದುರಿಗೆ  ಸಾವಿರಾರು ಸವಾಲುಗಳಿದ್ದರೂ ಅದನ್ನೆಲ್ಲವನ್ನೂ ಮೀರಿ ಕಲೆಯಲ್ಲಿ ಭವಿಷ್ಯದ ಬೆಳಕು ಕಂಡ ಇವರ ಜೀವನಗಾಥೆ ಅಂಧಕಾರ ತುಂಬಿದ ಮನಗಳಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ.ಈ ವಿಶೇಷ ಪ್ರತಿಭೆಯ  ಸಾಧನೆಯ ಹಾದಿಗೆ ಇನ್ನಷ್ಟು ಗೌರವಗಳು ಅರಸಿ ಬರಲಿ.ಸಕಲ ದೈವ ದೇವರುಗಳ ಆಶೀರ್ವಾದ ಇವರ ಮೇಲಿರಲೆಂದು ನಾವೆಲ್ಲರೂ ಆಶಿಸೋಣ.
Categories
ಭರವಸೆಯ ಬೆಳಕು

ಉಡುಪಿ-ವಿಶೇಷ ಚೇತನ ಅಪ್ರತಿಮ ಚಿತ್ರಕಲಾವಿದ ಗಣೇಶ್ ಪಂಜಿಮಾರ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಚಿತ್ರಕಲಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ವಿಶೇಷ ಚೇತನ ಚಿತ್ರಕಲಾವಿದ ಗಣೇಶ್ ಪಂಜಿಮಾರ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
 ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ರಾಮ ಮೂಲ್ಯ ಹಾಗೂ ನಾಗಮಣಿ  ದಂಪತಿಗಳ ಪುತ್ರನಾಗಿರುವ ಗಣೇಶ್ ಕುಲಾಲ್ ಹುಟ್ಟಿನಿಂದಲೇ ವಿಕಲಾಂಗರು.ಮೂರಡಿ ಎತ್ತರ,ಇಪ್ಪತ್ಮೂರು ಕಿಲೋ ಗ್ರಾಂ ತೂಕ ಹೊಂದಿರುವ ಗಣೇಶ್ ಪ್ರೌಢವಸ್ಥೆಯನ್ನು ದಾಟಿ ನಿಂತವರು.ಹುಟ್ಟಿನಿಂದಲೇ ಜೊತೆಯಾದ ಅಂಗವೈಕಲ್ಯ ಬದುಕಿಗೆ ಬಿರುಗಾಳಿಯಂತೆಯೇ ಬಂದೊಡ್ಡಿದರೂ ಇವರು ಜೀವನೋತ್ಸಾಹವನ್ನು ಎಂದಿಗೂ
ಕಳೆದುಕೊಳ್ಳಲಿಲ್ಲ.ಉತ್ತಮ ವಿದ್ಯಾಭ್ಯಾಸ ಪಡೆದು ಸ್ವಸಾಮಾರ್ಥ್ಯದಿಂದಲೇ ನೌಕರಿ ಗಿಟ್ಟಿಸಿಕೊಳ್ಳಬೇಕೆಂಬ ಹಂಬಲದಿಂದ  ಪ್ರಾಥಮಿಕ ಶಿಕ್ಷಣವನ್ನು ಶ್ರೀ ದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆ ಪಂಜಿಮಾರು,ಶ್ರೀ ನಾರಾಯಣ ಗುರು ಪ್ರೌಢಶಾಲೆ ಪಡುಬೆಳ್ಳೆ ಹಾಗೂ ಪಿಯುಸಿ ಶಿಕ್ಷಣವನ್ನು ಜೂನಿಯರ್ ಕಾಲೇಜು ಶಿರ್ವದಲ್ಲಿ
ಪಡೆದರು.ಈ ಸಂದರ್ಭದಲ್ಲಿ ಕುಟುಂಬ ತುಂಬಿದ ಧೈರ್ಯ,ಗೆಳೆಯರು ನೀಡಿದ ಸಾಥ್,ಶಿಕ್ಷಕರ ಪ್ರೀತಿ ,ಕಾಳಜಿಯನ್ನು ಸ್ಮರಿಸಿಕೊಳ್ಳುತ್ತಾರೆ.ನಂತರ ದಾನಿಯೊಬ್ಬರು ಕೊಡುಗೆಯಾಗಿ ನೀಡಿದ ವಿದ್ಯುತ್ ಚಾಲಿತ ತ್ರಿಚಕ್ರ ಸ್ಕೂಟರ್ನಲ್ಲಿ ನಿತ್ಯ ಹತ್ತು ಕಿ.ಮೀ ಕ್ರಮಿಸಿ ಪದವಿ ಗಿಟ್ಟಿಸಿಕೊಂಡ ಸ್ಫೂರ್ತಿ ಚಿಲುಮೆಯಿವರು. ವಿದ್ಯಾಭ್ಯಾಸದ ಜೊತೆಜೊತೆಗೆ  ಚಿತ್ರಕಲೆ, ಕಥೆ,ಕವನ  ಬರೆಯುವ ಆಸಕ್ತಿಯನ್ನೂ ಇರಿಸಿಕೊಂಡು ಸದಾ ಕ್ರೀಯಾಶೀಲರಾಗಿರುತ್ತಿದ್ದರು.
 ಚಿತ್ರಕಲೆಯಲ್ಲಿ ಮೊದಲ ಪ್ರಯತ್ನವಾಗಿ ತನ್ನ ಅಮ್ಮನ ಚಿತ್ರವನ್ನೇ ಚಿತ್ರಿಸಿ ತೋರಿಸಿದಾಗ ಅಮ್ಮನಿಂದ ವ್ಯಕ್ತವಾದ ಮೆಚ್ಚುಗೆ,ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಾಗ ಅಲ್ಲಿ ಪ್ರೇಕ್ಷಕ ವರ್ಗದಿಂದ ಸಿಕ್ಕ ಪ್ರತಿಕ್ರಿಯೆ ಮುಂದೆ ಕಲಾ ಕ್ಷೇತ್ರದಲ್ಲಿಯೇ ಮುಂದುವರಿಯುವಂತೆ ಪ್ರೇರೇಪಿಸಿತು ಎನ್ನುತ್ತಾರೆ ಗಣೇಶ್ ಪಂಜಿಮಾರ್.
         ಇವರ ಕೈಯಲ್ಲಿ ಮೂಡಿದ  ವಿವಿಧ ಕ್ಷೇತ್ರಗಳ ನಾಯಕರ,ಪ್ರಕೃತಿ,ಪ್ರಾಣಿ ಪಕ್ಷಿಗಳ ಚಿತ್ರಗಳು ನೋಡುಗರನ್ನು ಒಂದೊಮ್ಮೆ ಬೆರಗಾಗುವಂತೆ ಮಾಡುತ್ತದೆ.ಈಗಾಗಲೇ ಮುನ್ನೂರೈವತ್ತಕ್ಕಿಂತಲೂ ಹೆಚ್ಚು ಚಿತ್ರಗಳನ್ನು ಚಿತ್ರಿಸಿರುವ ಈ  ಸಾಧಕ ಎಲ್ಲರ ಬದುಕಿಗೆ ಸ್ಫೂರ್ತಿಯ ಮಾತಾಗಿ ನಿಂತಿದ್ದಾರೆ.ದೈಹಿಕ ಕಸರತ್ತಿಗೆ ಅಂಗಾಂಗ ಸ್ಪಂದಿಸದಿದ್ದಾಗ ತಮ್ಮ ಬೌದ್ಧಿಕ ಕಸರತ್ತಿನಿಂದ ಚಿತ್ರ ಕಲಾವಿದನಾಗಿ ರೂಪುಗೊಂಡು ಇಂದು ಜನಮಾನಸದಲ್ಲಿ ಕಿಂಗ್ ಗಣೇಶ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ಭಿನ್ನ ಪ್ರತಿಭೆಯ ಹಾದಿ ನಿಜಕ್ಕೂ ರೋಚಕತೆಯ ಆಗರ.
         ಇವರ ತಂಗಿ ಸುಮಾ ಕೂಡಾ ವಿಕಲಾಂಗರಾಗಿದ್ದರೂ ಕಾಗದಗಳ ಪಟ್ಟಿಯಿಂದ ಗೊಂಬೆ ತಯಾರಿಸುವಲ್ಲಿ ಪರಿಣಿತರು.ಅಣ್ಣ-ತಂಗಿ ಒಬ್ಬರಿಗೊಬ್ಬರು ಬೆನ್ನು ತಟ್ಟುತ್ತಾ ಅಛಲ ವಿಶ್ವಾಸದಿಂದ ಜೀವನವನ್ನು ಎದುರಿಸುತ್ತಿರುವ ರೀತಿ  ಸಾಮರ್ಥ್ಯವಿದ್ದರೂ ಅಸಮರ್ಥರೆಂದು ಕೈ ಚೆಲ್ಲುವ ನಿರಾಶಾವಾದಿಗಳಿಗೆ ಅದ್ಭುತ ಪಾಠವಾಗಿ  ತೋರುತ್ತದೆ.
 ಮಲ್ಲಿಗೆ ಹೂವು ಕಟ್ಟಿ ,ಅದನ್ನು  ಮಾರಿ ಕುಟುಂಬದ ಜವಾಬ್ದಾರಿಯನ್ನು ನಡೆಸುತ್ತಿರುವ ತಾಯಿಗೆ,ತನಗಿಂತಲೂ ತ್ರಾಸದಾಯಕ ಸ್ಥಿತಿಯಲ್ಲಿರುವ ತಂಗಿಗೆ ನೆರಳಾಗಿ  ನಿಲ್ಲಬೇಕೆಂಬ ದೃಢ ಆಶಯವನ್ನು ಹೊಂದಿರುವ ಗಣೇಶ್ ರವರು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕೆಂಬ ಆಕಾಂಕ್ಷೆಯಿಂದ  ಬ್ಯಾಂಕಿಂಗ್ ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸಿಕೊಂಡು ಈಗಾಗಲೇ ಹಲವು ಬಾರಿ ಲಿಖಿತ ಪರೀಕ್ಷೆಗೆ ಹಾಜರಾಗಿದ್ದಾರೆ. ಗಣೇಶ್ ಪಂಜಿಮಾರ್ ಆರ್ಟ್ಸ್ ಎಂಬ ಯುಟ್ಯೂಬ್ ,ಇನ್ಸ್ಟ್ರಾಗ್ರಾಮ್ ಹಾಗೂ ಫೇಸ್ಬುಕ್ ಅಕೌಂಟನ್ನು ತಮ್ಮ ಕಲಾ ಪ್ರತಿಭೆಯ ಪ್ರದರ್ಶನಕ್ಕೆ  ವೇದಿಕೆಯನ್ನಾಗಿ ವಿನಿಯೋಗಿಸಿಕೊಂಡಿದ್ದಾರೆ.ಈಗಾಗಲೇ ಹಲವಾರು ಸಂಘ ಸಂಸ್ಥೆಗಳಿಂದ  ಪುರಸ್ಕಾರಗಳನ್ನು ಪಡೆದುಕೊಂಡಿದ್ದು ,ಇವರ ಸಾಧನೆಯ ಕುರಿತಾದ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
Categories
ಭರವಸೆಯ ಬೆಳಕು

ಆರು ಬಾರಿ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿರುವ ಹೆಮ್ಮೆಯ ಕ್ರೀಡಾ ಸಾಧಕಿ ಹರ್ಷಿಣಿ ಶೆಟ್ಟಿ ಬೆಳ್ತಂಗಡಿ

ಸಾಧಿಸಬೇಕೆಂಬ ಛಲವಿದ್ದವನು ಸಾಧನೆಯ ಹಾದಿಯಲ್ಲಿ ಕೇಳಿ ಬರುವ ಕೊಂಕು ಮಾತುಗಳ ಕಡೆಗೆ ಲಕ್ಷ್ಯ  ವಹಿಸದೆ ತಮ್ಮ ಗುರಿಯತ್ತ ಕಠಿಣ ಶ್ರಮ ವಹಿಸಬೇಕು.ಇದಕ್ಕೆ ಉದಾಹರಣೆಯಂತೆ ಸಾಧನೆಯ ಹಾದಿಯಲ್ಲಿ ಬೆಳಗುತ್ತಿರುವ ರಾಷ್ಟ್ರ ಮಟ್ಟದ ಪ್ರತಿಭೆ ಹರ್ಷಿಣಿ ಶೆಟ್ಟಿ ಬೆಳ್ತಂಗಡಿ.
           13-12-2000 ರಲ್ಲಿ ರವಿ ಶೆಟ್ಟಿ ಹಾಗೂ ಶಶಿಕಲಾ ಶೆಟ್ಟಿ ದಂಪತಿಗಳ ಪುತ್ರಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಕ್ತಿನಗರದಲ್ಲಿ ಜನಿಸಿದ ಹರ್ಷಿಣಿ ಶೆಟ್ಟಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಪ್ರಾಥಮಿಕ ಶಾಲೆ ಮಾಲಾಡಿಯಲ್ಲಿ ಪೂರ್ಣಗೊಳಿಸಿ ಎಂಟನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಪುಂಜಾಲಕಟ್ಟೆ,ಒಂಭತ್ತನೇ ತರಗತಿ ಶಿಕ್ಷಣವನ್ನು ಎಸ್.ಡಿ.ಎಂ ಪ್ರೌಢಶಾಲೆ ಉಜಿರೆ ಹಾಗೂ ಹತ್ತನೇ ತರಗತಿಯನ್ನು ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ ಪೂರ್ಣಗೊಳಿಸಿದರು.ನಂತರ ಪಿ‌.ಯು.ಸಿ ಶಿಕ್ಷಣವನ್ನು ಮಂಗಳೂರಿನ ವಿಕಾಸ್ ಕಾಲೇಜಿನಲ್ಲಿ ಪಡೆದು ಪ್ರಸ್ತುತ ಆಳ್ವಾಸ್ ಕಾಲೇಜು ಮೂಡುಬಿದಿರೆಯಲ್ಲಿ ಅಂತಿಮ ಬಿ.ಕಾಂ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
           ಶಾಲಾ ದಿನಗಳಿಂದಲೂ ಕ್ರೀಡೆಯತ್ತ ಒಲವು ತುಂಬಿ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸುತ್ತಿದ್ದರು.ನಂತರದ ದಿನಗಳಲ್ಲಿ ಕಬಡ್ಡಿ ಆಟದತ್ತ ಹೆಚ್ಚಿನ ಆಸಕ್ತಿ ಹೊಂದಿ ಆರನೇ ತರಗತಿಯಿಂದಲೇ ಅಭ್ಯಸಿಸತೊಡಗಿದರು.ಪ್ರೌಢಶಿಕ್ಷಣದ ಹಂತದಲ್ಲಿ ದೊರೆತ ಮಾರ್ಗದರ್ಶನ ಹಾಗೂ ತರಬೇತಿಯಿಂದ ಕಬಡ್ಡಿ ಪಂದ್ಯಾಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಕ್ಯಾಚಿಂಗ್ ಪ್ರದರ್ಶನದಲ್ಲಿ ಮಿಂಚಿ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.
            ಅಂತರಾಷ್ಟ್ರೀಯ ಮಟ್ಟದ ಆಟಗಾರ್ತಿಯಾದ ಮಮತಾ ಪೂಜಾರಿಯವರ ಆಟದ ಶೈಲಿ ಹೆಚ್ಚಿನ ಸಾಧನೆಗೆ ಪ್ರೇರಣೆಯಾಯಿತು ಎನ್ನುತ್ತಾರೆ ಹರ್ಷಿಣಿ.ಈವರೆಗೆ ಇವರು ಒಂಭತ್ತು ಬಾರಿ ರಾಜ್ಯ ಮಟ್ಟ ಹಾಗೂ ಆರು ಬಾರಿ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ವಿಷಯ.
            ಇವರ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಾಧನೆಗಳ ವವರ ಹೀಗಿದೆ:
*2012ರಲ್ಲಿ ಬಳ್ಳಾರಿಯಲ್ಲಿ ನಡೆದ ರಾಜ್ಯ ಮಟ್ಟದ ‘ಚಿನ್ನರ ಕ್ರೀಡಾ ಅಭಿಯಾನ’ದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿರುತ್ತಾರೆ.
*2013-14 ರಲ್ಲಿ ಚಾಮರಾಜನಗರದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿರುತ್ತಾರೆ.
*2015-2016 ರಲ್ಲಿ.ಬೈಂದೂರು ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷ ಬಾಲಕಿಯರ ವಯೋಮಿತಿಯ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಕ್ಕೆ ಭಾಜನರಾಗಿರುತ್ತಾರೆ.
*2015-16ರಲ್ಲಿ ಚೆನ್ನಪಟ್ಟಣದಲ್ಲಿ ನಡೆದ 17ವರ್ಷ ವಯೋಮಿತಿಯ ಬಾಲಕಿಯರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.
*2014ರಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ತಮ್ಮ ತಂಡದೊಂದಿಗೆ ಭಾಗವಹಿಸಿ ಪ್ರಥಮ ಸ್ಥಾನಿಯಾಗಿರುತ್ತಾರೆ.
*2015-16ರಲ್ಲಿ ಕಾರವಾರದಲ್ಲಿ ನಡೆದ ರಾಜ್ಯ ಮಟ್ಟದ ರಾಜೀವ್ ಗಾಂಧಿ ಖೇಲ್ ಅಭಿಯಾನದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಿಯಾಗಿರುತ್ತಾರೆ.
*2016ರಲ್ಲಿ ಗದಗದಲ್ಲಿ ನಡೆದ ಐದನೇ ಜೂನಿಯರ್ ರಾಜ್ಯ ಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ತಮ್ಮ ತಂಡದೊಂದಿಗೆ ಭಾಗವಹಿಸಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿರುತ್ತಾರೆ.
*2017-18 ರಲ್ಲಿ ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನಿಯಾಗಿರುತ್ತಾರೆ.
*2017ರಲ್ಲಿ ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ತಂಡದೊಂದಿಗೆ ಭಾಗವಹಿಸಿ ಪ್ರಥಮ ಸ್ಥಾನಿಯಾಗಿರುತ್ತಾರೆ.
*2015-16 ರಲ್ಲಿ ಹದಿನೇಳು ವರ್ಷ ವಯೋಮಿತಿಯ ಬಾಲಕಿಯರ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
*2016-17ರಲ್ಲಿ ಗುಜರಾತ್ನಲ್ಲಿ ನಡೆದ ರಾಷ್ಪ್ರ ಮಟ್ಟದ ರಾಜೀವ್ ಗಾಂಧಿ ಖೇಲ್ ಅಭಿಯಾನದ ಕಬಡ್ಡಿ ಪಂದ್ಯಾಟದಲ್ಲಿ ತಮ್ಮ.ತಂಡದೊಂದಿಗೆ ಭಾಗವಹಿಸಿರುತ್ತಾರೆ.
*2018-19 ರಲ್ಲಿ.ಹೈದರಾಬಾದ್ ನ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಅರುವತ್ತೈದನೇ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿರುತ್ತಾರೆ.
*ಹರಿಯಾಣದಲ್ಲಿ ನಡೆದ ನಲ್ವತ್ತಾರನೇ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿರುತ್ತಾರೆ.
*2020-21 ರಲ್ಲಿ ಜೈಪುರ,ರಾಜಸ್ಥಾನದಲ್ಲಿ ನಡೆದ ರಾಷ್ಟ್ರಮಟ್ಟದ ಅರುವತ್ತೇಳನೇ ಸೀನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿರುತ್ತಾರೆ.
         ರಾಜ್ಯ,ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿ ಕ್ರೀಡಾ ಕ್ಷೇತ್ರದಲ್ಲಿ ಬೆಳಗುತ್ತಿರುವ ಈ ಸಾಧಕಿಯ ಸಾಧನೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿದೆ.
           “ಬಾಲ್ಯದಿಂದಲೇ ಕಬಡ್ಡಿ ಕಡೆಗೆ ಆಸಕ್ತಿ ಹೊಂದಿದ್ದ ನನಗೆ ಶೂನ್ಯದಿಂದ ಸಾಧನೆಯ ಹಾದಿಗೆ ತಲುಪಲು ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ ಹೆತ್ತವರು,ಗುರುಗಳಿಗೆ ನಾನು ಚಿರ ಋಣಿ.ಮುಂದೆ ಮಹಿಳಾ ಪ್ರೋ ಕಬಡ್ಡಿ ಆಟಗಾರ್ತಿಯಾಗಿ ಗುರುತಿಸಿಕೊಳ್ಳಬೇಕೆಂಬ ಗುರಿಯಿದೆ”ಎನ್ನುತ್ತಾರೆ ಹರ್ಷಿಣಿ ಶೆಟ್ಟಿ.
           ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಈ ಸಾಧಕಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಕೀರ್ತಿ ಪತಾಕೆ ಬಾನೆತ್ತರಕ್ಕೆ ಹಾರಲಿ.ಇವರ ಸಾಧನೆಯ ಹಾದಿಗೆ ಇನ್ನಷ್ಟು ಪ್ರಶಸ್ತಿಗಳು ಅರಸಿ ಬರಲಿ.ಸಕಲ ದೈವ ದೇವರುಗಳ ಆಶೀರ್ವಾದ ಇವರ ಮೇಲಿರಲಿ.ಇವರ ಈ ಸಾಧನೆಯ ಹಾದಿ ಇತರರಿಗೂ ಪ್ರೇರಣೆಯಾಗಲೆಂದು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಆಶಯ.
Categories
ಯಶೋಗಾಥೆ

ಕ್ರೀಡಾ ಕ್ಷೇತ್ರದಲ್ಲಿ ಮಿನುಗುತ್ತಿರುವ ದ.ಕ ಜಿಲ್ಲೆಯ ಹೆಮ್ಮೆಯ ಸಾಧಕ ಹರಿಪ್ರಸಾದ್ ರೈ

‘ಮರಗಿಡಗಳ ತಲೆಯ ಒರೆಸಿ, ಹಿಮಬಿದ್ದ ನೆಲವ ಒರೆಸಿ’ ಎಂಬ ಕವಿವಾಣಿಯು ಹೇಗೆ ಸೂರ್ಯನಿಗೆ ಅನ್ವಯಿಸುತ್ತದೆಯೋ ಅಂತೆಯೇ ತಮ್ಮ ಕ್ರೀಡಾ ಕ್ಷೇತ್ರದ ಸಾಧನೆಯೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಅನೇಕ ಕ್ರೀಡಾ ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿರುವ ನಮ್ಮ ಹೆಮ್ಮೆಯ ಕ್ರೀಡಾ ಸಾಧಕ ಹರಿಪ್ರಸಾದ್ ರೈ.ಜಿ.
                01-06-1978  ರಂದು ಸಂಜೀವ ರೈ ಮತ್ತು ಶ್ರೀಮತಿ ರತ್ನಾವತಿ ರೈ ದಂಪತಿಗಳ ಪುತ್ರನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗೋಳ್ತಿಲದಲ್ಲಿ ಜನಿಸಿದ ಹರಿಪ್ರಸಾದ್ ರೈ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಶಾಲೆ ತಿಂಗಳಾಡಿ ಹಾಗೂ ಕೆಯ್ಯೂರಿನಲ್ಲಿ ಪೂರ್ಣಗೊಳಿಸಿ ಪಿ.ಯು.ಸಿ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಹಾಗೂ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಪಡೆದು ಬಿ.ಪಿ.ಎಡ್ ಶಿಕ್ಷಣವನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದರು.
            ಶಾಲಾ ದಿನಗಳಿಂದಲೇ ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡು ವಿವಿಧ ಹಂತಗಳಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಖೋ – ಖೋ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ವಿಷಯ. 2005 ರಿಂದ 2008 ರವರೆಗೆ ಕೇರಳದ ಕೊಟ್ಟಯಂ ಬೆಥನಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ 2009 ರಿಂದ ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇರ್ಪಡೆಗೊಂಡು ಅನೇಕ ಕ್ರೀಡಾಪ್ರತಿಭೆಗಳನ್ನು ತಮ್ಮ ತರಬೇತಿಯಲ್ಲಿ ಪಳಗಿಸಿ ಸಾಧನೆಯ ಶಿಖರವನ್ನೇರಲು ಇವರು ಶ್ರಮಿಸುವ ರೀತಿ ಶ್ಲಾಘನೀಯ.
         ನಿರಂತರವಾಗಿ ಕ್ರೀಡಾಪ್ರತಿಭೆಗಳಿಗೆ ಸಲಹೆ ಸೂಚನೆಗಳನ್ನಿತ್ತು ಸುಳ್ಯ ತಾಲೂಕು ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಸತತ ಹನ್ನೊಂದು ಬಾರಿ ಸಮಗ್ರ ಪ್ರಶಸ್ತಿಯನ್ನು ಪಡೆದು ಶಾಲೆಯ ಗರಿಮೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದರು. ಖೋ-ಖೋ, ಕಬಡ್ಡಿ, ವಾಲಿಬಾಲ್, ತ್ರೋಬಾಲ್ ವಿಭಾಗಗಳಲ್ಲಿ ಅನೇಕ ಕ್ರೀಡಾ ಪ್ರತಿಭೆಗಳ ಕೀರ್ತಿ ಬೆಳಗುವಲ್ಲಿ ಇವರ ಪಾತ್ರ ಪ್ರಮುಖವಾದದ್ದು.
         ಕ್ರೀಡೆಯೇ ಕಿರೀಟವೆನ್ನುವ ಹರಿಪ್ರಸಾದ್ ರೈ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು 2016 ರಲ್ಲಿ ಸ್ಪೇನ್ ದೇಶದಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿರುತ್ತಾರೆ.ಇವರು ಈವರೆಗೂ ಸತತ ನಾಲ್ಕು ಬಾರಿ ರಾಷ್ಟ್ರ ಮಟ್ಟ ಹಾಗೂ ಎಂಟು ಬಾರಿ ರಾಜ್ಯಮಟ್ಟವನ್ನು ಪ್ರತಿನಿಧಿಸಿರುವುದು ಸಂತಸ ಹಾಗೂ ಹೆಮ್ಮೆಯ ವಿಷಯ.
              ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ನ ತಾಂತ್ರಿಕ ಅಧಿಕಾರಿಯಾಗಿ, ಕರ್ನಾಟಕ ರಾಜ್ಯ ಮಟ್ಟದ ವಾಲಿಬಾಲ್ ಮತ್ತು ಕಬಡ್ಡಿಯ ತೀರ್ಪುಗಾರರಾಗಿರುವ ಇವರ ಸಾಧನೆಯ ಹಾದಿಗೆ 2012-13 ರಲ್ಲಿ ಪುತ್ತೂರು ತಾಲೂಕು ಬಂಟರ ಸಂಘದಿಂದ ‘ಯುವ ಪ್ರತಿಭಾ ಪುರಸ್ಕಾರ’,ರೋಟರಿ ಸಂಸ್ಥೆಯಿಂದ ಜಿಲ್ಲಾ ಮಟ್ಟದಲ್ಲಿ ಸಾಧನಾಶ್ರೀ ಪ್ರಶಸ್ತಿ ಹಾಗೂ ಅನೇಕ ಸಂಘ – ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.
              ನಿರಂತರವಾಗಿ ಕ್ರೀಡಾಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನೇ ಸೃಷ್ಟಿಸುತ್ತಾ ಅದೆಷ್ಟೋ ಕ್ರೀಡಾ ಪ್ರತಿಭೆಗಳ ಸಾಧನೆಯ ಹಾದಿಗೆ ಕಾರಣಕರ್ತರಾಗಿರುವ ಹರಿಪ್ರಸಾದ್ ರೈಯವರ ಮಾರ್ಗದರ್ಶನ ಇನ್ನಷ್ಟು ಕ್ರೀಡಾ ಪ್ರತಿಭೆಗಳಿಗೆ ದೊರೆತು ರಾಷ್ಟ್ರ,ಅಂತರಾಷ್ಟ್ರೀಯಮಟ್ಟದಲ್ಲಿ ಮಿಂಚುವಂತಾಗಲಿ. ಕ್ರೀಡಾಕ್ಷೇತ್ರದಲ್ಲಿ  ಇನ್ನೂ ಹೆಚ್ಚಿನ ಸಾಧನೆಗೆ ಭಗವಂತನ ಅನುಗ್ರಹವಿರಲಿ. ಇವರ ಸಾಧನೆಯ ಹಾದಿ ಇತರರಿಗೂ ಪ್ರೇರಣೆಯಾಗಲೆನ್ನುವುದೇ ಆಶಯ.