Categories
ಕ್ರಿಕೆಟ್

ಮಗನಿಗಾಗಿ ಬತ್ತದ ಗದ್ದೆಯಲ್ಲಿಯೇ ಕ್ರಿಕೆಟ್ ಪಿಚ್ ಮಾಡಿಕೊಟ್ಟಿದ್ದರು ಶುಭಮನ್ ಗಿಲ್ ತಂದೆ!

ಮೂರೂ ಫಾರ್ಮಾಟಗಳಲ್ಲಿ ಭಾರತದ ಆರಂಭಿಕನಾಗುವ ತಾಕತ್ತು ಆತನಿಗೆ ಇದೆ!
———————————–
ನಿನ್ನೆಯ ಕ್ರಿಕೆಟ್ ಪಂದ್ಯವನ್ನು ನೋಡಿದ ಭಾರತೀಯರಿಗೆ ಈ ಆಟಗಾರನು ಕೊಟ್ಟ ರೋಮಾಂಚನ ಅದು ಬಹುಕಾಲ ನೆನಪಿನಲ್ಲಿ ಉಳಿಯುವುದು ಖಂಡಿತ! ಶುಭಮನ್ ಗಿಲ್ ಮುಂದಿನ ಹತ್ತಾರು ವರ್ಷ ಭಾರತೀಯ ಕ್ರಿಕೆಟನ್ನು ಆಳುವ ಸಾಧ್ಯತೆಯು ಕ್ರಿಕೆಟ್ ಪ್ರಿಯರಿಗೆ ನಿನ್ನೆ ಕಂಡಿದೆ! ಈಗಾಗಲೇ ಆತನನ್ನು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೋಹ್ಲಿ ಜೊತೆಗೆ ಹೋಲಿಕೆ ಮಾಡಲು ಆರಂಭ ಆಗಿದೆ. ಗಿಲ್ ಆ ಹೋಲಿಕೆಗೆ ಖಂಡಿತವಾಗಿ ವರ್ಥ್ ಆಗಿದ್ದಾರೆ!
ಮೂರೂ ಫಾರ್ಮ್ಯಾಟಗಳಲ್ಲಿ ಗಿಲ್ ಚಾಂಪಿಯನ್ ಆಟಗಾರ! 
———————————–
ಈಗ ಮೂರೂ ಫಾರ್ಮ್ಯಾಟಗಳಲ್ಲಿ ಗಿಲ್ ಅವರ ದಾಖಲೆಯು ಅದ್ಭುತವೇ ಆಗಿದೆ.
13 ಟೆಸ್ಟ್ ಮ್ಯಾಚಗಳಲ್ಲಿ ಆತನು  ಓಪನರ್ ಆಗಿ 32 ಸರಾಸರಿಯಲ್ಲಿ 736 ರನ್ ಹೊಡೆದಿದ್ದಾರೆ. ಒಂದು ಶತಕ ಕೂಡ ಇದೆ.
ಏಕದಿನದ ಪಂದ್ಯಗಳಲ್ಲಿ  ಆತನ ರೆಕಾರ್ಡ್ ಅತ್ಯಂತ ಆಕರ್ಷಕ ಆಗಿದೆ. 21 ಏಕದಿನದ ಪಂದ್ಯಗಳಲ್ಲಿ 1254 ರನ್! 73.76 ಸರಾಸರಿ! ನಾಲ್ಕು ಶತಕ! ಅದರಲ್ಲಿಯೂ ಒಂದು ಡಬಲ್ ಸೆಂಚುರಿ! ದ್ವಿಶತಕ ಹೊಡೆದ ಜಗತ್ತಿನ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಯು ಅವರಿಗೆ ದೊರೆತಿದೆ!
ಇದೀಗ ಆರನೇ ಟಿ20 ಪಂದ್ಯದಲ್ಲಿ ಸ್ಫೋಟಕ ಶತಕವು ಆತನ ದಾಖಲೆಗೆ ಸೇರ್ಪಡೆಯಾಗಿದೆ! ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ ಇಲ್ಲದೆ ಕೂಡ ಪಂದ್ಯವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಲು ಸಾಧ್ಯ ಎಂದು ಭಾರತೀಯ ಕ್ರಿಕೆಟ್ ತಂಡ ಸಾಬೀತು ಮಾಡಿ ತೋರಿಸಿದೆ!  ಅದಕ್ಕೆ ಕಾರಣ ಶುಭಮನ್ ಗಿಲ್ ಅವರಂತಹ ಯುವ ಆಟಗಾರರು! ಇದೇ ವರ್ಷ ಭಾರತದಲ್ಲಿಯೇ ನಡೆಯುವ ವಿಶ್ವಕಪ್ ಕ್ರಿಕೆಟ್ ಕೂಟಕ್ಕೆ ಶುಭಮನ್ ಭಾರೀ ದೊಡ್ಡ ಕೊಡುಗೆ ಆಗಲಿದ್ದಾರೆ ಅನ್ನುವುದು ಖಚಿತ ಭರವಸೆ!
ಪಂಜಾಬದ ಸಾಮಾನ್ಯ ರೈತನ ಮಗ ಶುಭಮನ್! 
———————————-
ಪಂಜಾಬಿನ ಜಲಾಲಾಬಾದ ಎಂಬ ಸಣ್ಣ ನಗರದಲ್ಲಿ ಒಬ್ಬ ಸಾಮಾನ್ಯ ರೈತನ ಕುಟುಂಬದಿಂದ ಬಂದವರು ಶುಭಮನ್. ಆತನ ತಂದೆ ಸುಖವಿಂದರ್ ಮಗನ ಕ್ರಿಕೆಟ್ ಪ್ರತಿಭೆಗೆ ಆಧಾರವಾಗಿ ನಿಂತದ್ದು ನಿಜವಾಗಿಯೂ ಗ್ರೇಟ್! ತನ್ನ ಫಲವತ್ತಾದ ಗದ್ದೆಯನ್ನು ಲೆವೆಲ್ ಮಾಡಿ ಕ್ರಿಕೆಟ್ ಪಿಚ್ ಮಾಡಿ ತನ್ನ ಮಗನ ನೆರವಿಗೆ ನಿಂತವರು ತಂದೆ ಸುಖ್ವಿಂದರ! ಇಡೀ ದಿನ ಅಪ್ಪನೇ ಬೌಲರ್ ಮತ್ತು ಮಗನೇ ಬ್ಯಾಟರ್!
ಅಪ್ಪ ಹೇಳುವ ಪ್ರಕಾರ ಶುಭಮನ್ ತನ್ನ ಮೂರನೇ ವಯಸ್ಸಲ್ಲಿ ಕ್ರಿಕೆಟ್ ಆಸಕ್ತಿ ಪಡೆದಿದ್ದನು! ರಾತ್ರಿ ಮಲಗುವಾಗ ಕ್ರಿಕೆಟ್ ಬ್ಯಾಟ್ ಮತ್ತು ಬಾಲನ್ನು ತನ್ನ ಹಾಸಿಗೆಯ ಪಕ್ಕದಲ್ಲಿ ಇಟ್ಟು ಮಲಗುತ್ತಿದ್ದನು. ಈ ಪ್ರತಿಭೆಯ ನೆರವಿಗೆ ಅಪ್ಪ ನಿಂತರು ಅನ್ನೋದು ಕ್ರಿಕೆಟಿನ ಭಾಗ್ಯ! ಮಗನ ಕ್ರಿಕೆಟ್ ಭವಿಷ್ಯ ರೂಪಿಸಲು ಊರಿನ ಕೃಷಿ ಭೂಮಿಯನ್ನು ಮಾರಿ ಮೋಹಾಲಿಗೆ ಬಂದವರು ಅಪ್ಪ. ಅಲ್ಲಿ ಬಾಡಿಗೆ ಮನೆ ಹಿಡಿದು ಮಗನ ಕ್ರಿಕೆಟ್ ಪ್ರತಿಭೆಗೆ ಆಧಾರವಾಗಿ ನಿಂತವರು ಅವರು! ಶುಭಮನ್ ತನ್ನ ತಂದೆಯ ಕನಸಿಗೆ ರೆಕ್ಕೆ ಮೂಡಿಸಿ ಬೆಳೆಯುತ್ತ ಹೋದರು.
ರಣಜಿ ಪಂದ್ಯದಲ್ಲಿ ಪಂಜಾಬ್ ಪರವಾಗಿ ಆಡುತ್ತ ಮೊದಲ ವರ್ಷವೇ ದಾಖಲೆಯ ರನ್ ಪರ್ವತ ಕಟ್ಟಿದವರು ಶುಭಮನ್ ! ಆಂಡರ್ 16 ಪಂದ್ಯಗಳಲ್ಲಿ ನಿರ್ಮಲ್ ಸಿಂಘ್ ಅವರ ಜೊತೆ 587 ರನ್ ಜೊತೆಯಾಟ ಪೂರ್ತಿ ಮಾಡುವಾಗ ಅತನ ವಯಸ್ಸು ಕೇವಲ 16 ವರ್ಷ! ಮುಂದೆ ಅಂಡರ್ 19 ವಿಶ್ವಕಪನಲ್ಲಿ ಭಾರತದ ಪರವಾಗಿ
ಉಪನಾಯಕನಾಗಿ ಆಡುತ್ತ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು! 124 ಸರಾಸರಿಯಲ್ಲಿ 372 ರನ್ ಅವರ ದಾಖಲೆ! ಪಾಕ್ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಶತಕ ಹೊಡೆದು ಏಕಾಂಗಿಯಾಗಿ ಭಾರತವನ್ನು ಗೆಲ್ಲಿಸಿದ್ದನ್ನು ಭಾರತ ಮರೆಯಲು ಸಾಧ್ಯವೇ ಇಲ್ಲ!
ಐಪಿಎಲ್ ಪಂದ್ಯಗಳಲ್ಲಿ ಕೂಡ ಆತನ ದಾಖಲೆಗಳು ಅತ್ಯುತ್ತಮ ಆಗಿವೆ. 2019ರಲ್ಲಿ ಶುಭಮನ್ ಗಿಲ್ ‘ಎಮರ್ಜಿಂಗ್ ಪ್ಲೇಯರ್’  ಅವಾರ್ಡ್ ಪಡೆದಿದ್ದರು. ಕಳೆದ ವರ್ಷ ಐಪಿಎಲ್ ಟ್ರೋಫಿಯನ್ನು  ಗೆದ್ದ ಗುಜರಾತ್ ಟೈಟಾನ್ ಪರವಾಗಿ ಅವರು ಅತ್ಯುತ್ತಮವಾಗಿ ಆಡಿದ್ದರು.
ತನ್ನ ಎಲ್ಲ ಸಾಧನೆಗೆ ತಂದೆಯ ತ್ಯಾಗವೇ ಕಾರಣ ಅಂದರು ಗಿಲ್!
———————————-
ಮುಂದಿನ ಹಲವಾರು ವರ್ಷಗಳ ಭಾರತೀಯ ಕ್ರಿಕೆಟ್ ತಂಡದ ಮೂರೂ ಫಾರ್ಮ್ಯಾಟಗಳಲ್ಲಿ ಆರಂಭಿಕ ಆಟಗಾರನಾಗಿ ಕಾಣಿಸಿಕೊಳ್ಳುವ ತಾಕತ್ತು ಇರುವ ಶುಭಮನ್ ಭಾರತದ ಮುಂದಿನ ಸೂಪರ್ ಸ್ಟಾರ್ ಆಗುವ ಎಲ್ಲ ಸಾಧ್ಯತೆ ಇದೆ! ಆತನ ಬ್ಯಾಟಿಂಗನಲ್ಲಿ ಸಚಿನ್ ಅವರ ಟೈಮಿಂಗ್, ರೋಹಿತ್ ಶರ್ಮಾ ಅವರ ಆಕ್ರಮಣ, ವಿರಾಟ್ ಕೋಹ್ಲಿ ಅವರ ಗ್ರೌಂಡ್ ಸ್ಟ್ರೋಕ್ ಎಲ್ಲವೂ ಇದೆ ಎಂಬಲ್ಲಿಗೆ ಶುಭಮನ್ ಭಾರತ ಕ್ರಿಕೆಟ್ ಪ್ರಪಂಚದ ನಿಡುಗಾಲದ  ಭವಿಷ್ಯ ಅನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ.
ತನ್ನ ಎಲ್ಲ ಕ್ರಿಕೆಟ್ ಸಾಧನೆಗಳಿಗೆ ತನ್ನ ತಂದೆ ಸುಖ್ವಿಂದರ್ ಅವರ ತ್ಯಾಗವೇ ಕಾರಣ ಎಂದು ಹೇಳುವಾಗ ಶುಭಮನ್ ಕಣ್ಣಲ್ಲಿ ರೋಮಾಂಚನ ಎದ್ದು ಕಾಣುತ್ತದೆ. ತಂದೆಯ ಬಗ್ಗೆ ಇರುವ ಉತ್ಕಟ ಪ್ರೀತಿ ಕೂಡ!
ಸಚಿನ್ ತೆಂಡೂಲ್ಕರ್ ಮಗಳು ಸಾರಾ ಆತನ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಅನ್ನುವ ಗಾಸಿಪ್ ನಿಜ ಆಗಲಿ!

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

15 + nineteen =