ರಾಬಿನ್ ಉತ್ತಪ್ಪ ಅವರದ್ದು ಆಕರ್ಷಣೀಯ ವ್ಯಕ್ತಿತ್ವ. ತುಂಬಾ ಇಂಟ್ರೆಸ್ಟಿಂಗ್ ವ್ಯಕ್ತಿ. ಆಟದ ಬಗ್ಗೆ ಹೇಳಲೇಬೇಕಿಲ್ಲ. ಅದ್ಭುತ ಕ್ರಿಕೆಟರ್. ಅದರಾಚೆ, ಉತ್ತಪ್ಪ ಒಬ್ಬ ಒಳ್ಳೆಯ ವ್ಯಕ್ತಿ ಕೂಡ ಹೌದು.
ಹೊರ ಜಗತ್ತಿಗೆ ಆತ ಹೇಗೆ ಕಾಣುತ್ತಾನೋ ಗೊತ್ತಿಲ್ಲ.. ಆದರೆ ಆತನನ್ನು ಹತ್ತಿರದಿಂದ ನೋಡಿದವರಿಗೆ “ಹೃದಯವಂತ” ಎಂಬುದಂತೂ ಚೆನ್ನಾಗಿ ಗೊತ್ತು.
ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಸಾಧನೆ ಮಾಡಿರುವ ರಾಬಿನ್ ಉತ್ತಪ್ಪ ಮೈದಾನದಾಚೆ ಮತ್ತೊಬ್ಬರ ಕಷ್ಟಕ್ಕೆ ಮಿಡಿಯುವ ವ್ಯಕ್ತಿ. ಇದಕ್ಕೆ ಸಾಕ್ಷಿ ಚಿನ್ನಸ್ವಾಮಿ ಕ್ರೀಡಾಂಗಣದ ಗ್ರೌಂಡ್ಸ್’ಮನ್’ಗಳಿಗೆ ಅವರು ಮಾಡಿರುವ ಸಹಾಯ.
ರಾಬಿನ್ ಉತ್ತಪ್ಪ ಅವರು ಕರ್ನಾಟಕ ತಂಡದ ಪರ ಆಡುತ್ತಿದ್ದಾಗ ಕನಿಷ್ಠ ಆರೇಳು ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದ ಗ್ರೌಂಡ್ಸ್’ಮನ್’ಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ಸಹಾಯ ಮಾಡಿದ್ದಾರೆ.
ತಮಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಗಲೂ ರಾತ್ರಿ ಕಷ್ಟ ಪಟ್ಟು ಕೆಲಸ ಮಾಡುವ ಗ್ರೌಂಡ್ಸ್’ಮನ್’ಗಳೆಂದರೆ ಉತ್ತಪ್ಪ ಅವರಿಗೆ ವಿಶೇಷ ಪ್ರೀತಿ.
ಅವರಲ್ಲಿ ಒಂದಷ್ಟು ಮಂದಿಯ ಮಕ್ಕಳ ಬಗ್ಗೆ ವಿಚಾರಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾದವರು ರಾಬಿನ್ ಉತ್ತಪ್ಪ. ಮಕ್ಕಳು ಯಾವ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂಬುದರ ಮಾಹಿತಿ ಪಡೆದು, ಪ್ರತೀ ವರ್ಷ School feesನ್ನು ನೇರವಾಗಿ ಶಾಲೆಗೆ ತಲುಪಿಸಿ ಬಿಡುತ್ತಿದ್ದರು. ಕರ್ನಾಟಕ ಪರ ಆಡುತ್ತಿದ್ದಾಗ ಪ್ರತೀ ವರ್ಷ ತಪ್ಪದೆ ನಮ್ಮ ಮಕ್ಕಳ ಸ್ಕೂಲ್ ಫೀಸ್ ಕಟ್ಟಿದವರು ಉತ್ತಪ್ಪ ಎಂದು ಚಿನ್ನಸ್ವಾಮಿ ಕ್ರೀಡಾಂಗಣದ ಗ್ರೌಂಡ್ಸ್’ಮನ್ ಒಬ್ಬರು ಹೇಳಿದ್ದರು. ಈ ವಿಚಾರವನ್ನು ಎಲ್ಲಿಯೂ, ಯಾರಲ್ಲೂ ಹೇಳಬಾರದೆಂದು ಗ್ರೌಂಡ್ಸ್’ಮನ್’ಗಳಿಗೆ ರಾಬಿನ್ ಉತ್ತಪ್ಪ ತಾಕೀತು ಮಾಡಿದ್ದರಂತೆ.
ಕ್ರಿಕೆಟಿಗರು ಉತ್ತಮವಾಗಿ ಬ್ಯಾಟಿಂಗ್, ಬೌಲಿಂಗ್ ಮಾಡಬೇಕೆಂದರೆ ಪಿಚ್ ಉತ್ತಮವಾಗಿರಬೇಕು. ಅಂತಹ ಉತ್ತಮ ಪಿಚ್’ಗಳನ್ನು ನಿರ್ಮಿಸುವವರು ಗ್ರೌಂಡ್ಸ್’ಮನ್’ಗಳು. ಆ ಗ್ರೌಂಡ್ಸ್’ಮನ್’ಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ನೀಡುತ್ತಾ ಬಂದಿದ್ದ ರಾಬಿನ್ ಉತ್ತಪ್ಪ ನಿಜಕ್ಕೂ ಹೃದಯವಂತನೇ ಸರಿ.