
ರಣಜಿ ಟ್ರೋಫಿ: ಶ್ರೇಯಸ್ ಗೋಪಾಲ್‌ಗೆ 8 ವಿಕೆಟ್.. ಶಿಖರ್ ಶೆಟ್ಟಿಗೆ ಚೊಚ್ಚಲ ರಣಜಿ ವಿಕೆಟ್ ಸಂಭ್ರಮ

ಕುಂದಾಪುರದ ಹುಡುಗ ಶಿಖರ್ ಶೆಟ್ಟಿ ರಣಜಿ ವೃತ್ತಿಜೀವನದಲ್ಲಿ ಚೊಚ್ಚಲ ವಿಕೆಟ್ ಬೇಟೆಯಾಡಿದ್ದಾರೆ. ರಾಜ್’ಕೋಟ್’ನಲ್ಲಿ ನಡೆಯುತ್ತಿರುವ ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯದ ಮೂರನೇ ದಿನ ಸೌರಾಷ್ಟ್ರ ತಂಡದ ನಾಯಕ ಜೈದೇವ್ ಉನಾದ್ಕಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಶಿಖರ್ ಶೆಟ್ಟಿ ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಮೊದಲ ವಿಕೆಟ್ ತಮ್ಮದಾಗಿಸಿಕೊಂಡರು.

ಪಂದ್ಯದ 2ನೇ ದಿನ ಬ್ಯಾಟಿಂಗ್’ನಲ್ಲಿ ಮಿಂಚಿದ್ದ ಶಿಖರ್ ಶೆಟ್ಟಿ 9ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು 57 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್’ಗಳ ನೆರವಿನಿಂದ 41 ರನ್ ಗಳಿಸಿ ಚೊಚ್ಚಲ ರಣಜಿ ಪಂದ್ಯವನ್ನೇ ಸ್ಮರಣೀಯವಾಗಿಸಿಕೊಂಡಿದ್ದಾರೆ. ಕರ್ನಾಟಕ ಪರ ಅನುಭವಿ ಲೆಗ್ ಸ್ಪಿನ್ ಆಲ್ರೌಂಡರ್ ಶ್ರೇಯಸ್ ಗೋಪಾಲ್ 110 ರನ್ನಿಗೆ 8 ವಿಕೆಟ್ ಪಡೆದು ಮಿಂಚಿದರು.


ಕರ್ನಾಟಕದ 373 ರನ್’ಗಳಿಗೆ ಪ್ರತಿಯಾಗಿ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಂದ 3ನೇ ದಿನದಾಟ ಮುಂದುವರಿಸಿದ ಸೌರಾಷ್ಟ್ರ ಶ್ರೇಯಸ್ ಗೋಪಾಲ್ ದಾಳಿಗೆ ತತ್ತರಿಸಿ 376 ರನ್’ಗಳಿಗೆ ಆಲೌಟಾಗಿ ಕೇವಲ 4 ರನ್’ಗಳ ಇನ್ನಿಂಗ್ಸ್ ಮುನ್ನಡೆ ಸಂಪಾದಿಸಿತು. 342 ರನ್ನಿಗೆ 9 ವಿಕೆಟ್ ಕಳೆದುಕೊಂಡಿದ್ದ ಸೌರಾಷ್ಟ್ರಕ್ಕೆ ಚೇತನ್ ಸಕಾರಿಯಾ ಮತ್ತು ಯುವಾರಾಜ್ ಸಿನ್ಹ್ ದೋಡಿಯಾ 10ನೇ ವಿಕೆಟ್’ಗೆ 34 ರನ್ ಸೇರಿಸಿ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟರು.

4 ರನ್’ಗಳ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಸರದಿ ಆರಂಭಿಸಿರುವ ಕರ್ನಾಟಕ ತಂಡ 3ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿದೆ. ಕರ್ನಾಟಕದ ದ್ವಿತೀಯ ಇನ್ನಿಂಗ್ಸ್’ನಲ್ಲಿ ನಿಕಿನ್ ಜೋಸ್ 34 ರನ್ ಗಳಿಸಿ ಔಟಾದರೆ ನಾಯಕ ಮಯಾಂಕ್ ಅಗರ್ವಾಲ್ ಅಜೇಯ 31 ರನ್ ಮತ್ತು ದೇವದತ್ ಪಡಿಕ್ಕಲ್ ಅಜೇಯ 18 ರನ್’ಗಳೊಂದಿಗೆ ಅಂತಿಮ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಪಂದ್ಯ ಡ್ರಾಗೊಳ್ಳುವ ಸಾಧ್ಯತೆಗಳೇ ಹೆಚ್ಚಿದ್ದು, ಇನ್ನಿಂಗ್ಸ್ ಹಿನ್ನಡೆಯ ಆಧಾರದಲ್ಲಿ ಕರ್ನಾಟಕ ಕೇವಲ 1 ಅಂಕಕ್ಕಷ್ಟೇ ತೃಪ್ತಿ ಪಟ್ಟುಕೊಳ್ಳಬೇಕಿದೆ.





