ಕರುನಾಡ ಕ್ರಿಕೆಟ್ ಹಬ್ಬ ಖ್ಯಾತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ತಂಡ, ಮಯಾಂಕ್ ಅಗರ್ವಾಲ್ ಸಾರಥ್ಯದ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 45 ರನ್’ಗಳಿಂದ ಭರ್ಜರಿಯಾಗಿ ಮಣಿಸಿ ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು ವಾರಿಯರ್ಸ್ ತಂಡ ನಿಗದಿತ 20 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ಮೈಸೂರು ಪರ ಆರಂಭಿಕ ಆಟಗಾರ ಎಸ್.ಯು ಸುಮಿತ್ 44 ಎಸೆತಗಳಲ್ಲಿ 71 ರನ್ ಸಿಡಿಸಿದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ನಾಯಕ ಕರುಣ್ ನಾಯರ್ 45 ಎಸೆತಗಳಲ್ಲಿ 66 ರನ್ ಬಾರಿಸಿದರು. ಸ್ಲಾಗ್ ಓವರ್’ಗಳಲ್ಲಿ ಅಬ್ಬರಿಸಿದ ರಾಯಚೂರಿನ ಸಿಂಧನೂರಿನ ಹುಡುಗ ಮನೋಜ್ ಭಾಂಡಗೆ ಕೇವಲ 13 ಎಸೆತಗಳಲ್ಲಿ 5 ಸಿಕ್ಸರ್’ಗಳ ನೆರವಿನಿಂದ ಸಿಡಿಲಬ್ಬರದ ಅಜೇಯ 44 ರನ್ ಬಾರಿಸಿ ಮೈಸೂರು ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ಚಾಂಪಿಯನ್ ಪಟ್ಟಕ್ಕೇರಲು 208 ರನ್’ಗಳ ಕಠಿಣ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ಪಡೆ ಮೊದಲ ಓವರ್’ನಲ್ಲೇ ನಾಯಕ ಮಯಾಂಕ್ ಅಗರ್ವಾಲ್ ಅವರ ವಿಕೆಟ್ ಕಳೆದುಕೊಂಡಿತು. ಮತ್ತೊಬ್ಬ ಓಪನರ್, ಮೈಸೂರಿನ ಹುಡುಗ ಎಲ್.ಆರ್ ಚೇತನ್ 32 ಎಸೆತಗಳಲ್ಲಿ 4 ಸಿಕ್ಸರ್’ಗಳ ಸಹಿತ 51 ರನ್ ಸಿಡಿಸಿ ಬೆಂಗಳೂರು ಪರ ಪ್ರತಿರೋಧ ತೋರಿದರೂ, ಉಳಿದ ಆಟಗಾರರಿಂದ ಸಮರ್ಥ ಬೆಂಬಲ ಸಿಗಲಿಲ್ಲ.
ಮೈಸೂರು ವಾರಿಯರ್ಸ್ ತಂಡದ ಸಂಘಟಿತ ದಾಳಿಗೆ ತತ್ತರಿಸಿದ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಮೈಸೂರು ಪರ ರಾಯಚೂರಿನ ಯುವ ವೇಗದ ಬೌಲರ್ ವಿದ್ಯಾಧರ ಪಾಟೀಲ್ 19 ರನ್ನಿಗೆ 3 ವಿಕೆಟ್ ಪಡೆದರೆ, ಅನುಭವಿ ಆಫ್’ಸ್ಪಿನ್ನರ್ ಕೆ.ಗೌತಮ್ 23ಕ್ಕೆ 2 ವಿಕೆಟ್ ಉರುಳಿಸಿದರು.
2022ನೇ ಸಾಲಿನ ಮಹಾರಾಜ ಟ್ರೋಫಿ ಫೈನಲ್’ನಲ್ಲಿ ಬೆಂಗಳೂರು ತಂಡ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ಸೋತು. ನಿರಾಸೆ ಅನುಭವಿಸಿತ್ತು. 2 ವರ್ಷಗಳ ನಂತರ ಮತ್ತೆ ಬೆಂಗಳೂರು ಬ್ಲಾಸ್ಟರ್ಸ್ ಫೈನಲ್’ನಲ್ಲಿ ಮುಗ್ಗರಿಸಿದೆ.
ಟೂರ್ನಿಯಲ್ಲಿ 12 ಪಂದ್ಯಗಳಿಂದ 560 ರನ್ ಗಳಿಸಿದ ಮೈಸೂರು ವಾರಿಯರ್ಸ್ ಕ್ಯಾಪ್ಟನ್ ಕರುಣ್ ನಾಯರ್ ಸರಣಿಶ್ರೇಷ್ಠ ಪ್ರಶಸ್ತಿ ಸಹಿತ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರೆ, 9 ಪಂದ್ಯಗಳಿಂದ 17 ವಿಕೆಟ್ ಉರುಳಿಸಿದ ಹುಬ್ಬಳ್ಳಿ ಟೈಗರ್ಸ್’ನ ಮಂಡ್ಯದ ಹುಡುಗ ಎಲ್.ಆರ್ ಕುಮಾರ್ ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾದರು.