ಆ ತಂದೆಯ ಕಣ್ಣಲ್ಲಿ ಹೆಮ್ಮೆಯ ಭಾವನೆಯನ್ನು ಕಂಡಿದ್ದೇನೆ..!
ಮಗ ಕ್ರಿಕೆಟ್ ಹುಚ್ಚು ಹಿಡಿಸಿಕೊಂಡು ಮನೆ ಬಿಟ್ಟಾಗ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದರು ಆ ತಂದೆ.. ವಿದ್ಯೆ ಕಲಿಸುವ ಗುರುವಾಗಿದ್ದವರು.. ಮಗ ವಿದ್ಯೆ ಕಲಿತು ಯಾವುದಾದರೊಂದು ಉದ್ಯೋಗ ಪಡೆಯಲಿ ಎಂದುಕೊಂಡಿದ್ದ ತಂದೆಗೆ ಮಗನ ಕ್ರಿಕೆಟ್ ಹುಚ್ಚು ಆತಂಕ ತರಿಸಿತ್ತು. ಕೊನೆಗೆ ಆ ಆತಂಕವೇ ನಿಜವಾಗಿ ಮಗ ಮನೆ ಬಿಟ್ಟು ಹೊರಟಿದ್ದ.
ಈ ಕ್ರಿಕೆಟ್’ನಿಂದ ಮಗನ ಜೀವನವೇ ಹಾಳಾಗಿ ಹೋಯಿತು ಎಂದು ಆ ತಂದೆ ಅದೆಷ್ಟು ಬಾರಿ ಪರಿತಪಿಸಿದ್ದರೋ.. ಆದರೆ ಮಗ ಮುಂದಿಟ್ಟ ಹೆಜ್ಜೆ ಹಿಂದಿಡಲಿಲ್ಲ. ಜೀವನವೇ ಸಾಕು ಎನ್ನುವಂಥಾ ಕಷ್ಟಗಳು ಎದುರಾದ ಸಂದರ್ಭದಲ್ಲೂ ಧೃತಿಗೆಡಲಿಲ್ಲ.. ಕ್ರಿಕೆಟ್’ಗಾಗಿ ಹತ್ತಾರು ದಿನ ಉಪವಾಸ ಬಿದ್ದ.. ನಾಲ್ಕಾರು ವರ್ಷ ಸ್ಮಶಾನದಲ್ಲಿ ಮಲಗಿದ.. ಇದೆಲ್ಲಾ ತಂದೆಗೆ ಗೊತ್ತೇ ಇರಲಿಲ್ಲ..
ಕೊನೆಗೊಂದು ದಿನ ಮಗನನ್ನು ಭಾರತ ತಂಡದಲ್ಲಿ ಕಂಡಾಗ ಒಳಗೊಳಗೇ ಹೆಮ್ಮೆ ಪಟ್ಟಿದ್ದರು ತಂದೆ..
ಅದೇ ಮಗ ಭಾರತ ತಂಡದ ವಿಶ್ವಕಪ್ ರೂವಾರಿಗಳಲ್ಲಿ ಒಬ್ಬನಾದಾಗ ಆ ತಂದೆಯೊಂದಿಗೆ ಮಾತನಾಡಿದ್ದೆ. ಕೈಲಾಗದವನು ಎಂದುಕೊಂಡಿದ್ದ ಮಗನೇ ತಂದೆ ಹೆಮ್ಮೆ ಪಡುವಂತೆ ಮಾಡಿದ್ದ.
ತಂದೆ ಹೆಮ್ಮೆ ಪಡುವಂತೆ ಮಾಡಿದ ಆ ಮಗನ ಹುಟ್ಟುಹಬ್ಬ ಇವತ್ತು. ರಾಘವೇಂದ್ರ ದಿವಗಿ ಎಂಬ ಅಸಾಮಾನ್ಯ ವ್ಯಕ್ತಿಯ ಜನ್ಮದಿನ.. ರಾಘವೇಂದ್ರನನ್ನು ನೋಡಿದಾಗಲೆಲ್ಲಾ ‘ಒಬ್ಬ ಮನುಷ್ಯ ಹೀಗೂ ಇರಬಲ್ಲನೇ’ ಎಂದು ಅಚ್ಚರಿ ಪಡುತ್ತಲೇ ಇರುತ್ತೇನೆ.
ಇವತತಿಗೆ ರಾಘವೇಂದ್ರ ದಿವಗಿ ಜಗತ್ತಿನ ನಂ.1 ಥ್ರೋಡೌನ್ ಸ್ಪೆಷಲಿಸ್ಟ್.. ಆತನ ಬತ್ತಳಿಕೆಯಿಂದ ನುಗ್ಗಿ ಬರುವ ಚೆಂಡುಗಳಿಗೆ ಮಿಂಚಿನಂಥಾ ವೇಗ.. ವಿರಾಟ್ ಕೊಹ್ಲಿಸೇರಿದಂತೆ ಭಾರತ ತಂಡದ ಬಹುತೇಕ ಬ್ಯಾಟ್ಸ್’ಮನ್’ಗಳು ಜಗತ್ತಿನ ಭಯಾನಕ ಬೌನ್ಸಿ ವಿಕೆಟ್’ಗಳಲ್ಲಿ ಶರವೇಗದ ಎಸೆತಗಳಿಗೆ ಎದೆಕೊಟ್ಟು ನಿಲ್ಲುವಂತಾಗಿದ್ದೇ ರಾಘವೇಂದ್ರನಿಂದ.
“ನಮ್ಮ ತಂಡಕ್ಕೆ ಬಂದು ಬಿಡು, ಅಲ್ಲಿ ಸಿಗುವ ಸಂಬಳಕ್ಕಿಂತ ಇಲ್ಲಿ ದುಪ್ಪಟ್ಟು ಸಂಭಾವನೆ ಕೊಡುತ್ತೇವೆ” ಎಂಬ ಆಫರ್’ಗಳು ಇಂಗ್ಲೆಂಡ್, ಕ್ರಿಕೆಟ್ ಆಸ್ಟ್ರೇಲಿಯಾದಿಂದ ರಾಘವೇಂದ್ರನಿಗೆ ಬಂದದ್ದಿದೆ. ಇನ್ನು ರಾಘವೇಂದ್ರನನ್ನು ಕರೆಯದ ಐಪಿಎಲ್ ಫ್ರಾಂಚೈಸಿಗಳೇ ಇಲ್ಲ..
ಆದರೆ ‘ನನ್ನ ನಿಯತ್ತು ಯಾವತ್ತಿಗೂ ಅನ್ನ ಕೊಟ್ಟ ಸಂಸ್ಥೆ ಬಿಸಿಸಿಐಗೆ, ಅದೆಷ್ಟೇ ಕೋಟಿ ಕೊಟ್ಟರೂ ಬಿಸಿಸಿಐ ಬಿಟ್ಟು ಬರಲಾರೆ’ ಎಂಬ ನಿಯತ್ತಿನ ಮನುಷ್ಯ. ಶುದ್ಧ ಪ್ರಾಮಾಣಿಕ.. ಇವತ್ತು ರಾಘವೇಂದ್ರನ ಹುಟ್ಟುಹಬ್ಬ.