Categories
Action Replay ಕ್ರಿಕೆಟ್

ನಿಕೋಲ್ಸ್‌ ತಾಳ್ಮೆಯ ಆಟ: ಕಿವೀಸ್‌ ಹೋರಾಟದ ಮೊತ್ತ

ಲಾರ್ಡ್ಸ್‌: ಆತಿಥೇಯ ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್‌ ಮತ್ತು  ಲಿಯಾಮ್ ಪ್ಲಂಕೆಟ್ ಅವರ ಬಿರುಗಾಳಿ ಬೌಲಿಂಗ್‌ ನಡುವೆಯೂ ನ್ಯೂಜಿಲೆಂಡ್‌ ತಂಡವು ಹೋರಾಟದ ಮೊತ್ತ ಗಳಿಸಿತು.

 ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಪಂದ್ಯದಲ್ಲಿಯೂ ತಂಡಕ್ಕೆ ಉತ್ತಮ ಆರಂಭ ಲಭಿಸಲಿಲ್ಲ. ಅದರಿಂದಾಗಿ ತಂಡಕ್ಕೆ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 241 ರನ್‌ ಮಾತ್ರ ಗಳಿಸಲು ಸಾಧ್ಯವಾಯಿತು.

ಕ್ರಿಸ್ ವೋಕ್ಸ್‌ (37ಕ್ಕೆ3) ಮತ್ತು ಲಿಯಾಮ್ ಪ್ಲಂಕೆಟ್ (42ಕ್ಕೆ3) ಅವರ ಶಿಸ್ತಿನ ದಾಳಿಯ ನಡುವೆಯೂ ಕಿವೀಸ್‌ ತಂಡದ ಹೆನ್ರಿ ನಿಕೋಲ್ಸ್‌ (55; 77ಎಸೆತ, 4ಬೌಂಡರಿ) ತಾಳ್ಮೆಯ ಅರ್ಧಶತಕ ಗಳಿಸಿದರು. ಹೆನ್ರಿ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಅನುಭವಿ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ (19 ರನ್) ಈ ಪಂದ್ಯದಲ್ಲಿಯೂ ವೈಫಲ್ಯ ಅನುಭವಿಸಿದರು. ಅವರು ತಾವು ಎದುರಿಸಿದ 18 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು. ಅದರಿಂದಾಗಿ ಅವರು ಭರ್ಜರಿ ಆರಂಭ ನೀಡುವ ಭರವಸೆ ಮೂಡಿಸಿದ್ದರು.

ಅವರು ಏಳನೇ ಓವರ್‌ನಲ್ಲಿಯೇ ಅವರು ಕ್ರಿಸ್‌ ವೋಕ್ಸ್‌ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಕಳೆದ ಕೆಲವು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಹೆನ್ರಿ ಇಲ್ಲಿ ಉತ್ತಮವಾಗಿ ಆಡಿದರು. ಭಾರತದ ಎದುರಿನ ಸೆಮಿಫೈನಲ್‌ನಲ್ಲಿ ಅರ್ಧಶತಕ ಗಳಿಸಿದ್ದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ (30; 53ಎಸೆತ, 2ಬೌಂಡರಿ) ಅವರು ಹೆನ್ರಿ ಜೊತೆಗೆ ಎರಡನೇ ವಿಕೆಟ್ ಜೊತೆಯಾಟವನ್ನು ಬೆಳೆಸಿದರು. 74 ರನ್ ಸೇರಿಸಿದ ಅವರು ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಆದರೆ, ರನ್‌ ಗಳಿಕೆಯ ವೇಗ ಕಡಿಮೆಯಿತ್ತು.

ಈ ಹಂತದಲ್ಲಿ 23ನೇ ಓವರ್‌ ಬೌಲಿಂಗ್ ಮಾಡಿದ ಲಿಯಾಮ್ ಪ್ಲಂಕೆಟ್ ಅವರ ಎಸೆತದ ಚಲನೆಯನ್ನು ಗುರುತಿಸುವಲ್ಲಿ ಎಡವಿದ ಕೇನ್ ವಿಲಿಯಮ್ಸನ್ ವಿಕೆಟ್‌ ಕೀಪರ್ ಜೋಸ್ ಬಟ್ಲರ್‌ಗೆ ಕ್ಯಾಚಿತ್ತರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಆ ಸಂದರ್ಭದಲ್ಲಿ ಅಂಪೈರ್ ತೀರ್ಪು ಮರುಪರಿಶೀಲನೆ ವ್ಯವಸ್ಥೆ (ಯುಡಿಆರ್‌ಎಸ್) ಗೆ ಮೊರೆ ಹೋದ ಇಂಗ್ಲೆಂಡ್ ನಾಯಕ ಇಯನ್ ಮಾರ್ಗನ್ ಯಶಸ್ವಿಯಾದರು. ಕೇನ್ ನಿರ್ಗಮಿಸಿದರು.

27ನೇ ಓವರ್‌ನಲ್ಲಿ ಪ್ಲಂಕೆಟ್ ಅವರು ಮತ್ತೊಂದು ಆಘಾತ ನೀಡಿದರು. ಅರ್ಧಶತಕ ಗಳಿಸಿದ್ದ ಹೆನ್ರಿಗೆ ಆಘಾತ ನೀಡಿದರು. ಅವರು ಹಾಕಿದ ಗುಡ್‌ಲೆಂಗ್ತ್ ಎಸೆತವನ್ನು ಕೆಣಕಿದ ಹೆನ್ರಿ ಬ್ಯಾಟ್‌ನ ಒಳಅಂಚಿಗೆ ಬಡಿದ ಚೆಂಡು ಸ್ಟಂಪ್‌ಗಳಿಗೆ ಮುತ್ತಿಕ್ಕಿತು. ರಾಸ್ ಟೇಲರ್ ಕೂಡ ನಿರೀಕ್ಷೆ ಹುಸಿ ಮಾಡಿದರು.

ಅವರು 15 ರನ್‌ ಗಳಿಸಿದ್ದಾಗ ಮಾರ್ಕ್‌ ವುಡ್ ಹಾಕಿದ ಎಸೆತದಲ್ಲಿ ಔಟಾದರು. ಇದರಿಂದಾಗಿ ತಂಡವು ದೊಡ್ಡ  ಮೊತ್ತ ಗಳಿಸುವುದು ಕಠಿಣವಾಯಿತು.

ಆದರೂ ತಂಡವು ತೀರಾ ಅಲ್ಪಮೊತ್ತಕ್ಕೆ ಕುಸಿಯದಂತೆ ಟಾಮ್ ಲಥಾಮ್ (47; 56ಎಸೆತ, 2ಬೌಂಡರಿ 1ಸಿಕ್ಸರ್) ನೋಡಿಕೊಂಡರು. ಆಲ್‌ರೌಂಡರ್ ಜಿಮ್ಮಿ ನಿಶಾಮ್ (19 ರನ್) ಮತ್ತು  ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (16 ರನ್) ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದಂತೆ ಪ್ಲಂಕೆಟ್ ಮತ್ತು ವೋಕ್ಸ್‌ ನೋಡಿಕೊಂಡರು.

ಆದರೂ ಕೊನೆಯ ಹತ್ತು ಓವರ್‌ಗಳಲ್ಲಿ 62 ರನ್‌ಗಳು ಕಿವೀಸ್ ತಂಡದ ಖಾತೆ ಸೇರಿವು ಮೂರು ವಿಕೆಟ್‌ಗಳೂ ಪತನವಾದವು.

ಈ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳು ಮೂವತ್ತು ಇತರೆ ರನ್‌ಗಳನ್ನು ಬಿಟ್ಟುಕೊಟ್ಟರು. ಅದರಲ್ಲಿ ವೈಡ್‌ಬಾಲ್‌ಗಳಿಂದ ಗಳಿಕೆಯಾದ 17 ರನ್‌ಗಳೂ ಸೇರಿವೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

13 − 10 =