
ಅಜಿಂಕ್ಯ ರಹಾನೆ ನಾಯಕತ್ವದ ಬಲಾಢ್ಯ ಮುಂಬೈ ತಂಡ, ದಾಖಲೆಯ 15ನೇ ಬಾರಿ ಇರಾನಿ ಕಪ್ ಟ್ರೋಫಿಯನ್ನು ಗೆದ್ದುಕೊಂಡಿದೆ. 1997-98ರ ನಂತರ ಮುಂಡ ತಂಡ ಇರಾನಿ ಕಪ್ ಗೆಲ್ಲುತ್ತಿರುವುದು ಇದೇ ಮೊದಲು. 27 ವರ್ಷಗಳಿಂದ ಮರೀಚಿಕೆಯಾಗುತ್ತಾ ಬಂದಿದ್ದ ಇರಾನಿ ಕಪ್ ಟ್ರೋಫಿಯನ್ನು ಮುಂಬೈ ತಂಡ ಕೊನೆಗೂ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಉತ್ತರ ಪ್ರದೇಶದ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ – ಏಕನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಮುಂಬೈ ಇರಾನಿ ಕಪ್’ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.
ಮುಂಬೈ ತಂಡ ಪ್ರಥಮ ಇನ್ನಿಂಗ್ಸ್’ನಲ್ಲಿ 537 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಮುಂಬೈ ಪರ ಸರ್ಫರಾಜ್ ಖಾನ್ ಅಮೋಘ ದ್ವಿಶತಕದೊಂದಿಗೆ ಅಬ್ಬರಿಸಿದ್ದರು (ಅಜೇಯ 222 ರನ್). ಇದಕ್ಕೆ ಪ್ರತಿಯಾಗಿ ರುತುರಾಜ್ ಗಾಯಕ್ವಾಡ್ ನೇತೃತ್ವದ ರೆಸ್ಟ್ ಆಫ್ ಇಂಡಿಯಾ ತಂಡ 416 ರನ್’ಗಳಿಗೆ ಆಲೌಟಾಗಿತ್ತು. ತಂಡದ ಪರ ಅಭಿಮನ್ಯು ಈಶ್ವರನ್ 191 ರನ್ ಗಳಿಸಿದ್ದರು.
121 ರನ್’ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಮುಂಬೈ ತಂಡ 8 ವಿಕೆಟ್ ನಷ್ಟಕ್ಕೆ 329 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇಡ್ ಘೋಷಿಸಿತ್ತು. ಪಂದ್ಯ ಡ್ರಾಗೊಂಡ ಕಾರಣ, ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಮುಂಬೈ ತಂಡ ಇರಾನಿ ಕಪ್ ಗೆದ್ದುಕೊಂಡಿದೆ.
ಮುಂಬೈ ತಂಡ ಇರಾನಿ ಕಪ್ ಗೆಲ್ಲುತ್ತಿರುವುದು ಇದು 15ನೇ ಬಾರಿ. ಇದಕ್ಕೂ ಮೊದಲು ಮುಂಬೈ 1959-60, 1962–63, 1963–64, 1967–68, 1969–70, 1970–71, 1972–73, 1975–76, 1976–77, 1981–82, 1985–86, 1994–95, 1995–96, 1997–98,
ಮುಂಬೈ ತಂಡದ ಎರಡನೇ ಇನ್ನಿಂಗ್ಸ್’ನಲ್ಲಿ ಮಂಗಳೂರು ಮೂಲದ ಆಟಗಾರ ತನುಷ್ ಕೋಟ್ಯಾನ್ ಅಮೋಘ ಶತಕದೊಂದಿಗೆ ಮಿಂಚಿದ್ದಾರೆ. ಮುಂಬೈ ಪರ ಆಡುತ್ತಿರುವ ತನುಷ್ ಕೋಟ್ಯಾನ್ 2ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು 150 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಅಜೇಯ 114 ರನ್ ಗಳಿಸಿದರು.