ಕೊಹ್ಲಿ, ರೋಹಿತ್ ನಿವೃತ್ತಿಯಾಗುವ ಸಮಯ ಬಂದಿದೆಯೇ? ಇತ್ತೀಚಿನ ಅವರ ಆಟಗಳ ಅಂಕಿಅಂಶಗಳು ಏನನ್ನು ಸೂಚಿಸುತ್ತವೆ?
22ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿ ಭಾರತ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ. ಕೇವಲ 4-1 ಅಂತರದ ಗೆಲುವು ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಅನುವು ಮಾಡಿಕೊಡುತ್ತದೆ.
ರೋಹಿತ್ ಶರ್ಮಾ ಮತ್ತು ಕೊಹ್ಲಿ ಇಬ್ಬರ ಕ್ರಿಕೆಟ್ ವೃತ್ತಿಜೀವನಕ್ಕೆ ಈ ಸರಣಿಯು ಮುಖ್ಯವಾಗಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ವಿಫಲರಾದರೆ, ಕ್ರಿಕೆಟ್‌ನಿಂದ ನಿವೃತ್ತಿಯಾಗುವುದು ಉತ್ತಮ ಎಂದು ಮಾಜಿ ಆಟಗಾರರಾದ ಸುನಿಲ್ ಗವಾಸ್ಕರ್, ಕೃಷ್ಣಮಾಚಾರಿ ಮತ್ತು ಇತರರು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಇತ್ತೀಚಿನ ಕಳಪೆ ಫಾರ್ಮ್ ಬಗ್ಗೆ ವಿವಿಧ ಟೀಕೆಗಳು ಮತ್ತು ಪ್ರಶ್ನೆಗಳಿವೆ.
ಏಕೆಂದರೆ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತವರಿನಲ್ಲಿ ವೈಟ್‌ವಾಶ್ ಆಗುವ ಮೂಲಕ ಭಾರತ ತಂಡ ಭಾರೀ ಅವಮಾನವನ್ನು ಅನುಭವಿಸಿದೆ. ಭಾರತ 70 ವರ್ಷಗಳ ನಂತರ ಮೊದಲ ಬಾರಿಗೆ 3 ಟೆಸ್ಟ್‌ಗಳ ಸರಣಿಯನ್ನು ಕಳೆದುಕೊಂಡಿತು. ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೊಹ್ಲಿ ಅವರ ಕಳಪೆ ಫಾರ್ಮ್ ಸರಣಿ ಸೋಲಿಗೆ ಪ್ರಮುಖ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಇದರಿಂದಾಗಿ ಆಸ್ಟ್ರೇಲಿಯಾ ಸರಣಿ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಹಾಗೂ ಕೊಹ್ಲಿ ಇಬ್ಬರ ಮೇಲೂ ಒತ್ತಡವಿದೆ. ಒಂದೆಡೆ ತಂಡದ ಯಶಸ್ಸು ಮತ್ತೊಂದೆಡೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸುವ ಅನಿವಾರ್ಯತೆಯಿಂದಾಗಿ ಇಬ್ಬರಲ್ಲೂ ಒತ್ತಡ ಹೆಚ್ಚಿದೆ.