ಕರ್ನಾಟಕದ ಸ್ಟಾರ್ ಕ್ರಿಕೆಟರ್ ಕೆ.ಎಲ್ ರಾಹುಲ್ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ್ದಾರೆ.
ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಕೆ.ಎಲ್ ರಾಹುಲ್ 200ನೇ ಅಂತರಾಷ್ಟ್ರೀಯ ಪಂದ್ಯವಾಡುತ್ತಿದ್ದಾರೆ.
32 ವರ್ಷದ ಕೆ.ಎಲ್ ರಾಹುಲ್ 2014ರ ಡಿಸೆಂಬರ್’ನಲ್ಲಿ ಮೆಲ್ಬೋರ್ನ್’ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ 10 ವರ್ಷಗಳಲ್ಲಿ ಭಾರತ ಪರ ರಾಹುಲ್ 199 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಇದೀಗ 200ನೇ ಪಂದ್ಯದ ಸಂಭ್ರಮದಲ್ಲಿದ್ದಾರೆ.
ಭಾರತ ಪರ ಕೆ.ಎಲ್ ರಾಹುಲ್ 50 ಟೆಸ್ಟ್, 77 ಏಕದಿನ ಹಾಗೂ 72 ಟಿ20 ಪಂದ್ಯಗಳು ಸೇರಿದಂತೆ ಭಾರತ ಪರ ಒಟ್ಟು 199 ಪಂದ್ಯಗಳನ್ನಾಡಿದ್ದಾರೆ. ಆ 199 ಪಂದ್ಯಗಳಿಂದ ರಾಹುಲ್ ಗಳಿಸಿರುವ ಒಟ್ಟು ರನ್ 8,565. ಈ ವೇಳೆ ರಾಹುಲ್ 17 ಶತಕಗಳು ಹಾಗೂ 54 ಅರ್ಧಶತಕಗಳನ್ನು ಬಾರಿಸಿದ್ದಾರೆ. ಐಪಿಎಲ್’ನಲ್ಲಿ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ರಾಹುಲ್ ಅವರ ಕ್ರಿಕೆಟ್ ಪ್ರಯಾಣ ಶುರುವಾಗಿದ್ದು ಮಂಗಳೂರಿನಿಂದ.
ಮಂಗಳೂರಿನ ಹೊರವಲಯದ ಸುರತ್ಕಲ್’ನಿಂದ ನೆಹರೂ ಮೈದಾನಕ್ಕೆ ಪ್ರತೀ ದಿನ ಅಭ್ಯಾಸಕ್ಕೆ ಬರುತ್ತಿದ್ದ ರಾಹುಲ್ ಅವರಿಗೆ ಕ್ರಿಕೆಟ್ ಪಾಠಗಳನ್ನು ಹೇಳಿಕೊಟ್ಟ ಗುರು ಸ್ಯಾಮುಯೆಲ್ ಜಯರಾಜ್. ಮಂಗಳೂರು ಭಾಗದ ಕ್ರಿಕೆಟ್ ದ್ರೋಣಾಚಾರ್ಯ ಜಯರಾಜ್ ಅವರ ಶಿಷ್ಯನಾಗಿರುವ ರಾಹುಲ್ ಕೇವಲ 12ನೇ ವಯಸ್ಸಿನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ದ್ವಿಶತಕಗಳನ್ನು ಬಾರಿಸಿದ್ದರು. ನಂತರ ಕರ್ನಾಟಕ ಅಂಡರ್-13 ತಂಡಕ್ಕೆ ಆಯ್ಕೆಯಾದ ರಾಹುಲ್ ನಂತರ ಅಂಡರ್-16, ಅಂಡರ್-19 ತಂಡಗಳಿಗೆ ಆಯ್ಕೆಯಾಗಿದ್ದಷ್ಟೇ ಅಲ್ಲ, ರಾಜ್ಯ ಕಿರಿಯರ ತಂಡಗಳ ನಾಯಕತ್ವವನ್ನೂ ವಹಿಸಿಕೊಂಡಿದ್ದರು. 2013-14ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಸಾವಿರಕ್ಕೂ ಹೆಚ್ಚು ರನ್ ಗಳಿಸಿ ಕರ್ನಾಟಕ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಾಹುಲ್, 2014ರ ದುಲೀಪ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್’ಗಳಲ್ಲಿ ಶತಕ ಬಾರಿಸಿ ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು. ಅದೇ ವರ್ಷ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದ ರಾಹುಲ್ ಆಡಿದ 2ನೇ ಟೆಸ್ಟ್ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಅಮೋಘ ಶತಕ ಬಾರಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ತುಂಬಾ ದೂರ ಸಾಗಿ ಬಂದಿರುವ ರಾಹುಲ್ ಭಾರತ ಪರ 200 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದಾರೆ.
s