ಕರ್ನಾಟಕದ ಸೀನಿಯರ್ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಆಗಿ ಮಾಜಿ ಕ್ರಿಕೆಟಿಗ ಯರೇ ಗೌಡ ನೇಮಕಗೊಂಡಿದ್ದಾರೆ.
ಯರೇ ಗೌಡ ಕರ್ನಾಟಕ ತಂಡದ ಕೋಚ್ ಆಗಲಿದ್ದಾರೆ ಎಂದು ಕಳೆದ ತಿಂಗಳು “ಸ್ಪೋರ್ಟ್ಸ್ ಕನ್ನಡ” ವರದಿ ಮಾಡಿತ್ತು. ಆ ವರದಿ ಈಗ ನಿಜವಾಗಿದೆ.
2020ರಿಂದ 2021ರವರೆಗೆ ಯರೇ ಗೌಡ ಎರಡು ವರ್ಷಗಳ ಕಾಲ ಕರ್ನಾಟಕ ತಂಡದ ತರಬೇತುದಾರನಾಗಿದ್ದರು. 2022ರಲ್ಲಿ ಪಿ.ವಿ ಶಶಿಕಾಂತ್ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿತ್ತು.
ಶಶಿಕಾಂತ್ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ನಿರಂತರ ವೈಫಲ್ಯ ಎದುರಿಸಿರುವ ಕಾರಣ, . ಶಶಿಕಾಂತ್’ಗೆ ಕೊಕ್ ನೀಡಿ ಮತ್ತೆ ಯರೇ ಗೌಡಗೆ ಮಣೆ ಹಾಕಲಾಗಿದೆ.
2023-24ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್’ನಲ್ಲಿ ವಿದರ್ಭ ವಿರುದ್ಧ ಸೋಲು ಕಂಡಿತ್ತು. 2022-23ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ರಾಜ್ಯ ತಂಡ ಸೆಮಿಫೈನಲ್’ನಲ್ಲಿ ಸೌರಾಷ್ಟ್ರ ವಿರುದ್ಧ ಮುಗ್ಗರಿಸಿತ್ತು.
52 ವರ್ಷ ವಯಸ್ಸಿನ ಯರೇ ಗೌಡ ಈ ಬಾರಿಯ ಸಿ.ಕೆ ನಾಯ್ಡು ಟ್ರೋಫಿ 23 ವರ್ಷದೊಳಗಿನವರ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಕರ್ನಾಟಕ ಕಿರಿಯರ ತಂಡದ ಕೋಚ್ ಆಗಿದ್ದರು.
ಕರ್ನಾಟಕ ಕಂಡ ದಿಗ್ಗಜ ಆಟಗಾರರಲ್ಲಿ ಒಬ್ಬರಾಗಿರುವ ಯರೇಗೌಡ ರೈಲ್ವೇಸ್ ತಂಡದ ನಾಯಕರಾಗಿ ರಣಜಿ ಟ್ರೋಫಿ ಗೆದ್ದ ಸಾಧನೆ ಮಾಡಿದ್ದಾರೆ. ಆಟಗಾರನಾಗಿ ಮತ್ತು ನಾಯಕನಾಗಿ ಯರೇ ಗೌಡ ರೈಲ್ವೇಸ್’ಗೆ 2 ರಣಜಿ ಟ್ರೋಫಿ ಹಾಗೂ 3 ಇರಾನಿ ಕಪ್’ಗಳನ್ನು ಗೆದ್ದುಕೊಟ್ಟಿದ್ದಾರೆ.
ಥಮದರ್ಜೆ ಕ್ರಿಕೆಟ್’ನಲ್ಲಿ ಒಟ್ಟು 134 ಪಂದ್ಯಗಳನ್ನಾಡಿರುವ ಯರೇ ಗೌಡ 45.53ರ ಸರಾಸರಿಯಲ್ಲಿ 16 ಶತಕ ಹಾಗೂ 39 ಅರ್ಧಶತಕಗಳ ನೆರವಿನಿಂದ 7650 ರನ್ ಕಲೆ ಹಾಕಿದ್ದಾರೆ. 49 ಲಿಸ್ಟ್ ಎ ಪಂದ್ಯಗಳಿಂದ 1051 ರನ್ ಹಾಗೂ 7 ಟಿ20 ಪಂದ್ಯಗಳಿಂದ 17 ರನ್ ಗಳಿಸಿದ್ದಾರೆ. 2011ರಲ್ಲಿ ಯರೇ ಗೌಡ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವಾಡಿದ್ದರು.
ವಿವಿಧ ವಯೋಮಿತಿಗಳಲ್ಲಿ ಕರ್ನಾಟಕ ಕ್ರಿಕೆಟ್ ತಂಡಗಳ ಕೋಚಿಂಗ್ ಸ್ಟಾಫ್ ಹೀಗಿದೆ:
ಕರ್ನಾಟಕ ಸೀನಿಯರ್ ತಂಡ:
ಯರೇ ಗೌಡ (ಹೆಡ್ ಕೋಚ್)
ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್)
ಶಬರೀಶ್ ಮೋಹನ್ (ಫೀಲ್ಡಿಂಗ್ ಕೋಚ್)
ಕರ್ನಾಟಕ 23 ವರ್ಷದೊಳಗಿನವರ ತಂಡ:
ಸೋಮಶೇಖರ ಶಿರಗುಪ್ಪಿ (ಹೆಡ್ ಕೋಚ್)
ರೋಹಿತ್ ಸಬರ್ವಾಲ್ (ಫೀಲ್ಡಿಂಗ್ ಕೋಚ್)
ಕರ್ನಾಟಕ 19 ವರ್ಷದೊಳಗಿನವರ ತಂಡ:
ಕೆ.ಬಿ ಪವನ್ (ಹೆಡ್ ಕೋಚ್)
ಎಸ್.ಎಲ್ ಅಕ್ಷಯ್ (ಬೌಲಿಂಗ್ ಕೋಚ್)
ಕರ್ನಾಟಕ 16 ಮತ್ತು 14 ವರ್ಷದೊಳಗಿನವರ ತಂಡ:
ಕುನಾಲ್ ಕಪೂರ್ (ಹೆಡ್ ಕೋಚ್)
ಆದಿತ್ಯ ಬಿ. ಸಾಗರ್ (ಸಹಾಯಕ ಕೋಚ್)
ಮಹಿಳೆಯರ ವಿಭಾಗ
ಸೀನಿಯರ್ ಮತ್ತು 23 ವರ್ಷದೊಳಗಿನವರ ತಂಡ:
ಕರುಣಾ ಜೈನ್ (ಹೆಡ್ ಕೋಚ್)
19 ವರ್ಷದೊಳಗಿನವರ ತಂಡ:
ರಕ್ಷಿತಾ ಕೃಷ್ಣಪ್ಪ (ಹೆಡ್ ಕೋಚ್)
15 ವರ್ಷದೊಳಗಿನವರ ತಂಡ:
ರಾಖಿ ಗಂಗಲ್ (ಹೆಡ್ ಕೋಚ್)