ಅಂತಹ ವೀರೋಚಿತ ಇನ್ನಿಂಗ್ಸ್ ಟಿವಿ ಪ್ರಸಾರ ಆಗಲಿಲ್ಲ!
—————————— —–
ಭಾರತ 1983ರ ಏಕದಿನದವಿಶ್ವಕಪ್ ಗೆದ್ದದ್ದು, ಕಪಿಲ್ ಹುಡುಗರು ಇಂಗ್ಲೆಂಡ್ ನೆಲದಲ್ಲಿ ಬಲಿಷ್ಠ ವಿಂಡೀಸನ್ನು ಗೆದ್ದು ಚಾಂಪಿಯನ್ ಆದದ್ದು ನಮಗೆಲ್ಲ ಗೊತ್ತಿದೆ! ಆದರೆ ಅದೇ ಕೂಟದಲ್ಲಿ ನಡೆದ ರೋಮಾಂಚಕ ಭಾರತ ಜಿಂಬಾಬ್ವೆ ಪಂದ್ಯದ ಬಗ್ಗೆ ನಾನಿಂದು ಬರೆಯಬೇಕು!
ಅಂದು 1983ರ ಜೂನ್ 18!
ಇಂಗ್ಲೆಂಡಿನ ವಿಸ್ತಾರವಾದ ಟನ್ ಬ್ರಿಜ್ ಕ್ರಿಕೆಟ್ ಮೈದಾನ.
ಭಾರತ ವರ್ಸಸ್ ಜಿಂಬಾಬ್ವೆ ನಿರ್ಣಾಯಕ ಪಂದ್ಯ. ಭಾರತಕ್ಕೆ ಗೆಲ್ಲಲೇಬೇಕಾದ ಪಂದ್ಯ! ಜಿಂಬಾಬ್ವೆ ಕೂಡ ಸಾಕಷ್ಟು ಬಲಿಷ್ಠ ಆಗಿಯೇ ಇತ್ತು. ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿತು. ಯಾರಿಗೂ ಈ ಪಂದ್ಯದ ಮೇಲೆ ಕುತೂಹಲ ಇಲ್ಲದ ಕಾರಣ ಗ್ರೌಂಡನಲ್ಲಿ ಕೇವಲ 4000 ಪ್ರೇಕ್ಷಕರು ಮಾತ್ರ ಇದ್ದರು!
ಭಾರತ ಒಂಬತ್ತು ರನ್ನಿಗೆ ನಾಲ್ಕು ವಿಕೆಟ್ ಪತನ!
—————————— —-
ಆರಂಭಿಕ ಸುನೀಲ್ ಗವಾಸ್ಕರ್ ಸೊನ್ನೆ, ಶ್ರೀಕಾಂತ್ ಸೊನ್ನೆ, ಮೊಹಿಂದರ್ ಅಮರನಾಥ್ ಐದು, ಸಂದೀಪ್ ಪಾಟೀಲ್ ಒಂದು ರನ್ ಗಳಿಸಿ ಔಟ್! ಅಲ್ಲಿಗೆ ಭಾರತ 9 ರನ್ನಿಗೆ ನಾಲ್ಕು ವಿಕೆಟ್ ಪತನ ಆಗಿತ್ತು! ಆಗ ಭಾರತದ ಕಪ್ತಾನ ಕಪಿಲ್ ದೇವ್ ಭಾರವಾದ ಹೆಜ್ಜೆ ಹಾಕುತ್ತ ಕ್ರೀಸಿಗೆ ಬಂದಿದ್ದರು. ಮತ್ತೆ ಎಂಟು ರನ್ ಸೇರಿಸುವಾಗ ಯಶಪಾಲ್ ಶರ್ಮಾ ಔಟ್! ಅಲ್ಲಿಗೆ ಭಾರತ 17/5! ಭಾರತ ತಲೆ ಎತ್ತುವ ಯಾವ ಅವಕಾಶ ಆಗ ಇರಲಿಲ್ಲ. ಮೈದಾನದ ಪ್ರೇಕ್ಷಕರು ಒಬ್ಬೊಬ್ಬರೇ ಜಾಗ ಖಾಲಿ ಮಾಡ್ತಾ ಇದ್ದರು. ಆ ಪಂದ್ಯದಲ್ಲಿ ಯಾವುದೇ ಸ್ವಾರಸ್ಯ ಉಳಿದಿರಲಿಲ್ಲ. ಜಿಂಬಾಬ್ವೆಯ ವೇಗದ ಬೌಲರಗಳಾದ ಪೀಟರ್ ರಾಸನ್ ಮತ್ತು ಕೆವಿನ್ ಕರನ್ ಆಗಲೇ ಘಾತಕವಾಗಿ ಎರಗಿದ್ದರು!
ಕಪಿಲ್ ದೇವ್ ತಲೆಯಲ್ಲಿ ಬೇರೆಯೇ ಸಮೀಕರಣ ಓಡುತ್ತಿತ್ತು!
—————————— —
ಅರ್ಧ ಬ್ಯಾಟಿಂಗ್ ಬ್ಯಾಟರಿ ಆಗಲೇ ಪೆವಿಲಿಯನ್ ಸೇರಿ ಆಗಿತ್ತು. ಆದರೆ ಕಪಿಲದೇವ್ ತಲೆಯಲ್ಲಿ ಬೇರೆಯೇ ಸಮೀಕರಣ ಓಡುತ್ತಿತ್ತು. ಹೇಳಿ ಕೇಳಿ ಆತ ಒಬ್ಬ ಹುಟ್ಟು ಹೋರಾಟಗಾರ! ಶ್ರೇಷ್ಟ ಆಲ್ರೌಂಡರ್! ರೋಜರ್ ಬಿನ್ನಿ ಜೊತೆಗೆ ಒಂದೊಂದೇ ರನ್ ಕಲೆ ಹಾಕುತ್ತ ಕಪಿಲ್ ನೆಲಕಚ್ಚಿ ಆಡಲು ಆರಂಭ ಮಾಡಿಯಾಗಿತ್ತು. ಬಿನ್ನಿ ಜೊತೆಗೆ ಕಪಿಲ್ ಆರನೇ ವಿಕೇಟಿಗೆ ಕಲೆ ಹಾಕಿದ್ದು 60 ರನಗಳನ್ನು! ಅಲ್ಲಿಗೆ ಬಿನ್ನಿ ಔಟ್.
ಭಾರತ 77ಕ್ಕೆ 6 ವಿಕೆಟ್ ಪತನ! ರವಿಶಾಸ್ತ್ರಿ ಕ್ರೀಸಿಗೆ ಹಾಗೆ ಬಂದು ಹೀಗೆ ಹೋದರು. ಭಾರತ 78 ಕ್ಕೆ 7 ವಿಕೆಟ್ ಬಿದ್ದಿತು. ಜಿಂಬಾಬ್ವೆ ಪಾಳಯದಲ್ಲಿ ಆಗಲೇ ಸೆಲೆಬ್ರೇಶನ್ ಆರಂಭ ಆಗಿತ್ತು. ಭಾರತೀಯ ಡ್ರೆಸ್ಸಿಂಗ್ ರೂಮಿನಲ್ಲಿ ನೀರವ ಮೌನ! ಆ ಮ್ಯಾಚ್ ಸೋತರೆ ಭಾರತ ವಿಶ್ವಕಪ್ ಆಸೆಯನ್ನು ಬಿಟ್ಟು ಭಾರತಕ್ಕೆ ಗಂಟುಮೂಟೆ ಕಟ್ಟಬೇಕಾಗಿತ್ತು! ಆಗ ಬ್ಯಾಟಿಂಗ್ ಕ್ರೀಸಿಗೆ ಬಂದ ಮದನಲಾಲ್ ನಿಧಾನಕ್ಕೆ 17 ರನ್ ಹೊಡೆದು ಔಟ್ ಆದರು. ಭಾರತ ಆಗಲೂ 140 ರನ್ನಿಗೆ ಎಂಟು ವಿಕೆಟ್ ಕಳೆದುಕೊಂಡ ಸಂಕಟದಲ್ಲಿ ಇತ್ತು!
ಆಗ ಕಪಿಲದೇವ್ ಮೈಯಲ್ಲಿ ಆವೇಶ ಬಂದಿತ್ತು!
—————————— —
ಭಾರತ ಕ್ರಿಕೆಟ್ ತಂಡ ಎಲ್ಲ ಭರವಸೆ ಕಳೆದುಕೊಂಡು ಇನ್ನೇನು ವಿಶ್ವಕಪ್ ಕೂಟದಿಂದ ಹೊರಬಿತ್ತು ಎನ್ನುವ ಮಾತುಗಳು ಕೇಳಿಬಂದವು. ಆಗ ಕ್ರೀಸಿಗೆ ಬಂದವರು ವಿಕೆಟ್ ಕೀಪರ್ ಕಿರ್ಮಾನಿ. ಆತ ಎಂದಿಗೂ ಬ್ಯಾಟಿಂಗ್ ಪರಿಣತಿ ಹೊಂದಿದವರು ಅಲ್ಲ. ಆದರೆ ಕಿರ್ಮಾನಿ ಅಂದು ಕಪಿಲಗೆ ಒಂದೊಂದೇ ರನ್ ಕದಿಯುತ್ತ ಕೊಟ್ಟ ಸಾಥ್ ಇದೆಯಲ್ಲ ಅದು ಮೆಮೋರೆಬಲ್! ಒಂಬತ್ತನೇ ವಿಕೆಟಿಗೆ ಕಪಿಲ್ ಮತ್ತು ಕಿರ್ಮಾನಿ 126 ರನ್ ವಿಶ್ವದಾಖಲೆಯ ಜೊತೆಯಾಟ ಕಟ್ಟಿದರು. ಅದರಲ್ಲಿ ಕಿರ್ಮಾನಿ ಸ್ಕೋರ್ 24 ಮಾತ್ರ! ಉಳಿದೆಲ್ಲ ರನ್ ಸಿಡಿಸಿದ್ದು ಕಪಿಲ್ ಮತ್ತು ಕಪಿಲ್ ಮಾತ್ರ!
ಅಂದು ಕಪಿಲ್ ಮೈಯಲ್ಲಿ ಆವೇಶ ಬಂದಿತ್ತು! ಮೈದಾನದ ಮೂಲೆ ಮೂಲೆಗೂ ಮನಮೋಹಕ ಆದ 16 ಬೌಂಡರಿಗಳು ಮತ್ತು ಸಿಡಿಲಿನ ಅಬ್ಬರದ ಆರು ಸಿಕ್ಸರಗಳು! ಕಪಿಲ್ ಅಂದು ಹೊಡೆದದ್ದು ಅಜೇಯ 175ರನ್! ಅದು ಕೂಡ 138 ಎಸೆತಗಳಲ್ಲಿ! 175 ರನ್ ಆ ಕಾಲಕ್ಕೆ ವಿಶ್ವದಾಖಲೆ ಆಗಿತ್ತು. ಅದರಲ್ಲಿ ಕೂಡ ಕಪಿಲ್ ತನ್ನ ಕೊನೆಯ 75 ರನ್ ಹೊಡೆದದ್ದು ಕೇವಲ 38 ಬಾಲಗಳಲ್ಲಿ!
ಅದರಲ್ಲಿ ಒಂದೇ ಒಂದು ತಪ್ಪು ಹೊಡೆತ ಇರಲಿಲ್ಲ! ಜೀವದಾನ ಇರಲಿಲ್ಲ! ಅಂತಹ ವೀರೋಚಿತ ಇನ್ನಿಂಗ್ಸ್ ಅದುವರೆಗೆ ಎಲ್ಲೂ ದಾಖಲು ಆಗಿರಲಿಲ್ಲ.
ಕಪಿಲ್ ಮತ್ತು ಕಿರ್ಮಾನಿ ಇಬ್ಬರೂ ಔಟ್ ಆಗದೆ ಹಿಂದೆ ಬಂದಾಗ ಭಾರತ 266/7 ಸ್ಕೋರ್ ತಲುಪಿತ್ತು. ಭಾರತ ಆ ಪಂದ್ಯವನ್ನು 31 ರನ್ನುಗಳಿಂದ ಗೆದ್ದಿತ್ತು!
ಮುಂದೆ ಸೆಮಿಯಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಫೈನಲ್ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಪ್ರುಡೆನ್ಸಿಯಲ್ ಕಪ್ ಗೆದ್ದಿತು! ಅದು ಭಾರತ ಕ್ರಿಕೆಟ್ ತಂಡ ಗೆದ್ದ ಮೊತ್ತ ಮೊದಲ ವಿಶ್ವಕಪ್ ಆಗಿತ್ತು!
ಇದರಿಂದ ಮುಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತುಂಬಾ ಶ್ರೀಮಂತ ಆಯಿತು. ಸಚಿನ್, ವಿರಾಟ್, ಧೋನಿ, ಯುವರಾಜ್, ರೋಹಿತ್ ಶರ್ಮ, ಸೆಹವಾಗ, ಕುಂಬ್ಳೆ…..ಮುಂತಾದ ಸ್ಟಾರ್ ಆಟಗಾರರು ಭಾರತದಲ್ಲಿ
ಎದ್ದುಬಂದರು! ಭಾರತದ ಕ್ರಿಕೆಟ್ಟಿನ ಚಹರೆಯೇ ಬದಲಾಯಿತು.
ಆದರೆ ನಾನು ಕೂತು ಯೋಚನೆ ಮಾಡುತ್ತೇನೆ. ಜಿಂಬಾಬ್ವೆ ವಿರುದ್ಧ ಕಪಿಲ್ ಆ ವೀರೋಚಿತ ಇನ್ನಿಂಗ್ಸ್ ಆಡದೇ ಹೋಗಿದ್ದರೆ, ಭಾರತ ಆ ಪಂದ್ಯದಲ್ಲಿ ಸೋತಿದ್ದರೆ…?
ಆದರೆ ಆ ಸಾಹಸಿಕ ಪಂದ್ಯ ಟಿವಿ ಪ್ರಸಾರ ಆಗಲೇ ಇಲ್ಲ!
—————————— —
1983ರ ಹೊತ್ತಿಗೆ ಕ್ರಿಕೆಟ್ ಪಂದ್ಯಗಳ ಟಿವಿ ನೇರಪ್ರಸಾರ ಆರಂಭ ಆಗಿತ್ತು. ಆದರೆ ಭಾರತ ಜಿಂಬಾಬ್ವೆಯ ಈ ರೋಚಕ ಪಂದ್ಯ ನೇರಪ್ರಸಾರ ಆಗಲಿಲ್ಲ! ರೆಕಾರ್ಡಿಂಗ್ ಕೂಡ ಆಗಲೇ ಇಲ್ಲ! ಏಕೆಂದರೆ ಆಗ ಸಮಾನಾಂತರ ಪಂದ್ಯಗಳು ಬೇರೆ ಬೇರೆ ಗ್ರೌಂಡನಲ್ಲಿ ನಡೆಯುತ್ತಿದ್ದವು. ಟಿವಿ ಲೈವ್ ಮಾಡುವ ಏಜೆನ್ಸಿಗೆ ಅದೇ ಹೊತ್ತಿಗೆ ವೆಸ್ಟ್ ಇಂಡೀಸ್ ಆಸ್ಟ್ರೇಲಿಯಾ ಪಂದ್ಯ ಪ್ರಮುಖ ಎಂದು ಅನ್ನಿಸಿದ ಕಾರಣ ಟಿವಿ ಕ್ಯಾಮೆರಾಗಳು ಆ ಮೈದಾನಕ್ಕೆ ಹೋಗಿದ್ದವು! ಆದ್ದರಿಂದ ಈ ಪಂದ್ಯದ ವಿಡಿಯೋ ಕೂಡ ಈಗ ಲಭ್ಯ ಇಲ್ಲ!
ಅದೇ ಹೊತ್ತಿಗೆ ಬಿಬಿಸಿಯ ಸಿಬ್ಬಂದಿ ಮುಷ್ಕರ ಹೂಡಿದ್ದ ಕಾರಣ ಈ ಪಂದ್ಯದ ವೀಕ್ಷಕ ವಿವರಣೆ ಕೂಡ( ಕಾಮೆಂಟರಿ) ಇರಲಿಲ್ಲ! ಇದು ನಿಜವಾಗಿಯೂ ದುರಂತ.
ಏನಿದ್ದರೂ ಕಪಿಲ್ ದೇವ್ ಆಡಿದ ಆ ಸ್ಮರಣೀಯ ಇನ್ನಿಂಗ್ಸನ್ನು ಮತ್ತು ಆ ರೋಮಾಂಚಕ ಪಂದ್ಯವನ್ನು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ!