ಮೊನ್ನೆ ಮೊನ್ನೆಯೊಷ್ಟೇ ಅಮೆರಿಕ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ದೊಡ್ಡ ಅಚ್ಚರಿಗೆ ಕಾರಣವಾಗಿತ್ತು.
ಆದರೆ ಅದು ಹೊರ ಜಗತ್ತಿಗಷ್ಟೇ ಅಚ್ಚರಿ. ಅಮೆರಿಕ ತಂಡದ ಆಟಗಾರರನ್ನು ಹತ್ತಿರದಿಂದ ನೋಡಿದವರಿಗೆ ಅದೇನು ದೊಡ್ಡ ಅಚ್ಚರಿಯಲ್ಲ.
ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಕೆನಡಾದ reject pieceಗಳನ್ನೆಲ್ಲಾ ಸೇರಿಸಿ ಕಟ್ಟಲಾಗಿರುವ ‘ಲಗಾನ್’ ತಂಡ ಅದು. ಎಲ್ಲರಲ್ಲೂ ಒಂದು ಹಸಿವಿದೆ. ತಾವೇನು ಎಂಬುದನ್ನು ಜಗತ್ತಿಗೆ ತೋರಿಸಿಕೊಡುವ ಕಿಚ್ಚಿದೆ. ಅಂದ ಹಾಗೆ, ಅಮೆರಿಕ ತಂಡದ ಆಟಗಾರರ ಎದೆಯಲ್ಲಿ ಇಂತಹ ಒಂದು ಕಿಚ್ಚನ್ನು ತುಂಬಿದ ದ್ರೋಣಾಚಾರ್ಯ ನಮ್ಮ ಕರ್ನಾಟಕದವರು. ಕರ್ನಾಟಕ ಕ್ರಿಕೆಟ್ ಕಂಡ ಲೆಜೆಂಡರಿ ಓಪನಿಂಗ್ ಬ್ಯಾಟ್ಸ್’ಮನ್ ಜ್ಯಾಕ್.., ಜೆ.ಅರುಣ್ ಕುಮಾರ್.
ಜೆ.ಅರುಣ್ ಕುಮಾರ್ ನಿಸ್ಸಂದೇಹವಾಗಿ ಭಾರತ ಪರ ಆಡಬೇಕಿದ್ದ ಕ್ರಿಕೆಟಿಗ. 2000ನೇ ಇಸವಿಯ ಆರಂಭದ ವರ್ಷಗಳಲ್ಲಿ ವೀರೇಂದ್ರ ಸೆಹ್ವಾಗ್ ಆಡಿದ್ದ ಹೊಡಿಬಡಿಯ ಆಟವನ್ನು 90ರ ದಶಕದಲ್ಲೇ ಕರ್ನಾಟಕ ಪರ ಆಡಿದವರು ಜ್ಯಾಕ್. ರಣಜಿ ಟ್ರೋಫಿಯಲ್ಲಿ ಲಂಚ್ ಬ್ರೇಕ್ ಒಳಗೆ ಶತಕ ಚಚ್ಚಿ ಔಟಾಗಿ ಪೆವಿಲಿಯನ್’ನಲ್ಲಿ ಕುಳಿತು ಬಿಡುತ್ತಿದ್ದರೆಂದರೆ ಲೆಕ್ಕ ಹಾಕಿ,
ಆ ಆರ್ಭಟ ಹೇಗಿದ್ದಿರಬಹುದೆಂದು.
ಜೆ.ಅರುಣ್ ಕುಮಾರ್ ಅವರ ಆಟವನ್ನು ನಾನು ಕಣ್ಣಾರೆ ಕಂಡವನಲ್ಲ, ಆದರೆ ಅವರ ಜೊತೆಗೆ ಆಡಿದವರಿಂದಲೇ ಆ ಗತವೈಭವವನ್ನು ಕೇಳಿದ್ದೇನೆ. ರಣಜಿ ಟ್ರೋಫಿ ಪಂದ್ಯಗಳಲ್ಲಿ ಜ್ಯಾಕ್ ಅಬ್ಬರಿಸುತ್ತಿದ್ದ ಪರಿಯನ್ನು ಒಬ್ಬರಂತೂ ರೋಮಾಂಚಿತರಾಗಿ ವಿವರಿಸಿದ್ದರು. ಅದಾದ ನಂತರ 1998-98ರ ರಣಜಿ ಫೈನಲ್ ಪಂದ್ಯದ ವೀಡಿಯೊವನ್ನು ಹುಡುಕಿ ತೆಗೆದು ನೋಡಿದಾಗ ಅನ್ನಿಸಿದ್ದು.. ಛೇ.. ಇಂಥಾ ಆಟಗಾರನಿಗೆ ಭಾರತ ತಂಡದ ಪರ ಒಂದೇ ಒಂದು ಪಂದ್ಯವಾಡುವ ಅವಕಾಶವೂ ಸಿಗಲಿಲ್ಲವಲ್ಲಾ ಎಂದು.
1997-98ರ ರಣಜಿ ಫೈನಲ್’ನಲ್ಲಿ ಉತ್ತರ ಪ್ರದೇಶ ವಿರುದ್ಧ ಶತಕ, 1998-99ರ ರೋಚಕ ರಣಜಿ ಫೈನಲ್’ನಲ್ಲಿ ಮಧ್ಯಪ್ರದೇಶ ವಿರುದ್ಧ 2ನೇ ಇನ್ನಿಂಗ್ಸ್’ನಲ್ಲಿ ಶತಕ ಬಾರಿಸಿ ಕರ್ನಾಟಕದ ರಣಜಿ ವಿಕ್ರಮಕ್ಕೆ ಕಾರಣವಾದವರು ಜೆ.ಅರುಣ್ ಕುಮಾರ್.
ಆಟಗಾರನಾಗಿ ಅಷ್ಟೇ ಅಲ್ಲ, ಕೋಚ್ ಆಗಿಯೂ ಯಶಸ್ಸು ಕಂಡಿರುವ ಜ್ಯಾಕ್, 2013-14 ಮತ್ತು 2014-15ನೇ ಸಾಲಿನಲ್ಲಿ ಕರ್ನಾಟಕ ತಂಡ ಸತತ ಎರಡೆರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿದಾಗ ಆ ಐತಿಹಾಸಿಕ ತಂಡದ ಕೋಚ್ ಆಗಿದ್ದವರು ಇದೇ ಅರುಣ್ ಕುಮಾರ್.
ಕರ್ನಾಟಕ ಕ್ರಿಕೆಟ್’ನ successful ಕ್ರಿಕೆಟರ್, successful ಕೋಚ್ ಜೆ.ಅರುಣ್ ಕುಮಾರ್ 2020ರಲ್ಲಿ ಎರಡು ವರ್ಷಗಳ ಅವಧಿಗೆ ಅಮೆರಿಕ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಈಗ ಟಿ20 ವಿಶ್ವಕಪ್’ನಲ್ಲಿ ಆಡುತ್ತಿರುವ ಅಮೆರಿಕ ತಂಡದಲ್ಲಿರುವ ಬಹುತೇಕ ಆಟಗಾರರು ಪಳಗಿದ್ದು ನಮ್ಮ ಕನ್ನಡಿಗನ ಗರಡಿಯಲ್ಲೇ.
ಜೆ.ಅರುಣ್ ಕುಮಾರ್, ಅಮೆರಿಕ ಕ್ರಿಕೆಟ್ ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿದ ಕೋಚ್. ಐಸಿಸಿ ಪೂರ್ಣ ಸದಸ್ಯತ್ವ ಪಡೆದ ತಂಡದ ವಿರುದ್ಧ ಅಮೆರಿಕ ತಂಡ ಮೊದಲ ಏಕದಿನ ಮತ್ತು ಟಿ20 ಗೆಲುವು ದಾಖಲಿಸಿದ್ದು ಜ್ಯಾಕ್ ಅವರ ಅವಧಿಯಲ್ಲೇ.
ಕೋಚ್ ಆಗಿ ಜ್ಯಾಕ್ ಅಮೆರಿಕ ತಂಡವನ್ನು busy ಆಗಿ ಇಟ್ಟಿದ್ದರು. 40 ಅಧಿಕೃತ ಅಂತರಾಷ್ಟ್ರೀಯ ಪಂದ್ಯಗಳು, ಅಂತರಾಷ್ಟ್ರೀಯ ಕ್ರಿಕೆಟ್ ಪ್ರವಾಸಗಳು, ಅಭ್ಯಾಸ ಪಂದ್ಯಗಳು, ತರಬೇತಿ ಶಿಬಿರಗಳು.. ಹೀಗೆ ತಾವು ಕೋಚ್ ಆಗಿದ್ದಷ್ಟು ದಿನ ಜ್ಯಾಕ್, ಅಮೆರಿಕ ಆಟಗಾರರಿಗೆ ದೀರ್ಘವಾಗಿ ಉಸಿರೆದುಕೊಳ್ಳಲೂ ಅವಕಾಶ ಕೊಟ್ಟಿರಲಿಲ್ಲ.
ಜ್ಯಾಕ್ ಯುಎಸ್ಎ ತಂಡದ ಕೋಚ್ ಹುದ್ದೆ ತೊರೆಯುವ ಹೊತ್ತಿಗೆ ತಂಡಕ್ಕೊಂದು ಗಟ್ಟಿ ಅಡಿಪಾಯ ಹಾಕಿ ಕೊಟ್ಟಿದ್ದರು. ಹೊಸ ಹೊಸ ಆಟಗಾರರನ್ನು ಪರಿಚಯಿಸಿದ್ದರು. ಅದರ ಪ್ರತಿಫಲ ಈಗ ಕಾಣುತ್ತಿದೆ.
2022ರಲ್ಲಿ ಯುಎಸ್ಎ ತಂಡದ ಕೋಚ್ ಹುದ್ದೆ ತ್ಯಜಿಸಿದ್ದ ಜೆ.ಅರುಣ್ ಕುಮಾರ್ ಕಳೆದ ಮೂರು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಅಸಿಸ್ಟೆಂಟ್ ಬ್ಯಾಟಿಂಗ್ ಕೋಚ್ ಆಗಿದ್ದಾರೆ.
Arunkumar Jagadeesh #Jak USA Cricket #usacricket #icct20worldcup2024 #T20WorldCup