ಡೇವಿಡ್ ಜಾನ್ಸನ್.. ಈ ಹೆಸರು ಕೇಳಿದರೆ ಕರ್ನಾಟಕ ಕ್ರಿಕೆಟ್ ಒಮ್ಮೆ ರೋಮಾಂಚನಗೊಳ್ಳುತ್ತದೆ. ಕರ್ನಾಟಕದಿಂದ ಭಾರತ ಪರ ಆಡಿದ್ದ Fabulous Fast Bowler.
ಶರವೇಗದ ಸರದಾರ ಡೇವಿಡ್ ಜಾನ್ಸನ್ ದುರಂತ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಕೊತ್ತನೂರಿನಲ್ಲಿರುವ ತಮ್ಮ ಮನೆಯ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೇವಿಡ್ ಜಾನ್ಸನ್ ಹಾಸನ ಜಿಲ್ಲೆಯ ಅರಸೀಕೆರೆಯವರು. ಗ್ರಾಮೀಣ ಪ್ರದೇಶದಿಂದ ಬಂದು ಬೆಂಗಳೂರಲ್ಲಿ ಕ್ರಿಕೆಟ್ ಬದುಕು ಕಟ್ಟಿಕೊಂಡವರು.
90ರ ದಶಕದಲ್ಲಿ ಕರ್ನಾಟಕ ತಂಡದ ಮುಂಚೂಣಿಯ ಫಾಸ್ಟ್ ಬೌಲರ್ ಆಗಿದ್ದವರು ಡೇವಿಡ್. ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಭಾರತ ಪರ ಆಡುತ್ತಿದ್ದಾಗ ದೊಡ್ಡ ಗಣೇಶ್, ಮನ್ಸೂರ್ ಅಲಿ ಖಾನ್ ಜೊತೆಗೂಡಿ ಕರ್ನಾಟಕ ಬೌಲಿಂಗ್ ಪಡೆಗೆ ಶಕ್ತಿ ತುಂಬಿದ್ದವರು ಇದೇ ಡೇವಿಡ್ ಜಾನ್ಸನ್.
90ರ ದಶಕದ ಮಧ್ಯಭಾಗ.. ಭಾರತ ತಂಡ ಟೆಸ್ಟ್ ಪಂದ್ಯವಾಡಲು ಬೆಂಗಳೂರಿಗೆ ಬಂದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ತಂಡದ ಅಭ್ಯಾಸ. ನೆಟ್ ಬೌಲರ್ ಆಗಿ ಡೇವಿಡ್ ಜಾನ್ಸನ್ ಕೂಡ ಬಂದಿದ್ದರು. ಆ ದಿನ ಡೇವಿಡ್ ಜಾನ್ಸನ್ ಎದುರಲ್ಲಿ ನಿಂತಿದ್ದವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್. ಡೇವಿಡ್ ಎಸೆದ ಕೆಲ ಎಸೆತಗಳ ಮುಂದೆ ತೆಂಡೂಲ್ಕರ್ ಪತರಗುಟ್ಟಿ ಹೋಗಿದ್ದರು. ಒಂದು ಎಸೆತವಂತೂ ಮಿಡಲ್ ಸ್ಟಂಪ್ ಅನ್ನೇ ಎಗರಿಸಿ ಬಿಟ್ಟಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದ ನೆನಪು.
ಮುಂದೊಂದು ದಿನ ಮತ್ತೆ ಸಚಿನ್ ತೆಂಡೂಲ್ಕರ್ ಅವರಿಗೆ ಬೌಲಿಂಗ್ ಮಾಡುವ ಅವಕಾಶ ಡೇವಿಡ್ ಜಾನ್ಸನ್ ಅವರಿಗೆ ಒದಗಿ ಬಂದಿತ್ತು. ಅದು ಚಾಲೆಂಜರ್ಸ್ ಟ್ರೋಫಿ ಏಕದಿನ ಟೂರ್ನಿ. ಡೇವಿಡ್ ಜಾನ್ಸನ್ ಆಡುತ್ತಿದ್ದ ತಂಡದ ಎದುರಾಳಿ ಪಡೆಯಲ್ಲಿದ್ದ ಬ್ಯಾಟ್ಸ್’ಮನ್’ಗಳು ಯಾರು ಗೊತ್ತೇ..? ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸಿಕ್ಸರ್ ಸಿಧು, ಮನೋಜ್ ಪ್ರಭಾಕರ್..
ಅಂಥಾ ಬ್ಯಾಟಿಂಗ್ ಲೈನಪ್ ವಿರುದ್ಧ 10 ಓವರ್ ಬೌಲಿಂಗ್ ಮಾಡಿದ್ದ ಡೇವಿಡ್ ಜಾನ್ಸನ್ 17 ರನ್ನಿತ್ತು 2 ವಿಕೆಟ್ ಪಡೆದಿದ್ದರು. ಜಾನ್ಸನ್ ವೇಗಕ್ಕೆ ಬಿದ್ದ ವಿಕೆಟ್’ಗಳು ನವಜೋತ್ ಸಿಂಗ್ ಸಿಧು ಮತ್ತು ಮನೋಜ್ ಪ್ರಭಾಕರ್. ಜಾನ್ಸನ್ ಅವರ ಇಡೀ 10 ಓವರ್’ಗಳ ಸ್ಪೆಲ್’ನಲ್ಲಿ ಸಚಿನ್ ಮತ್ತು ದ್ರಾವಿಡ್’ಗೆ ಒಂದೇ ಒಂದು
ಬೌಂಡರಿ ಹೊಡೆಯಲು ಸಾಧ್ಯವಾಗಿರಲಿಲ್ಲ. ಜಾನ್ಸನ್ ಎಂಥಾ ಬೌಲರ್ ಆಗಿದ್ದರು ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ!
ಅಲ್ಲಿಂದ ಮುಂದೆ ಭಾರತ ತಂಡಕ್ಕೆ ಆಯ್ಕೆ. ಆದರೆ ದೇಶದ ಪರ ಆಡಲು ಸಿಕ್ಕಿದ್ದು ಒಂದೇ ಒಂದು ಟೆಸ್ಟ್ ಪಂದ್ಯ.
ಭಾರತದ ಟೆಸ್ಟ್ ಕ್ರಿಕೆಟಿಗ, ಕರ್ನಾಟಕದ ಲೆಜೆಂಡ್ ಡೇವಿಡ್ ಜಾನ್ಸನ್ ಆತ್ಮಹತ್ಯೆಯಂಥಾ ನಿರ್ಧಾರಕ್ಕೆ ಯಾಕೆ ಬಂದರೋ ಗೊತ್ತಿಲ್ಲ! ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.
#ripdavidjohson