ಅಭಿ ಹೊಡೆತಕ್ಕೆ ಶೇಕ್ ಆದ ಇಂಗ್ಲೆಂಡ್; ಸೂರ್ಯ ಬಾಯ್ಸ್ ಗೆ ಸುಲಭ ಜಯ
ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಕೋಲ್ಕತ್ತಾದಲ್ಲಿ ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಅಭಿಷೇಕ್ ಶರ್ಮಾ (34 ಎಸೆತಗಳಲ್ಲಿ 5 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 79 ರನ್) ಭಾರತದ ಗೆಲುವಿಗೆ ಕಾರಣರಾದರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 5 ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 132 ರನ್‌ಗಳಿಗೆ ಆಲೌಟಾಯಿತು. ನಾಯಕ ಜೋಸ್ ಬಟ್ಲರ್ (44 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 68) ಏಕಾಂಗಿ ಹೋರಾಟ… ಉಳಿದ ಬ್ಯಾಟ್ಸ್ ಮನ್ ಗಳು ದಯನೀಯವಾಗಿ ವಿಫಲರಾದರು.
ಬಳಿಕ ಅಭಿಷೇಕ್ ಶರ್ಮಾ ಅವರ ವಿಧ್ವಂಸಕ ಬ್ಯಾಟಿಂಗ್‌ನಿಂದ ಭಾರತ 12.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತು. ಅಭಿಷೇಕ್ ಶರ್ಮಾ ಜತೆಗೆ ಸಂಜು ಸ್ಯಾಮ್ಸನ್ (20 ಎಸೆತಗಳಲ್ಲಿ 4 ಬೌಂಡರಿ ಸಹಿತ 26) ಮತ್ತು ತಿಲಕ್ ವರ್ಮಾ (16 ಎಸೆತಗಳಲ್ಲಿ 3 ಬೌಂಡರಿ ಸಹಿತ ಔಟಾಗದೆ 19) ಮಿಂಚಿದರು. ಉಭಯ ತಂಡಗಳ ನಡುವಿನ ಎರಡನೇ ಟಿ20 ಶನಿವಾರ ಚೆನ್ನೈನಲ್ಲಿ ನಡೆಯಲಿದೆ.
ಟೀಂ ಇಂಡಿಯಾಕ್ಕೆ ಆರಂಭಿಕರಾದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಭರ್ಜರಿ ಆರಂಭ ನೀಡಿದರು. ಆಕ್ರಮಣಕಾರಿ ಆಟವಾಡಿದ ಈ ಜೋಡಿ ಮೊದಲ ವಿಕೆಟ್‌ಗೆ 41 ರನ್ ಸೇರಿಸಿತು.
ಬೃಹತ್ ಸಿಕ್ಸರ್ ಗಳ ಮೂಲಕ ಇಂಗ್ಲೆಂಡ್ ಬೌಲರ್ ಗಳನ್ನು ಬೆಂಡೆತ್ತಿದ್ದರು. ಪವರ್ ಪ್ಲೇನಲ್ಲಿ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿ ನಂತರ ಅದೇ ವೇಗವನ್ನು ಮುಂದುವರಿಸಿತು. ಅದರಲ್ಲೂ ಅಭಿಷೇಕ್ ಶರ್ಮಾ ಭರ್ಜರಿ ಸಿಕ್ಸರ್ ಸಿಡಿಸಿದ್ದರು. 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್ ಶರ್ಮಾ ನಂತರ ಹೆಚ್ಚು ಆಕ್ರಮಣಕಾರಿ ಆಟವಾಡಿ ಬೃಹತ್ ಸಿಕ್ಸರ್ ಬಾರಿಸಿದರು. ಆದಿಲ್ ರಶೀದ್ ಎಸೆತದಲ್ಲಿ ಅಭಿಷೇಕ್ ಶರ್ಮಾ ಕ್ಯಾಚಿತ್ತು ಔಟಾದರೂ, ಕ್ರೀಸ್ ಗೆ ಬಂದ ಹಾರ್ದಿಕ್ ಪಾಂಡ್ಯ (ಔಟಾಗದೆ 3) ಜತೆಗೂಡಿ ತಿಲಕ್ ವರ್ಮಾ ಗೆಲುವನ್ನು ಪೂರ್ಣಗೊಳಿಸಿದರು.