ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ವೇಗದ ಬೌಲರ್ ಇಶಾಂತ್ ಶರ್ಮಾ ಅವರು ಕ್ರಮವಾಗಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟಿ20 ಮತ್ತು ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಟಿ–20 ತಂಡಕ್ಕೆ ಸಂಜು ಸ್ಯಾಮ್ಸನ್, ಏಕದಿನ ತಂಡಕ್ಕೆ ಪೃಥ್ವಿ ಶಾ ಆಯ್ಕೆಯಾಗಿದ್ದಾರೆ.
ಹೋದ ಭಾನುವಾರ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಶಿಖರ್ ಧವನ್ ಭುಜಕ್ಕೆ ಗಾಯವಾಗಿತ್ತು. ಆದ್ದರಿಂದ ಇದೇ ಶುಕ್ರವಾರ ನಡೆಯಲಿರುವ ಕಿವೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಆಡುವ ತಂಡದಲ್ಲಿ ಅವರಿಗೆ ಸ್ಥಾನ ನೀಡಿಲ್ಲ.ಸೋಮವಾರ ನಡೆದ ರಣಜಿ ಟ್ರೋಫಿ ಟೂರ್ನಿ ಪಂದ್ಯದಲ್ಲಿ ಇಶಾಂತ್ ಶರ್ಮಾ ಪಾದಕ್ಕೆ ಪೆಟ್ಟಾಗಿತ್ತು. ಅವರಿಗೆ ದೀರ್ಘ ಅವಧಿಯ ವಿಶ್ರಾಂತಿ ನೀಡಲಿರುವ ಕಾರಣ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ.
‘ಇಶಾಂತ್ ಅವರ ಪಾದದ ಎಂ.ಆರ್.ಐ ಮಾಡಲಾಗಿದೆ. ಅದರಲ್ಲಿ ಗ್ರೇಡ್ –3 ಗಾಯವಾಗಿದೆ ಮತ್ತು ಅದು ಗಂಭೀರವಾಗಿದೆ. ಅವರಿಗೆ ಆರು ವಾರಗಳ ವಿಶ್ರಾಂತಿ ಮತ್ತು ಚಿಕಿತ್ಸೆಯ ಅಗತ್ಯವಿದೆ. ಅವರ ಅನುಪಸ್ಥಿತಿಯು ನಮ್ಮ ತಂಡಕ್ಕೆ ಕಾಡಲಿದೆ’ ಎಂದು ಡಿಡಿಸಿಎ ಪ್ರಧಾನ ಕಾರ್ಯದರ್ಶಿ ವಿನೋದ್ ತಿಹಾರ ತಿಳಿಸಿದ್ದಾರೆ.
ಭಾರತ ತಂಡವು ನ್ಯೂಜಿಲೆಂಡ್‌ನಲ್ಲಿ ಐದು ಟಿ20, ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.