ಚಿತ್ರಕಲಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ವಿಶೇಷ ಚೇತನ ಚಿತ್ರಕಲಾವಿದ ಗಣೇಶ್ ಪಂಜಿಮಾರ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ರಾಮ ಮೂಲ್ಯ ಹಾಗೂ ನಾಗಮಣಿ ದಂಪತಿಗಳ ಪುತ್ರನಾಗಿರುವ ಗಣೇಶ್ ಕುಲಾಲ್ ಹುಟ್ಟಿನಿಂದಲೇ ವಿಕಲಾಂಗರು.ಮೂರಡಿ ಎತ್ತರ,ಇಪ್ಪತ್ಮೂರು ಕಿಲೋ ಗ್ರಾಂ ತೂಕ ಹೊಂದಿರುವ ಗಣೇಶ್ ಪ್ರೌಢವಸ್ಥೆಯನ್ನು ದಾಟಿ ನಿಂತವರು.ಹುಟ್ಟಿನಿಂದಲೇ ಜೊತೆಯಾದ ಅಂಗವೈಕಲ್ಯ ಬದುಕಿಗೆ ಬಿರುಗಾಳಿಯಂತೆಯೇ ಬಂದೊಡ್ಡಿದರೂ ಇವರು ಜೀವನೋತ್ಸಾಹವನ್ನು ಎಂದಿಗೂ
ಕಳೆದುಕೊಳ್ಳಲಿಲ್ಲ.ಉತ್ತಮ ವಿದ್ಯಾಭ್ಯಾಸ ಪಡೆದು ಸ್ವಸಾಮಾರ್ಥ್ಯದಿಂದಲೇ ನೌಕರಿ ಗಿಟ್ಟಿಸಿಕೊಳ್ಳಬೇಕೆಂಬ ಹಂಬಲದಿಂದ ಪ್ರಾಥಮಿಕ ಶಿಕ್ಷಣವನ್ನು ಶ್ರೀ ದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆ ಪಂಜಿಮಾರು,ಶ್ರೀ ನಾರಾಯಣ ಗುರು ಪ್ರೌಢಶಾಲೆ ಪಡುಬೆಳ್ಳೆ ಹಾಗೂ ಪಿಯುಸಿ ಶಿಕ್ಷಣವನ್ನು ಜೂನಿಯರ್ ಕಾಲೇಜು ಶಿರ್ವದಲ್ಲಿ
ಪಡೆದರು.ಈ ಸಂದರ್ಭದಲ್ಲಿ ಕುಟುಂಬ ತುಂಬಿದ ಧೈರ್ಯ,ಗೆಳೆಯರು ನೀಡಿದ ಸಾಥ್,ಶಿಕ್ಷಕರ ಪ್ರೀತಿ ,ಕಾಳಜಿಯನ್ನು ಸ್ಮರಿಸಿಕೊಳ್ಳುತ್ತಾರೆ.ನಂತರ ದಾನಿಯೊಬ್ಬರು ಕೊಡುಗೆಯಾಗಿ ನೀಡಿದ ವಿದ್ಯುತ್ ಚಾಲಿತ ತ್ರಿಚಕ್ರ ಸ್ಕೂಟರ್ನಲ್ಲಿ ನಿತ್ಯ ಹತ್ತು ಕಿ.ಮೀ ಕ್ರಮಿಸಿ ಪದವಿ ಗಿಟ್ಟಿಸಿಕೊಂಡ ಸ್ಫೂರ್ತಿ ಚಿಲುಮೆಯಿವರು. ವಿದ್ಯಾಭ್ಯಾಸದ ಜೊತೆಜೊತೆಗೆ ಚಿತ್ರಕಲೆ, ಕಥೆ,ಕವನ ಬರೆಯುವ ಆಸಕ್ತಿಯನ್ನೂ ಇರಿಸಿಕೊಂಡು ಸದಾ ಕ್ರೀಯಾಶೀಲರಾಗಿರುತ್ತಿದ್ದರು.
ಚಿತ್ರಕಲೆಯಲ್ಲಿ ಮೊದಲ ಪ್ರಯತ್ನವಾಗಿ ತನ್ನ ಅಮ್ಮನ ಚಿತ್ರವನ್ನೇ ಚಿತ್ರಿಸಿ ತೋರಿಸಿದಾಗ ಅಮ್ಮನಿಂದ ವ್ಯಕ್ತವಾದ ಮೆಚ್ಚುಗೆ,ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಾಗ ಅಲ್ಲಿ ಪ್ರೇಕ್ಷಕ ವರ್ಗದಿಂದ ಸಿಕ್ಕ ಪ್ರತಿಕ್ರಿಯೆ ಮುಂದೆ ಕಲಾ ಕ್ಷೇತ್ರದಲ್ಲಿಯೇ ಮುಂದುವರಿಯುವಂತೆ ಪ್ರೇರೇಪಿಸಿತು ಎನ್ನುತ್ತಾರೆ ಗಣೇಶ್ ಪಂಜಿಮಾರ್.
ಇವರ ಕೈಯಲ್ಲಿ ಮೂಡಿದ ವಿವಿಧ ಕ್ಷೇತ್ರಗಳ ನಾಯಕರ,ಪ್ರಕೃತಿ,ಪ್ರಾಣಿ ಪಕ್ಷಿಗಳ ಚಿತ್ರಗಳು ನೋಡುಗರನ್ನು ಒಂದೊಮ್ಮೆ ಬೆರಗಾಗುವಂತೆ ಮಾಡುತ್ತದೆ.ಈಗಾಗಲೇ ಮುನ್ನೂರೈವತ್ತಕ್ಕಿಂತಲೂ ಹೆಚ್ಚು ಚಿತ್ರಗಳನ್ನು ಚಿತ್ರಿಸಿರುವ ಈ ಸಾಧಕ ಎಲ್ಲರ ಬದುಕಿಗೆ ಸ್ಫೂರ್ತಿಯ ಮಾತಾಗಿ ನಿಂತಿದ್ದಾರೆ.ದೈಹಿಕ ಕಸರತ್ತಿಗೆ ಅಂಗಾಂಗ ಸ್ಪಂದಿಸದಿದ್ದಾಗ ತಮ್ಮ ಬೌದ್ಧಿಕ ಕಸರತ್ತಿನಿಂದ ಚಿತ್ರ ಕಲಾವಿದನಾಗಿ ರೂಪುಗೊಂಡು ಇಂದು ಜನಮಾನಸದಲ್ಲಿ ಕಿಂಗ್ ಗಣೇಶ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ಭಿನ್ನ ಪ್ರತಿಭೆಯ ಹಾದಿ ನಿಜಕ್ಕೂ ರೋಚಕತೆಯ ಆಗರ.
ಇವರ ತಂಗಿ ಸುಮಾ ಕೂಡಾ ವಿಕಲಾಂಗರಾಗಿದ್ದರೂ ಕಾಗದಗಳ ಪಟ್ಟಿಯಿಂದ ಗೊಂಬೆ ತಯಾರಿಸುವಲ್ಲಿ ಪರಿಣಿತರು.ಅಣ್ಣ-ತಂಗಿ ಒಬ್ಬರಿಗೊಬ್ಬರು ಬೆನ್ನು ತಟ್ಟುತ್ತಾ ಅಛಲ ವಿಶ್ವಾಸದಿಂದ ಜೀವನವನ್ನು ಎದುರಿಸುತ್ತಿರುವ ರೀತಿ ಸಾಮರ್ಥ್ಯವಿದ್ದರೂ ಅಸಮರ್ಥರೆಂದು ಕೈ ಚೆಲ್ಲುವ ನಿರಾಶಾವಾದಿಗಳಿಗೆ ಅದ್ಭುತ ಪಾಠವಾಗಿ ತೋರುತ್ತದೆ.
ಮಲ್ಲಿಗೆ ಹೂವು ಕಟ್ಟಿ ,ಅದನ್ನು ಮಾರಿ ಕುಟುಂಬದ ಜವಾಬ್ದಾರಿಯನ್ನು ನಡೆಸುತ್ತಿರುವ ತಾಯಿಗೆ,ತನಗಿಂತಲೂ ತ್ರಾಸದಾಯಕ ಸ್ಥಿತಿಯಲ್ಲಿರುವ ತಂಗಿಗೆ ನೆರಳಾಗಿ ನಿಲ್ಲಬೇಕೆಂಬ ದೃಢ ಆಶಯವನ್ನು ಹೊಂದಿರುವ ಗಣೇಶ್ ರವರು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕೆಂಬ ಆಕಾಂಕ್ಷೆಯಿಂದ ಬ್ಯಾಂಕಿಂಗ್ ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸಿಕೊಂಡು ಈಗಾಗಲೇ ಹಲವು ಬಾರಿ ಲಿಖಿತ ಪರೀಕ್ಷೆಗೆ ಹಾಜರಾಗಿದ್ದಾರೆ. ಗಣೇಶ್ ಪಂಜಿಮಾರ್ ಆರ್ಟ್ಸ್ ಎಂಬ ಯುಟ್ಯೂಬ್ ,ಇನ್ಸ್ಟ್ರಾಗ್ರಾಮ್ ಹಾಗೂ ಫೇಸ್ಬುಕ್ ಅಕೌಂಟನ್ನು ತಮ್ಮ ಕಲಾ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆಯನ್ನಾಗಿ ವಿನಿಯೋಗಿಸಿಕೊಂಡಿದ್ದಾರೆ.ಈಗಾಗಲೇ ಹಲವಾರು ಸಂಘ ಸಂಸ್ಥೆಗಳಿಂದ ಪುರಸ್ಕಾರಗಳನ್ನು ಪಡೆದುಕೊಂಡಿದ್ದು ,ಇವರ ಸಾಧನೆಯ ಕುರಿತಾದ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.