ಅರ್ಜುನನ ಮಗ ಅಭಿಮನ್ಯುವಿಗೆ ಚಕ್ರವ್ಯೂಹ ಭೇದಿಸುವ ವಿದ್ಯೆ ತಿಳಿದಿತ್ತೇ ವಿನಃ, ಅದರಿಂದ ಹೊರ ಬರುವ ವಿದ್ಯೆ ಗೊತ್ತಿರಲಿಲ್ಲ.. ಇದೇ ಕಾರಣಕ್ಕೆ ಚಕ್ರವ್ಯೂಹದಲ್ಲಿ ಬಂಧಿಯಾದ ವೀರ ಅಭಿಮನ್ಯು ರಣರಂಗದಲ್ಲೇ ಉಸಿರು ಚೆಲ್ಲಿ ಬಿಟ್ಟ..!
ಕರ್ನಾಟಕ ಕ್ರಿಕೆಟ್’ನ ಅಭಿಮನ್ಯು ಹಾಗಲ್ಲ.. ಆತ ಕ್ರಿಕೆಟ್ ಚಕ್ರವ್ಯೂಹವನ್ನು ಭೇದಿಸಿದ ರಣಕಲಿ.. ಇದು ಪೀಣ್ಯ ಎಕ್ಸ್’ಪ್ರೆಸ್ ಅಭಿಮನ್ಯು ಮಿಥುನ್ ಎಂಬ ಬೆಂಕಿ ಚೆಂಡಿನ ಕಥೆ.
2009ರಲ್ಲಿ ಉತ್ತರ ಪ್ರದೇಶದ ಮೀರತ್’ನಲ್ಲಿ ನಡೆದ ರಣಜಿ ಪಂದ್ಯ. ಕಟ್ಟುಮಸ್ತಾದ ನೀಳಕಾಯದ ಹುಡುಗನೊಬ್ಬ ಆ ದಿನ ಮೀರತ್ ಮೈದಾನದಲ್ಲಿ ಬೆಂಕಿ-ಬಿರುಗಾಳಿಯಾಗಿ ಬಿಟ್ಟಿದ್ದ.
ಆಡಿದ ಮೊದಲ ರಣಜಿ ಪಂದ್ಯದಲ್ಲೇ ಜಾವಗಲ್ ಶ್ರೀನಾಥ್ ಅವರಂತೆ ಹ್ಯಾಟ್ರಿಕ್ ಸಾಧನೆ. ಚಂಡಮಾರುತದಂತೆ ಅಪ್ಪಳಿಸಿದ ಆ ಪ್ರಚಂಡ ದಾಳಿಗೆ ಎಗರಿ ಬಿದ್ದವರೆಷ್ಟು ಮಂದಿ ಗೊತ್ತೇ.. 11 ಮಂದಿ. ಅರ್ಥಾತ್, ಪಂದ್ಯದಲ್ಲಿ ಆ ಹುಡುಗ ಉಡಾಯಿಸಿದ ವಿಕೆಟ್’ಗಳ ಸಂಖ್ಯೆ 11. ಅಂದ ಹಾಗೆ ಆ ದಿನ ಕರ್ನಾಟಕ ಕ್ರಿಕೆಟ್’ನಲ್ಲಿ ಬೀಸಿದ ಆ ಬಿರುಗಾಳಿಯ ಹೆಸರು
ಅಭಿಮನ್ಯು ಮಿಥುನ್.
ಆಡಿದ ಮೊದಲ ರಣಜಿ ಪಂದ್ಯದಲ್ಲೇ ಮಿಥುನ್ ಬತ್ತಳಿಕೆಯಿಂದ ನುಗ್ಗಿ ಬಂದ ಅಸ್ತ್ರಗಳಿಗೆ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವಕೇ ಬೆರಗಾಗಿ ಹೋಗಿದ್ದರು. ಆ ಪಂದ್ಯದಲ್ಲಿ ಸ್ಲಿಪ್’ನಲ್ಲಿ ಕ್ಷೇತ್ರರಕ್ಷಣೆ ನಡೆಸುತ್ತಿದ್ದ ಕರ್ನಾಟಕ ತಂಡದ ನಾಯಕ ದ್ರಾವಿಡ್ ಅವರಿಗೆ ಆ ದಿನ ಮೈಸೂರು ಎಕ್ಸ್’ಪ್ರೆಸ್ ಜಾವಗಲ್ ಶ್ರೀನಾಥ್ ನೆನಪಾಗಿದ್ದರಂತೆ. ಅದಾದ ಕೆಲ ದಿನಗಳ ನಂತರ ಬೆಂಗಳೂರಿನಲ್ಲಿ ಮತ್ತೊಂದು ಪಂದ್ಯಕ್ಕೆ ಸಜ್ಜಾಗುತ್ತಿದ್ದಾಗ ಮಾತಿಗೆ ಸಿಕ್ಕಿದ ದ್ರಾವಿಡ್ ಅವರಲ್ಲಿ ಮಿಥುನ್ ಬಗ್ಗೆ ಕೇಳಿದಾಗ, ‘’ಜಾವಗಲ್ ಶ್ರೀನಾಥ್ ಬಳಿಕ ಕರ್ನಾಟಕಕ್ಕೊಬ್ಬ genuine fast bowler ಸಿಕ್ಕಿದ್ದಾನೆ’’ ಎಂದಿದ್ದರು ರಾಹುಲ್ ದ್ರಾವಿಡ್.
ಮಿಥುನ್ ಆಡಿದ ಮೊದಲ ರಣಜಿ ಪಂದ್ಯವನ್ನು ನೋಡಲು ಸಾಧ್ಯವಾಗಿರಲಿಲ್ಲ. ಆದರೆ ಅದೇ ಆರ್ಭಟವನ್ನು ಮೈಸೂರಿನಲ್ಲಿ ನಡೆದ ಆ ವರ್ಷದ ರಣಜಿ ಫೈನಲ್’ನಲ್ಲಿ ಪುನರಾವರ್ತಿಸಿ ಬಿಟ್ಟ
ಪೀಣ್ಯ ಎಕ್ಸ್’ಪ್ರೆಸ್.
ಕರ್ನಾಟಕ ಕ್ರಿಕೆಟ್ ಎಂದೆಂದಿಗೂ ಮರೆಯಲಾಗದ ಆ ಫೈನಲ್ ಪಂದ್ಯ ಇವತ್ತಿಗೂ ಕಣ್ಣಿಗೆ ಕಟ್ಟಿದ ಹಾಗಿದೆ. ಮುಂಬೈ ತಂಡದ 2ನೇ ಇನ್ನಿಂಗ್ಸ್.. 6 ವಿಕೆಟ್ ಉಡಾಯಿಸಿದ ಮಿಥುನ್, ಮುಂಬೈನ ಬಲಾಢ್ಯ ಬ್ಯಾಟಿಂಗ್ ಪಡೆಯನ್ನು ಸೀಳಿ ಹಾಕಿ ಬಿಟ್ಟ. ಆ ವರ್ಷ ರಣಜಿ ಟ್ರೋಫಿಯಲ್ಲಿ 47 ವಿಕೆಟ್’ಗಳನ್ನು ಪಡೆದ ಮಿಥುನ್’ಗೆ ಅದೇ ವರ್ಷ ಭಾರತ ಪರ ಟೆಸ್ಟ್ ಆಡುವ ಅವಕಾಶವೂ ಸಿಕ್ಕಿತು.
ಆದರೆ ಕರ್ನಾಟಕ ಕ್ರಿಕೆಟ್’ನಲ್ಲಿ ಚಕ್ರವ್ಯೂಹ ಭೇದಿಸಿದ್ದ ಅಭಿಮನ್ಯುವಿಗೆ ಭಾರತ ತಂಡದಲ್ಲಿ ಚಕ್ರವ್ಯೂಹ ಭೇದಿಸಲು ಸಾಧ್ಯವಾಗಲಿಲ್ಲ. ಆಡಲು ಸಿಕ್ಕಿದ್ದು 4 ಟೆಸ್ಟ್, 5 ಏಕದಿನ ಪಂದ್ಯಗಳಷ್ಟೇ.. ಬಹುಶಃ, ನಮ್ಮ ಕನ್ನಡಿಗನ ಖದರ್ ನೋಡುವ ಅದೃಷ್ಟ ಭಾರತ ತಂಡಕ್ಕಿರಲಿಲ್ಲವೇನೋ..
ಅಲ್ಲಿ ಕೈ ತಪ್ಪಿದ ಅವಕಾಶ ಇಲ್ಲಿ ಹೊಸ ಚರಿತ್ರೆಯೊಂದಕ್ಕೆ ಮುನ್ನುಡಿ ಬರೆಯಿತು. ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಮಿಥುನ್, ಕರ್ನಾಟಕ ಕ್ರಿಕೆಟ್’ಗೆ ಮರಳಿ ಧೂಳೆಬ್ಬಿಸಿ ಬಿಟ್ಟ.
ಕರ್ನಾಟಕದ ಹತ್ತಾರು ಐತಿಹಾಸಿಕ ಗೆಲುವುಗಳ ರೂವಾರಿ ನಮ್ಮ ಪೀಣ್ಯ ಎಕ್ಸ್’ಪ್ರೆಸ್. ಕರ್ನಾಟಕ ಪರ ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸಹಿತ ಮಿಥುನ್ ಗೆದ್ದಿರುವ ಕಪ್’ಗಳ ಸಂಖ್ಯೆ ಬರೋಬ್ಬರಿ 10.
ಕರ್ನಾಟಕ ತಂಡ 2013ರಿಂದ ಐದಾರು ವರ್ಷಗಳ ಕಾಲ ದೇಶೀಯ ಕ್ರಿಕೆಟ್’ನ ‘ಕಿಂಗ್’ ಎನಿಸಿಕೊಂಡಿತ್ತು ಎಂದರೆ ಅದರಲ್ಲಿ ಅಭಿಮನ್ಯು ಮಿಥುನ್ ಪಾತ್ರ ತುಂಬಾ ದೊಡ್ಡದು. ಆ ಕಾಲದಲ್ಲಿ ಮಿಥುನ್-ವಿನಯ್ ಕುಮಾರ್-ಎಸ್.ಅರವಿಂದ್ ಎಂಬ ತ್ರಿವಳಿ ವೇಗಿಗಳ ಹೆಸರು ಕೇಳಿದರೆ ಸಾಕು.. ದೊಡ್ಡ ದೊಡ್ಡ ಬ್ಯಾಟ್ಸ್’ಮನ್’ಗಳ ಕಾಲು ನಡುಗುತ್ತಿತ್ತು. ಮಿಥುನ್ ಅವರಂತೂ ಘಟಾನುಘಟಿಗಳ ಎದೆಯನ್ನೇ ನಡುಗಿಸಿದ್ದ ‘ದಾದಾ’ ಬೌಲರ್. ಅವರ ಕೈಯಿಂದ ನುಗ್ಗಿ ಬರುತ್ತಿದ್ದ ಬೆಂಕಿ ಚೆಂಡುಗಳ ಮುಂದೆ ಸ್ಟಂಪ್’ಗಳು ಚಲ್ಲಾಪಿಲ್ಲಿಯಾಗಿ ಉದುರಿ ಹೋಗುತ್ತಿದ್ದದ್ದನ್ನು ನೋಡುವುದೇ ಕಣ್ಣಿಗೆ ಹಬ್ಬದಂತಿರುತ್ತಿತ್ತು. ಈಗಲೂ ಆ ಭಯಾನಕ ಸ್ಪೆಲ್’ಗಳನ್ನು ನೆನಪಿಸಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ. ಪೀಣ್ಯ ಎಕ್ಸ್’ಪ್ರೆಸ್ ಉಳಿಸಿ ಹೋಗಿರುವ ಹೆಜ್ಜೆ ಗುರುತುಗಳಿವು.
ಕರ್ನಾಟಕ ತಂಡಕ್ಕೆ ಆಡಿದ ಅಷ್ಟೂ ಪಂದ್ಯಗಳನ್ನು ‘’ಹೃದಯದಿಂದ’’ ಆಡಿದವರು ಮಿಥುನ್. ರಾಜ್ಯ ತಂಡವನ್ನು ಪ್ರತಿನಿಧಿಸುವುದು, ಗಂಡಭೇರುಂಡದ ಲಾಂಛನವುಳ್ಳ ಕ್ಯಾಪ್ ಧರಿಸುವುದೇ ದೊಡ್ಡ ಗೌರವ ಎಂಬುದು ಈಗಿನ ಎಷ್ಟೋ ಕ್ರಿಕೆಟಿಗರಿಗೆ ತಿಳಿದೇ ಇಲ್ಲ. ಆ ಗೌರವವನ್ನು ಎದೆಯಲ್ಲಿಟ್ಟುಕೊಂಡು ಆಡಿದ ಮಿಥುನ್ ಕರ್ನಾಟಕ ಕ್ರಿಕೆಟ್’ಗೆ ಗೌರವ ತಂದುಕೊಟ್ಟ ದಿಗ್ಗಜ.
ಕೇವಲ 31ನೇ ವಯಸ್ಸಿನಲ್ಲಿ ದೇಶೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿ ಕರ್ನಾಟಕ ತಂಡದಲ್ಲಿ ಯುವ ಬೌಲರ್’ಗಳಿಗೆ ದಾರಿ ಮಾಡಿ ಕೊಟ್ಟಿರುವ ಹೃದಯವಂತ ಅಭಿಮನ್ಯು ಮಿಥುನ್. ಇಂತಹ ಒಬ್ಬ ಬೌಲರ್ ಕರ್ನಾಟಕ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಬಂದರೆ..?