17.1 C
London
Monday, September 9, 2024
Homeಕ್ರಿಕೆಟ್ಕರ್ನಾಟಕ ಕ್ರಿಕೆಟ್’ನಲ್ಲಿ ಮಿಂಚು ಹರಿಸುತ್ತಿರುವ ಕರಾವಳಿಯ ಪ್ರತಿಭೆ...!!!

ಕರ್ನಾಟಕ ಕ್ರಿಕೆಟ್’ನಲ್ಲಿ ಮಿಂಚು ಹರಿಸುತ್ತಿರುವ ಕರಾವಳಿಯ ಪ್ರತಿಭೆ…!!!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ಮೊನ್ನೆ ಮಹಾರಾಜ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ತಂಡದ ಪರ ಆಡುತ್ತಿರುವ ಅಭಿಲಾಷ್ ಶೆಟ್ಟಿ ಎಂಬ ಯುವ ಎಡಗೈ ವೇಗದ ಬೌಲರ್ ಇತಿಹಾಸವೊಂದನ್ನು ನಿರ್ಮಿಸಿ ಬಿಟ್ಟ. ಟಿ20 ಕ್ರಿಕೆಟ್’ನ ಪವರ್’ಪ್ಲೇನಲ್ಲಿ ಎರಡು maiden over’s. ಎಂಥಾ ಅದ್ಭುತ ಸಾಧನೆ..!

ಅಭಿಲಾಷ್ ಶೆಟ್ಟಿಯ run up, ಬೌಲಿಂಗ್ ಶೈಲಿಯನ್ನು ನೋಡಿದಾಗ ನ್ಯೂಜಿಲೆಂಡ್’ನ ಸ್ವಿಂಗ್ ಸುಲ್ತಾನ ಟ್ರೆಂಟ್ ಬೌಲ್ಟ್ ನೆನಪಾಗುತ್ತಾನೆ. ಎಡಗೈ ದಾಂಡಿಗರನ್ನು ತಬ್ಬಿಬ್ಬುಗೊಳಿಸುವ ಆ ಔಟ್ ಸ್ವಿಂಗರ್’ಗಳು.. ಆಫ್ ಸ್ಟಂಪ್ ಲೈನ್’ನಲ್ಲಿ ಬಿದ್ದು ಒಳ ನುಗ್ಗಿ ಬಲಗೈ ದಾಂಡಿಗರನ್ನು ವಂಚಿಸಿ ಕ್ಲೀನ್ ಬೌಲ್ಡ್ ಮಾಡಿ ಬಿಡಬಲ್ಲ ಆ ಇನ್’ಸ್ವಿಂಗರ್’ಗಳು.. ಆ ವೇಗ.. ಆ ಆ್ಯಕ್ಷನ್.. ಅನುಮಾನವೇ ಬೇಡ, ಕರ್ನಾಟಕಕ್ಕೊಬ್ಬ genuine left arm pacer ಸಿಕ್ಕಿ ಬಿಟ್ಟಿದ್ದಾನೆ.

26 ವರ್ಷದ ಅಭಿಲಾಷ್ ಶೆಟ್ಟಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮೆಚ್ಚಿದ ಪ್ರತಿಭೆ. ಕಳೆದ ವರ್ಷ ಮಹಾರಾಜ ಟ್ರೋಫಿಯಲ್ಲಿ ಮಿಂಚುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಟ್ರಯಲ್ಸ್’ಗೆ ಕರೆ ಬಂದಿತ್ತು. ಕಳೆದ ಐಪಿಎಲ್ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನೆಟ್ ಬೌಲರ್ ಆಗಿದ್ದ ಅಭಿಲಾಷ್ ಶೆಟ್ಟಿಯ ಬೌಲಿಂಗ್ ನೋಡಿ ರೋಹಿತ್ ಶರ್ಮಾನಂಥಾ ದಿಗ್ಗಜನೇ ಅಚ್ಚರಿ ಪಟ್ಟಿದ್ದ, ಮೆಚ್ಚುಗೆಯ ಮಾತುಗಳನ್ನಾಡಿದ್ದ.

ಕರಾವಳಿಯ ಈ ಹುಡುಗನಿಗೆ ಬೆಂಗಳೂರಲ್ಲಿ ಗುರುವಾಗಿ ಸಿಕ್ಕಿದವರು ಪೀಣ್ಯ ಎಕ್ಸ್’ಪ್ರೆಸ್ ಅಭಿಮನ್ಯು ಮಿಥುನ್. ಮಿಥುನ್ ಬಗ್ಗೆ ಹೇಳಲೇಬೇಕಿಲ್ಲ.. ಕರ್ನಾಟಕದ ಲೆಜೆಂಡರಿ ಫಾಸ್ಟ್ ಬೌಲರ್. ದೇಶೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ನಂತರ ಮಿಥುನ್ ರಾಜ್ಯದ ಯುವ ವೇಗದ ಬೌಲರ್’ಗಳಿಗೆ ಮಾರ್ಗದರ್ಶನ ನೀಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ತಮ್ಮದೇ Run Up Cricket Academyಯಲ್ಲಿ, ಪ್ಯಾಲೇಸ್ ಗ್ರೌಂಡ್’ನಲ್ಲಿರುವ Brijesh Patel Cricket Academyಯಲ್ಲಿ.. ಮಿಥನ್ ಗರಡಿಯಲ್ಲಿ ಪಳಗುತ್ತಿರುವ ಯುವ ವೇಗಿಗಳು ಒಬ್ಬರಲ್ಲ ಇಬ್ಬರಲ್ಲ.. ಅವರಲ್ಲಿ ಒಬ್ಬ ಈ ಅಭಿಲಾಷ್ ಶೆಟ್ಟಿ..

“ನನ್ನ ಬೌಲಿಂಗ್’ನಲ್ಲಿ ಸ್ವಿಂಗ್, ಪೇಸ್ ಏನೇ ಬಂದಿದ್ದರೂ ಅದಕ್ಕೆ ಕಾರಣ ಮಿಥುನ್ ಅಣ್ಣ.. ಅವರೇ ನನ್ನ ಪಾಲಿನ ಗುರು. ಅವರು ಬೆಂಗಳೂರಲ್ಲಿ ಇಲ್ಲದೇ ಇದ್ದಾಗಲೂ ನನ್ನ ಪ್ರತೀ ಎಸೆತದ ವೀಡಿಯೊಗಳನ್ನು ನೋಡಿ, ವೀಡಿಯೊ ಕಾಲ್ ಮೂಲಕ ಮಾರ್ಗದರ್ಶನ ನೀಡುತ್ತಾರೆ. ಮಿಥುನ್ ಅಣ್ಣನಿಂದಲೇ ನಾನು ಇಲ್ಲಿವರೆಗೆ ಬಂದಿದ್ದೇನೆ” ಎನ್ನುತ್ತಾನೆ ಅಭಿಲಾಷ್ ಶೆಟ್ಟಿ.

ಅಭಿಲಾಷ್ ಶೆಟ್ಟಿ ಉಡುಪಿ ಜಿಲ್ಲೆಯ ಕೋಟದ ಮೂಡು ಗಿಳಿಯಾರಿನ ಹುಡುಗ. ಆ ಪ್ರದೇಶದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ತುಂಬಾ ಫೇಮಸ್. ಸಹಜವಾಗಿಯೇ ಅಭಿಲಾಷ್ ಶೆಟ್ಟಿ ಚಿಕ್ಕವಯಸ್ಸಲ್ಲೇ ಟೆನಿಸ್ ಬಾಲ್ ಹಿಡಿದು ಬಿಟ್ಟ. ಕ್ಯಾಂಟೀನ್ ನಡೆಸುತ್ತಿದ್ದ ಅಪ್ಪ, ದೊಡ್ಡ ಅನುಕೂಲಸ್ಥರೇನೂ ಅಲ್ಲ. ಕ್ರಿಕೆಟ್ ಏನು ಮಾಡಬಲ್ಲುದು ಎಂಬುದರ ಅರಿವಿಲ್ಲದ ಬಹುತೇಕ ಅಪ್ಪಂದಿರಂತೆ ಈ ತಂದೆಯನ್ನೂ ಮಗನ ಕ್ರಿಕೆಟ್ ಹುಚ್ಚು ಚಿಂತೆಗೀಡು ಮಾಡಿತ್ತು.

ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಹುಡುಗ ಪೇಪರ್ ಕಟ್ಟಿಂಗ್ ನೋಡಿ, ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ಟ್ರಯಲ್ಸ್’ಗೆ ಹೋಗುತ್ತಾನೆ. ಅದೇ ಮೊದಲ ಬಾರಿ ಜೀವನದಲ್ಲಿ ಲೆದರ್ ಬಾಲ್ ಹಿಡಿದದ್ದು. ಆಳ್ವಾಸ್ ತಂಡದ ಕೋಚ್ ಜಯಪ್ರಕಾಶ್ ಎಂಬವರು ಅಭಿಲಾಷ್ ಶೆಟ್ಟಿಗೆ ತಮ್ಮ ಕಾಲೇಜು ತಂಡದಲ್ಲಿ ಅವಕಾಶ ನೀಡುತ್ತಾರೆ. ಅಲ್ಲಿಂದ ಶುರು ಹೊಸ ಕ್ರಿಕೆಟ್ ಜೀವನ. ಗೊತ್ತು ಗುರಿಯಿಲ್ಲದ ಆಡುತ್ತಿದ್ದವ ಮಂಗಳೂರು ಝೋನಲ್ ತಂಡಕ್ಕೆ ಆಯ್ಕೆಯಾಗುತ್ತಾನೆ. ಆ ಸಂದರ್ಭದಲ್ಲಿ ಅಭಿಲಾಷ್’ಗೆ ಮಾರ್ಗದರ್ಶನ ನೀಡಿದವರು ಕೆ.ಎಲ್ ರಾಹುಲ್’ನ ಬಾಲ್ಯದ ಕೋಚ್ ಸ್ಯಾಮುಯೆಲ್ ಜಯರಾಜ್.

ಕ್ರಿಕೆಟ್ ಆಡುವ ಕನಸು ಹೊತ್ತ ಅಭಿಲಾಷ್ ಶೆಟ್ಟಿ ಬೆಂಗಳೂರಿಗೆ ಬರುತ್ತಾನೆ.. ನಿಹಾಲ್ ಉಳ್ಳಾಲ್, ರಿತೇಶ್ ಭಟ್ಕಳ್, ಭರತ್ ಧುರಿಯಂಥಾ ಕ್ರಿಕೆಟ್ ಸ್ನೇಹಿತರು ಹುಡುಗನಿಗೆ ಸಹಾಯ ಮಾಡುತ್ತಾರೆ. ನೋಡ ನೋಡುತ್ತಿದ್ದಂತೆ ಅಭಿಲಾಷ್ ಶೆಟ್ಟಿ ಕರ್ನಾಟಕ ಅಂಡರ್-19 ತಂಡಕ್ಕೆ ಆಯ್ಕೆಯಾಗಿ ಬಿಡುತ್ತಾನೆ. ಕ್ರಿಕೆಟ್’ನಲ್ಲಿ ಮಗ ಏನೋ ಸಾಧಿಸಲು ಹೊರಟಿದ್ದಾನೆ ಎಂಬ ನಂಬಿಕೆ ತಂದೆಗೆ ಬಂದದ್ದು ಆಗಲೇ.

2023ರ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ joint highest wicket ಟೇಕರ್. 11 ಇನ್ನಿಂಗ್ಸ್, 22 ವಿಕೆಟ್.

ಈ ವರ್ಷ ಡಿ.ವೈ ಪಾಟೀಲ್ ಕ್ರಿಕೆಟ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ರಿಲಾಯನ್ಸ್ ತಂಡದ ಪರ ಆಡಿದ್ದ ಅಭಿಲಾಷ್ ಶೆಟ್ಟಿ, ಕರ್ನಾಟಕ ತಂಡಕ್ಕೆ ಒಳ್ಳೆಯ ಫಾಸ್ಟ್ ಬೌಲರ್ ಆಗಬಲ್ಲ ಹುಡುಗ. ಎಸ್.ಅರವಿಂದ್ ನಿವೃತ್ತಿಯ ನಂತರ ರಾಜ್ಯ ತಂಡಕ್ಕೊಬ್ಬ ಉತ್ತಮ ಎಡಗೈ ಸೀಮರ್ ಸಿಕ್ಕಿಲ್ಲ. ಆ ಪ್ರಶ್ನೆಗೆ ಉತ್ತರವಾಗಬಲ್ಲ ಸಾಮರ್ಥ್ಯ ಈ ಹುಡುಗನಲ್ಲಿದೆ.

Latest stories

LEAVE A REPLY

Please enter your comment!
Please enter your name here

8 + seventeen =